ಎಸ್‌ ಶಂಕರ್‌ ನಿರ್ದೇಶನದಲ್ಲಿ ಕಮಲ ಹಾಸನ್‌ ನಟಿಸುತ್ತಿರುವ ‘ಇಂಡಿಯನ್‌ 2’ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ವಾರದ ಹಿಂದೆ ಈ ತಮಿಳು ಸಿನಿಮಾದ ‘ಪಾರಾ’ ಸಾಂಗ್‌ ಬಿಡುಗಡೆಯಾಗಿತ್ತು. ಇದೀಗ ಚಿತ್ರದಲ್ಲಿನ ಸಿದ್ಧಾರ್ಥ್‌ ಮತ್ತು ರಾಕುಲ್‌ ಪ್ರೀತ್‌ಸಿಂಗ್‌ ಅವರ ಮೇಲೆ ಪಿಕ್ಚರೈಸ್‌ ಆಗಿರುವ ಲವ್‌ ಸಾಂಗ್‌ ಬಿಡುಗಡೆಯಾಗಿದೆ.

ಕಮಲ ಹಾಸನ್‌ ನಟನೆಯ ಬಹುನಿರೀಕ್ಷಿತ ‘ಇಂಡಿಯನ್‌ 2’ ತಮಿಳು ಸಿನಿಮಾದ ಎರಡನೇ ಸಾಂಗ್‌ ಬಿಡುಗಡೆಯಾಗಿದೆ. ಇತ್ತೀಚೆಗೆ ಕಮಲ್‌ ಹಾಸನ್‌ ಅವರ ಮೇಲೆ ಪಿಕ್ಚರೈಸ್‌ ಆಗಿದ್ದ ‘ಪಾರಾ’ ಸಾಂಗ್‌ ರಿಲೀಸ್‌ ಆಗಿತ್ತು. ಇದಕ್ಕೂ ಮುನ್ನ ಟೀಸರ್‌ನಿಂದಲೇ ಸಿನಿಮಾ ಕುತೂಹಲ ಮೂಡಿಸಿತ್ತು. ಇದೀಗ ಚಿತ್ರದಲ್ಲಿನ ಸಿದ್ಧಾರ್ಥ್‌ ಮತ್ತು ರಾಕುಲ್‌ ಪ್ರೀತ್‌ ಸಿಂಗ್‌ ಅವರ ಮೇಲೆ ಪಿಕ್ಚರೈಸ್‌ ಆಗಿರುವ ಪ್ರೇಮಗೀತೆ ಬಿಡುಗಡೆಯಾಗಿದೆ. ಮೂಲ ತಮಿಳು ಸೇರಿದಂತೆ ತೆಲುಗು ಮತ್ತು ಹಿಂದಿ ವರ್ಷನ್‌ಗಳಲ್ಲಿ ಹಾಡು ಬಿಡುಗಡೆಯಾಗಿದೆ. ರಾಮ ಜೋಗಯ್ಯಶಾಸ್ತ್ರಿ ತೆಲುಗು ವರ್ಷನ್ ಹಾಡಿಗೆ ಸಾಹಿತ್ಯ ಬರೆದಿದ್ದು, ತಾಮರೈ ತಮಿಳು ವರ್ಷನ್‌ಗೆ ಹಾಡು ರಚಿಸಿದ್ದಾರೆ. ಅನಿರುದ್ಧ ರವಿಚಂದರ್ ಹಾಡಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ದಶಕಗಳ ಹಿಂದೆ 1996ರಲ್ಲಿ ಬಂದಿದ್ದ ‘ಇಂಡಿಯನ್’ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ‘ಸೇನಾಪತಿ’ ಪಾತ್ರದಲ್ಲಿ ಕಮಲ್ ಹಾಸನ್ ಮಿಂಚಿದ್ದರು. ಅದರ ಮುಂದುವರಿದ ಭಾಗವಾಗಿ ‘ಇಂಡಿಯನ್ 2’ ಸಿನಿಮಾ ಮೂಡಿಬರುತ್ತಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಕಮಲ್ ಹಾಸನ್ ಹಿರಿಯ ಸ್ವಾತಂತ್ರ್ಯ ಹೋರಾಟಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದ್ದು, ಕಮಲ್ ಹಾಸನ್ ಮತ್ತದೇ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎಸ್ ಜೆ ಸೂರ್ಯ, ಕಾಜಲ್ ಅಗರ್‌ವಾಲ್‌, ರಾಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಕಾಳಿದಾಸ್ ಜಯರಾಂ, ಗುಲ್ಶನ್ ಗ್ರೋವರ್, ನೆಡುಮುಡಿ ವೇಣು, ವಿವೇಕ್, ಸಮುದ್ರಕಣಿ, ಬಾಬಿ ಸಿಂಹ, ಗುರು ಸೋಮಸುಂದರಂ, ದೆಹಲಿ ಗಣೇಶ್, ಜಯಪ್ರಕಾಶ್, ಮನೋಬಾಲಾ ಸೇರಿದಂತೆ ಚಿತ್ರದಲ್ಲಿ ಪ್ರಮುಖ ಕಲಾವಿದರನೇಕರು ಅಭಿನಯಿಸಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಮತ್ತು ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್ ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡಿವೆ. ಅನಿರುದ್ಧ್ ರವಿಚಂದರ್ ಸಂಗೀತ, ರವಿವರ್ಮನ್ ಹಾಗೂ ರತ್ನವೇಲು ಛಾಯಾಗ್ರಹಣ, ಎ ಶ್ರೀಕರ್ ಪ್ರಸಾದ್ ಸಂಕಲನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here