ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ಪಿ ಜಯಚಂದ್ರನ್ ನಿನ್ನೆ (ಜನವರಿ 9) ಅಗಲಿದ್ದಾರೆ. ಮಲಯಾಳಂ, ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳ 16,000ಕ್ಕೂ ಹೆಚ್ಚು ಗೀತೆಗಳಿಗೆ ಜಯಚಂದ್ರನ್ ದನಿಯಾಗಿದ್ದಾರೆ. ಮಲಯಾಳಂ ಚಿತ್ರರಸಿಕರು ಅವರನ್ನು ‘ಭಾವ ಗಾಯಕನ್’ ಎಂದೇ ಕರೆದಿದ್ದರು.
ದಕ್ಷಿಣ ಭಾರತ ಚಲನಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ಪಿ ಜಯಚಂದ್ರನ್ (81 ವರ್ಷ) ನಿನ್ನೆ (ಜನವರಿ 9) ಇಹಲೋಕ ತ್ಯಜಿಸಿದ್ದಾರೆ. ಅವರು ಮಲಯಾಳಂ, ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆ ಸಿನಿಮಾಗಳ 16,000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ಕೆಲ ಕಾಲದಿಂದ ಜಯಚಂದ್ರನ್ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೇರಳದ ತ್ರಿಶೂರ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಲವ್, ರೊಮ್ಯಾಂಟಿಕ್, ವಿರಹ, youthful… ಎಲ್ಲಾ ರೀತಿಯ ಹಾಡುಗಳನ್ನು ಮನದುಂಬಿ ಹಾಡುತ್ತಿದ್ದ ಜಯಚಂದ್ರನ್ ಸಿನಿಪ್ರಿಯರ ಆಪ್ತ ಗಾಯಕ. ಕೊನೆಯ ದಿನಗಳಲ್ಲೂ ಹಾಡುತ್ತಿದ್ದ ಜಯಚಂದ್ರನ್ ಆರು ದಶಕಗಳ ಕಾಲ ಚಿತ್ರರಸಿಕರನ್ನು ರಂಜಿಸಿದ್ದಾರೆ.
ಜಯಚಂದ್ರನ್ ಹುಟ್ಟಿದ್ದು ಎರ್ನಾಕುಲಂನ ರವಿಪುರಂನಲ್ಲಿ. ತಂದೆ ತ್ರಿಪುನಿಥುರ ರವಿವರ್ಮ ಕೊಚಾನಿಯನ್ ಖ್ಯಾತ ಸಂಗೀತಗಾರ. ತಾಯಿ ಸುಭದ್ರಾ ಕುಂಜಮ್ಮ. ಬೆಳೆದದ್ದು ತ್ರಿಶೂರ್‌ನ ಇರಿಂಜಲಕ್ಕುಡ ಪಟ್ಟಣದಲ್ಲಿ. ಚಿಕ್ಕ ವಯಸ್ಸಿನಲ್ಲೇ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಅವರು ಆರಂಭದಲ್ಲಿ ಮೃದಂಗಂ ಮತ್ತು ಚೆಂಡೆ ಕಲಿತರು. ಶಾಲಾ ದಿನಗಳಲ್ಲಿ ಗಾಯನ, ಮೃದಂಗ ವಾದನಕ್ಕೆ ಪ್ರಶಸ್ತಿ – ಪುರಸ್ಕಾರ ಪಡೆದದ್ದು ಸಂಗೀತ ಕಲಿಕೆಗೆ ಅವರಿಗೆ ಪ್ರೇರಣೆಯಾಯ್ತು. ಮುಂದೆ ಸಂಗೀತದಲ್ಲಿ ಗಂಭೀರವಾಗಿ ತೊಡಗಿಸಿಕೊಂಡರು. ‘ಕುಂಜಲಿ ಮರಕ್ಕರ್’ (1965) ಸಿನಿಮಾಗೆ ಹಾಡಿದ ‘ಒರು ಮುಲ್ಲಪ್ಪೂ ಮಲಯುಮಯಿ…’ ಅವರ ಮೊದಲ ಹಾಡು. ‘ಕಲಿತೋಝನ್’ ಸಿನಿಮಾದ ‘ಮಂಜಲಯಿಲ್ ಮುಂಜಿತೋರ್ಥಿ…’ ಹಾಡು ಅವರ ವೃತ್ತಿಬದುಕಿಗೆ ತಿರುವಾಯ್ತು. ಮುಂದೆ ನಿರಂತರವಾಗಿ ಮಲಯಾಳಂ ಸಿನಿಮಾಗಳಿಗೆ ಹಾಡುತ್ತಾ ಬಂದರು.
ದಕ್ಷಿಣ ಭಾರತದ ವಿವಿಧ ಭಾಷಾ ಸಿನಿಮಾಗಳ ಮೇರು ಸಂಗೀತ ಸಂಯೋಜಕರಾದ ಜಿ ದೇವರಾಜನ್, ವಿಜಯ ಭಾಸ್ಕರ್, ಎಂ ಎಸ್ ಬಾಬುರಾಜ್, ವಿ ದಕ್ಷಿಣಾಮೂರ್ತಿ, ಕೆ ರಾಘವನ್, ಎಂ ರಂಗರಾವ್, ಎಂ ಎಸ್ ವಿಶ್ವನಾಥನ್, ಇಳಯರಾಜ, ಎ ಆರ್ ರೆಹಮಾನ್, ವಿದ್ಯಾಸಾಗರ್ ಸೇರಿದಂತೆ ಹಲವರ ಸಂಯೋಜನೆಗಳಿಗೆ ಜಯಚಂದ್ರನ್ ಹಾಡಿದ್ದಾರೆ. ಮಲಯಾಳಂ ಸಿನಿಮಾ ಸಾಧನೆಗಾಗಿ J C ಡೇನಿಯಲ್ ಪ್ರಶಸ್ತಿ, ಕಲೈಮಮಣಿ ಗೌರವ ಸೇರಿದಂತೆ ಹಲವು ಪುರಸ್ಕಾರಗಳು ಅವರನ್ನು ಅರಸಿ ಬಂದಿವೆ. ‘ಶ್ರೀ ನಾರಾಯಣ ಗುರು’ (1985) ಮಲಯಾಳಂ ಚಿತ್ರದ ಉತ್ತಮ ಗಾಯನಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿರುವ ಅವರಿಗೆ ಐದು ಕೇರಳ ರಾಜ್ಯ ಪ್ರಶಸ್ತಿ, ಎರಡು ತಮಿಳು ನಾಡು ರಾಜ್ಯ ಪ್ರಶಸ್ತಿಗಳು ಸಂದಿವೆ. ನಾಳೆ ಶನಿವಾರ (ಜನವರಿ 11) ಅವರ ಅಂತ್ಯಸಂಸ್ಕಾರ ನೆರವೇರಲಿದೆ.
ಕನ್ನಡ ಸಿನಿಮಾ | ಜಯಚಂದ್ರನ್ ದನಿಯಾಗಿರುವ ಹಲವು ಕನ್ನಡ ಚಿತ್ರಗೀತೆಗಳನ್ನು ಕನ್ನಡಿಗರು ಇಂದಿಗೂ ಗುನುಗುತ್ತಾರೆ. ಕನ್ನಡದ ಪ್ರಮುಖ ಸಂಗೀತ ಸಂಯೋಜಕರ 250ಕ್ಕೂ ಹೆಚ್ಚು ಸಂಯೋಜನೆಗಳಿಗೆ ಜಯಚಂದ್ರನ್ ಹಾಡಿದ್ದಾರೆ. ಪುಟ್ಟಣ್ಣ ಕಣಗಾಲ್ ತಮ್ಮ ನಾಲ್ಕು ಸಿನಿಮಾಗಳಿಗೆ ಅವರಿಂದ ಹಾಡಿಸಿದ್ದರು. ಅವರ ಕೆಲವು ಜನಪ್ರಿಯ ಕನ್ನಡ ಹಾಡುಗಳಿವು – ಒಲವಿನ ಉಡುಗೊರೆ ಕೊಡಲೇನು… (ಒಲವಿನ ಉಡುಗೊರೆ), ಹಿಂದೂಸ್ತಾನವು ಎಂದೂ ಮರೆಯದ… (ಅಮೃತ ಘಳಿಗೆ), ಮಂದಾರ ಪುಷ್ಪವು ನೀನು… (ರಂಗನಾಯಕಿ), ಚಂದ.. ಚಂದ.. (ಮಾನಸ ಸರೋವರ), ಜೀವನ ಸಂಜೀವನ… (ಹಂತಕನ ಸಂಚು), ಕಮಲ ನಯನ… ಕಮಲ ವದನ… (ಭಕ್ತ ಪ್ರಹ್ಲಾದ), ಭೂಮಿ ತಾಯಾಣೆ… (ಪ್ರಾಯ ಪ್ರಾಯ ಪ್ರಾಯ), ಕನ್ನಡ ನಾಡಿನ ಕರಾವಳಿ… (ಮಸಣದ ಹೂವು), ಕಾಲ ಮತ್ತೊಮ್ಮೆ ನಮಗಾಗಿ ಬಂದು… (ಕಿಲಾಡಿಗಳು) ಮುಂತಾದವು.