‘ಕೆಜಿಎಫ್’ ಸರಣಿ ಚಿತ್ರಗಳು ಹುಟ್ಟಿಸಿದ್ದ ಮೇನಿಯಾದ ನೆನಪು ಮಾಸುವ ಮೊದಲೇ, ಅದೇ ನೆಲದ ಕತೆಯನ್ನು ಪಾ ರಂಜಿತ್ ಹೋಲಿಕೆಯೋ ಸಾಧ್ಯವಿಲ್ಲದಂತೆ ಸಂಪೂರ್ಣ ಬೇರೆಯದೇ ರೀತಿಯಲ್ಲಿ ಹೇಳಿದ್ದಾರೆ. ಪ್ರದೇಶದ ಹೆಸರಿರುವ ‘ಕೆಜಿಎಫ್’ ರಾಕಿಭಾಯ್ ಚಿತ್ರವಾದರೆ, ನಾಯಕನ ಹೆಸರಿರುವ ‘ತಂಗಲಾನ್’ ಆ ಪ್ರದೇಶದ ಸಮುದಾಯದ ಕತೆಯಾಗಿ ಮೂಡಿಬಂದಿದೆ. ಆಫ್ರಿಕನ್ ಗಾದೆ ಮಾತಿನಂತೆ – ಸಿಂಹ ಮಾತನಾಡಲು ಕಲಿಯುವವರೆಗೆ ಪ್ರತೀ ಕತೆಯಲ್ಲೂ ಬೇಟೆಗಾರನೇ ಹೀರೋ. ಆ ದೃಷ್ಟಿಯಲ್ಲಿ ನೋಡಿದರೆ ‘ತಂಗಲಾನ್’ ಸಿಂಹ ಹೇಳುವ ಕತೆ.
ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ನಾಯಕ ಈಸ ಹೇಳುವ ಒಂದು ಮಾತು ಇದು – ‘ದಮನಿತರ ಪಾಲಿಗೆ ಸ್ವಾತಂತ್ರ್ಯ ಎಂದರೆ ಘನತೆ’. ಈಸನಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ಪಡೆಯುವ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ, ಬ್ರಿಟಿಷ್ ಸೇನೆ ಸೇರಿ ಸಿಗುವ ಗೌರವ ಮುಖ್ಯವೆನಿಸುವುದರ ಹಿಂದಿರುವ ಸಾಮಾಜಿಕ ಕಾರಣಗಳ ಬಗ್ಗೆ ಬಹುತೇಕ ಯಾವ ದೇಶಪ್ರೇಮದ ಕತೆಗಳೂ ಮಾತನಾಡುವುದಿಲ್ಲ. ಈಗ ಆಗಸ್ಟ್ 15ರಂದು ಬಿಡುಗಡೆಯಾಗಿರುವ ತಂಗಲಾನ್ ಚಿತ್ರವೂ ಕೂಡ ಸ್ವಾತಂತ್ರ್ಯವನ್ನು ಶೋಷಿತರ ದೃಷ್ಟಿಯಿಂದ ನೋಡುತ್ತದೆ. ಭಾರತದ ಚರಿತ್ರೆಯನ್ನು ತುಳಿಯಲ್ಪಟ್ಟವರು ಬರೆದಿದ್ದರೆ ಯಾವ ಸತ್ಯಗಳು ಇರಬಹುದಿತ್ತು ಎಂಬುದರ ಝಲಕ್ ತೋರಿಸುತ್ತದೆ.
ಪಾ ರಂಜಿತ್ ಚಿತ್ರಗಳೆಂದಾಗ ಒಂದು ನಿರೀಕ್ಷೆ ಇರುತ್ತದೆ. ಗುಣಮಟ್ಟ ಮಾತ್ರವಲ್ಲ ಅದು ಹೇಳುವ ಸಂಗತಿಗಳ ಬಗ್ಗೆಯೂ ಕೂಡ. ‘ತಂಗಲಾನ್’ ಇದಕ್ಕೆ ಹೊರತಲ್ಲ. ‘ತಂಗಲಾನ್’ 1850ರ ಅವಧಿಯಲ್ಲಿ ನಡೆಯುವ ಕತೆಯಾದರೂ, ಚಿತ್ರವನ್ನು ಮೂರು ಅವಧಿಗಳ ಕತೆಯಾಗಿ ರಂಜಿತ್ ಹೆಣೆದಿದ್ದಾರೆ. ತಮಿಳುನಾಡಿನ ಉತ್ತರ ಅರ್ಕೋಟ್ ಪ್ರದೇಶದಲ್ಲಿ ತನ್ನ ಸಂಸಾರದೊಂದಿಗೆ ವಾಸವಿರುವ ತಂಗಲಾನ್ (ವಿಕ್ರಂ) ಅಲ್ಲಿನ ಮೂಲನಿವಾಸಿಗಳ ಸಮದಾಯಕ್ಕೆ ಸೇರಿದವನು. ಉಳಿದವರಂತೆ ಭೂಮಾಲೀಕನ ಜೀತದಾಳಾಗದೆ ತನ್ನದೇ ಭೂಮಿಯನ್ನು ಉಳಿಸಿಕೊಂಡವನು. ಇದನ್ನು ಸಹಿಸದ ಜಮೀನ್ದಾರನ ದುಷ್ಟತೆಯಿಂದಾಗಿ ಭೂಮಿ ಕಳೆದುಕೊಂಡ ತಂಗನಾಲ್ ತನ್ನ ಭೂಮಿ ಮತ್ತು ತನ್ನ ಹಾಗೂ ತನ್ನ ಕುಟುಂಬದ ಮತ್ತು ಸ್ವಾತಂತ್ರ್ಯವನ್ನು ಸಂಪಾದಿಸಲು ಹೆಚ್ಚು ಅಪಾಯಕಾರಿಯಾದ, ಸಾಹಸಮಯ ಹಾದಿಯನ್ನು ತುಳಿಯುತ್ತಾನೆ. ತನ್ನದೇ ಎಲ್‌ಡೊರಾಡೋ ಹುಡುಕಾಟದಲ್ಲಿರುವ ಬ್ರಿಟಿಷ್ ಅಧಿಕಾರಿ ಲಾರ್ಡ್ ಕ್ಲಮೆಂಟ್ ಜೊತೆ ಸೇರುತ್ತಾನೆ.
ಇದು ಮೂಲ ಕಥೆಯಾದರೂ ಅದನ್ನು ಹೇಳುವಾಗ ಪಾ ರಂಜಿತ್ ಹಲವು ಐತಿಹಾಸಿಕ ಸಂಗತಿಗಳನ್ನು ತಂದು ಮುಖ್ಯ ಕತೆಗೆ ಹೆಣೆಯುವ ಎಂದಿನಂತೆ ತಮ್ಮ ಈ ಸಿನಿಮಾದಲ್ಲೂ ಸಾಮಾಜಿಕ ವಿಷಯಗಳನ್ನು ಚರ್ಚಿಸಿದ್ದಾರೆ. ಮತ್ತು ಅವರ ಇತರ ಚಿತ್ರಗಳಂತೆ ಕೇವಲ ಈಗಿನ ತಾರಮ್ಯ ಅಸಮಾನತೆಗಳ ಬಗ್ಗೆ ಮಾತನಾಡದೆ, ಅದರ ಇತಿಹಾಸವನ್ನೇ ಬಗೆದಿದ್ದಾರೆ. ಹೀಗಾಗಿಯೇ ಅಲ್ಲಿ ಹೆಸರು ಹೇಳದೆಯೂ, ಬುದ್ಧ, ಶಂಕರಾಚಾರ್ಯ, ರಾಮಾನುಜಾಚಾರ್ಯರ ಇರುವು ಎದ್ದು ಕಾಣುತ್ತದೆ. ಇವೆಲ್ಲದರ ಜೊತೆಗೆ ಮೆಟಾಫರ್‌ಗಳನ್ನು ಢಾಳಾಗಿ ಬಳಸಿರುವುದರಿಂದ, ಸಂಭಾಷಣೆಗಳು ತೀರಾ ಆಳವಾದ ಅರ್ಥಗಳನ್ನು ಧ್ವನಿಸುವ ಕಾರಣ ಎಷ್ಟೋ ಕಡೆ ಇಂತಹ ವಿವರಗಳು ಪ್ರೇಕ್ಷಕರ ಕಣ್ಣು ತಪ್ಪಿಸುವ ಸಾಧ್ಯತೆ ಹೆಚ್ಚಾಗಿದೆ. ಎಲ್ಲಾ ಅಂಶಗಳನ್ನು ಒಂದೇ ವೀಕ್ಷಣೆಯಲ್ಲಿ ಅರಗಿಸಿಕೊಳ್ಳುವುದು ಕಷ್ಟವಾಗುವಷ್ಟು ಲೋಡೆಡ್ ಸಿನಿಮಾವೊಂದನ್ನು ರಂಜಿತ್ ನೀಡಿದ್ದಾರೆ.
ತಮ್ಮ ಕತೆಯನ್ನು ಹೇಳಲು ರಂಜಿತ್ ಅಸಾಂಪ್ರದಾಯಿಕ ವಿಧಾನವನ್ನು ಆರಿಸಿಕೊಂಡಿದ್ದಾರೆ. ಚರಿತ್ರೆ, ಜನಪದ ಎಲ್ಲವೂ ಸೇರಿದ ಮ್ಯಾಜಿಕ್ ರಿಯಲಿಸಂ ಅನ್ನು ಹಲವು ಕಡೆ ಬಳಸಿದ್ದಾರೆ. ಅದೇ ರೀತಿ ಕೆಲವು ಕಡೆ ಅಪ್ಪಟ ಮಾನವೀಯ ನೆಲೆಯಲ್ಲಿ ಅರಳಿದ ಅತೀ ನಿಜವಾದ ಕೆಲವು ಸುಂದರ ಕ್ಷಣಗಳನ್ನು ಸೃಷ್ಟಿಸಿದ್ದಾರೆ. ಮ್ಯಾಜಿಕ್ ರಿಯಲಿಸಂ ಜಗತ್ತನ್ನು ಮಾಯಾವಿ ಆರತಿ ಪಾತ್ರದಲ್ಲಿರುವ ಮಾಳವಿಕಾ ಮೋಹನನ್ ಆಳಿದರೆ, ಈ ನೆಲದ ಹೆಣ್ಣು ಗಂಗಮ್ಮನಾಗಿ ಪಾರ್ವತಿ ತಿರುವೋತ್ತು ಮಿಂಚಿದ್ದಾರೆ. ಇಡೀ ಸಿನಿಮಾದ ಒಂದು ಅತ್ಯಂತ ಹೃದಯಂಗಮ ಮತ್ತು ಆರ್ದ್ರ ಸನ್ನಿವೇಶವೆಂದರೆ ತಂಗಲಾನ್ ತನ್ನ ಸಮುದಾಯದ ಹೆಣ್ಣುಗಳಿಗೆ ರವಿಕೆ ತಂದುಕೊಡುವ ಸನ್ನಿವೇಶ. ಅದುವರೆಗೆ ಜಮೀನ್ದಾರನ ಹೆಂಡತಿಯ ಮೈಮೇಲೆ ಮಾತ್ರ ನೋಡಿದ್ದ ರವಿಕೆಯನ್ನು ತೊಟ್ಟು ಸಂಭ್ರಮಿಸುವ ಹೆಣ್ಣು ಮಕ್ಕಳು, ಸಾಕಷ್ಟು ಸಂಗತಿಗಳನ್ನು ಮಾತಿಲ್ಲದೇ ದಾಟಿಸುತ್ತಾರೆ. ಈ ದೃಶ್ಯದಲ್ಲಿ ನನ್ನ ಗಮನಸೆಳೆದ ಮತ್ತೊಂದು ವಿಷಯ ತಂಗಲಾನ್ ತನ್ನ ಹೆಂಡತಿ ಗಂಗಮ್ಮನಿಗೆ ಮಾತ್ರ ರವಿಕೆ ತರಬಹುದಿತ್ತು. ಆದರೆ, ಅವನು ತನ್ನ ಸಮುದಾಯದ ಎಲ್ಲಾ ಹೆಣ್ಣುಗಳಿಗೆ ತರುತ್ತಾನೆಂಬುದು, ನಾಯಕನೊಬ್ಬ ಸಮುದಾಯದೊಳಗೆ ಸಮಾನವಾಗುವ ಪ್ರಕ್ರಿಯೆಯ ಭಾಗವಾಗಿ ಸುಂದರವಾಗಿ ಮೂಡಿಬಂದಿದೆ.
ವಿಕ್ರಂ ವಿವಿಧ ಕಾಲಘಟ್ಟದ ಪ್ರಮುಖ ಮೂರು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಲದ ನಿರಂತರ ಹರಿಯುವಿಕೆಯಲ್ಲಿ, ಮನುಷ್ಯ ಆಧುನಿಕ ಎನಿಸಿಕೊಳ್ಳುತ್ತಾ ಹೋದಂತೆ ಹೆಚ್ಚು ಮಾನವೀಯವಾಗುವ ಬದಲು, ಕೆಳಗಿನವರನ್ನು ತುಳಿಯುವ ಹೊಸ ಹೊಸ ರೀತಿಯನ್ನು ಕಂಡುಕೊಳ್ಳುವುದನ್ನು ಈ ಮೂರು ಪಾತ್ರಗಳು ತೋರಿಸುತ್ತವೆ. ತಂಗಲಾನ್ ಬ್ರಿಟಿಷ್ ಭಾರತದ ಪ್ರಜೆಯಾದರೆ, ಆತನಿಂದ ಹಲವು ತಲೆಮಾರು ಹಿಂದಿನ ಕಡೈಯಾನ್ ಮಧ್ಯಕಾಲೀನ ಭಾರತದವನು. ಆರನ್ 2000 ವರ್ಷಕ್ಕೂ ಹಿಂದಿನ ಪ್ರಾಚೀನ ಯುಗದವನು. ಪ್ರಾಚೀನ ಯುಗದಲ್ಲಿ ತನ್ನ ಭೂಮಿಯನ್ನು ಕಾಯುವ ಆರನ್, ಮಧ್ಯಕಾಲೀನ ಭಾರತದಲ್ಲಿ ಕಡೈಯಾನ್ ಆಗಿದ್ದಾಗ ಭೂಮಿ ನೀಡುವಂತೆ ರಾಜನನ್ನು ಕೇಳಬೇಕಾಗುತ್ತದೆ. ಬ್ರಿಟಿಷ್ ಭಾರತದಲ್ಲಿ ಆ ಭೂಮಿಯನ್ನೂ ಕಳೆದುಕೊಂಡು ಕೂಲಿಯಾಳಾಗುತ್ತಾನೆ. ಇವಲ್ಲದೆ ಇನ್ನೆರಡು ಸಣ್ಣ ಪಾತ್ರಗಳಲ್ಲೂ ವಿಕ್ರಂ ಕಾಣಿಸಿಕೊಂಡಿದ್ದಾರೆ.
ಹಲವು ವರ್ಷಗಳ ನಂತರ ಚಿಯಾನ್ ವಿಕ್ರಂ ಪ್ರತಿಭೆಗೆ ಸವಾಲೆಸೆಯುವ ಪಾತ್ರ ದೊರೆತಿದ್ದು, ಅವರು ಅದನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ. ಪಾತ್ರಕ್ಕಾಗಿ ಆ ವೇಷ ಭೂಷಣ, ಕೇಶ ವಿನ್ಯಾಸ ಬದಲಿಸಿರುವದಷ್ಟೇ ಅಲ್ಲ, ನಡೆ, ಹಾವಭಾವ, ಮಾತಿನ ಶೈಲಿ ಎಲ್ಲವನ್ನೂ ಮಾರ್ಪಡಿಸಿಕೊಂಡಿದ್ದಾರೆ. ಅವರ ಬದ್ಧತೆ, ಶ್ರಮ ಪಾತ್ರದಲ್ಲಿ ಕಾಣುತ್ತದೆ. ಇಂತಹ ಪಾತ್ರ ಹಿಂದೆಂದೂ ಸಿಕ್ಕಿಲ್ಲ ಮತ್ತು ಮುಂದೆ ಸಿಗುವ ಸಾಧ್ಯತೆಯೂ ಇಲ್ಲ ಎಂಬುದನ್ನು ಅರಿತು ನಟಿಸಿದ್ದಾರೆ ಮತ್ತು ಪೂರ್ಣ ಅಂಕಗಳೊಂದಿಗೆ ಗೆದ್ದಿದ್ದಾರೆ. ಪಾರ್ವತಿಗೆ ತನಗೆ ದೊರೆತ ಪಾತ್ರಗಳನ್ನೆಲ್ಲಾ ಅದ್ಭುತವಾಗಿಸುವ ಸಾಮರ್ಥ್ಯ ಇದೆಯಾದರೂ, ಗಂಗಮ್ಮ ಪಾತ್ರದಲ್ಲಿ ಮತ್ತೂ ಒಂದು ವಿಶೇಷತೆ ಇದೆ. ಎಂತಹ ಡಿಗ್ಲಾಮ್ ಲುಕ್ ಇರಲಿ ಅದರಲ್ಲೊಂದು ಸೌಂದರ್ಯ ಇರಬೇಕೆಂದು, ಈಗಿನ ಕಣ್ಣಗಳಿಗೆ ಆಕರ್ಷಕವಾಗಿ ಕಾಣಬೇಕೆಂದು ನಟ, ನಟಿಯರು ಬಯಸುವುದು ಸಹಜ. ಆದರೆ, ಪಾರ್ವತಿ ಈ ಎಲ್ಲಾ ಹಿಂಜರಿಕೆಗಳನ್ನು ಬಿಟ್ಟು ಈ ಪಾತ್ರವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ವಿಷಯದಲ್ಲಿ ವಿಕ್ರಂ ಕೂಡ ಪ್ರಶಂಸೆಗೆ ಅರ್ಹರು. ಅಸಡ್ಡಾಳಾಗಿ ಕುಳಿತುಕೊಳ್ಳುವ ರೀತಿ, ನಾಜೂಕೆನಿಸದ ರೀತಿಯಲ್ಲಿ ಮಕ್ಕಳನ್ನು ಎತ್ತಿಕೊಳ್ಳುವ ಬಗೆ, ಲೌಡ್ ಎನಿಸುವ ದೇಹದ ಭಾಷೆ, ಹಾವಭಾವ ಎಲ್ಲವೂ ಗಂಗಮ್ಮನನ್ನು ತೀರಾ ನಿಜವಾಗಿಸಿದೆ. ವಿಕ್ರಂ ಮತ್ತು ಪಾರ್ವತಿ ಕೆಮಿಷ್ಟ್ರಿಯೂ ಅತ್ಯಂತ ಸಹಜವಾಗಿದೆ. ನಾವೆಲ್ಲಾ ಹಿಂದೆ ನೋಡಿದ ಮಾಳವಿಕಾ ಮೋಹನನ್ ಅವರನ್ನು ಆರತಿ ಪಾತ್ರದಲ್ಲಿ ಊಹಿಸುವುದೂ ಕಷ್ಟ. ಅವರನ್ನು ಅದರಲ್ಲಿ ಗುರುತಿಸುವುದೂ ಕಷ್ಟ. ಮಾಯಾವಿಯಾಗಿ ವಿಕ್ರಂ ಸರಿಸಮಾನವಾಗಿ ಹೋರಾಡುವ ಮಾಳವಿಕ ಶಿಳ್ಳೆ ಗಿಟ್ಟಿಸುತ್ತಾರೆ. ಗೆಂಗುಪತ್ತರ್ ಪಾತ್ರದಲ್ಲಿ ಪಶುಪತಿ ಗಮನಸೆಳೆಯುತ್ತಾರೆ. ಆದರೆ, ಅವರ ಈ ಸಂಕೀರ್ಣ ಪಾತ್ರಕ್ಕೆ ಪೂರ್ತಿ ನ್ಯಾಯ ದೊರಕಿದಂತೆ ಅನಿಸುವುದಿಲ್ಲ, ಈ ಆಸಕ್ತಿಕರ ಮತ್ತು ಮಹತ್ವದ ಪಾತ್ರದ ಆಳಕ್ಕೆ ಮತ್ತಷ್ಟು ಇಳಿಯಬೇಕಿತ್ತು. ಎಲ್ಲಾ ಪಾತ್ರಗಳು ಗಮನಸೆಳೆದರೂ ಸಿನಿಮಾವನ್ನು ವಿಕ್ರಂ ಆವರಿಸಿಕೊಂಡಿರುವ ಕಾರಣ ಇತರ
ಪಾತ್ರಗಳಿಗೆ ಅವಕಾಶ ಕಡಿಮೆಯಾದಂತೆ ಅನಿಸುತ್ತದೆ.
ಸಿನಿಮಾಟೋಗ್ರಫಿ, ವಸ್ತ್ರವಿನ್ಯಾಸ, ಕಲಾ ನಿರ್ದೇಶನ, ಸಂಕಲನ ಮತ್ತು ಸಂಗೀತ ಹೀಗೆ ಎಲ್ಲಾ ತಾಂತ್ರಿಕ ವಿಭಾಗಳಲ್ಲೂ ಚಿತ್ರ ಮಿಂಚುತ್ತದೆ. ಜಿ ವಿ ಪ್ರಕಾಶ್ ಕುಮಾರ್ ಸಂಗೀತ, ಚಿತ್ರವನ್ನು ಒಂದು ಹಂತ ಮೇಲೇರಿಸಿದೆ. ಆದರೆ, ಸ್ಪೆಷಲ್ ಎಫಕ್ಟ್ ಮಾತ್ರ ಸೋತಿದೆ. ಚಿತ್ರದಲ್ಲಿ ಹೆಚ್ಚು ಸಿಜಿ ಇಲ್ಲದೇ ಹೋದರೂ ಇರುವ ಕೆಲವು ದೃಶ್ಯಗಳಲ್ಲಿ ಗುಣಮಟ್ಟದ ಕೊರತೆ ಎದ್ದುಕಾಣುತ್ತದೆ. ಕೆಜಿಎಫ್ 1 ಮತ್ತು 2 ಚಿತ್ರಗಳು ಹುಟ್ಟಿಸಿದ್ದ ಮೇನಿಯಾದ ನೆನಪು ಮಾಸುವ ಮೊದಲೇ, ಅದೇ ನೆಲದ ಕತೆಯನ್ನು ಪಾ ರಂಜಿತ್ ಹೋಲಿಕೆಯೋ ಸಾಧ್ಯವಿಲ್ಲದಂತೆ ಸಂಪೂರ್ಣ ಬೇರೆಯದೇ ರೀತಿಯಲ್ಲಿ ಹೇಳಿದ್ದಾರೆ. ಪ್ರದೇಶದ ಹೆಸರಿರುವ ಕೆಜಿಎಫ್ ರಾಕಿಭಾಯ್ ಚಿತ್ರವಾದರೆ, ನಾಯಕನ ಹೆಸರಿರುವ ತಂಗಲಾನ್ ಆ ಪ್ರದೇಶದ ಸಮುದಾಯದ ಕತೆಯಾಗಿ ಮೂಡಿಬಂದಿದೆ. ಚಿತ್ರದ ಕೊನೆಯಲ್ಲಿ ಕೆಜಿಎಫ್ ಗೆ ಸಂಬಂಧಿಸಿದ ಫೋಟೋಗಳು ಅದುವರೆಗೂ ನೋಡಿದ್ದು ಯಾವುದೋ ಭ್ರಾಮಕ ಲೋಕ ಎನಿಸದಂತೆ ವಾಸ್ತವತೆಗೆ ಚಿತ್ರವನ್ನು ಜೋಡಿಸುತ್ತದೆ. ಚಿನ್ನಕ್ಕೆ ಈ ಹೊಳಪು ನೀಡಲು ರಕ್ತ ಹರಿಸಿರುವ ಶ್ರಮಿಕ ವರ್ಗದ ನೆನಪನ್ನು ಹಸಿಯಾಗಿಸುತ್ತದೆ. ಆಫ್ರಿಕನ್ ಗಾದೆ ಮಾತಿನಂತೆ – ಸಿಂಹ ಮಾತನಾಡಲು ಕಲಿಯುವವರೆಗೆ ಪ್ರತೀ ಕತೆಯಲ್ಲೂ ಬೇಟೆಗಾರನೇ ಹೀರೋ. ಆ ದೃಷ್ಟಿಯಲ್ಲಿ ನೋಡಿದರೆ ‘ತಂಗಲಾನ್’ ಸಿಂಹ ಹೇಳುವ ಕತೆ.