ಮೊನ್ನೆ ರೆಹಮಾನ್ – ಸಾಯಿರಾ ಬಾನು ದಂಪತಿ ವಿವಾಹ ವಿಚ್ಛೇದನ ಸುದ್ದಿ ಹೊರಬಿದ್ದ ಬೆನ್ನಲ್ಲೇ ಗಿಟಾರಿಸ್ಟ್ ಮೋಹಿನಿ ಡೇ ಅವರ ವಿಚ್ಚೇದನವೂ ಸುದ್ದಿಯಾಗಿತ್ತು. ರೆಹಮಾನ್ ಮ್ಯೂಸಿಕ್ ತಂಡದ ಸದಸ್ಯೆ ಆಕೆ. ಸಹಜವಾಗಿಯೇ ರೆಹಮಾನ್ ಮತ್ತು ಮೋಹಿನಿ ಅವರ ಕುರಿತಾಗಿ ಹಲವು ವದಂತಿಗಳು ಹರಡಿದವು.
ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ -ಸಾಯಿರಾ ಬಾನು ದಂಪತಿ ವಿಚ್ಛೇದನ ಸುದ್ದಿ ಹೊರಬಿದ್ದ ಬೆನ್ನಲ್ಲೇ ಮತ್ತೊಂದು ವಿವಾಹ ವಿಚ್ಛೇದನವೂ ಸುದ್ದಿಯಾಯಿತು. ಅದು ಮೋಹಿನಿ ಡೇ ಅವರದ್ದು. ಮೋಹಿನಿ ಡೇ, ರೆಹಮಾನ್ ಅವರ ತಂಡದಲ್ಲಿನ ಗಿಟಾರಿಸ್ಟ್. ಆಕೆ ತನ್ನ ಪತಿ ಮಾರ್ಕ್ ಹಾರ್ಟ್ಸಚ್ ಜತೆಗಿನ ದಾಂಪತ್ಯ ಕೊನೆಗೊಳಿಸುತ್ತಿರುವುದಾಗಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು. ಈಕೆ ಪೋಸ್ಟ್ ಹಾಕಿದ್ದೇ ತಡ, ರೆಹಮಾನ್ ವಿವಾಹ ವಿಚ್ಛೇದನಕ್ಕೆ ಇದನ್ನು ಥಳುಕು ಹಾಕಲಾಯಿತು! ಹಲವು ವದಂತಿಗಳು ಹರಿದಾಡಿದವು. ವಿಚ್ಛೇದನ ಸುದ್ದಿಗೂ ವದಂತಿಗೂ ಏನಾದರೂ ನಂಟು ಇದೆಯೇ ಎಂದು ನೆಟ್ಟಿಗರು ಕುತೂಹಲದಿಂದ ಸೋಷಿಯಲ್ ಮೀಡಿಯಾ ಜಾಲಾಡುತ್ತಿರುವಾಗಲೇ, ಸಾಯಿರಾ ಬಾನು ಅವರ ವಕೀಲೆ, ಅದಕ್ಕೂ ಇದಕ್ಕೂ ಏನೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಯಾರು ಈ ಮೋಹಿನಿ ಡೇ? | ಜುಲೈ 1996ರಲ್ಲಿ ಮುಂಬೈನಲ್ಲಿ ಜನನ. ಮುಂಬೈನಲ್ಲಿ ಬೆಳೆದಿದ್ದರೂ, ಅವರ ಕುಟುಂಬದ ಬೇರುಗಳು ಕೋಲ್ಕತ್ತಾದಲ್ಲಿವೆ. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಮೋಹಿನಿ ಅವರ ಅಪ್ಪ ಜಾಝ್ ಫ್ಯೂಷನ್-ಸೆಷನ್ ಬಾಸ್ ವಾದಕ ಸುಜೋಯ್ ಡೇ. ಅಮ್ಮ ರೋಮಿಯೋ ಡೇ. ಮೂರರ ಹರೆಯದಲ್ಲಿ ಮೋಹಿನಿಯ ತಂದೆ ಸಂಗೀತದ ಮೇಲಿನ ಪ್ರೀತಿಯನ್ನು ಅರಿತು ಆಕೆಗೆ ಪ್ರೋತ್ಸಾಹ ನೀಡಿದರು. ಮೋಹಿನಿಯ 9ನೇ ವಯಸ್ಸಿನ ಹುಟ್ಟುಹಬ್ಬಕ್ಕೆ ಅಪ್ಪ ಗಿಫ್ಟ್ ಕೊಟ್ಟಿದ್ದು ಬಾಸ್ ಗಿಟಾರ್. 11ನೇ ವಯಸ್ಸಿನಲ್ಲಿ ಈಕೆ ವೃತ್ತಿಪರ ಬಾಸ್ ಗಿಟಾರ್ ನುಡಿಸಲು ಪ್ರಾರಂಭಿಸಿದರು. ನಂತರ ಮೋಹಿನಿ ಗಿಟಾರ್ ನುಡಿಸುತ್ತಾ, ಅದರಲ್ಲಿ ಹೆಚ್ಚಿನ ಜ್ಞಾನ ಗಳಿಸುತ್ತಾ ಬೆಳೆಯುತ್ತಾ ಹೋದರು. ಈಕೆ ಗಾನ್ ಬಾಂಗ್ಲಾ ಅವರ ‘ವಿಂಡ್ ಆಫ್ ಚೇಂಜ್’ ಪ್ರಾಜೆಕ್ಟ್ನ ಭಾಗವಾಗಿದ್ದಾರೆ. ರೆಹಮಾನ್ ಅವರ ಲೈವ್ ಶೋಗಳಲ್ಲಿ ಸಕ್ರಿಯವಾಗಿರುವ ಡೇ ಪ್ರಪಂಚದಾದ್ಯಂತ 35ಕ್ಕೂ ಹೆಚ್ಚು ಸಂಗೀತ ಪ್ರದರ್ಶನಗಳನ್ನು ನೀಡಿದ್ದಾರೆ.
ರೆಹಮಾನ್ ಜತೆ ಮೊದಲ ಭೇಟಿ | ಮುಂಬೈನ ನಿರ್ವಾಣ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಮಾಡುತ್ತಿದ್ದಾಗ ಮೋಹಿನಿ, ರೆಹಮಾನ್ ಅವರನ್ನು ಭೇಟಿಯಾಗಿದ್ದು. ಆಕೆಗೆ ಆಗ 17 ವರ್ಷ. ಮೋಹಿನಿಗೆ ಆಗ ಎ ಆರ್ ರೆಹಮಾನ್ ಅವರ ಹೆಸರು ಮತ್ತು ಖ್ಯಾತಿಯ ಬಗ್ಗೆ ತಿಳಿದಿರಲಿಲ್ಲ. ಒಬ್ಬ ಸಾಮಾನ್ಯ ಸಂಗೀತಗಾರನ ಜೊತೆ ಕೆಲಸ ಮಾಡಿದ್ದೇನೆ ಎಂದೇ ಅವರು ಅಂದುಕೊಂಡಿದ್ದರು. ರೆಕಾರ್ಡಿಂಗ್ ಮುಗಿಸಿ ಮನೆಗೆ ತಲುಪಿ ರೆಹಮಾನ್ ಅವರ ಬಗ್ಗೆ ಹೇಳಿದಾಗ ಆಕೆಯ ಅಪ್ಪ, ರೆಹಮಾನ್ ಎಷ್ಟು ದೊಡ್ಡ ಸಂಗೀತಗಾರ ಎಂದು ಹೇಳಿದ್ದು. ನಂತರ ಇಂಟರ್ನೆಟ್ನಲ್ಲಿ ಜಾಲಾಡಿದ ಮೋಹಿನಿ, ರೆಹಮಾನ್ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದರು!
ಕೋಕ್ ಸ್ಟುಡಿಯೋ-3ರಲ್ಲಿ ಆಕೆಯ ಪಾದಾರ್ಪಣೆ ನಂತರ ಆಕೆ ರೆಹಮಾನ್ ಸಂಗೀತ ತಂಡದಲ್ಲಿ ಸಕ್ರಿಯ ಸದಸ್ಯೆಯಾದರು. 2023ರ ಆಗಸ್ಟ್ ತಿಂಗಳಲ್ಲಿ ಆಕೆ ತನ್ನ ಮೊದಲ ಆಲ್ಬಂ ಬಿಡುಗಡೆ ಮಾಡಿದ್ದರು, ಎ ಆರ್ ರೆಹಮಾನ್ ಅವರೊಂದಿಗೆ ಕೆಲಸ ಮಾಡುವುದರ ಜೊತೆಗೆ ಈಕೆ ರಂಜಿತ್ ಬರೋಟ್, ಜಾಕಿರ್ ಹುಸೇನ್ ಮತ್ತು ಸ್ಟೀವ್ ವಾಯ್ ಅವರಂತಹ ಇತರ ಜನಪ್ರಿಯ ಸಂಗೀತಗಾರರೊಂದಿಗೆ ಕೆಲಸ ಮಾಡಿದ್ದಾರೆ.