ಧನಂಜಯ ಅಭಿನಯದ ‘ಕೋಟಿ’ ಸಿನಿಮಾದ ‘ಜನತಾ ಸಿಟಿ’ ಸಾಂಗ್‌ ಬಿಡುಗಡೆಯಾಗಿದೆ. ವಾಸುಕಿ ವೈಭವ್‌ ರಚನೆ ಮತ್ತು ಸಂಗೀತ ಸಂಯೋಜನೆಯ ಈ ಹಾಡಿಗೆ ಸಂಜಿತ್‌ ಹೆಗ್ಡೆ ದನಿಯಾಗಿದ್ದಾರೆ. ಪರಮ್‌ ನಿರ್ದೇಶನದ ಸಿನಿಮಾ ಜೂನ್‌ 14ರಂದು ತೆರೆಕಾಣಲಿದೆ.

”ಕಥಾನಾಯಕ ಕೋಟಿ ‘ಜನತಾ ಸಿಟಿ’ಯಲ್ಲಿ ಜೀವನ ನಡೆಸುತ್ತಿದ್ದಾನೆ. ಅವನಿಗೆ ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ದುಡಿಯುವ ಆಸೆ. ಈ ಹಾಡು ಅವನ ಮತ್ತು ಜನತಾ ಸಿಟಿಯ ಸಂಬಂಧವನ್ನು ಹೇಳುತ್ತದೆ. ಈ ಹಾಡನ್ನು ಬರೆದು, ಸಂಯೋಜಿಸುವುದು ಎಕ್ಸೈಂಟಿಂಗ್ ಮತ್ತು ಚಾಲೆಂಜಿಂಗ್ ಆಗಿತ್ತು. ಈ ಹಾಡನ್ನು ಮಾಡುವ ಪ್ರಕ್ರಿಯೆಯಲ್ಲಿ ಸಖತ್‌ ಮಜಾ ಮಾಡಿದ್ದೇನೆ’ ಎನ್ನುತ್ತಾರೆ ‘ಜನತಾ ಸಿಟಿ’ ಹಾಡು ರಚಿಸಿ, ಸಂಗೀತ ಸಂಯೋಜಿಸಿರುವ ವಾಸುಕಿ ವೈಭವ್‌. ಅವರ ಸಂಯೋಜನೆಯ ಈ ಹಾಡಿಗೆ ಸಂಜಿತ್‌ ಹೆಗ್ಡೆ ದನಿಯಾಗಿದ್ದಾರೆ. ಎಲ್ಲರನ್ನೂ ಸೆಳೆಯುವ ಮಹಾನಗರಗಳು, ಇಲ್ಲಿನ ಕನಸು – ಕನವರಿಕೆಗಳ ಕುರಿತ ಹಾಡಿದು.

ಚಿತ್ರದ ನಿರ್ದೇಶಕ ಪರಮ್‌ ಅವರು ಹಾಡಿನ ಬಗ್ಗೆ ಮಾತನಾಡಿ, ”ಜನತಾ ಸಿಟಿ’ ನನಗೆ ತುಂಬಾ ಇಷ್ಟದ ಹಾಡು. ನಾನು ಒಂದು ಸಣ್ಣ ಹಳ್ಳಿಯಿಂದ ಬೆಂಗಳೂರಿಗೆ ಬಂದವನು. ಮಹಾನಗರಗಳಿಗೆ ಏನೋ ಸೆಳೆಯುವ ಗುಣ. ಈ ಹಾಡು ಮಹಾನಗರಗಳ‌ಲ್ಲಿ ಬದುಕುವ ಎಲ್ಲರಿಗೂ ತುಂಬಾ ರಿಲೇಟೆಬಲ್ ಆಗಲಿದೆ’ ಎನ್ನುತ್ತಾರೆ. ಧನಂಜಯ ಹೀರೋ ಆಗಿ ನಟಿಸಿರುವ ಚಿತ್ರದ ನಾಯಕಿಯಾಗಿ ಮೋಕ್ಷಾ ಕುಶಾಲ್‌ ನಟಿಸಿದ್ದಾರೆ. ರಮೇಶ್‌ ಇಂದಿರಾ, ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಚಿತ್ರದ ಇತರೆ ಪ್ರಮುಖ ಕಲಾವಿದರು. ಜಿಯೋ ಸ್ಟುಡಿಯೋ ಸಿನಿಮಾ ನಿರ್ಮಾಣ ಮಾಡಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ನೊಬಿನ್‌ ಪೌಲ್‌ ಹಿನ್ನೆಲೆ ಸಂಗೀತ, ಪ್ರತೀಕ್‌ ಶೆಟ್ಟಿ ಸಂಕಲನ, ಅರುಣ್‌ ಛಾಯಾಗ್ರಹಣ ಚಿತ್ರಕ್ಕಿದೆ. ಇದೇ ಜೂನ್‌ 14ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here