ಕನ್ನಡಿಗರಿಗೆ ಚಿರಪರಿಚಿತರಾಗಿರುವ ನಿರೂಪಕಿ, ಜನಪದ ಗಾಯಕಿ ದಿವ್ಯಾ ಆಲೂರು ‘ಕನ್ನಿಕೇರಿ ಹುಡ್ಗಿ’ ಹಾಡಿಗೆ ಹೊಸರೂಪ ಕೊಟ್ಟಿದ್ದಾರೆ. ಜನಪದವನ್ನು ಮುಂದಿನ ತಲೆಮಾರಿಗೆ ತಲುಪಿಸುವ ಇರಾದೆ ಅವರದು. ಯುವ ಪೀಳಿಗೆಯ ಅಭಿರುಚಿಗೆ ಹೊಂದುವ ಸಂಗೀತ, ನೃತ್ಯದೊಂದಿಗೆ ಅವರು ಹಾಡು ರೂಪಿಸಿದ್ದಾರೆ.

ನಿರೂಪಕಿಯಾಗಿ ಕನ್ನಡಿಗರಿಗೆ ಪರಿಚಿತರಾಗಿರುವ ದಿವ್ಯಾ ಆಲೂರು ಜನಪದ ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ‘ದೇಸಿ ಬೀಟ್ಸ್‌’ ತಂಡ ಕಟ್ಟಿಕೊಂಡು ರಾಜ್ಯದ ಹಲವೆಡೆ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಜನಪದ ಸಂಗೀತದೆಡೆ ಅವರಿಗೆ ವಿಶೇ‍ಷ ಆಸಕ್ತಿ. ಇದಕ್ಕೆ ಕಾರಣ ಅವರ ತಂದೆ ಆಲೂರು ನಾಗಪ್ಪನವರು. ಜನಪದ ಗಾಯಕರೂ, ಲೇಖಕರೂ ಆದ ನಾಗಪ್ಪನವರ ಹಾಡುಗಾರಿಕೆಯನ್ನು ಆಲಿಸುತ್ತಾ ಬೆಳೆದವರು ದಿವ್ಯಾ. ತೊಂಬತ್ತರದ ದಶಕದಲ್ಲಿ ಆಲೂರು ನಾಗಪ್ಪ ಅವರು ಹಾಡಿದ್ದ ‘ಕನ್ನಿಕೇರಿ ಹುಡ್ಗಿ’ ಜನಪದ ಗೀತೆ ಬಹು ಜನಪ್ರಿಯವಾಗಿತ್ತು. ಈಗ ದಿವ್ಯಾ ಈ ಗೀತೆಗೆ ರೀಮಿಕ್ಸ್‌ ಟಚ್ ಕೊಟ್ಟು, ಆಕರ್ಷಕ ನೃತ್ಯ, ಸಂಗೀತದೊಂದಿಗೆ ಹಾಡು ರೂಪಿಸಿದ್ದಾರೆ. “ಜನಪದ ಸಂಗೀತವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸಣ್ಣ ಪ್ರಯತ್ನವಿದು. ಮೂಲ ಸಾಹಿತ್ಯ ಮತ್ತು ಗೇಯಕ್ಕೆ ಚ್ಯುತಿ ಬರದಂತೆ ಹಾಡು ರೂಪಿಸಿದ್ದೇವೆ” ಎನ್ನುತ್ತಾರೆ ದಿವ್ಯಾ.

ತಂದೆ, ಜನಪದ ಗಾಯಕ ಆಲೂರು ನಾಗಪ್ಪ ಹಾಗೂ ಪತಿ ಆದರ್ಶ್ ಅವರೊಂದಿಗೆ ದಿವ್ಯಾ ಆಲೂರು

ಕಳೆದ ಹದಿನೆಂಟು ವರ್ಷಗಳಿಂದ ದಿವ್ಯಾ ಆಲೂರು ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾ, ರಾಜಕೀಯ, ಸಾಮಾಜಿಕ ಸೇವೆ, ವೈದ್ಯಕೀಯ, ಶಿಕ್ಷಣ… ಹೀಗೆ ಎಲ್ಲಾ ಕ್ಷೇತ್ರಗಳ ಕಾರ್ಯಕ್ರಮಗಳನ್ನೂ ನಿರೂಪಿಸಿರುವ ಅನುಭವಿ ಅವರು. ಇಲ್ಲಿಯವರೆಗೆ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ. ಜನಪದ ಗಾಯನ ಅವರ ಚಿಕ್ಕಂದಿನ ಆಸಕ್ತಿ. ಈ ನಿಟ್ಟಿನಲ್ಲಿ ‘ಕನ್ನಿಕೇರಿ ಹುಡ್ಗಿ’ ಮೊದಲ ಪ್ರಯತ್ನ. ದಿವ್ಯಾ ಜೊತೆ ಅವರ ಪತಿ ಎನ್‌.ಎಸ್‌.ಆದರ್ಶ್‌ ಈ ಗೀತೆಗೆ ದನಿಯಾಗಿದ್ದಾರೆ. ಈ ಹಾಡು ರೂಪುಗೊಂಡಿರುವುದರ ಹಿಂದೆ ಪತಿ ಆದರ್ಶ್ ಅವರ ಉತ್ಸಾಹ, ಒತ್ತಾಸೆ ದೊಡ್ಡದು ಎನ್ನುತ್ತಾರೆ ದಿವ್ಯಾ. ಅರುಣ್‌ ಆಂಡ್ರ್ಯೂ ಸಂಗೀತ ಸಂಯೋಜನೆ, ಪ್ರಶಾಂತ್‌ ಕುಮಾರ್ ಪರಿಕಲ್ಪನೆ ಮತ್ತು ನೃತ್ಯ ಸಂಯೋಜನೆ, ರಾಜಶೇಖರ್ ಛಾಯಾಗ್ರಹಣ, ಎನ್‌.ಎಂ.ವಿಶ್ವ ಸಂಕಲನ ಮಾಡಿದ್ದಾರೆ. ನಿರೂಪಕಿ ದಿವ್ಯಾ ತಮ್ಮ ‘ದಿವ್ಯಾ ಆಲೂರು ಅಫಿಷಿಯಲ್‌’ ಯೂಟ್ಯೂಬ್‌ ಚಾನೆಲ್‌ನಲ್ಲಿ ಆಲ್ಬಂ ಬಿಡುಗಡೆ ಮಾಡಿದ್ದಾರೆ. ನಿರೂಪಕಿ ದಿವ್ಯಾ ಮುಂದಿನ ದಿನಗಳಲ್ಲಿ ನಟಿಯಾಗಿಯೂ ಬೆಳ್ಳಿತೆರೆಗೆ ಪರಿಚಯವಾಗಲಿದ್ದಾರೆ. ಶ್ರೀಧರ್ ಕಶ್ಯಪ್ ನಿರ್ದೇಶನದ ಚಿತ್ರವೊಂದಲ್ಲಿ ಅವರು ಸೈಕಿಯಾಟ್ರಿಸ್ಟ್ ಪಾತ್ರ ನಿರ್ವಹಿಸಲಿದ್ದಾರೆ.

LEAVE A REPLY

Connect with

Please enter your comment!
Please enter your name here