ಸೂರ್ಯ ನಟನೆಯ ಬಹುನಿರೀಕ್ಷಿತ ‘ಕಂಗುವಾ’ ಸಿನಿಮಾಗೆ ಬಿಡುಗಡೆಯ ಹೊಸ್ತಿಲಲ್ಲಿ ಹಲವು ಅಡಚಣೆಗಳು ಎದುರಾಗಿವೆ. ಚಿತ್ರದ ನಿರ್ಮಾಪಕರಿಗೆ 20 ಕೋಟಿ ರೂ ಪಾವತಿ ಮಾಡುವಂತೆ ಮದ್ರಾಸ್ ಹೈಕೋರ್ಟ್ ಗಡುವು ನೀಡಿದೆ. ಈ ಅಡಚಣೆಗಳ ಮಧ್ಯೆ ಸಿನಿಮಾ ನಿರಾತಂಕವಾಗಿ ತೆರೆ ಕಾಣಲಿದೆಯೇ ಎಂದು ಕಾದು ನೋಡಬೇಕು.
ಶಿವ ನಿರ್ದೇಶನದಲ್ಲಿ ಸೂರ್ಯ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ಕಂಗುವಾ’ ಸಾಕಷ್ಟು ಸುದ್ದಿ ಮಾಡುತ್ತಲೇ ಹಲವು ಅಡಚಣೆಗಳನ್ನು ಎದುರಿಸುತ್ತಾ ಬಂದಿದೆ. ಬಿಡುಗಡೆಯ ಹೊಸ್ತಿಲಲ್ಲೂ ಚಿತ್ರಕ್ಕೆ ಹಲವು ಅಡ್ಡಿ – ಆತಂಕಗಳು! ಈ ಹಿಂದೆ ಚಿತ್ರದ ಬಿಡುಗಡೆ ದಿನಾಂಕವನ್ನು ನವೆಂಬರ್ 10 ಎಂದು ಘೋಷಿಸಲಾಗಿತ್ತು. ಅಮರನ್, ವೇಟ್ಟೈಯನ್ ಚಿತ್ರಗಳಿಗಾಗಿ ರಿಲೀಸ್ ಡೇಟ್ ಮುಂದಕ್ಕೆ ಹೋಯ್ತು.
ತಡವಾಗಿ ಆರಂಭವಾಯ್ತು ಮುಂಗಡ ಬುಕ್ಕಿಂಗ್ | 8 ಭಾಷೆಗಳಲ್ಲಿ ದೇಶದಾದ್ಯಂತ ಬಿಡುಗಡೆಯಾಗಲಿರುವ ಕಂಗುವಾಗೆ ಮಂಗಳವಾರ ಮಧ್ಯಾಹ್ನದವರೆಗೂ ಮುಂಗಡ ಬುಕಿಂಗ್ ಆರಂಭವಾಗಿರಲಿಲ್ಲ. ಸಂಜೆ ಹೊತ್ತಿಗೆ ಮಲ್ಟಿಪ್ಲೆಕ್ಸ್ನಲ್ಲಿ ಮುಂಗಡ ಬುಕಿಂಗ್ ಆರಂಭವಾಗಿದ್ದು, ಹಿಂದಿ ಭಾಷೆಯ ಬುಕಿಂಗ್ ಸಂಜೆಯ ಹೊತ್ತಿಗೆ ಶುರುವಾಗಿತ್ತು.
ಶೋ ಟೈಮ್ ಕಿರಿಕ್ | ಬೆಳಗ್ಗೆ 11ಕ್ಕೆ ಮೊದಲ ಶೋ ಎಂಬ ನಿಯಮ ಸಡಿಲಗೊಳಿಸಿ ಮುಂಜಾನೆ 5ಕ್ಕೆ ಶೋ ಅನುಮತಿಸಿ ಎಂದು ನಿರ್ಮಾಪಕರು ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿದ್ದರು. ಕೊನೆಗೂ ಪಟ್ಟು ಸಡಿಲಿಸಿದ ಸರ್ಕಾರ ದಿನಕ್ಕೆ 5 ಶೋ, ಬೆಳಗ್ಗೆ 9ಕ್ಕೆ ಶುರುವಾಗಿ ಮಧ್ಯರಾತ್ರಿ 2ಕ್ಕೆ ಕೊನೆಗೊಳ್ಳಬೇಕು ಎಂದಿತ್ತು.
20 ಕೋಟಿ ಪಾವತಿಸಿ ಎಂದ ಮದ್ರಾಸ್ ಹೈಕೋರ್ಟ್ | ಕಂಗುವಾ ನಿರ್ಮಾಣ ಸಂಸ್ಥೆ ಸ್ಟುಡಿಯೋ ಗ್ರೀನ್, ಉದ್ಯಮಿ ಅರ್ಜುನ್ ಲಾಲ್ ಅವರಿಂದ 20 ಕೋಟಿ ಸಾಲ ಪಡೆದಿತ್ತು. ಅರ್ಜುನ್ ಲಾಲ್ ಈಗ ಬದುಕಿಲ್ಲ. ಅವರ ಕಂಪನಿ ದಿವಾಳಿಯಾಗಿದೆ. ಅರ್ಜುನ್ ಅವರ ಆಸ್ತಿ ಈಗ ಕೋರ್ಟ್ ನಿಯಂತ್ರಣದಲ್ಲಿದೆ. ಮದ್ರಾಸ್ ಹೈಕೋರ್ಟ್ ಸಾಲಗಾರರಿಂದ ಹಣ ವಸೂಲಿ ಮಾಡುತ್ತಿದ್ದು, ನವೆಂಬರ್ 13ರ ಮಧ್ಯರಾತ್ರಿಯೊಳಗೆ 20 ಕೋಟಿ ರೂ ಪಾವತಿ ಮಾಡಲು ಸ್ಟುಡಿಯೊ ಗ್ರೀನ್ಗೆ ಗಡುವು ನೀಡಿದೆ. ಈ ಎಲ್ಲಾ ಅಡಚಣೆಗಳ ಮಧ್ಯೆ ಸಿನಿಮಾ ನಿರಾತಂಕವಾಗಿ ತೆರೆ ಕಾಣಲಿದೆಯೇ ಎಂದು ಕಾದು ನೋಡಬೇಕು.