ಕನ್ನಡ ರಂಗಭೂಮಿ, ಕಿರುತೆರೆ ಮತ್ತು ಸಿನಿಮಾರಂಗದಲ್ಲಿ ದಶಕಗಳಿಂದ ಸಕ್ರಿಯರಾಗಿದ್ದ ಸರಿಗಮ ವಿಜಿ (76 ವರ್ಷ) ಅಗಲಿದ್ದಾರೆ. ಶ್ವಾಸಕೋಶ ಸಂಬಂಧಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಂಗಳೂರು ಯಶವಂತರ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು (ಜನವರಿ 15) ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.

‘ಸಂಸಾರದಲ್ಲಿ ಸರಿಗಮ’ ನಾಟಕದ ಜನಪ್ರಿಯತೆಯಿಂದಾಗಿ ವಿಜಯಕುಮಾರ್‌ ಅವರ ಹೆಸರಿನ ಹಿಂದೆ ‘ಸರಿಗಮ’ ಸೇರಿಕೊಂಡಿತ್ತು. ಇದು ಅವರು ನಟಿಸಿ, ನಿರ್ದೇಶಿಸಿದ್ದ ನಾಟಕ. ಕರ್ನಾಟಕ ಮಾತ್ರವಲ್ಲದೆ ದೇಶದ ವಿವಧೆಡೆ ಅವರು ಈ ನಾಟಕವನ್ನು ಪ್ರದರ್ಶಿಸಿದ್ದರು. 1350ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡ ದಾಖಲೆ ಈ ನಾಟಕದ್ದು. ಅಲ್ಲಿನ ಜನಪ್ರಿಯತೆ ವಿಜಿ ಅವರಿಗೆ ಕಿರುತೆರೆ ಮತ್ತು ಸಿನಿಮಾಗಳ ಅವಕಾಶಗಳನ್ನು ತಂದುಕೊಟ್ಟಿತು. ಮುಂದೆ ಸುಮಾರು ಐದು ದಶಕಗಳ ಕಲಾ ಅವರು ಕಿರುತೆರೆ ಮತ್ತು ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದರು. ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಸರಿಗಮ ವಿಜಿ (76 ವರ್ಷ) ಇಂದು (ಜನವರಿ 15) ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರಿನ HAL ಬಡಾವಣೆಯಲ್ಲಿ ಹುಟ್ಟಿ ಬೆಳೆದ ಅವರ ಜನ್ಮನಾಮ ವಿಜಯಕುಮಾರ್.‌ ಆರಂಭದಲ್ಲಿ ಎನ್‌ಜಿಇಎಫ್‌ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದರು. ರಂಗಭೂಮಿ ಮೂಲಕ ನಟನಾ ಜಗತ್ತಿಗೆ ಕಾಲಿರಿಸಿದ ಅವರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಬೆಳುವಲದ ಮಡಿಲಲ್ಲಿ, ಕಪ್ಪು ಕೊಳ, ಪ್ರತಾಪ್‌, ಮನಮೆಚ್ಚಿದ ಸೊಸೆ, ಕೆಂಪಯ್ಯ IPS, ಜಗತ್‌ ಕಿಲಾಡಿ, ಯಮಲೋಕದಲ್ಲಿ ವೀರಪ್ಪನ್‌, ದುರ್ಗಿ.. ಹೆಸರಿಸಬಹುದಾದ ಅವರ ಕೆಲವು ಪ್ರಮುಖ ಸಿನಿಮಾಗಳು. ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದು, ನಟ ಟೈಗರ್‌ ಪ್ರಭಾಕರ್‌ ಅವರಿಗೆ ಆಪ್ತರಾಗಿದ್ದರು. ಪ್ರಭಾಕರ್‌ ಕೊನೆಯ ದಿನಗಳಲ್ಲಿ ನಟಿಸಿ, ನಿರ್ದೇಶಿಸಿದ ಸಿನಿಮಾಗಳಲ್ಲಿ ವಿಜಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆ ಇರುತ್ತಿತ್ತು. ಹತ್ತಾರು ಟೀವಿ ಧಾರಾವಾಹಿಗಳ 2400ಕ್ಕೂ ಹೆಚ್ಚು ಸಂಚಿಕೆಗಳಲ್ಲಿ ನಟಿಸಿದ್ದಾರೆ. ZEE ಕನ್ನಡ ವಾಹಿನಿಯ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು. ತೆಲುಗು ವಿಜ್ಞಾನ ಸಮಿತಿ ನೀಡುವ ‘ಶ್ರೀಕೃಷ್ಣದೇವರಾಯ ಪುರಸ್ಕಾರ’, ರಾಜ್ಯೋತ್ಸವ ಗೌರವ ಸೇರಿದಂತೆ ವಿಜಿ ಅವರಿಗೆ ಹಲವು ಪ್ರಶಸ್ತಿ – ಪುರಸ್ಕಾರಗಳು ಸಂದಿವೆ.

LEAVE A REPLY

Connect with

Please enter your comment!
Please enter your name here