ತ್ರಿಗುಣ್‌ ನಟನೆಯ ‘ಲೈನ್‌ ಮ್ಯಾನ್‌’ ಸಿನಿಮಾದ ‘ಧರೆಗೆ ದೊಡ್ಡವರು’ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ಕದ್ರಿ ಮಣಿಕಾಂತ್‌ ಸಂಗೀತ ಸಂಯೋಜನೆಯ ಜನಪದ ಹಾಡಿಗೆ ನಿಂಗ ಶೆಟ್ಟಿ, ನಿಂಗರಾಜು ಕೆ ಕಲ್ಲಪ್ಪ ಮತ್ತು ಶಂಕರ್‌ ದನಿಯಾಗಿದ್ದಾರೆ. ರಘು ಶಾಸ್ತ್ರಿ ನಿರ್ದೇಶನದ ಸಿನಿಮಾ ಮಾರ್ಚ್‌ 15ರಂದು ತೆರೆಕಾಣಲಿದೆ.

ರಘು ಶಾಸ್ತ್ರಿ ನಿರ್ದೇಶನದ ‘ಲೈನ್‌ಮ್ಯಾನ್‌’ ಸಿನಿಮಾ ಪ್ರಸ್ತುತ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಚಿತ್ರದ ‘ಧರೆಗೆ ದೊಡ್ಡವರು’ ಜಾನಪದ ಹಾಡು ಬಿಡುಗಡೆಯಾಗಿದ್ದು, ನಿಂಗಶೆಟ್ಟಿ, ನಿಂಗರಾಜು ಕೆ ಕಲ್ಲಪ್ಪ ಹಾಗೂ ಶಂಕರ್ ಧ್ವನಿಯಾಗಿರುವ ಅರ್ಥಪೂರ್ಣ ಗೀತೆಗೆ ಕದ್ರಿ ಮಣಿಕಾಂತ್ ಸಂಗೀತ ಸಂಯೋಜನೆ ಇದೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿಯೂ ಹಾಡು ಬಿಡುಗಡೆಯಾಗಿದೆ. ವಿದ್ಯುತ್ ಇಲಾಖೆಗಳಲ್ಲಿ ಕೆಲಸ ಮಾಡುವ ಲೈನ್ ಮ್ಯಾನ್‌ಗಳದ್ದು ಕಷ್ಟದ ಕೆಲಸ. ಅದರಲ್ಲೂ ಮಳೆಗಾಲದ ಸಮಯದಲ್ಲಂತೂ ಜೀವವನ್ನು ಪಣಕ್ಕಿಟ್ಟು ಅವರು ಕೆಲಸ ಮಾಡುತ್ತಾರೆ. ಅಂತಹ ಕತೆಯೇ ಲೈನ್ ಮ್ಯಾನ್ ಸಿನಿಮಾ ಎನ್ನುತ್ತಾರೆ ನಿರ್ದೇಶಕ ರಘು ಶಾಸ್ತ್ರಿ.

ಯುವ ನಟ ತ್ರಿಗುಣ್ ಅವರು ಲೈನ್ ಮ್ಯಾನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಾಜಲ್ ಕುಂದರ್ ನಾಯಕಿ. ಉಳಿದಂತೆ ಹಿರಿಯ ನಟಿ ಬಿ ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಅಂಜಲಿ, ಅಪೂರ್ವಶ್ರೀ ಪ್ರಮುಖ ಪಾತ್ರಗಳಲ್ಲಿದ್ದಾರೆ. ಭಿನ್ನ, ಡಿಯರ್ ಸತ್ಯ ಸಿನಿಮಾಗಳನ್ನು ನಿರ್ಮಿಸಿರುವ ಪರ್ಪಲ್ ರಾಕ್ ಸಂಸ್ಥೆಯ ಮೂರನೇ ಚಿತ್ರವಿದು. ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಬಿಂಡಿಗನವಿಲೆ ಹಾಗೂ ಅಜಯ್ ಅಪರೂಪ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮೂರು ಹಾಡುಗಳಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಿದೆ. ಶಾಂತಿ ಸಾಗರ್ ಛಾಯಾಗ್ರಹಣವಿರುವ ಸಿನಿಮಾ ಮಾರ್ಚ್‌ 15ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here