ಆರ್ ಬಾಲಚಂದ್ರ ನಟಿಸಿ, ನಿರ್ಮಿಸಿ, ನಿರ್ದೇಶಿಸಿರುವ ‘ಕಣಂಜಾರು’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ‘ಕೃಷ್ಣ ಟಾಕೀಸ್’ ಖ್ಯಾತಿಯ ಅಪೂರ್ವ ನಾಯಕಿಯಾಗಿ ನಟಿಸಿದ್ದಾರೆ. ಕಾರ್ಕಳ, ಉಡುಪಿ, ಹೊನ್ನಾವರದಲ್ಲಿ ಸಿನಿಮಾಗೆ ಚಿತ್ರೀಕರಣ ನಡೆದಿದೆ. ಮಳೆಯಲ್ಲಿ ಚಿತ್ರಿಸಿರುವ ಆಕ್ಷನ್ ಸನ್ನಿವೇಶದ ಟೀಸರ್ ಸಿನಿಮಾ ಕುರಿತು ನಿರೀಕ್ಷೆ ಮೂಡಿಸುತ್ತದೆ.
‘ಕಣಂಜಾರು ಕಾರ್ಕಳದ ಹತ್ತಿರ ಇರುವ ಒಂದು ಊರು. ಅಲ್ಲಿ ಒಂದು ಮನೆಯಿದೆ. ಕಾಡಿನ ಮಧ್ಯೆ ಇರುವ ದೈವದ ಮನೆ ಅದು. ಅದಕ್ಕೆ ಯಾರೂ ಬೀಗ ಹಾಕಿಲ್ಲ. ಆ ಮನೆಯ ಒಳಗೆ ಹೋಗುವಾಗ ಚಪ್ಪಲಿ ಬಿಟ್ಟು ಹೋಗುತ್ತಾರೆ. ಅಲ್ಲಿ ಚಿತ್ರೀಕರಣ ನಡೆಸಲು ಯಾರಿಗೂ ಅನುಮತಿ ಕೊಡಲ್ಲ. ಆದರೆ ನಮಗೆ ದೇವರೇ ಹೂ ಕೊಟ್ಟಾಗ ಅನುಮತಿ ನೀಡಿದರು’ ಎನ್ನುತ್ತಾರೆ ‘ಕಣಂಜಾರು’ ಸಿನಿಮಾದ ಹೀರೋ, ನಿರ್ಮಾಪಕ ಮತ್ತು ನಿರ್ದೇಶಕ ಆರ್ ಬಾಲಚಂದ್ರ. ಕರಾವಳಿ ತೀರದ ಕತೆಯಾದರೂ ಇಲ್ಲಿ ತಾವು ಕಂಬಳ, ಕೋಲದ ಕತೆ ಹೇಳುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸುತ್ತಾರೆ. ಈ ಹಿಂದೆ ಮೋಷನ್ ಪೋಸ್ಟರ್ ಮೂಲಕ ಗಮನ ಸೆಳೆದಿದ್ದ ಚಿತ್ರತಂಡ ಈ ಬಾರಿ ಆಕರ್ಷಕ ಟೀಸರ್ ಮೂಲಕವೂ ನಿರೀಕ್ಷೆ ಹುಟ್ಟುಹಾಕಿದೆ.
ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವ ಕುರಿತು ಮಾತನಾಡುವ ನಿರ್ದೇಶಕ ಆರ್ ಬಾಲಚಂದ್ರ, ‘ಟೀಸರ್‌ಗೆ ಪಾಸಿಟಿವ್ ರೆಸ್ಪಾನ್ಸ್ ಬರುತ್ತಿದೆ. ಕಣಂಜಾರು ಎಂಬ ಸ್ಥಳ ಸಿಗಲಿಕ್ಕೆ ನಾನು ಸಾವಿರಾರು ಕಿಲೋಮೀಟರ್ ಜರ್ನಿ ಮಾಡಿದೆ. ಕೊನೆಗೆ ಕಾರ್ಕಳ ಹತ್ತಿರ ಈ ಲೊಕೇಶನ್ ಸಿಕ್ತು. ಇದೊಂದು ಯೂನಿಕ್ ಕಾನ್ಸೆಪ್ಟ್. ಕಲಾವಿದರು ಹಾಗೂ ತಂತ್ರಜ್ಞರು ಸಹಕಾರ ನೀಡಿದ್ದರಿಂದಲೇ ಇಂಥ ಚಿತ್ರ ಮಾಡಲು ಸಾಧ್ಯವಾಯಿತು. ಇದು ಕಣಂಜಾರು ಎಂಬ ಊರಲ್ಲಿ ನಡೆಯುವ ಕತೆ. ಕಾರ್ಕಳ, ಉಡುಪಿ, ಹೊನ್ನಾವರ ಲೊಕೇಶನ್‌ಗಳಲ್ಲಿ 60 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ’ ಎನ್ನುತ್ತಾರೆ. ಅವರು ಈ ಹಿಂದೆ ‘ಮಹಾನುಭಾವರು’ ಚಿತ್ರ ಮಾಡಿದ್ದರು. ನಟನಾಗುವ ಕನಸಿನೊಂದಿಗೆ ಸಿನಿಮಾರಂಗಕ್ಕೆ ಬಂದವರು ಬಾಲಚಂದ್ರ. ಕೊನೆಗೆ ಅವರೇ ಸಿನಿಮಾ ನಿರ್ಮಿಸಿ, ನಿರ್ದೇಶಿಸಿದ್ದಾರೆ.
‘ಕೃಷ್ಣ ಟಾಕೀಸ್’ ಸಿನಿಮಾ ಖ್ಯಾತಿಯ ಅಪೂರ್ವ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡುವ ಅವರು, ‘ಹೊಸ ತಂಡ ಹೇಗೆ ಮಾಡ್ತಾರೋ ಅನ್ನೋ ಅನುಮಾನ ನನಗಿತ್ತು. ಟೀಸರ್ ನೋಡಿದ ನನ್ನ ಸ್ನೇಹಿತೆಯರು ಕಾಲ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದಾಗ ಖುಷಿಯಾಯ್ತು. ಬಾಲಕೃಷ್ಣ ತುಂಬಾ ಫ್ಯಾಷನ್ ಇರುವ ನಿರ್ದೇಶಕ. ನಟನೆ, ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸಿದ್ದಾರೆ. ಚಿತ್ರದಲ್ಲಿ ನನ್ನದು ಕ್ಯಾಮಿಯೋ ರೋಲ್ ಆದರೂ ತುಂಬಾ ತೂಕ ಇರುವ, ಚಿತ್ರಕಥೆಗೆ ತಿರುವು ನೀಡುವಂಥ ಪಾತ್ರ’ ಎನ್ನುತ್ತಾರೆ. ಕಾರ್ತೀಕ್ ಪೂಜಾರಿ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ.
ಚಿತ್ರದಲ್ಲಿ ಮೂರು ಹಾಡುಗಳಿದ್ದು ಹರ್ಷವರ್ಧನ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇದೇ ಆಗಸ್ಟ್‌ನಲ್ಲಿ ಚಿತ್ರವನ್ನು ರಿಲೀಸ್ ಮಾಡುವ ಯೋಜನೆ ನಿರ್ಮಾಪಕರದ್ದು. ರಂಗಭೂಮಿ ಹಿನ್ನೆಲೆಯಿಂದ ಬಂದವರು, ಬಹುತೇಕ ಸ್ಥಳೀಯ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ ಎನ್ನುವುದು ವಿಶೇಷ. ಛಾಯಾಗ್ರಹಣಕ್ಕೆ ಚಿತ್ರದಲ್ಲಿ ವಿಶೇಷ ಮಾನ್ಯತೆ ಇದ್ದು, ಮಂಜುನಾಥ್ ಹೆಗ್ಡೆ ಕ್ಯಾಮೆರಾ ಕೆಲಸ ನಿಭಾಯಿಸಿದ್ದಾರೆ. ಶರ್ಮಿತಾ ಗೌಡ, ರಾಮಕೃಷ್ಣ, ಪಿ ಎಸ್ ಶ್ರೀಧರ್, ಮೇಘ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶಶಾಂಕ್ ಶೇಷಗಿರಿ ಅವರ ಹಿನ್ನೆಲೆ ಸಂಗೀತ, ವೆಂಕಿ ಯುಡಿವಿ ಸಂಕಲನ ಚಿತ್ರಕ್ಕಿದೆ.