ಬಹುನಿರೀಕ್ಷಿತ ‘ಕೋಟಿಗೊಬ್ಬ 3’ ಸಿನಿಮಾ ಮುಂದಿನ ವಾರ ತೆರೆಕಾಣಲಿದೆ. ನಿನ್ನೆ ಸಂಜೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಿನಿಪ್ರಿಯರು ಮೆಚ್ಚಿದ್ದಾರೆ.

ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಚಿತ್ರದ ಟ್ರೈಲರ್ ನಿನ್ನೆ ಸಂಜೆ ಬಿಡುಗಡೆಯಾಗಿದ್ದು ಭರ್ಜರಿ ಸದ್ದು ಮಾಡುತ್ತಿದೆ. ಚಿತ್ರ ಇದೇ ತಿಂಗಳ 14ಕ್ಕೆ ಬಿಡುಗಡೆ ಆಗ್ತಾ ಇರೋದು ಎಲ್ಲರಿಗೂ ಗೊತ್ತಿರೋ ವಿಷಯ. ಅದರಲ್ಲೂ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಅನ್ನೋದನ್ನ ಒತ್ತಿ ಹೇಳಬೇಕಾಗಿಲ್ಲ. ಯಾಕಂದ್ರೆ ಇದು ಕಿಚ್ಚ ಸುದೀಪ್ ಅವರಂಥ ಸ್ಟಾರ್ ನಟ ಅಭಿನಯಿಸಿರೋ ಚಿತ್ರ ಮತ್ತು ಅಭಿಮಾನಿಗಳನ್ನು ಚಿತ್ರಮಂದಿರದತ್ತ ಸೆಳೆಯಬಲ್ಲ ತಾಕತ್ತಿರುವ ಚಿತ್ರ. ಜೊತೆಗೆ ಚಿತ್ರದ ಹೆಸರಿಗೆ ತಕ್ಕಂತೆ ಕೋಟಿಗಟ್ಟಲೇ ಹಣ ಸುರಿದಿರುವುದರಿಂದ ನಿರ್ಮಾಪಕ ಸೂರಪ್ಪ ಬಾಬು ಇದನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದರೆ ಮಾತ್ರ ಲಾಭ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಜೊತೆಗೆ ಸರ್ಕಾರ ಈಗ ಶೇಕಡಾ 100ರಷ್ಟು ಹಾಜರಾತಿಗೆ ಅವಕಾಶ ನೀಡಿರುವುದರಿಂದ ನಿರ್ಮಾಪಕರಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡೋಕೆ ಯಾವ ಹಿಂಜರಿಕೆಯೂ ಬೇಕಿಲ್ಲ.

ಈಗ ಈ ಚಿತ್ರದ ಬಿಡುಗಡೆಯ ಮುನ್ನಾ ಟ್ರೈಲರ್ ಬಿಡುಗಡೆ ಆಗಿದೆ. ಗುರುವಾರ ಸಂಜೆ ಈ ಟ್ರೈಲರ್ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವೀಕ್ಷಕರು ಇದನ್ನು ನೋಡಿದ್ದಾರೆ. ಕೇವಲ 7 ಗಂಟೆಗಳಲ್ಲಿ 13 ಲಕ್ಷ ವ್ಯೂಸ್ ‘ಕೋಟಿಗೊಬ್ಬ’ನಿಗೆ ಸಿಕ್ಕಿದೆ. ಹೆಸರಲ್ಲಿ ಕೋಟಿ ಇಟ್ಟುಕೊಂಡವನಿಗೆ ಈ ಲಕ್ಷ ಎಲ್ಲ ಅಂಟೋದೂ ಇಲ್ಲ, ಇದೆಲ್ಲ, ಯಾವ ಲೆಕ್ಕ ಎನಿಸಿದರೂ ಆನ್ ಲೈನ್‌ನಲ್ಲಿ ಈ ಟ್ರೈಲರ್ ಹವಾ ಜೋರಾಗಿಯೇ ಇದೆ. ಚಿತ್ರದ ಟ್ರೈಲರ್ ನೋಡಿದವರಿಗೆ ಒಂದು ಅದ್ಧೂರಿ ಚಿತ್ರದ ಝಲಕ್ ಕಾಣಸಿಗುವುದಂತೂ ಖಂಡಿತ. ಹಾಲಿವುಡ್ ಚಿತ್ರ ಮತ್ತು ಸೌತ್ ಇಂಡಿಯನ್ ಸಿನಿಮಾಗಳನ್ನು ಮಿಕ್ಸ್ ಮಾಡಿದಂತೆ ಕಾಣುವ ಚಿತ್ರದ ಅದ್ಧೂರಿತನ ಎಲ್ಲರ ಗಮನ ಸೆಳೆಯುತ್ತಿದೆ. ಇದೇ ಕಾರಣಕ್ಕೆ ನಿರ್ಮಾಪಕ ಸೂರಪ್ಪ ಬಾಬು ಈ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಿಲ್ಲ ಎಂದು ನೋಡಿದವರು ಮಾತಾಡಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಸುದೀಪ್ ಅವರ ಜೊತೆಗೆ ಬಾಲಿವುಡ್ ನಟರಾದ ನವಾಬ್ ಶಾ, ಅಫ್ತಾಬ್ ಶಿವದಾಸಾನಿ, ರವಿಶಂಕರ್ ಮುಂತಾದವರು ಕೂಡ ಅಭಿನಯಿಸಿದ್ದಾರೆ. ಈ ಚಿತ್ರವನ್ನು ಕೇವಲ ಕನ್ನಡಿಗರು ಮಾತ್ರ ನೋಡಲು ಕಾಯುತ್ತಿಲ್ಲ ಎಂಬುದು ಯೂಟ್ಯೂಬ್ ನಲ್ಲಿರುವ ಈ ಚಿತ್ರದ ಬಗೆಗಿನ ಇತರ ವಿಡಿಯೋಗಳನ್ನು ನೋಡಿದರೆ ಗೊತ್ತಾಗುತ್ತದೆ. ಈ ಟ್ರೈಲರ್ ಬಗ್ಗೆ ವಿಡಿಯೋ ಮಾಡಿರುವ ಹಿಂದಿ ಯೂ ಟ್ಯೂಬರ್ ಒಬ್ಬ,‘ಟ್ರೈಲರ್ ಸೂಪರ್ ಆಗಿದೆ, ಆದರೆ ಕನ್ನಡ ಚಿತ್ರಗಳನ್ನು ಕನ್ನಡಿಗರು ಮಾತ್ರವಲ್ಲ, ನಾವೂ ನೋಡುತ್ತೇವೆ, ಟ್ರೈಲರ್‌ಗೆ ಸಬ್ ಟೈಟಲ್ ಏಕೆ ಹಾಕಿಲ್ಲ?’ ಎಂದು ಕೇಳಿರುವುದು ಕೋಟಿಗೊಬ್ಬ ಚಿತ್ರದ ಕ್ರೇಜ್‌ಗೆ ಸಾಕ್ಷಿ. ಒಟ್ಟಿನಲ್ಲಿ ಚಿತ್ರದ ಟ್ರೈಲರ್‌ನಲ್ಲಿ ನಟ ರವಿಶಂಕರ್ ಹೇಳುವಂತೆ, ಕನ್ನಡಿಗರಷ್ಟೇ ಅಲ್ಲ, ಭಾರತದಾದ್ಯಂತ ಪ್ರೇಕ್ಷಕ ‘ನಿನ್ನ ಇನ್ನೊಂದ್ ಪರ್ಫಾರ್ಮೆನ್ಸ್ ಯಾವಾಗ್ ಬರುತ್ತೆ ಅಂತ ಕಾಯ್ತಾ ಇದ್ದೀನಿ’ ಎಂದು ಸುದೀಪ್ ಅವರಿಗೆ ಹೇಳುತ್ತಿರುವುದಂತೂ ಸುಳ್ಳಲ್ಲ.

LEAVE A REPLY

Connect with

Please enter your comment!
Please enter your name here