ಗಂಭೀರ ಪಾತ್ರಗಳಾಗಲಿ, ಹಾಸ್ಯ ಪ್ರಧಾನ ಸಿನಿಮಾಗಳಾಗಲಿ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನ ರಂಜಿಸೋ ನಟ ರಿಷಿ. ತೆರೆ ಮೇಲೆ ನಮ್ಮನೆ ಹುಡುಗ ಎನಿಸುವಷ್ಟು ಆಪ್ತವಾಗುವ ರಿಷಿ ಅಭಿನಯದ ರಾಮನ ಅವತಾರ ಸಿನಿಮಾ ಮೇ 10ಕ್ಕೆ ತೆರೆಗೆ ಬರುತ್ತಿದ್ದು, ಚಿತ್ರತಂಡ ಸಿನಿಪ್ರಿಯರಿಗೆ ಬಂಪರ್‌ ಆಫರ್‌ ಕೊಟ್ಟಿದೆ.

ಚಂದನವನದ ಉದಯೋನ್ಮುಖ ನಾಯಕ ರಿಷಿ, ಬಹುಭಾಷಾ ನಟಿ ಪ್ರಣೀತಾ ಸುಭಾಷ್‌ ಮೊದಲ ಬಾರಿ ತೆರೆ ಹಂಚಿಕೊಳ್ಳುತ್ತಿರುವ ಚಿತ್ರ ʼರಾಮನ ಅವತಾರʼ. ಶುಭ್ರಾ ಅಯ್ಯಪ್ಪ ಹಾಗೂ ಅರುಣ್‌ ಸಾಗರ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಪೋಸ್ಟರ್‌, ಟೀಸರ್‌ ಹಾಗೂ ಟ್ರೇಲರ್‌ ಮೂಲಕವೇ ಈಗಾಗಲೇ ಈ ಚಿತ್ರ ಪ್ರೇಕ್ಷಕರ ಗಮನ ಸೆಳೆದಿದೆ. ಮೇ 10ರಂದು ರಾಜ್ಯಾದ್ಯಂತ ಸಿನಿಮಾ ತೆರೆ ಕಾಣಲಿದ್ದು, ಚಿತ್ರತಂಡ ಕನ್ನಡ ಸಿನಿಪ್ರೇಮಿಗಳಿಗೆ ಬಂಪರ್‌ ಆಫರ್‌ ಒಂದನ್ನ ಕೊಟ್ಟಿದೆ. ಮಲ್ಟಿಪ್ಲೆಕ್ಸ್‌ ಆಗಲಿ, ಸಿಂಗಲ್‌ ಸ್ಕ್ರೀನ್‌ ಆಗಲಿ ಕೇವಲ 99 ರೂಪಾಯಿಗೆ ಈ ಚಿತ್ರವನ್ನ ನೋಡಬಹುದಾಗಿದೆ. ಚಿತ್ರತಂಡ ಮೇ 9ರಂದು ಪೇಯ್ಡ್ ಪ್ರೀಮಿಯರ್ ಶೋ ಏರ್ಪಡಿಸಿದ್ದು, ಈ ಶೋ ಟಿಕೆಟ್ ದರ ಕೂಡ 99ರೂಪಾಯಿಗೆ ನಿಗದಿ ಮಾಡಲಾಗಿದೆ. ಕೇವಲ ಈ ಒಂದು ದಿನ ಮಾತ್ರವಲ್ಲ. ಚಿತ್ರ ಬಿಡುಗಡೆ ದಿನ ಅಂದ್ರೆ ಮೇ 10ಕ್ಕೂ ಕೂಡ ಟಿಕೆಟ್ ಬೆಲೆ 99ರೂಪಾಯಿ ಇರಲಿದೆ.

ಪಿಆರ್‌ಕೆ ಪ್ರೊಡಕ್ಷನ್‌ ನಿರ್ಮಾಣದ ‘ಕವಲುದಾರಿ’ಯಂತಹ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾದಲ್ಲಿ ಗಂಭೀರ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡು ‘ನೋಡಿ ಸ್ವಾಮಿ ಇವನು ಇರೋದು ಹೀಗೆ’, ಎನ್ನುತ್ತಾ ‘ಆಪರೇಷನ್ ಅಲಮೇಲಮ್ಮ’ ದಂತಹ ಕಾಮಿಡಿ ಚಿತ್ರಗಳಲ್ಲಿ ಪ್ರೇಕ್ಷಕರನ್ನ ನಗಿಸುತ್ತಲೇ ಗಮನ ಸೆಳೆದಿರುವ ರಿಷಿ ಇದೀಗ ‘ರಾಮನ ಅವತಾರ’ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಪ್ರಚಾರ ಕಾರ್ಯ ಶುರುವಾಗಿದ್ದು, ವಿಭಿನ್ನ ರೀತಿಯ ಪ್ರಮೋಷನ್ ವಿಡಿಯೋಗಳ ಮೂಲಕ ರಾಮನ ಅವತಾರ ತಂಡ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಅದರ ಭಾಗವಾಗಿಯೇ ಚಿತ್ರತಂಡ ಸಿನಿಮಾ ಟಿಕೆಟ್‌ ದರವನ್ನು ಕಡಿಮೆ ಮಾಡಿದೆ. ಹೀಗಾಗಿ ಕೇವಲ 99 ರೂಪಾಯಿಗೇ ರಾಮನ ಅವತಾರ ಸಿನಿಮಾವನ್ನು ನೋಡುವ ಅವಕಾಶ ನಿಮ್ಮದಾಗಿದೆ.

ವಿಕಾಸ್ ಪಂಪಾಪತಿ ನಿರ್ದೇಶಕರಾಗಿ ಈ ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ‘ರಾಮನ ಅವತಾರ’ ಸಿನಿಮಾದ ಮೂಲಕ ವಿಕಾಸ್, ಮಾರ್ಡನ್ ರಾಮನ ಕಥೆಯನ್ನು ಹೇಳೋದಕ್ಕೆ ಹೊರಟಿದ್ದಾರೆ. ಟ್ರೇಲರ್ ನೋಡ್ತಿದ್ರೆ ರಾಮಾಯಣ ನೆನಪಿಸುವ ಒಂದಷ್ಟು ದೃಶ್ಯಗಳು ಕಾಣುತ್ತವೆ. ರಾಮ ಹೇಗೆ ಜೆಂಟಲ್ ಮ್ಯಾನ್ ಆಗ್ತಾನೆ? ರಾವಣನ ರೀತಿಯ ಸಮಸ್ಯೆಗಳನ್ನು ಹೇಗೆ ಎದುರಿಸ್ತಾನೆ ಅನ್ನೋದನ್ನು ಕಟ್ಟಿಕೊಡಲಾಗದೆ. ಸ್ಟಾರ್ ಫ್ಯಾಬ್ ಪ್ರೊಡಕ್ಷನ್ನಡಿ ‘ಆಪರೇಷನ್ ಅಲಮೇಲಮ್ಮ’ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಅವರೇ ಈ ಚಿತ್ರವನ್ನು ನಿರ್ಮಿಸಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಜಾನರ್ ಈ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶಪಾಂಡೆ ಅವರ ಕ್ಯಾಮೆರಾ ಕೈಚಳಕವಿದ್ದು, ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದಾರೆ. ಇಡೀ ಸಿನಿಮಾಗಾಗಿ ಉಡುಪಿ, ಬೆಂಗಳೂರು ಸುತ್ತುಮುತ್ತ ಚಿತ್ರೀಕರಣ ನಡೆಸಲಾಗಿದೆ.

LEAVE A REPLY

Connect with

Please enter your comment!
Please enter your name here