ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್‌ ‘ವಿಶ್ವಭಾರತಿಗೆ ಕನ್ನಡದಾರತಿ’ ಶೀರ್ಷಿಕೆಯಡಿ ವೀಡಿಯೋ ಸಾಂಗ್‌ ರೂಪಿಸಿದ್ದಾರೆ. ಸಂತೋಷ್‌ ಆನಂದರಾಮ್‌ ನಿರ್ದೇಶನದ ಹಾಡಿನಲ್ಲಿ ಕನ್ನಡ ಸಿನಿಮಾ ತಾರೆಯರು ಸೇರಿದಂತೆ ಸಾಂಸ್ಕೃತಿಕ ಜಗತ್ತಿನ ಹಲವರು ಪಾಲ್ಗೊಂಡಿದ್ದಾರೆ.

ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಿರಿಯ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್‌ ನಿರ್ಮಾಣ, ಸಂತೋಷ್‌ ಆನಂದರಾಮ್‌ ನಿರ್ದೇಶನದಲ್ಲಿ ‘ವಿಶ್ವಭಾರತಿಗೆ ಕನ್ನಡದಾರತಿ’ ವೀಡಿಯೋ ಸಾಂಗ್‌ ತಯಾರಾಗಿದೆ. ಪ್ರವೀಣ್ ಡಿ.ರಾವ್ ಸಂಗೀತ ಸಂಯೋಜನೆಯ ಹಾಡಿಗೆ ವಿಜಯ್ ಪ್ರಕಾಶ್ ದನಿಯಾಗಿದ್ದಾರೆ. ಸಿನಿಮಾ ತಾರೆಯರಾದ ಅನಂತನಾಗ್‌, ಶಿವರಾಜಕುಮಾರ್, ಸುದೀಪ್‌ ರವಿಚಂದ್ರನ್, ಜಗ್ಗೇಶ್, ರಮೇಶ್ ಅರವಿಂದ್, ಅರ್ಜುನ್ ಸರ್ಜಾ, ಗಣೇಶ್, ಶ್ರೀಮುರಳಿ, ಧನಂಜಯ, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ, ಸಾಲುಮರದ ತಿಮ್ಮಕ್ಕ, ಜೋಗತಿ ಮಂಜಮ್ಮ, ಕ್ರಿಕೆಟರ್‌ ವೆಂಕಟೇಶ್ ಪ್ರಸಾದ್ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.

ಈ ಬಗ್ಗೆ ಮಾತನಾಡುವ ನಟ ಜಗ್ಗೇಶ್‌, “ನನಗೆ ಚಿಕ್ಕ ವಯಸ್ಸಿನಿಂದಲೂ ‘ಮಿಲೇ ಸುರ್ ಮೇರಾ ತುಮ್ಹಾರಾ’ ಹಾಡೆಂದರೆ ಬಹಳ ಇಷ್ಟ. ಇಂಥದ್ದೊಂದು ಹಾಡನ್ನು ನಮ್ಮ ಕನ್ನಡ ಕಲಾವಿದರ ಸಮಾಗಮದಲ್ಲಿ ಮಾಡಬೇಕೆಂಬ ಆಸೆಯಿತ್ತು. ಈಗ ಆ ಆಸೆ ಈಡೇರಿದೆ. ಕೇವಲ ಹದಿಮೂರು ದಿನಗಳಲ್ಲಿ ಈ ಹಾಡು ನಿರ್ಮಾಣವಾಗಿದೆ. ಸಂತೋಷ್ ಆನಂದ್ ರಾಮ್ ಸೊಗಸಾಗಿ ನಿರ್ದೇಶನ ಮಾಡಿದ್ದಾರೆ. ವಿಜಯ್ ಪ್ರಕಾಶ್ ಧ್ವನಿಯಲ್ಲಿ ಈ ಹಾಡನ್ನು ಕೇಳುವುದೇ ಆನಂದ. ಈ ಹಾಡಿನ‌ ನಿರ್ಮಾಣ ಆರಂಭವಾದಾಗ ನನ್ನ ಎಲ್ಲಾ ಕನ್ನಡ ಚಿತರಂಗದ ನಾಯಕ ಮಿತ್ರರನ್ನು ಫೋನ್ ಮೂಲಕ ಸಂಪರ್ಕಿಸಿ, ಈ ವಿಷಯ ಹೇಳಿದಾಗ ಬಹಳ ಪ್ರೀತಿಯಿಂದ ಬಂದು ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ನಾಯಕ ನಟರಷ್ಟೇ ಅಲ್ಲದೇ ವಿವಿಧ ಕ್ಷೇತ್ರಗಳ ಗಣ್ಯರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಇವರೆಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು” ಎಂದು ಕೃತಜ್ಞತೆ ಅರ್ಪಿಸಿದ್ದಾರೆ.

ನಿರ್ದೇಶಕ ಸಂತೋಷ್‌ ರಾಮ್‌ ಮಾತನಾಡಿ, “ವಂದೇ ಮಾತರಂ ಎಂದರೆ ಜಾತಿ ಮತ ಧರ್ಮ ಎಲ್ಲವನ್ನೂ ದಾಟಿ ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎನ್ನುವ ಸಾರಾಂಶ. ಭಾರತವನ್ನು ಯಾವ ರೀತಿಯಲ್ಲಿ ವಿವರಿಸಬಹುದು ಎಂದು ಹೋದಾಗ, ಅಲ್ಲಿ ನಾವು ಗೋಮಾತೆಯನ್ನು ತಾಯಿಯ ತರಹ ಪೂಜಿಸುತ್ತೇವೆ. ಆ ಪಾತ್ರದಲ್ಲಿ ಶಿವಣ್ಣ ಅಭಿನಯಿಸಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಮೂಲಕ ಹಾಡು ಆರಂಭವಾಗುತ್ತದೆ ಅಲ್ಲಿ ಸುದೀಪ್ ಇದ್ದಾರೆ. ಹೀಗೆ ಭಾರತದ ಹಿರಿಮೆಯನ್ನು ಈ ಹಾಡಿನಲ್ಲಿ ತೋರಿಸುವ ಪ್ರಯತ್ನವನ್ನು ಹಿರಿಯ ನಟರಾದ ಅನಂತನಾಗ್, ರವಿಚಂದ್ರನ್, ರಮೇಶ್ ಅರವಿಂದ್, ಜಗ್ಗೇಶ್, ಅರ್ಜುನ್ ಸರ್ಜಾ ಹಾಗೂ ಯುವ ಪ್ರತಿಭೆಗಳಾದ ಗಣೇಶ್, ಶ್ರೀಮುರಳಿ, ಧ್ರುವ ಸರ್ಜಾ, ರಿಷಬ್ ಶೆಟ್ಟಿ, ಧನಂಜಯ ಅವರ ಮೂಲಕ ಮಾಡಿದ್ದೇವೆ. ಚಿತ್ರರಂಗದ ನಟರಷ್ಟೇ ಅಲ್ಲದೇ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ, ಸಾಲುಮರದ ತಿಮ್ಮಕ್ಕ, ಜೋಗತಿ ಮಂಜಮ್ಮ ಹಾಗೂ ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್ ಮುಂತಾದವರು ಭಾರತದ ಭವ್ಯ ಪರಂಪರೆಯನ್ನು ಬಿಂಬಿಸುವ ಈ ಹಾಡಿನಲ್ಲಿ ಭಾಗಿಯಾಗಿದ್ದಾರೆ‌. ನಾಲ್ಕುವರೆ ದಿನಗಳಲ್ಲಿ ಈ ಹಾಡಿನ ಚಿತ್ರೀಕರಣ ಮುಗಿದಿದೆ. ಸಹಕಾರ ನೀಡಿದ ನನ್ನ ತಂಡಕ್ಕೆ ಹಾಗೂ ಅಭಿನಯಿಸಿರುವ ಗಣ್ಯರಿಗೆ ಧನ್ಯವಾದ” ಎನ್ನುತ್ತಾರೆ.

LEAVE A REPLY

Connect with

Please enter your comment!
Please enter your name here