ಗಾಂಧೀಜಿ ಪೂರ್ತಿ ಹೆಸರೇನು ಅಂತ ಕೇಳಿದ್ರೆ ಮಹಾತ್ಮಾ ಗಾಂಧಿ ಎನಿಸುವಷ್ಟರ ಮಟ್ಟಿಗಿನ ವ್ಯಕ್ತಿತ್ವ ಗಾಂಧಿ ಅವರದ್ದು. ಅಂಥ ಮೇರು ವ್ಯಕ್ತಿತ್ವವನ್ನಿಟ್ಟುಕೊಂಡು ಬೆಳ್ಳಿತೆರೆಯ ಮೇಲೆ ಹಲವಾರು ಸಿನಿಮಾಗಳು ಬಂದಿವೆ. ಈ ಪಟ್ಟಿಗೆ ಹೊಸ ಸೇರ್ಪಡೆ ಪಿ.ಶೇಷಾದ್ರಿ ನಿರ್ದೇಶನದ ‘ಮೋಹನದಾಸ’

ಅಕ್ಟೋಬರ್ 2ರ ಗಾಂಧಿ ಹುಟ್ಟುಹಬ್ಬದ ಪ್ರಯುಕ್ತ ಈ ಚಿತ್ರ ಒಂದು ದಿನ ಮುಂಚೆ ಬಿಡುಗಡೆ ಆಗಿದೆ. ಸಮರ್ಥ, ಶೃತಿ, ದತ್ತಣ್ಣ, ಪರಮಸ್ವಾಮಿ, ಅನಂತ ಮಹದೇವನ್ ಮುಂತಾದವರ ತಾರಾಬಳಗ ಹೊಂದಿರುವ ಈ ಚಿತ್ರದಲ್ಲಿ ಹೆಸರಾಂತ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಜಿ.ಎಸ್. ಭಾಸ್ಕರ್ ಅವರಂಥ ಲೆಜೆಂಡರಿ ಛಾಯಾಗ್ರಾಹಕರು ಶೇಷಾದ್ರಿ ಅವರ ಕನಸಿಗೆ ಕ್ಯಾಮೆರಾ ಹಿಡಿದ್ದಾರೆ. ಇನ್ನು ಪ್ರವೀಣ್ ಗೋಡ್ಖಿಂಡಿ ಅವರ ಸಂಗೀತ ಮತ್ತು ಕೆಂಪರಾಜ್ ಅವರ ಸಂಕಲನ ಈ ಚಿತ್ರದ್ದು.

ಸ್ವತಃ 9 ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡು ಕಲಾತ್ಮಕ ಚಿತ್ರಗಳ ವಿಷಯದಲ್ಲಿ ಕ್ಲೌಡ್ ನೈನ್‌ನಲ್ಲಿ ತೇಲಾಡುತ್ತಿರುವ ನಿರ್ದೇಶಕ ಪಿ.ಶೇಷಾದ್ರಿ ಈ ಚಿತ್ರದ ಮೂಲಕವೂ ಒಂದು ವಿಭಿನ್ನ ಅನುಭವ ನೀಡಲು ಸಿದ್ಧರಾಗಿದ್ದಾರೆ. “ನಾನು ಇದುವರೆಗೂ ದತ್ತಣ್ಣ ಅವರನ್ನು ಬಿಟ್ಟು ಒಂದು ಚಿತ್ರವನ್ನೂ ಮಾಡಿಲ್ಲ” ಎನ್ನುವ ಶೇಷಾದ್ರಿ ಅವರ ಈ ಚಿತ್ರದಲ್ಲೂ ಹಿರಿಯರಾದ ದತ್ತಣ್ಣ ಅವರ ಅಭಿನಯದ ಝಲಕ್ ಕಾಣಿಸಲಿದೆ. ಬ್ರಿಟಿಷರ ವಿರುದ್ಧದ ಗಾಂಧೀಜಿ ಅವರ ಹೋರಾಟದ ಬಗ್ಗೆ ಈಗಾಗಲೇ ಅನೇಕ ಸಿನಿಮಾಗಳು ಬಂದಿವೆ. ಗಾಂಧಿ ತತ್ವಗಳನ್ನು ಹೇಳುವ ಗಿರೀಶ್ ಕಾಸರವಳ್ಳಿ ಅವರ ‘ಕೂರ್ಮಾವತಾರ’ ಚಿತ್ರವನ್ನೂ ನಾವು ನೋಡಿದ್ದೇವೆ. ಹಾಗಾದ್ರೆ ಈ ಚಿತ್ರದಲ್ಲಿ ಗಾಂಧಿ ಅವರ ಯಾವ ಮುಖ ಅನಾವರಣಗೊಳ್ಳಲಿದೆ ಎಂಬ ಕುತೂಹಲ ಎಲ್ಲರಿಗೂ ಇದೆ. ಅದಕ್ಕೆ ಉತ್ತರವನ್ನು ಶೇಷಾದ್ರಿ ಅವರು ಈಗಾಗಲೇ ಹೇಳಿದ್ದಾರೆ.

‘ಮೋಹನದಾಸ’ ಚಿತ್ರ ಗಾಂಧೀಜಿ ಅವರ ಬಾಲ್ಯದ ಮೇಲೆ ಕೇಂದ್ರೀಕೃತವಾಗಿರುವ ಚಿತ್ರವಂತೆ. ಹಾಗಾಗಿ ಇಲ್ಲಿ ನಾವೆಲ್ಲ ನೋಡಿರುವ ಮಹಾತ್ಮಾ ಗಾಂಧೀಜಿಗಿಂತ ಅವರು ಮಹಾತ್ಮ ಆಗುವ ಮುನ್ನದ ಕಥೆ ಈ ಚಿತ್ರದ್ದು. ಹಾಗಾಗಿ ಬಾಲ ಗಾಂಧೀಜಿಯ ಅಪರೂಪದ ವಿವರಗಳನ್ನು ನಾವು ಈ ಚಿತ್ರದಲ್ಲಿ ನೋಡಬಹುದು ಎನ್ನುವುದು ಚಿತ್ರದ ನಿರ್ದೇಶಕರ ಅಭಿಪ್ರಾಯ. ಗಾಂಧೀಜಿ ಇಲ್ಲವಾದರೂ ಅವರ ಬಗ್ಗೆ ಮಾಡುವ ಸಿನಿಮಾಗಳಿಗೆ ಮಾತ್ರ ಕೊನೆ ಇಲ್ಲ ಅನ್ನೋದಕ್ಕೆ ಇನ್ನೊಂದು ಉದಾಹರಣೆ ಶೇಷಾದ್ರಿ ಅವರ ‘ಮೋಹನದಾಸ’.

LEAVE A REPLY

Connect with

Please enter your comment!
Please enter your name here