ಕಲರ್ಸ್‌ ಕನ್ನಡ ವಾಹಿನಿ ‘ನನ್ನ ದೇವ್ರು’ ನೂತನ ಸೀರಿಯಲ್‌ ಆರಂಭಿಸುತ್ತಿದೆ. ‘ಅಶ್ವಿನಿ ನಕ್ಷತ್ರ’ ಸರಣಿ ಮೂಲಕ ಕ್ಯಾಮೆರಾ ಎದುರಿಸಿದ್ದ ಮಯೂರಿ ಈ ಸರಣಿಯೊಂದಿಗೆ ಕಿರುತೆರೆಗೆ ಮರಳುತ್ತಿದ್ದಾರೆ. ಇದೇ ಜುಲೈ 8ರಿಂದ ಸಂಜೆ 6.30ಕ್ಕೆ ಸರಣಿ ಪ್ರಸಾರವಾಗಲಿದೆ.

ಊರೇ ಮೆಚ್ಚುವ ಉದ್ಯಮಿ ಸಚ್ಚಿದಾನಂದಗೆ ಸೇರಿದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ಬಡ ಹುಡುಗಿ ಮಯೂರಿ. ವೃತ್ತಿಯಲ್ಲಿ ನರ್ಸ್‌. ಜನಾನುರಾಗಿ ಸಚ್ಚಿದಾನಂದನ ಇಪ್ಪತ್ತು ವರ್ಷದ ಮಗಳಿಗೆ ಅಪ್ಪನನ್ನು ಕಂಡರೆ ಇಷ್ಟವಿಲ್ಲ. ತನ್ನಿಂದ ದೂರಾಗಿ ಬದುಕುತ್ತಿರುವ ಮಗಳ ವಿಶ್ವಾಸವನ್ನು ಮರಳಿ ಗಳಿಸಿಕೊಳ್ಳಲು ಹಲುಬುತ್ತಿರುವ ಸಚ್ಚಿದಾನಂದನ ಬದುಕಲ್ಲಿ ಮಯೂರಿಯ ಪ್ರವೇಶವಾಗುತ್ತದೆ. ತಾನು ಆರಾಧಿಸುವ ಸಚ್ಚಿದಾನಂದ್ ಬಾಳನ್ನು ಸರಿದಾರಿಗೆ ತರುವ ಹಾದಿಯಲ್ಲಿ ಮಯೂರಿ ಎದುರಿಸುವ ಸವಾಲುಗಳೇನು? ಸುತ್ತಲಿನವರ ಸಂಚುಗಳಿಂದ ಮಯೂರಿ ಹೇಗೆ ಸಚ್ಚಿದಾನಂದನನ್ನು ಕಾಪಾಡುತ್ತಾಳೆ? ಎನ್ನುವುದು ‘ನನ್ನ ದೇವ್ರು’ ಸರಣಿ ಕತೆ. ಕಲರ್ಸ್‌ ಕನ್ನಡ ವಾಹಿನಿಯ ಈ ಸರಣಿಯೊಂದಿಗೆ ನಟಿ ಮಯೂರಿ ಕಿರುತೆರೆಗೆ ಮರಳುತ್ತಿದ್ದಾರೆ. ಈ ಹಿಂದೆ ‘ಅಶ್ವಿನಿ ನಕ್ಷತ್ರ’ ಸರಣಿಯಲ್ಲಿ ಕನ್ನಡಿಗರಿಗೆ ಪರಿಚಯವಾಗಿದ್ದ ಅವರು ನಂತರ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ‘ನನ್ನ ದೇವ್ರು’ ಸೀರಿಯಲ್‌ನೊಂದಿಗೆ ಟೀವಿಗೆ ಮರಳುತ್ತಿದ್ದಾರೆ.

ಕನ್ನಡ ಚಿತ್ರರಂಗ ಕಂಡ ಮೇರು ಹಾಸ್ಯನಟ ನರಸಿಂಹರಾಜು ಅವರ ಮೊಮ್ಮಗ ಅವಿನಾಶ್‌ ಸರಣಿಯಲ್ಲಿ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೊದಲು ‘ಒಲವಿನ ನಿಲ್ದಾಣ’ ಧಾರಾವಾಹಿ ನಿರ್ಮಿಸಿದ್ದ ಶ್ರುತಿ ನಾಯ್ಡು, ‘ನನ್ನ ದೇವ್ರು’ ಧಾರಾವಾಹಿ ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ಬೆಳ್ಳಿ ಪರದೆಯಲ್ಲಿ ಖಳನಟನಾಗಿ ಹೆಸರು ಮಾಡುತ್ತಿರುವ ರಮೇಶ್ ಇಂದಿರಾ ಧಾರಾವಾಹಿ ನಿರ್ದೇಶಿಸುತ್ತಿದ್ದಾರೆ. ನೂತನ ಸರಣಿ ಬಗ್ಗೆ ಮಾತನಾಡುವ ಕಲರ್ಸ್‌ ಕನ್ನಡ ಬ್ಯುಸ್ನೆಸ್‌ ಹೆಡ್‌ ಪ್ರಶಾಂತ್‌ ನಾಯಕ್‌, ‘ಸದಾ ಹೊಸತನಕ್ಕಾಗಿ ತುಡಿಯುವ ಕಲರ್ಸ್ ಕನ್ನಡ ಈ ಹೊಸ ಧಾರಾವಾಹಿಯ ಮುಖಾಂತರ ಮುಗ್ಧತೆ ಮತ್ತು ಪ್ರಾಮಾಣಿಕತೆ ತಂದೊಡ್ಡುವ ಸವಾಲುಗಳ ಕತೆಯೊಂದನ್ನು ವೀಕ್ಷಕರಿಗೆ ಉಣಬಡಿಸಲಿದೆ’ ಎನ್ನುತ್ತಾರೆ. ಯುಕ್ತಾ ಮಲ್ನಾಡ್, ಸ್ವಾತಿ, ವಿ ಮನೋಹರ್, ರೇಖಾದಾಸ್, ನಿಶ್ಚಿತಾ ಗೌಡ, ಮಾಲತಿ ಸುಧೀರ್, ಯಮುನಾ ಶ್ರೀನಿಧಿ, ರವಿ ಬ್ರಹ್ಮ, ಅಭಿಷೇಕ್ ಶ್ರೀಕಾಂತ್ ಸರಣಿಯ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದೇ ಜುಲೈ 8ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ ಆರೂವರೆಗೆ ಸರಣಿ ಮೂಡಿಬರಲಿದೆ.

LEAVE A REPLY

Connect with

Please enter your comment!
Please enter your name here