ಪೋಸ್ಟರ್‌, ಹಾಡುಗಳ ಮೂಲಕ ಸುದ್ದಿಯಲ್ಲಿರುವ ಸಿನಿಮಾ ‘Back Bencherz’. ಚಿತ್ರದ ನಿರ್ದೇಶಕ, ನಿರ್ಮಾಪಕ ಬಿ ಆರ್‌ ರಾಜಶೇಖರ್‌ ವಿನೂತನ ಪ್ರೊಮೋಷನ್‌ ಐಡಿಯಾಗಳ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿದ್ದಾರೆ. ಈ ಐಡಿಯಾಗಳ ಮುಂದುವರೆದ ಭಾಗವಾಗಿ ಚಿತ್ರದ ನೂತನ ಟೀಸರ್‌ ಬಿಡುಗಡೆಯಾಗಿದೆ.

”ಕಿರಿಕ್ ಪಾರ್ಟಿ’ ಹೊಸ ತಂಡ ಕಟ್ಕೊಂಡ್ ಬಂದ್ರು. ಆಮೇಲೆ ‘ಹಾಸ್ಟೆಲ್ ಹುಡುಗ್ರು’ ಬಂದ್ರು, ಈಗ ನಾವು ಹೊಸ ತಂಡ ಕಟ್ಕೊಂಡು ಬರ್ತಾ ಇದೀವಿ ಅಂತಿದ್ದಾರೆ’ ಎನ್ನುತ್ತಾರೆ ‘ಬ್ಯಾಕ್ ಬ್ಯಾಂಚರ್ಸ್’ ನಿರ್ಮಾಪಕ ಹಾಗೂ ನಿರ್ದೇಶಕ ಬಿ ಆರ್‌ ರಾಜಶೇಖರ್‌. ಮುಹೂರ್ತ ಆದಾಗಿನಿಂದಲೂ ಸುದ್ದಿಯಲ್ಲಿರುವ ಈ ಸಿನಿಮಾದ ಹಾಡುಗಳು, ಪೋಸ್ಟರ್‌ಗಳು ಸಿನಿಪ್ರಿಯರ ಗಮನ ಸೆಳೆದಿದ್ದವು. ಹಾಡುಗಳಲ್ಲಿ ತಾಜಾತನವಿತ್ತು. ಇವೆಲ್ಲವನ್ನೂ ನೋಡಿದಾಗ, ನಿರ್ದೇಶಕರು ಹೊಸತನದ ಕತೆ ಹೆಣೆದಿದ್ದಾರೆ ಎನಿಸುತ್ತಿರುವುದು ಹೌದು. ಈಗ ಪ್ರೊಮೋಷನ್‌ನ ಭಾಗವಾಗಿ ಚಿತ್ರತಂಡ ಪುಟ್ಟ ಟೀಸರ್‌ ಬಿಡುಗಡೆ ಮಾಡಿದೆ. ಶೀರ್ಷಿಕೆಯೇ ಹೇಳುವಂತೆ ಕಾಲೇಜು ಹುಡುಗರ ತುಂಟಾಟಗಳು ಈ ಟೀಸರ್‌ನಲ್ಲಿವೆ. ಹೊಸಬರ ತಂಡದೊಂದಿಗೆ ನಿರ್ದೇಶಕ ಬಿ ಆರ್‌ ರಾಜಶೇಖರ್‌ ಕತೆ ಹೇಳುತ್ತಿದ್ದಾರೆ.

ತಮ್ಮ ಸಿನಿಮಾ ಬಗ್ಗೆ ಮಾತನಾಡುವ ನಿರ್ದೇಶಕ ರಾಜಶೇಖರ್‌, ‘ಈ ಹಿಂದೆ ಹಂತಹಂತವಾಗಿ ಚಿತ್ರದ ಹಾಡುಗಳು ಬಿಡುಗಡೆಗೊಂಡಿದ್ದವು. ಸಾಹಿತ್ಯ ಮಾತ್ರವಲ್ಲದೇ ದೃಶ್ಯದ ಮೂಲಕವೂ ಅವು ಪ್ರೇಕ್ಷಕರನ್ನು ಆವರಿಸಿಕೊಂಡಿದ್ದವು. ಈಗಾಗಲೇ ಕಾಲೇಜು ಕೇಂದ್ರಿತವಾದ ಒಂದಷ್ಟು ಸಿನಿಮಾಗಳು ಬಂದಿವೆ. ಗೆಲುವನ್ನೂ ಕಂಡಿವೆ. ನಮ್ಮ ಕತೆಯಲ್ಲಿ ದೃಶ್ಯರೂಪದ ಅಚ್ಚರಿಗಳು ಪ್ರೇಕ್ಷಕರಿಗೆ ಅಚ್ಚರಿ ನೀಡಲಿವೆ’ ಎನ್ನುವ ಭರವಸೆಯ ಮಾತುಗಳನ್ನಾಡುತ್ತಾರೆ. ಚಿತ್ರದಲ್ಲಿ ರಂಜನ್, ಜತಿನ್ ಆರ್ಯನ್, ಆಕಾಶ್ ಎಂ ಪಿ, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳೀಕರ್, ಮಾನ್ಯ ಗೌಡ, ಕುಂಕುಮ್ ಹೆಚ್, ಅನುಷಾ ಸುರೇಶ್, ವಿಯೋಮಿ ವನಿತಾ, ಮನೋಜ್ ಶೆಟ್ಟಿ, ನಮಿತಾ ಗೌಡ, ವಿಕಾಸ್, ರನ್ನ, ವಿಜಯ್ ಪ್ರಸಾದ್, ಚತುರ್ಥಿ ರಾಜ್ ನಟಿಸಿದ್ದಾರೆ. ನಕುಲ್ ಅಭಯಂಕರ್ ಸಂಗೀತ, ಮನೋಹರ್ ಜೋಶಿ ಛಾಯಾಗ್ರಹಣ, ರಂಜನ್ ಮತ್ತು ಅಮರ್ ಗೌಡ ಸಂಕಲನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here