ಪಿ ವಾಸು ನಿರ್ದೇಶನದ ಬಹುನಿರೀಕ್ಷಿತ ತಮಿಳು – ಹಿಂದಿ ದ್ವಿಭಾಷಾ ಸಿನಿಮಾ ‘ಚಂದ್ರಮುಖಿ 2’ ಟ್ರೈಲರ್‌ ಬಿಡುಗಡೆಯಾಗಿದೆ. ಟ್ರೈಲರ್‌ನಲ್ಲಿ ಸಿನಿಮಾದ ಪ್ರಮುಖ ಪಾತ್ರಗಳ ಪರಿಚಯ ಸಿಗುತ್ತದೆ. ಸೋಷಿಯಲ್‌ ಮೀಡಿಯಾದಲ್ಲಿ ಹಲವರು ಟ್ರೈಲರ್‌ ಮೆಚ್ಚಿ ಮಾತನಾಡಿದ್ದರೆ, ಮತ್ತೆ ಕೆಲವರು ಗ್ರಾಫಿಕ್ಸ್‌ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಘವ ಲಾರೆನ್ಸ್ ಮತ್ತು ಕಂಗನಾ ರನಾವತ್ ಅಭಿನಯದ ಬಹುನೀರಿಕ್ಷಿತ ‘ಚಂದ್ರಮುಖಿ 2’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪಿ ವಾಸು ನಿರ್ದೇಶಿಸಿದ್ದಾರೆ. ಕಂಗನಾ, ವೆಟ್ಟೈಯನ್ ರಾಜನ ಆಸ್ಥಾನ ನರ್ತಕಿ ಪಾತ್ರ ನಿರ್ವಹಿಸಿದ್ದಾರೆ. ರಾಘವ ಲಾರೆನ್ಸ್ ಒಮ್ಮೆ ರೌಡಿಗಳ ಜೊತೆ ಫೈಟ್ ಮಾಡುವ ಸಾಮಾನ್ಯ ವ್ಯಕ್ತಿಯಂತೆ​, ಇನ್ನೊಮ್ಮೆ ರಾಜನಂತೆ ಮೆರೆಯುವ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ರಾಜಾಧಿರಾಜ, ರಾಜ ಗಂಭೀರʼ ಎಂಬ ಘೋಷಣೆಯೊಂದಿಗೆ ಆರಂಭವಾಗುವ ಟ್ರೈಲರ್‌​ನಲ್ಲಿ ದೊಡ್ಡ ಅವಿಭಕ್ತ ಕುಟುಂಬದ ಸದಸ್ಯರನ್ನು ತೋರಿಸಿದ್ದಾರೆ. ‘ಚಂದ್ರಮುಖಿ’ ಚಿತ್ರದಲ್ಲಿ ತೋರಿಸಿದ್ದ ಅದೇ ಬೃಹತ್‌ ಬಂಗಲೆಯು ಸಮಸ್ಯೆಗೆ ಸಿಲುಕುವುದು ಕಂಡು ಬರುತ್ತದೆ. ಆ ಬಂಗಲೆಯ ಒಂದು ಕೋಣೆಯನ್ನು ಯಾರೂ ಪ್ರವೇಶಿಸಕೂಡದು ಎಂದು ಸ್ವಾಮೀಜಿಯೊಬ್ಬರು ಸೂಚಿಸುತ್ತಾರೆ.

ಚಿತ್ರದಲ್ಲಿ ವಡಿವೇಲು, ರಾಧಿಕಾ ಶರತ್‌ಕುಮಾರ್, ಲಕ್ಷ್ಮಿ ಮೆನನ್, ಮಿಥುನ್ ಶ್ಯಾಮ್, ಮಹಿಮಾ ನಂಬಿಯಾರ್, ರಾವ್ ರಮೇಶ್, ವಿಘ್ನೇಶ್, ರವಿ ಮರಿಯಾ, ಸುರೇಶ್ ಮೆನನ್, ಟಿ ಎಂ ಕಾರ್ತಿಕ್ ಮತ್ತು ಸುಭಿಕ್ಷಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಂಗೀತ ಸಂಯೋಜಕ ಎಂ ಎಂ ಕೀರವಾಣಿ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಕಂಗನಾ ನೋಟ ಮತ್ತು ರಾಘವ ಲಾರೆನ್ಸ್ ಅವರ ಎರಡು ಅವತಾರಗಳು ಗಮನ ಸೆಳೆಯುತ್ತವೆ. Lyca Productions ಬ್ಯಾನರ್‌ ಸಂಸ್ಥಾಪಕ ಸುಬಾಸ್ಕರನ್ ನಿರ್ಮಾಣದ ಈ ಪ್ಯಾನ್​ ಇಂಡಿಯಾ ಚಿತ್ರವು ಗಣೇಶ ಚತುರ್ಥಿಯ ಸಂದರ್ಭವಾದ ಸೆಪ್ಟೆಂಬರ್ 15ರಂದು ಮೂಲ ತಮಿಳು ಮತ್ತು ಹಿಂದಿ ಸೇರಿದಂತೆ ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ.

Previous articleಮಂತ್ರಾಲಯದಲ್ಲಿ ನೆರವೇರಿತು ಡಾ ರಾಜಕುಮಾರ್‌ ಮೊಮ್ಮಗನ ಸಿನಿಮಾ ಮೂಹೂರ್ತ
Next article‘ಇರೈವನ್‌’ ಟ್ರೈಲರ್‌ | ಜಯಂ ರವಿ, ನಯನತಾರಾ, ರಾಹುಲ್‌ ಬೋಸ್‌ ತಮಿಳು ಸಿನಿಮಾ

LEAVE A REPLY

Connect with

Please enter your comment!
Please enter your name here