‘ಕ್ಯಾಪ್ಟನ್ ಮಿಲ್ಲರ್’ ಹಲವು ಹೊಸತನ, ಹೊಸ ಯೋಚನೆಗಳಿಂದ ಕೂಡಿದ್ದರೂ ಸ್ವಲ್ಪ ದುರ್ಬಲ ದ್ವಿತಿಯಾರ್ಧದಿಂದಾಗಿ ನಡುವೆ ಒಮ್ಮೆ ದೀರ್ಘವಾದಂತೆ ಎನಿಸುತ್ತದೆ. ಆದರೂ, ಚಿತ್ರದ ಕ್ಲೈಮ್ಯಾಕ್ಸ್ ಎರಡನೇ ಭಾಗದ ಸೂಚನೆ ನೀಡಿದ್ದು, ಖಂಡಿತಾ ಕುತೂಹಲ ಕೆರಳಿಸುತ್ತದೆ. ನಟ ಶಿವರಾಜಕುಮಾರ್‌ ‘ಜೈಲರ್’ ತಮಿಳು ಚಿತ್ರದಲ್ಲಿ ಕೆಲವೇ ನಿಮಿಷಗಳ ಕಾಲ ಕಾಣಿಸಿಕೊಂಡು ತಮಿಳಿಗರ ಮನಗೆದ್ದಿದ್ದರು. ಈ ಚಿತ್ರದಲ್ಲಿ ಒಂದು ಹೆಜ್ಜೆ ಹೆಚ್ಚಾಗಿಯೇ ಮಿಂಚುತ್ತಾರೆ.

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೇಲ್ಜಾತಿ ಎಂದು ಪರಿಗಣಿಸಲಾಗುವವರೇ ಅಧಿಕವಾಗಿದ್ದರು ಏಕೆ ಎಂಬ ಪ್ರಶ್ನೆ ಎಂದಾದರೂ ನಮ್ಮನ್ನು ಕಾಡಿದ್ದರೆ ಅದಕ್ಕೆ ಹಲವು ಉತ್ತರಗಳು ಸಿಗುತ್ತದೆ. ಆದರೆ, ಈ ಮೇಲ್ಜಾತಿ ಎನಿಸಿಕೊಂಡವರಿಗೆ ಸ್ವಾತಂತ್ರ್ಯ ಬೇಕು ಎಂದೇಕೆ ಅನಿಸಿತು, ಅದಕ್ಕಾಗಿ ಪ್ರಾಣವನ್ನೂ ಕಳೆದುಕೊಳ್ಳಲೂ ಏಕೆ ಸಿದ್ಧವಾದರು ಎಂದು ಯೋಚಿಸಿದಾಗ ಹೊಳೆಯುವ ಉತ್ತರ ಒಂದೇ. ಬ್ರಿಟಿಷರಿಂದ ಆಗುತ್ತಿದ್ದ ಅವಮಾನ, ಅನುಭವಿಸಿದ ಅಸಮಾನತೆ, ಕಳೆದುಕೊಂಡ ಗೌರವ. ಶತಶತಮಾನಗಳಿಂದ ಕೆಳ ಜಾತಿ ಎಂದು ಕರೆಯಲ್ಪಟ್ಟ ಸಮುದಾಯ ಮೂಕವಾಗಿ ಅನುಭವಿಸುತ್ತಾ ಬಂದಿದ್ದ ಇವೆಲ್ಲವನ್ನೂ, ಬ್ರಿಟಿಷರ ದೆಸೆಯಿಂದಾಗಿ ಮೇಲ್ವರ್ಗದ ಜನ ಅನುಭವಿಸಬೇಕಾಗಿ ಬಂದಾಗ ಭುಗಿಲೆದ್ದ ಬಂಡಾಯವೇ ಸ್ವಾತಂತ್ರ್ಯ ಹೋರಾಟದ ರೂಪ ಪಡೆಯಿತು.

ಮಹಾತ್ಮ ಗಾಂಧಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರು ಪ್ರಥಮ ದರ್ಜೆಯ ರೈಲ್ವೇ ಬೋಗಿಯಿಂದ ಹೊರತಳ್ಳಿದ್ದೇ ಅವರು ಸ್ವಾತಂತ್ರ್ಯ ಚಳುವಳಿಗೆ ಧುಮುಕಲು ಕಾರಣವಾಯಿತು. ಅಂದರೆ, ಈ ಸ್ವಾತಂತ್ರ್ಯದ ಮೂಲಕ ಎಲ್ಲರೂ ಪಡೆಯ ಬಯಸಿದ್ದು ಸಮಾನತೆಯನ್ನು, ಗೌರವವನ್ನು. ಹಾಗಿದ್ದರೆ, ಮೊದಲಿಂದಲೂ ಇದ್ಯಾವುದೂ ದೊರೆಯದ ಕೆಳವರ್ಗದ ಪಾಲಿಗೆ ಈ ಸ್ವಾತಂತ್ರ್ಯದ ಅರ್ಥವೇನು? ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದ ಅತ್ಯಂತ ಪರಿಣಾಮಕಾರಿ ಮತ್ತು ಶಕ್ತಿಯುತ ದೃಶ್ಯವೊಂದರಲ್ಲಿ ಏಳುವ ಈ ಪ್ರಶ್ನೆ ಸಿನಿಮಾಕ್ಕೊಂದು ಅದ್ಭುತ ಆಯಾಮ ಕೊಡುತ್ತದೆ. ಆದರೆ, ಈ ಪ್ರಶ್ನೆಯ ಗುರುತ್ವವನ್ನು ನಿರ್ದೇಶಕರು ಚಿತ್ರದುದ್ದಕ್ಕೂ ಕಾಯ್ದುಕೊಂಡು ಬಂದಿದ್ದಾರೆಯೇ ಎಂಬುದರಲ್ಲಿ ಚಿತ್ರದ ಯಶಸ್ಸು ಅಡಗಿದೆ.

ಅರುಣ್ ಮಾತೇಶ್ವರನ್ ನಿರ್ದೇಶನದ ಮೂರನೇ ಚಿತ್ರ ‘ಕ್ಯಾಪ್ಟನ್ ಮಿಲ್ಲರ್’, ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ನಡೆಯುವ ಕತೆಯನ್ನು ಆಧರಿಸಿದ್ದರೂ, ದೇಶಪ್ರೇಮದ ಮೇಲೆ ಅವಲಂಬಿತವಾಗಿರುವ ಇಂತಹ ಇತರ ಚಿತ್ರಗಳಿಗಿಂತ ಭಿನ್ನವಾಗಿದೆ. ಕತೆ, ಪರಿಸರ, ಆ್ಯಕ್ಷನ್ ದೃಶ್ಯಗಳು ಮತ್ತು ಶೈಲಿಯಿಂದಾಗಿ ವೆಸ್ಟರ್ನ್ ಸಿನಿಮಾಗಳನ್ನೇ ಬಹುತೇಕ ಹೋಲುತ್ತದೆ. ಅನಲೀಸನ್ ಅಥವಾ ಈಸ ಹಳ್ಳಿಯ ಒಬ್ಬ ಮುಗ್ಧ ಯುವಕ. ಆತನ ಹಳ್ಳಿಯ ಮತ್ತು ಚಿತ್ರದ ಕೇಂದ್ರದಲ್ಲಿ ಒಂದು ದೇವಸ್ಥಾನವಿದೆ. ಆದರೆ, ಆ ದೇವಸ್ಥಾನವನ್ನು ಕಟ್ಟಿರುವ, ಅದರ ರಕ್ಷಣೆಗಾಗಿ ಅಲ್ಲೇ ನೆಲೆಸಿರುವ ಆ ಹಳ್ಳಿಗರಿಗೆ ದೇವಸ್ಥಾನದೊಳಗೆ ಪ್ರವೇಶವಿಲ್ಲ. ಈಸನಿಗೆ ಈ ತಾರತಮ್ಯದ ಅರಿವಾದಾಗ, ಇದಕ್ಕೆ ಉತ್ತರವೆಂಬಂತೆ ಆತ ತನಗಾಗಿ ಗೌರವ ಗಳಿಸಿಕೊಳ್ಳುವ ನಿರ್ಧಾರಕ್ಕೆ ಬರುತ್ತಾನೆ. ಅದಕ್ಕಿರುವ ಒಂದೇ ದಾರಿ ಚಪ್ಪಲಿ ಧರಿಸಲು ಬಿಡದ ಊರನ್ನು ತೊರೆದು, ಕಾಲಿಗೆ ಬೂಟು ಕೊಡುವ ಬ್ರಿಟಿಷ್ ಸೈನ್ಯ ಸೇರುವುದು.

ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ತೊಡಗಿರುವ ಆತನ ಅಣ್ಣ ಸೆಂಗೋಲನ್ ಜೊತೆ ನಡೆಯುವ ಮಾತುಕತೆ ಸಂದರ್ಭದಲ್ಲಿ ಈಸ ಹೇಳುವಂತೆ, ಅವರ ಪಾಲಿಗೆ ಸ್ವಾತಂತ್ರ್ಯವೆಂದರೆ ಗೌರವ. ಅದು ಸಿಗುವುದು ಬ್ರಿಟಿಷ್ ಸೇನೆಯಲ್ಲಿ. ಆದರೆ, ಸೇನೆ ಸೇರಿದ ನಂತರ ಅದರ ಮತ್ತೊಂದು ಕರಾಳ ಮುಖದ ಅನುಭವವಾದಾಗ, ಈಸನ ಜೀವನ ಹೊಸ ದಿಕ್ಕು ಪಡೆಯುತ್ತದೆ. ಈಸ, ಮಿಲ್ಲರ್ ಆಗುವ, ನಂತರ ತನಗೆ ತಾನೇ ಕ್ಯಾಪ್ಟನ್ ಬಿರುದನ್ನು ಕೊಟ್ಟುಕೊಂಡು ‘ಕ್ಯಾಪ್ಟನ್ ಮಿಲ್ಲರ್’ ಆಗುವ ಮತ್ತು ಆ ಪ್ರಯಾಣದಲ್ಲಿ ಬದಲಾಗುವ ಆತನ ಮನಸ್ಥಿತಿ, ಹೃದಯ ಮತ್ತು ಸಂದರ್ಭಗಳನ್ನು ಚಿತ್ರ ನಾನ್ -ಲೀನಿಯರ್ ಶೈಲಿಯಲ್ಲಿ ನಿರೂಪಿಸುತ್ತದೆ.

ಚಿತ್ರದ ಮೊದಲಾರ್ಧ ಪ್ರೇಕ್ಷಕರನ್ನು ಸಂಪೂರ್ಣವಾಗಿ ಸೆಳೆದುಕೊಳ್ಳುತ್ತದೆ. ಹದವಾದ ಆ್ಯಕ್ಷನ್, ಡ್ರಾಮ ಮತ್ತು ತೆಳು ಹಾಸ್ಯ ಹಾಗೂ ಚಿತ್ರದ ವೇಗ ಸಿನಿಮಾವನ್ನು ಆಕರ್ಷಕವಾಗಿಸಿದೆ. ಆದರೆ, ದ್ವಿತೀಯಾರ್ಧದಲ್ಲಿ ಸಿನಿಮಾ ವೇಗ ಕಳೆದುಕೊಳ್ಳುತ್ತದೆ ಮತ್ತು ಎಲ್ಲಿಯೋ ಸಾಗುತ್ತಾ ತಾನೇ ಕೊಂಚ ಕಳೆದುಹೋಗುತ್ತದೆ. ದೊಡ್ಡ ಕ್ಲೈಮ್ಯಾಕ್ಸ್ ವೇಳೆಗೆ ಮತ್ತೆ ದಾರಿಗೆ ಬರುತ್ತದೆ. ಆದರೆ, ಆ ಮಧ್ಯದಲ್ಲಿ ತೋರಿಸಲಾಗುವ ಹಲವಾರು ಕೊಲೆಗಳಿಂದಾಗಿ, ಚಿತ್ರದ ಆರಂಭದಲ್ಲಿ ಪ್ರೇಕ್ಷಕರಿಗೆ ಮತ್ತು ಪಾತ್ರಗಳಿಗೆ ಈ ವಿಷಯದಲ್ಲಿದ್ದ ಸೂಕ್ಷ್ಮತೆಯನ್ನು ಕೊಂದುಹಾಕುತ್ತದೆ. ಕ್ಲೈಮ್ಯಾಕ್ಸ್‌ನಲ್ಲಿ ನಡೆಯುವುದು ಸಣ್ಣ ಹೊಡೆದಾಟವಲ್ಲ, ಒಂದು ರೀತಿಯಲ್ಲಿ ಕದನವೇ. ಪರಿಣಾಮ ಹೆಣಗಳ ರಾಶಿ ಹಾಗೂ ಮತ್ತೊಂದು ಯುದ್ಧಕ್ಕೆ ನಾಂದಿ.

ದ್ವಿತೀಯಾರ್ಧದಲ್ಲಿ ಎಲ್ಲಕ್ಕಿಂತ ಹೆಚ್ಚು ಒಪ್ಪಲು ಕಷ್ಟವಾಗುವುದು ನಾಯಕ, ದೇವರ ಅವತಾರವಾಗಿ ಬಿಡುವ ರೀತಿ. ಒಂದು ರೀತಿಯಲ್ಲಿ ನೋಡಿದಾಗ ದೇವಾಲಯದೊಳಗೆ ಕಾಲಿಡುವುದಕ್ಕೂ ನಿರ್ಬಂಧವಿದ್ದ ಯುವಕನೊಬ್ಬ ದೇವರ ಅವತಾರವಾಗುವ ಸಾಧ್ಯತೆ ತೃಪ್ತಿಕೊಡುವ ಸಾಮಾಜಿಕ ನ್ಯಾಯವೆನಿಸಿದರೂ, ಅದು ಚಿತ್ರದಲ್ಲಿ ಮೂಡಿರುವ ರೀತಿ ಮನ ತಟ್ಟುವುದಿಲ್ಲ. ನಾಯಕನ ಮನಪರಿವರ್ತನೆ ಹಾಗೂ ತನ್ನ ಹಳ್ಳಿಯನ್ನು ಮತ್ತು ತನ್ನ ಜನರನ್ನು ಉಳಿಸಿಕೊಳ್ಳಲು ಊರಿಗೆ ಹಿಂತಿರುಗುವ ಆತನ ನಿರ್ಧಾರ, ಅವರನ್ನು ಕಾಪಾಡಲು ಜನ್ಮ ತಾಳಿರುವ ದೇವರು ತಾನು ಎಂದು ಭಾವಿಸಿದ್ದರಿಂದ ಹುಟ್ಟಿದಂತೆ ಕಾಣುತ್ತದೆ. ಜೊತೆಗೆ, ಅದನ್ನು ಚಿತ್ರದ ದೊಡ್ಡ ತಿರುವಿನಂತೆಯೂ ತೋರಿಸಲಾಗಿದೆ. ಇದು ಚಿತ್ರದ ಆಶಯವನ್ನು ಕೊಂಚಮಟ್ಟಿಗೆ ದುರ್ಬಲವಾಗಿಸಿದೆ. ಅದೇ ವೇಳೆ, ಹಳ್ಳಿಗರು ತಮ್ಮ ಪೂರ್ವಜರು ಕಟ್ಟಿದ ದೇವಾಲಯವನ್ನು ಮೊದಲಬಾರಿಗೆ ಪ್ರವೇಶಿಸುವ ದೃಶ್ಯ ಪರಿಣಾಮಕಾರಿಯಾಗಿದೆ.

ಧನುಷ್ ನಟನೆಗೆ ಅತೀ ಹೆಚ್ಚು ಅವಕಾಶವಿರುವ ಪಾತ್ರ ಇದು. ಮುಗ್ಧ ಯುವಕ, ಸೈನಿಕ, ಡಕಾಯಿತನಿಂದ ಕ್ರಾಂತಿಕಾರಿಯಾಗಿ ಬೆಳೆಯುವ ಈ ಪಾತ್ರಕ್ಕೆ ಹಲವು ಛಾಯೆಯಿದೆ. ಆಯಾಮವಿದೆ. ಎಲ್ಲಾ ಹಂತಗಳನ್ನೂ, ಎಲ್ಲಾ ಭಾವಗಳನ್ನೂ ಅತ್ಯಂತ ಸಮರ್ಥವಾಗಿ ತೆರೆಯ ಮೇಲೆ ತಂದಿರುವ ಧನುಷ್ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಮುಗ್ಧ ಪ್ರೀತಿ, ಕೋಪ, ರೋಷ, ಭಯ, ಅಪರಾಧೀ ಭಾವ ಮತ್ತು ಸಂಪೂರ್ಣ ಭಾವಹೀನತೆಯನ್ನು ಕೂಡ ಅವರು ತುಂಬಾ ಚೆನ್ನಾಗಿ ಬಿಂಬಿಸಿದ್ದಾರೆ. ಎಲ್ಲಾ ವಯಸ್ಸಿನ ಗುಂಪಿಗೂ ಸರಿಹೊಂದುವ ಅವರ ಮುಖ ಮತ್ತು ದೈಹಿಕ ಲಕ್ಷಣ ಮತ್ತೊಂದು ದೊಡ್ಡ ಪ್ಲಸ್ ಪಾಯಿಂಟ್.

‘ಜೈಲರ್’ ಚಿತ್ರದಲ್ಲಿ ಕೆಲವೇ ನಿಮಿಷಗಳ ಕಾಲ ಕಾಣಿಸಿಕೊಂಡು ತಮಿಳಿಗರ ಮನಗೆದ್ದಿದ್ದ ಶಿವರಾಜಕುಮಾರ್ ಇಲ್ಲಿ ಪ್ರಮುಖ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಇದು ‘ಜೈಲರ್’ನಲ್ಲಿ ಶಿವಣ್ಣಗೆ ಸಿಕ್ಕ ಜನಪ್ರಿಯತೆ ನೋಡಿಕೊಂಡು ಮಾಡಿದ ಸೇರ್ಪಡೆಯಲ್ಲವಾದರೂ, ಅವರು ಮತ್ತೆ ಕ್ಲೈಮ್ಯಾಕ್ಸ್‌ನಲ್ಲಿ ‘ಜೈಲರ್‌’ಗಿಂತ ಒಂದು ಹೆಜ್ಜೆ ಹೆಚ್ಚಾಗಿಯೇ ಮಿಂಚುತ್ತಾರೆ. ಧನುಷ್ ಜೊತೆ ಒಂದು ಹಾಡಿಗೂ ಹೆಜ್ಜೆ ಹಾಕಿದ್ದಾರೆ ಮತ್ತು ಎಲ್ಲಿಯೂ ಅತಿಯಾಗದಂತಹ ನಟನೆ ಮೂಲಕ ಭಾವಪೂರ್ಣ ದೃಶ್ಯಗಳಲ್ಲೂ ಗಮನ ಸೆಳೆಯುತ್ತಾರೆ. ಶಿವರಾಜಕುಮಾರ್ ಪ್ರವೇಶದ ವೇಳೆ ಥಿಯೇಟರ್‌ನಲ್ಲಿ ಕೇಳುವ ಸಿಳ್ಳು ಮತ್ತು ಕೂಗಾಟವನ್ನು ಲೆಕ್ಕ ಹಾಕಿದರೆ, ಅವರ ಸೇರ್ಪಡೆಯಿಂದ ಚಿತ್ರಕ್ಕೆ ಕರ್ನಾಟದಲ್ಲಿ ದೊಡ್ಡ ಲಾಭವಾಗುವಂತಿದೆ.

ಭಾರತೀಯ ಆ್ಯಕ್ಷನ್ ಚಿತ್ರಗಳಲ್ಲಿ ಮಹಿಳಾ ಪಾತ್ರಗಳಿಗೆ ಪ್ರಾಮುಖ್ಯತೆ ಕೊಟ್ಟರೂ, ಅವುಗಳು ಕಡ್ಡಾಯವಾಗಿ ನಾಯಕನ ಜೊತೆ ಪ್ರೇಮ ಸಂಬಂಧ ಹೊಂದಿರುವಂತೆ ಚಿತ್ರಿಸಲಾಗುತ್ತದೆ. ಇಲ್ಲಿ, ಅತ್ಯಂತ ಅಪರೂಪಕ್ಕೊಮ್ಮೆ ಹೀರೋ ಜೊತೆ ಪ್ರೇಮ ಸಂಬಂಧವಿಲ್ಲದ, ತಮ್ಮದೇ ಪ್ರತ್ಯೇಕ ಅಸ್ತಿತ್ವವಿರುವ ಎರಡು ಪಾತ್ರಗಳನ್ನು ಸೃಷ್ಟಿಸಲಾಗಿದೆ. ಅದರಲ್ಲೂ ಪ್ರೇಮದಲ್ಲಿ ಬೀಳುವ ಎಲ್ಲಾ ಅವಕಾಶಗಳನ್ನು, ಕಲ್ಪಿಸಿಯೂ ಕೂಡ ನಿರ್ದೇಶಕರು ಆ ಮಾರ್ಗದಲ್ಲಿ ಸಾಗದೇ ಇರುವುದು ಖುಷಿ ಕೊಡುತ್ತದೆ. ಈ ಪಾತ್ರಗಳಲ್ಲಿ ಪ್ರಿಯಾಂಕ ಅರುಲ್ ಮೋಹನ್ ಮತ್ತು ನಿವೇದಿತಾ ಸತೀಶ್ ಸಮರ್ಥವಾಗಿ ನಟಿಸಿ ಗಮನ ಸೆಳೆಯುತ್ತಾರೆ.

ಸಿದ್ಧಾರ್ಥ್ ನೂನಿ ಸಿನಿಮಟೋಗ್ರಫಿ ಅದ್ಭುತವಾಗಿದೆ. ಚಿತ್ರದ ಪರಿಸರವನ್ನು, ಕತ್ತಲು ಬೆಳಕನ್ನು ಅವರು ತುಂಬಾ ಸಮರ್ಪಕವಾಗಿ ಮತ್ತು ಸುಂದರವಾಗಿ ಬಳಸಿಕೊಂಡಿದ್ದಾರೆ. ಜಿ ವಿ ಪ್ರಕಾಶ್ ಕುಮಾರ್ ಹಿನ್ನೆಲೆ ಸಂಗೀತ ಚಿತ್ರವನ್ನು ಮತ್ತಷ್ಟು ಎತ್ತರಕ್ಕೇರಿಸಿದೆ. ಚಿತ್ರ ಮೇಕಿಂಗ್ ದೃಷ್ಟಿಯಲ್ಲಿ ಅತ್ಯುತ್ತಮವಾಗಿದೆ. ಆ್ಯಕ್ಷನ್ ದೃಶ್ಯಗಳನ್ನು ತುಂಬಾ ತಾರ್ಕಿಕವಾಗಿ ಹಾಗು ಚೆನ್ನಾಗಿ ಚಿತ್ರಿಸಲಾಗಿದೆ. ಬಹುತೇಕ ಮದ್ದು ಗುಂಡುಗಳನ್ನೇ ಬಳಸಿಕೊಂಡ ಆ್ಯಕ್ಷನ್ ದೃಶ್ಯಗಳನ್ನು ಸಂಯೋಜಿಸಿರುವುದು ವಿಶೇಷವಾಗಿದೆ. ಕೈ ಮಿಲಾಯಿಸಿ ನಡೆಸುವ ಹೊಡೆದಾಟ ತೀರಾ ಕಡಿಮೆ ಇದೆ ಮತ್ತು ಇದು ಚಿತ್ರಕ್ಕೊಂದು ಅನನ್ಯತೆ ಕೊಟ್ಟಿದೆ. ‘ಕ್ಯಾಪ್ಟನ್ ಮಿಲ್ಲರ್’ ಹಲವು ಹೊಸತನ, ಹೊಸ ಯೋಚನೆಗಳಿಂದ ಕೂಡಿದ್ದರೂ ಸ್ವಲ್ಪ ದುರ್ಬಲ ದ್ವಿತಿಯಾರ್ಧದಿಂದಾಗಿ ನಡುವೆ ಒಮ್ಮೆ ದೀರ್ಘವಾದಂತೆ ಎನಿಸುತ್ತದೆ. ಆದರೂ, ಚಿತ್ರದ ಕ್ಲೈಮ್ಯಾಕ್ಸ್ ಎರಡನೇ ಭಾಗದ ಸೂಚನೆ ನೀಡಿದ್ದು, ಖಂಡಿತಾ ಕುತೂಹಲ ಕೆರಳಿಸುತ್ತದೆ.

LEAVE A REPLY

Connect with

Please enter your comment!
Please enter your name here