ಮುರಿದು ಬಿದ್ದ ದೋಣಿಯಂಥ ಬದುಕುಗಳು ವಿಮಾನವಾಗಿ ಬದಲಾಗಿ ಟೇಕಾಫ್ ಆಗುವ ಭಾವುಕಪಯಣವೇ ಈ ‘Pachuvum Athbutha Vilakkum’ ಸಿನಿಮಾ. ಫಹಾದ್‌ ಫಾಸಿಲ್‌ ಮತ್ತು ಅಂಜನಾ ಜಯಪ್ರಕಾಶ್‌ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅಖಿಲ್‌ ಸತ್ಯನ್‌ ಬರೆದು ನಿರ್ದೇಶಿಸಿರುವ ಮಲಯಾಳಂ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಕನಸು ಕಾಣಲು ಆಕಾಶಕ್ಕಿಂತ ಅತ್ಯುತ್ತಮ ಜಾಗವಿಲ್ಲ.
ಕೆಲವರು ಬೆಳೀತಾ ಬೆಳೀತಾ ಚಿಕ್ಕೋರಾಗ್ತಾರೆ.
ಎಂತಹ ತೀವ್ರ ನೋವನ್ನೂ ಆರು ತಿಂಗಳಲ್ಲಿ ಮರೆತು ಮೊದಲಿನಂತಾಗ್ತೇವೆ ನಾವು.
ಚಿತ್ರದಲ್ಲಿ ಇಂತಹ ಹಲವಾರು ವಿಶಿಷ್ಟ ಸಂಭಾಷಣೆಗಳಿವೆ.
ತಟ್ಟೆ ಖಾಲಿ ಇಟ್ಟು ಕಾಯುತ್ತಿರುವ ಮಗಳನ್ನು ಬಿಟ್ಟು ಸಂಕಟದಲ್ಲೇ ಕೋಪಿಷ್ಟ ಗಂಡನಿಗೆ ರೊಟ್ಟಿ ಬಡಿಸುವ ಅವಳು, ಕೊನೆಗೊಂದು ದೃಶ್ಯದಲ್ಲಿ ತಂದ ರೊಟ್ಟಿಯನ್ನು ಮೊದಲು ಮಗಳ ತಟ್ಟೆಗೆ ಹಾಕಿ ಹೋಗುತ್ತಾಳೆ. ಹಾಗೆ ಮಾಡಲು ಧೈರ್ಯ ಮತ್ತು ಭಯದ ಕಣ್ಣಲ್ಲಿ ಆತ್ಮವಿಶ್ವಾಸ ಮೂಡಲು ಏನಾದರೂ ಜರುಗಬೇಕಲ್ಲ? ಹಾಗೆ ಜರುಗುವುದೇ ಈ ಕತೆ. ಎಲ್ಲರಿಗೂ ಇಲ್ಲಿ ಪುಟ್ಟ ಪುಟ್ಟ ಕನಸುಗಳು. ಅದು ನೆರವೇರಲು ಸಿಗುವ ಅಪರಿಚಿತ ಆಸರೆಗಳು. ಯಾರಿಗಾಗಿಯೋ ತುಡಿವ ಸಂಬಂಧವಿರದ ಜೀವಗಳು!

ಓದುವ ಹಂಬಲದ ಆ ಅಸಹಾಯಕ ಹುಡುಗಿಯನ್ನು ಸಮುದ್ರದ ಕಿನಾರೆಯಲ್ಲಿ ಕೂತ ಮಾತು ಬಾರದ ತಾತ ಕೈ ತೋರಿಸಿ ಕೇಳುತ್ತಾರೆ, ‘ಅದೋ…ಆ ದೊಡ್ಡ ಹಡಗು ನಾನು. ನೀನು?’. ಅವಳು ಅಲ್ಲೇ ಮುರಿದು ಬಿದ್ದ ಪುಟ್ಟ ದೋಣಿ ತೋರಿಸಿ ಹೇಳುತ್ತಾಳೆ, ‘ಅದು ನಾನು’. ತಾತ ಅವಳತ್ತ ತಿರುಗಿ, ‘ಇಲ್ಲ ಇಲ್ಲ.. ನೀನು ಆ ಮುರಿದು ಬಿದ್ದ ದೋಣಿಯಲ್ಲ, ಹಾರಬೇಕಾದ ವಿಮಾನ!’. ಮುರಿದು ಬಿದ್ದ ದೋಣಿಯಂಥ ಬದುಕುಗಳು ವಿಮಾನವಾಗಿ ಬದಲಾಗಿ ಟೇಕಾಫ್ ಆಗುವ ಭಾವುಕ ಪಯಣವೇ ಈ ಸಿನಿಮಾ. ಒಂದು ಚೆಂದದ ಭಾವದ ಕುಸುರಿ. ನಮ್ಮ ಕನ್ನಡದ ಪ್ರತಿಭಾವಂತ ನಟ ರಾಜೇಶ್‌ ನಟರಂಗ ಅವರ ಮಗಳು ಧ್ವನಿ ರಾಜೇಶ್ ಪ್ರಬುದ್ಧ ಅಭಿನಯ ನೀಡಿದ್ದಾಳೆ. ಸಿನೆಮಾದಲ್ಲಿ ವಿದೇಶೀ ಮಹಿಳೆ, ‘ನಿನ್ನ ಇಂಗ್ಲಿಷ್ ಪರ್ಫೆಕ್ಟ್’ ಅನ್ನುವ ಹಾಗೆ, ಅವಳ ಅಭಿನಯವೂ ಇಲ್ಲಿ ಪರ್ಫೆಕ್ಟ್.
ಮುರಿದು ಬಿದ್ದ ದೋಣಿ ವಿಮಾನವಾಗಿ ಟೇಕಾಫ್ ಆಗುವುದನ್ನು ನೋಡಿ ಒಮ್ಮೆ. ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ ‘Pachuvum Athbutha Vilakkum’.

Previous articleಚಿತ್ರೋತ್ಸವಗಳಲ್ಲಿ ಹೆಸರು ಮಾಡಿದ ‘ಪಿಂಕಿ ಎಲ್ಲಿ?’ ಜೂನ್‌ 2ರಂದು ತೆರೆಗೆ
Next article‘ರಾಮನ ಅವತಾರ’ ಲಿರಿಕಲ್‌ ಸಾಂಗ್‌ | ರಿಷಿ – ಶುಭ್ರ ಅಯ್ಯಪ್ಪ ಸಿನಿಮಾ
Avatar
ಕುಸುಮ ಆಯರಹಳ್ಳಿ ಫ್ರೀಲ್ಯಾನ್ಸ್‌ ಬರಹಗಾರ್ತಿ. ಹಲವು ಕಿರುತೆರೆ ಧಾರಾವಾಹಿ ಮತ್ತು ಮತ್ತು ಸಿನಿಮಾಗಳಿಗೆ ಚಿತ್ರಕಥೆ - ಸಂಭಾಷಣೆ ಬರೆದಿದ್ದಾರೆ. ಪ್ರಸ್ತುತ ‘ವಿಜಯ ಕರ್ನಾಟಕ’ ದಿನಪತ್ರಿಕೆ ಅಂಕಣಕಾರ್ತಿ. ‘ಯೋಳ್ತೀನ್ ಕೇಳಿ’ ಅವರ ಪ್ರಕಟಿತ ಪ್ರಬಂಧ ಸಂಕಲನ.

LEAVE A REPLY

Connect with

Please enter your comment!
Please enter your name here