ಗೀತೂ ಮೋಹನ್‌ದಾಸ್‌ ನಿರ್ದೇಶನದಲ್ಲಿ ಯಶ್‌ ನಟಿಸುತ್ತಿರುವ ‘TOXIC’ ಸಿನಿಮಾಗೆ ಕಾನೂನು ಸಂಕಷ್ಟ ಎದುರಾಗಿದೆ. ಬೆಂಗಳೂರು HMT ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ಚಿತ್ರಿಕರಣಕ್ಕಾಗಿ ಚಿತ್ರತಂಡದವರು ನೂರಾರು ಮರಗಳನ್ನು ಕಡಿದಿದ್ದಾರೆ ಎನ್ನುವುದು ಆರೋಪ. ಖುದ್ದು ಅರಣ್ಯ ಸಚಿವರು ಸ್ಥಳ ಪರಿಶೀಲನೆ ನಡೆಸಿ, ಕಾನೂನು ಕ್ರಮಕ್ಕೆ ಆದೇಶಿಸಿದ್ದಾರೆ.

ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾ ಸಂಕಟಕ್ಕೆ ಸಿಲುಕಿದೆ. ಬೆಂಗಳೂರು HMT ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ಚಿತ್ರೀಕರಣಕ್ಕಾಗಿ ಸಿನಿಮಾ ತಂಡದವರು ನೂರಾರು ಮರಗಳನ್ನು ಕಡಿದಿರುವ ಆರೋಪ ಕೇಳಿಬಂದಿದೆ. ನಿನ್ನೆ ಶೂಟಿಂಗ್‌ ಸ್ಪಾಟ್‌ಗೆ ಭೇಟಿ ನೀಡಿದ ಅರಣ್ಯ ಸಚಿವ ಈಶ್ವರ್‌ ಖಂಡ್ರೆ, ‘ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಿರುವುದು ಗಂಭೀರ ವಿಚಾರ. ಸ್ಯಾಟಲೈಟ್ ಚಿತ್ರಗಳಿಂದ ಈ ಅಕ್ರಮದ ಕೃತ್ಯ ಸ್ಪಷ್ಟವಾಗಿ ಕಾಣುತ್ತಿದೆ. ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈ ಅಕ್ರಮ ಕೃತ್ಯಕ್ಕೆ ಹೊಣೆಗಾರರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ’ ಎಂದು ಫೋಟೊಗಳೊಂದಿಗೆ ಟ್ವೀಟ್‌ ಮಾಡಿದ್ದಾರೆ.

‘KGF’ ಸರಣಿ ಚಿತ್ರಗಳ ನಂತರ ಯಶ್‌ ನಟಿಸುತ್ತಿರುವ ಈ ಸಿನಿಮಾ ಸಹಜವಾಗಿಯೇ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಕೆವಿಎನ್‌ ಪ್ರೊಡಕ್ಷನ್‌ನಡಿ ತಯಾರಾಗುತ್ತಿರುವ ಈ ಚಿತ್ರವನ್ನು ಮಲಯಾಳಂ ಚಿತ್ರನಿರ್ದೇಶಕಿ ಗೀತೂ ಮೋಹನ್‌ ದಾಸ್‌ ನಿರ್ದೇಶಿಸುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಶೂಟಿಂಗ್‌ ನಡೆಯುತ್ತಿದ್ದು, ಸೆಟ್‌ಗಳ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳಲಾಗಿತ್ತು. ಇದೀಗ ಅರಣ್ಯ ಮಂತ್ರಿಗಳು ಭೇಟಿ ನಂತರ ‘Toxic’ ಸೆಟ್‌ನ ವೀಡಿಯೋ ಎಲ್ಲೆಡೆ ರಿವೀಲ್‌ ಆಗಿದೆ. ಇದು ಚಿತ್ರತಂಡದ ಚಿಂತೆಗೆ ಕಾರಣವಾಗಿದೆ. ಮತ್ತೊಂದೆಡೆ ಚಿತ್ರಿಕರಣಕ್ಕಾಗಿ ಮರಗಳನ್ನು ಕಡಿದಿರುವ ಆರೋಪದ ಹಿನ್ನೆಲೆಯಲ್ಲಿ ಕಾನೂನು ಸಮರಕ್ಕೆ ಸಜ್ಜಾಗಬೇಕಿದೆ.

ಅರಣ್ಯ ಸಚಿವರ ಈ ಕ್ರಮದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ನಡೆದಿದೆ. ಸಹಜವಾಗಿಯೇ ನಟ ಯಶ್‌ ಅಭಿಮಾನಿಗಳು ಈ ಬೆಳವಣಿಗೆಯಿಂದ ಬೇಸರಗೊಂಡಿದ್ದಾರೆ. ಅರಣ್ಯ ಸಚಿವರ ಬಗ್ಗೆ ಒಂದೆಡೆ ಮೆಚ್ಚುಗೆ ವ್ಯಕ್ತವಾದರೂ, ಹಲವರು ಆಕ್ಷೇಪಿಸಿದ್ದಾರೆ. ಚಿತ್ರನಿರ್ದೇಶಕ ಮಂಸೋರೆ ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ನಲ್ಲಿ, ‘ಕಾನೂನಿನ ಉಲ್ಲಂಘನೆ ಆಗಿದ್ದರೆ, ತನಿಖೆ ಮಾಡಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಬಿಟ್ಟು, ಸಚಿವರು ತಮ್ಮ ಪಟಾಲಂ ಜೊತೆ ಹೋಗಿ, ಕ್ರಿಯೇಟಿವ್ ಕೆಲಸವನ್ನು ಚಿತ್ರೀಕರಿಸಿ ಸಾರ್ವಜನಿಕಗೊಳಿಸಿದ್ದು ತಪ್ಪು’ ಎಂದಿದ್ದಾರೆ. ಅವರ ಅಭಿಪ್ರಾಯವನ್ನು ಚಿತ್ರರಂಗದ ಹಲವರು ಅನುಮೋದಿಸಿದ್ದಾರೆ. ಸದ್ದಿಲ್ಲದೆ ಚಿತ್ರೀಕರಣ ನಡೆಸುತ್ತಿದ್ದ ‘ಟಾಕ್ಸಿಕ್‌’ ತಂಡ ಇದೀಗ ಕಾನೂನಿನ ಕುಣಿಕೆಗೆ ಸಿಲುಕಿದೆ.

LEAVE A REPLY

Connect with

Please enter your comment!
Please enter your name here