ಚಿತ್ರಕಥೆ, ಪಾತ್ರ ಚಿತ್ರಣಗಳಲ್ಲಿರುವ ತೊಂದರೆಗಳನ್ನು, ಸಿನಿಮಾದ ಮೇಕಿಂಗ್ ಮರೆಯುವಂತೆ ಮಾಡುತ್ತದೆ. ಒಂದು ಕಾರ್ ಛೇಸ್ ದೃಶ್ಯವೂ ಸೇರಿದಂತೆ, ಕೆಲವು ಪ್ರೀ ಆ್ಯಕ್ಷನ್ ಸೀಕ್ವೆನ್ಸ್‌ಗಳು ಅದ್ಭುತವಾಗಿ ಮೂಡಿಬಂದಿದೆ. ಲೋಕೇಶ್ ಕನಗರಾಜ್ ಅವರ ಹಿಂದಿನ ಎರಡು ಸಿನಿಮಾಗಳ ನೆನಪಲ್ಲಿ, ತುಂಬಾ ನಿರೀಕ್ಷೆ ಇಟ್ಟುಕೊಂಡು ಹೋದವರಿಗೆ ನಿರಾಸೆಯಾಗುವ ಸಾಧ್ಯತೆ ಇದೆಯಾದರೂ, ಆ್ಯಕ್ಷನ್ ಸಿನಿಮಾ ಪ್ರೇಮಿಗಳಿಗೆ, ವಿಜಯ್ ಅಭಿಮಾನಿಗಳಿಗೆ ‘ಲಿಯೋ’ ಭರ್ಜರಿ ಹಬ್ಬದೂಟದಂತಿದೆ.

ಸಿನಿಮಾಗಳನ್ನು ಎರಡು – ಮೂರು ಭಾಗಗಳಲ್ಲಿ, ಅಧ್ಯಾಯಗಳಲ್ಲಿ ಬಿಡುಗಡೆ ಮಾಡುವ ಟ್ರೆಂಡ್ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಕಾಣುತ್ತಿದೆ. ಆದರೆ, ಚಿತ್ರಗಳನ್ನು ಹಲವು ಭಾಗಗಳಲ್ಲಿ ಬಿಡುಗಡೆ ಮಾಡುವುದಕ್ಕೂ, ಪ್ರತ್ಯೇಕವಾದ ಒಂದು ಚಿತ್ರ ಜಗತ್ತನ್ನು ಸೃಷ್ಟಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಹಾಲಿವುಡ್‌ನ್ ಪ್ರಮುಖ ಚಿತ್ರ ನಿರ್ಮಾಣ ಸಂಸ್ಥೆಗಳು (ಮಾರ್ವೆಲ್ , ಡಿಸಿ, ಇತ್ಯಾದಿ) ಸೃಷ್ಟಿಸಿಕೊಂಡಿರುವ ಇಂತಹ ಸಿನಿಮ್ಯಾಟಿಕ್ ಯುನಿವರ್ಸ್‌ಗೆ ಪರ್ಯಾಯವಾಗಿ ಭಾರತದಲ್ಲೂ ಇತ್ತೀಚೆಗೆ ಇಂತಹ ಪ್ರಯತ್ನಗಳು ಆರಂಭವಾಗಿವೆ.

ವೈಆರ್‌ಎಫ್ ಸ್ಪೈ ಯೂನಿವರ್ಸ್ ಇವುಗಳ ಪೈಕಿ ಹಳೆಯ ಮತ್ತು ಹೆಚ್ಚು ಪರಿಚಿತವಾದ ಹೆಸರಾದರೆ, ಇತ್ತೀಚೆಗೆ ಅಂತಹ ಒಂದು ಪ್ರಯತ್ನವನ್ನು ಯಶಸ್ವಿಯಾಗಿ ಮಾಡಿದ್ದು ‘ಬ್ರಹ್ಮಾಸ್ತ್ರ’ ಚಿತ್ರ. ಆದರೆ, ಇವುಗಳಿಗಿಂತ ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್ ಹೆಚ್ಚು ಗಮನಸೆಳೆಯಲು ಕಾರಣ, ಇದರ ಹಿಂದಿರುವ ನಿರ್ದೇಶಕನ ಆತ್ಮವಿಶ್ವಾಸ. ಉಳಿದೆಲ್ಲಾ ಸಿನಿಮ್ಯಾಟಿಕ್ ಯೂನಿವರ್ಸ್‌ಗಳು ನಿರ್ಮಾಣ ಸಂಸ್ಥೆ, ಸಿನಿಮಾ ಹೆಸರುಗಳಿಂದ ನಾಮಕರಣಗೊಂಡಿದ್ದರೆ, ಎಲ್‌ಸಿಯು ನಿರ್ದೇಶಕ ಲೋಕೇಶ್ ಕನಗರಾಜ್ ಹೆಸರನ್ನು ಒಳಗೊಂಡಿದೆ. ಓರ್ವ ನಿರ್ದೇಶಕನ ಮೇಲೆ ಇರುವ ನಿರೀಕ್ಷೆಯ ಭಾರವನ್ನು ಹೇಳಲು ಇದೊಂದು ಸಂಗತಿ ಸಾಕು. ಅಂತಹ, ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್‌ ಒಳಗೆ ತಲಪತಿ ವಿಜಯ್ ಅಡಿಯಿಡುತ್ತಿರುವಾಗ ಪ್ರೇಕ್ಷಕರ ನಿರೀಕ್ಷೆ ಎಲ್ಲೆ ಮೀರಿದರೆ ಅಚ್ಚರಿಯಿಲ್ಲ. ಲಿಯೋ ಸಿನಿಮಾ ಆ ನಿರೀಕ್ಷೆಯ ಮಟ್ಟ ಮುಟ್ಟಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುವ ಯತ್ನ ಇದು.

‘ಲಿಯೋ’ ಸಿನಿಮಾದ ಕತೆ ‘ಎ ಹಿಸ್ಚರಿ ಆಫ್ ವಯೋಲೆನ್ಸ್’ ಸಿನಿಮಾದಿಂದ ಪ್ರೇರಿತವಾಗಿರುವುದು. ಹಿಂಸೆಯನ್ನು ಅದರ ಸ್ವಭಾವವನ್ನು ಮೂಲ ಚಿತ್ರದಲ್ಲಿರುವಂತೆ ಆಳವಾಗಿ ವಿಶ್ಲೇಷಿಸುವ ಪ್ರಯತ್ನಕ್ಕೆ ಲೋಕೇಶ್ ಇಲ್ಲಿ ಕೈ ಹಾಕದಿದ್ದರೂ, ‘ಲಿಯೋ’ ಸಿನಿಮಾದ ಕತೆಯ ಪ್ರಮುಖಾಂಶಗಳನ್ನು ‘ಹಿಸ್ಚರಿ ಆಫ್ ವಯೋಲೆನ್ಸ್’ ಚಿತ್ರದಿಂದಲೇ ಪಡೆದುಕೊಂಡಿದ್ದಾರೆ. ಹಿಮಾಚಲ ಪ್ರದೇಶದ ಸಣ್ಣ ಪಟ್ಟಣವೊಂದರಲ್ಲಿ, ಚೆಂದದ ಕೆಫೆಯೊಂದರ ಮಾಲಿಕನಾಗಿರುವ ಪಾರ್ಥಿಬನ್‌ಗೆ (ವಿಜಯ್) ಒಂದು ಸಣ್ಣ, ಸುಂದರ ಕುಟುಂಬವಿದೆ. ಹೆಂಡತಿ ಸತ್ಯ (ತೃಷಾ), ಹದಿಹರೆಯದ ಮಗ ಮತ್ತು ಪುಟ್ಟ ಮಗಳು. ಪಾರ್ಥಿಯ ನೆಮ್ಮದಿಯ ಈ ಜೀವನವನ್ನು ತಲೆಕೆಳಗು ಮಾಡುವುದು ಹಿಂಸಾಪ್ರವೃತ್ತಿಯ ದರೋಡಕೋರರ ಗುಂಪು. ತನ್ನ ಕೆಫೆ, ಅಲ್ಲಿನ ಉದ್ಯೋಗಿಗಳು ಮತ್ತು ತನ್ನ ಸಂಸಾರವನ್ನು ಕಾಪಾಡಿಕೊಳ್ಳುವುದಕ್ಕಾಗಿ ಆಯುಧ ಕೈಗೆತ್ತಿಕೊಳ್ಳುವ ಪಾರ್ಥಿಗೆ, ಆ ಆಯುಧವನ್ನು ಕೆಳಗಿಡಲು ಮುಂದೆ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ.

ಪಾರ್ಥಿಯ ಹಿಂದಿನ ಜೀವನದ ಬಗ್ಗೆ, ಆತನ ನಿಜವಾದ ಗುರುತಿನ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಾಗ, ಕುಟುಂಬದೊಳಗೆ ಅವನ ಬಗ್ಗೆ ಸಂಶಯದ ಅಲೆ ಏಳುತ್ತದೆ. ಎದ್ದು ಬಂದ ಹೊಸ ಶತ್ರುಗಳನ್ನು ಮಣಿಸಿ, ಕುಟುಂಬವನ್ನು ಕಾಪಾಡಿಕೊಳ್ಳುವ ಮತ್ತು ಅವರ ವಿಶ್ವಾಸ ಗಳಿಸುವುದರಲ್ಲಿ ಪಾರ್ಥಿ ಯಶಸ್ವಿಯಾಗುತ್ತಾನೆಯೇ ಹಾಗೂ ಪಾರ್ಥಿ ನಿಜವಾಗಲೂ ಪಾರ್ಥಿಯೇ ಎಂಬುದು ಸಿನಿಮಾದ ಕತೆ. ಚಿತ್ರದ ಮೊದಲಾರ್ಧ ಕುತೂಹಲಕರವಾಗಿದೆ ಮತ್ತು ದ್ವಿತೀಯಾರ್ಧಕ್ಕೆ ಗಟ್ಟಿಯ ಬುನಾದಿ ಹಾಕಿಕೊಡುತ್ತದೆ. ಮೊದಲಿಗೇ ಬರುವ ಹೈನಾವನ್ನು ಹಿಡಿದು ಪಳಗಿಸುವ ದೃಶ್ಯ, ಸಿನಿಮಾದಲ್ಲಿ ಮುಂಬರುವ ಕತೆಗೆ ಮತ್ತು ಪಾರ್ಥಿಯ ವ್ಯಕ್ತಿತ್ವಕ್ಕೆ ಒಂದು ಸಮರ್ಥ ಪರಿಚಯದಂತಿದೆ. ಇಲ್ಲಿ ಆ್ಯಕ್ಷನ್, ಥ್ರಿಲ್ಲರ್ ಮತ್ತು ಡ್ರಾಮಾ ಚೆನ್ನಾಗಿ ಸಮ್ಮಿಳಿತವಾಗಿದೆ. ಆದರೆ,
ದ್ವಿತೀಯಾರ್ಧದಲ್ಲಿ ಸಿನಿಮಾ ನಿರೀಕ್ಷಿತ ಮಟ್ಟ ಮುಟ್ಟುವುದಿಲ್ಲ. ಅದರಲ್ಲಿ ಬರುವ ಯಾವುದೇ ಅಂಶಗಳು ಅಷ್ಟಾಗಿ ಮನತಟ್ಟುವುದಿಲ್ಲ. ತುಂಬಾ ಪ್ರಮುಖ ಪಾತ್ರವಹಿಸಬೇಕಾದ ಫ್ಲಾಷ್ ಬ್ಯಾಕ್ ಸರಿಯಾಗಿ ಕೆಲಸ ಮಾಡುವುದಿಲ್ಲ, ಮತ್ತು ಅದರಲ್ಲಿ ಬರುವ ಘಟನೆಗಳು ಮತ್ತು ಅಲ್ಲಿ ನೀಡಲಾಗುವ ಕಾರಣಗಳು ಅಷ್ಟು ಸಮಂಜಸ ಎನಿಸುವುದಿಲ್ಲ. ತ್ರಿಷಾ ಮತ್ತು ವಿಜಯ್ ನಡುವಿನ ಭಾವನಾತ್ಮಕ ದೃಶ್ಯಗಳು ದ್ವಿತೀಯಾರ್ಧದಲ್ಲೂ ಸುಂದರವಾಗಿ ಮೂಡಿಬಂದಿದೆ.
ಅವರ ನಡುವಣ ಕೆಮಿಸ್ಟ್ರೀ ಚೆನ್ನಾಗಿದೆ.

ಚಿತ್ರಕಥೆ ಅಲ್ಲಲ್ಲಿ ಎಡವಿದಂತೆ ಅನಿಸಿದರೂ, (ಒಬ್ಬ ಧಾರ್ಮಿಕ ಕ್ರಿಶ್ಚಿಯನ್ ವ್ಯಕ್ತಿಯ ಮೃತದೇಹವನ್ನು ಹೂಳುವ ಬದಲು, ಸುಡಲಾಗುತ್ತದೆ) ಲಿಯೋದ ಪ್ರಮುಖ ತೊಂದರೆ ಇರುವುದು ಅದರ ಕಳಪೆಯಾದ ಪಾತ್ರ ನಿರ್ವಹಣೆಯಲ್ಲಿ. ವಿಜಯ್ ಸ್ಟಾರ್ ಪವರ್ ಅನ್ನು ಬಳಸಿಕೊಳ್ಳುವ ಮತ್ತು ತೆರೆಯ ಮೇಲೆ ಆತನನ್ನೇ ಹೆಚ್ಚು ತೋರಿಸುವ ಭರದಲ್ಲಿ ಲೋಕೇಶ್ ಚಿತ್ರದ ಇತರ ಪಾತ್ರಗಳನ್ನು ಸರಿಯಾಗಿ ಅಭಿವೃದ್ಧಿಪಡಿಸಿಯೇ ಇಲ್ಲ. ಸಾಲು ಸಾಲು ಖಳನಾಯಕರಿದ್ದರೂ, ತೆರೆಯ ಮೇಲೆ ಪವರ್‌ಪುಲ್ ಆಗಿ ಕಂಡರೂ, ಅವರ ವ್ಯಕ್ತಿತ್ವದ ಬಗ್ಗೆ ಸಿನಿಮಾ ಹೆಚ್ಚೇನೂ ಹೇಳುವುದೇ ಇಲ್ಲ. ಆಂತೋನಿ ದಾಸ್‌ನಂತಹ (ಸಂಜಯ್ ದತ್) ಹಲವು ವಿಶಿಷ್ಟತೆಗಳಿರಬಹುದಾದ ಪಾತ್ರದ ಸಂಕೀರ್ಣತೆ ಮತ್ತು ಅದಕ್ಕಿರುವ ಆಯಾಮಗಳನ್ನು ಕೊಂಚವೂ ತೆರೆಯ ಮೇಲೆ ತರುವುದೇ ಇಲ್ಲ. ಈ ಸಮಸ್ಯೆ ಬಹುತೇಕ ಎಲ್ಲಾ ಪ್ರಮುಖ ಮತ್ತು ಸಣ್ಣ ಪುಟ್ಟ ಪಾತ್ರಗಳಿಗೂ ಇದೆ.

ಇಲ್ಲಿ ಖಳನಾಯಕರು ಕೇವಲ ಆ್ಯಕ್ಷನ್ ದೃಶ್ಯಗಳಿಗೆ ಸೀಮಿತವಾಗಿ ಬಿಟ್ಟಿದ್ದಾರೆ. ಇನ್ನೂ ಬೇಸರದ ಸಂಗತಿಯೆಂದರೆ, ನೆನಪಿನಲ್ಲಿ ಉಳಿಯಬಹುದಾದ, ಆಸಕ್ತಿ ಮೂಡಿಸಿದ ಪಾತ್ರಗಳೆಲ್ಲಾ ಸಾಯುವುದಕ್ಕಾಗಿಯೇ ತೆರೆಯ ಮೇಲೆ ಬಂದಂತೆ, ಕೆಲ ನಿಮಿಷ, ಕೆಲ ಸೆಕೆಂಡು ಕಾಣಿಸಿಕೊಂಡು ತಟ್ಟಕ್ಕನೆ ಸತ್ತು ಬಿಡುತ್ತವೆ. ಅನುರಾಗ್ ಕಶ್ಯಪ್ ತೆರೆಯ ಮೇಲೆ ಬಂದಾಗ ಪ್ರೇಕ್ಷಕರು ಹೊಡೆದ ಸಿಳ್ಳೆಯ ದನಿ ಮರೆಯಾಗುವ ಮೊದಲೇ ಆ ಪಾತ್ರ ಸತ್ತೇ ಹೋಗುತ್ತದೆ. ಅಷ್ಟೊಂದು ಖಳರನ್ನು, ದೊಡ್ಡ ನಟರನ್ನು ಕತೆಯೊಳಗೆ ಎಳೆದು ತರುವ ಬದಲು, ಒಬ್ಬ ಸಮರ್ಥ ಖಳ ಪಾತ್ರವನ್ನೇ ದೊಡ್ಡದಾಗಿ ಬೆಳೆಸಿದ್ದರೆ, ಚಿತ್ರಕ್ಕೊಂದು ಆಳ ಸಿಗುತ್ತಿತ್ತೇನೋ. ಅಥವಾ ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್‌ನ ಭಾಗವಾಗಿ ಇಷ್ಟು ವ್ಯಕ್ತಿಗಳನ್ನು ತರಲಾಗಿದೆಯೇನೋ. ಆದರೆ, ಈಗಾಗಲೇ ಎಲ್‌ಸಿಯು ಭಾಗವಾಗಿರುವ ಪಾತ್ರಗಳೂ ಕೂಡ ‘ಲಿಯೋ’ ಸಿನಿಮಾದಲ್ಲಿ ಸಹಜವಾಗಿ ಮಿಳಿತವಾಗಿಲ್ಲ. ಸಿನಿಮಾದೊಳಗೆ ಅನಗತ್ಯವಾಗಿ ತುರುಕಿರುವಂತೆ ಅನಿಸುತ್ತದೆ.

ಚಿತ್ರಕಥೆ, ಪಾತ್ರ ಚಿತ್ರಣಗಳಲ್ಲಿರುವ ಈ ತೊಂದರೆಗಳನ್ನು, ಸಿನಿಮಾದ ಮೇಕಿಂಗ್ ಮರೆಯುವಂತೆ ಮಾಡುತ್ತದೆ. ಒಂದು ಕಾರ್ ಛೇಸ್ ದೃಶ್ಯವೂ ಸೇರಿದಂತೆ, ಕೆಲವು ಪ್ರೀ ಆ್ಯಕ್ಷನ್ ಸೀಕ್ವೆನ್ಸ್‌ಗಳು ಅದ್ಭುತವಾಗಿ ಮೂಡಿಬಂದಿದೆ. ಸಿನಿಮಾ ತಾಂತ್ರಿಕವಾಗಿ ಮೇಲ್ಮಟ್ಟದಲ್ಲಿದೆ. ಅನಿರುದ್ಧ್ ಸಂಗೀತ ನಿಸ್ಸಂಶಯವಾಗಿ ಚಿತ್ರದ ಜೀವಾಳ. ಮನೋಜ್ ಪರಮಹಂಸ ಸಿನಿಮಾಟೋಗ್ರಫಿ, ಫಿಲೋಮಿನ್ ರಾಜ್ ಎಡಿಟಿಂಗ್ ಚಿತ್ರಕ್ಕೆ ಉಸಿರು ತುಂಬಿದೆ. ವಿಜಯ್ ಚಿತ್ರದುದ್ದಕ್ಕೂ ಮಿಂಚಿದ್ದಾರೆ. ಮಧ್ಯ ವಯಸ್ಕ ಅಪ್ಪನಾಗಿ ಮತ್ತು ಫ್ಲಾಷ್‌ಬ್ಯಾಕ್‌ನಲ್ಲಿ ಯುವಕನಾಗಿ, ಈ ಎರಡೂ ಅವತಾರಗಳಲ್ಲೂ ತೀರಾ ಸಹಜವಾಗಿ ಹೊಂದಿಕೊಂಡಿದ್ದಾರೆ. ಸಂಜಯ್ ದತ್, ಅರ್ಜುನ್ ಸರ್ಜಾ ಖಳರಾಗಿ ತೆರೆಯನ್ನು ಆವರಿಸಿಕೊಳ್ಳುತ್ತಾರೆ ಮತ್ತು ಗಮನ ಸೆಳೆಯುತ್ತಾರೆ. ತ್ರಿಷಾ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆದರೆ, ಈ ಯಾವುದೇ ಪಾತ್ರಗಳಿಗೆ ನಿರ್ದೇಶಕರೇ ನ್ಯಾಯ ಒದಗಿಸಿಲ್ಲ. ಲೋಕೇಶ್ ಕನಗರಾಜ್ ಅವರ ಹಿಂದಿನ ಎರಡು ಸಿನಿಮಾಗಳ ನೆನಪಲ್ಲಿ, ತುಂಬಾ ನಿರೀಕ್ಷೆ ಇಟ್ಟುಕೊಂಡು ಹೋದವರಿಗೆ ನಿರಾಸೆಯಾಗುವ ಸಾಧ್ಯತೆ ಇದೆಯಾದರೂ, ಆ್ಯಕ್ಷನ್ ಸಿನಿಮಾ ಪ್ರೇಮಿಗಳಿಗೆ, ವಿಜಯ್ ಅಭಿಮಾನಿಗಳಿಗೆ ‘ಲಿಯೋ’ ಭರ್ಜರಿ ಹಬ್ಬದೂಟದಂತಿದೆ.

LEAVE A REPLY

Connect with

Please enter your comment!
Please enter your name here