ಸಂಗೀತ ಸಂಯೋಜಕ ಪೂರ್ಣಚಂದ್ರ ತೇಜಸ್ವಿ ‘ಪೆಪೆ’ ಸಿನಿಮಾದಲ್ಲಿ ಜೇನು ಕುರುಬ ಸಮುದಾಯದ ಸಾಂಪ್ರದಾಯಿಕ ಹಾಡೊಂದನ್ನು ಬಳಕೆ ಮಾಡಿದ್ದಾರೆ. ಜೆ ಜಿ ಕುಮಾರ್ ಹಾಡಿರುವ ಈ ಗೀತೆಗೆ ಜೇನು ಕುರುಬ ಸಮುದಾಯದ ಹಲವು ಸಹಗಾಯಕರು ದನಿಗೂಡಿಸಿದ್ದಾರೆ. ನೇಟಿವಿಟಿಯ ಸೊಬಗು ಈ ಹಾಡಿನಲ್ಲಿ ಸೊಗಸಾಗಿ ಧ್ವನಿಸುತ್ತಿದೆ.
‘ಪೆಪೆ’ ಸಿನಿಮಾದ ಹಾಡೊಂದು ಬಿಡುಗಡೆಯಾಗಿದೆ. ಜೇನು ಕುರುಬ ಸಮುದಾಯದ ಸಾಂಪ್ರದಾಯಿಕ ಹಾಡು ಲಯಬದ್ಧತೆ ಹಾಗೂ ನೇಟಿವಿಟಿಯ ಸೊಗಡಿನಿಂದಾಗಿ ಗಮನ ಸೆಳೆಯುತ್ತದೆ. ಚಿತ್ರದ ಸಂಗೀತ ಸಂಯೋಜಕ ಪೂರ್ಣಚಂದ್ರ ತೇಜಸ್ವಿ ಅವರು ಜೇನು ಕುರುಬರ ಸಾಂಪ್ರದಾಯಿಕ ವಾದ್ಯಗಳನ್ನೇ ಬಳಕೆ ಮಾಡಿ ಈ ಪ್ರಯೊಗ ನಡೆಸಿದ್ದಾರೆ. ಚಿತ್ರತಂಡ ‘ಪೆಪೆ – ಪ್ರಿಸೆಟ್’ ಎಂಬ ಟ್ಯಾಗ್ ಲೈನ್ ಅಡಿ ಈ ಹಾಡು ರಿಲೀಸ್ ಮಾಡಿದೆ. ಪಿಆರ್‌ಕೆ ಆಡಿಯೋದಡಿ ರಿಲೀಸ್ ಆಗಿರುವ ಹಾಡು ವಿಭಿನ್ನತೆಯಿಂದ ಕೂಡಿದೆ. ಜೇನು ಕುರುಬ ಬುಡಗಟ್ಟು ಜನಾಂಗದ ಆಚಾರ ವಿಚಾರ ತೆರೆದಿಡುವ ಗೀತೆಗೆ ಗಿರಿಜನ ಸಮಗ್ರ ಅಭಿವೃದ್ದಿ ಕಲಾ ಸಂಸ್ಥೆ ಹಾಗೂ ಜೆ ಜಿ ಕುಮಾರ ಧ್ವನಿಯಾಗಿದ್ದಾರೆ. ಚಿತ್ರತಂಡ ಖುದ್ದು ಹೇಳಿಕೊಂಡಂತೆ ಇಡೀ ಚಿತ್ರದ ಸೌಂಡ್ ಡಿಸೈನ್ ಬೇರೆ ರೀತಿ ಇದೆ ಎನ್ನುವುದಕ್ಕೆ ಈ ಹಾಡು ಉದಾಹರಣೆಯಂತಿದೆ.
ಶ್ರೀಲೇಶ್ ಎಸ್ ನಾಯರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರದ ನಾಯಕಿಯಾಗಿ ಕಾಜಲ್ ಕುಂದರ್ ನಟಿಸಿದ್ದಾರೆ. ಮಯೂರ್ ಪಟೇಲ್, ಯಶ್ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್, ನವೀನ್ ಡಿ ಪಡೀಲ್ ಇತರೆ ಪ್ರಮುಖ ಪಾತ್ರಧಾರಿಗಳು. ಅಭಿಷೇಕ್ ಜಿ ಕಾಸರಗೋಡು ಛಾಯಾಗ್ರಹಣ, ರವಿವರ್ಮ, ಚೇತನ್ ಡಿಸೋಜಾ, ಡಿಫ್ರೆಂಟ್ ಡ್ಯಾನಿ, ನರಸಿಂಹ ಅವರ ಸಾಹಸ ಸಂಯೋಜನೆ ಚಿತ್ರಕ್ಕಿದೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರದಲ್ಲಿ ಸಿನಿಮಾ ಚಿತ್ರಿಸಲಾಗಿದೆ. ಉದಯ್ ಸಿನಿ ವೆಂಚರ್, ದೀಪ ಫಿಲ್ಮ್ಸ್ ಬ್ಯಾನರ್‌ನಡಿ ಉದಯ್ ಶಂಕರ್ ಎಸ್ ಮತ್ತು ಕೋಲಾರದ ಬಿ ಎಮ್ ಶ್ರೀರಾಮ್ ಚಿತ್ರ ನಿರ್ಮಿಸಿದ್ದಾರೆ.