ಗಂಡು, ಹೆಣ್ಣಾಗುವ ಬಯಕೆಯ ಹಲವು ಚಿತ್ರಗಳನ್ನು ನಾವೀಗಾಗಲೇ ನೋಡಿದ್ದೇವೆ. ಇದು ಎಲ್ಲಮ್ಮನ ಆಚರಣೆಯ ಹಿನ್ನೆಲೆಯಲ್ಲಿ ಭಿನ್ನವಾಗಿ ರೂಪಿತವಾದ ಚಿತ್ರ. ‘ಪರಜ್ಯಾ’ ಚಿತ್ರದ ಮೂಲಕ ಮಹದೇವ ಹಡಪದ‌ ನಾಟಕ ಮಾತ್ರವಲ್ಲ, ಸಿನಿಮಾ‌ ಕೂಡಾ ಮಾಡಬಲ್ಲೆ ಎನ್ನುವುದನ್ನು ತೋರಿಸಿದ್ದಾರೆ.

ಈ ಬಾರಿಯ ಚಲನಚಿತ್ರೋತ್ಸದಿಂದ ಕನ್ನಡದಲ್ಲಿ ಮತ್ತೊಬ್ಬ ಹೊಸ ನಿರ್ದೇಶಕರ ಉದಯವಾಯಿತು. ‘ಪರಜ್ಯಾ’ ಚಿತ್ರದ ಮೂಲಕ ಮಹದೇವ ಹಡಪದ‌ ನಾಟಕ ಮಾತ್ರವಲ್ಲ, ಸಿನಿಮಾ‌ ಕೂಡಾ ಮಾಡಬಲ್ಲೆ ಎನ್ನುವುದನ್ನು ತೋರಿಸಿದ್ದಾರೆ. ‘ಪರಜ್ಯಾ’ದಲ್ಲಿ ಮೆಚ್ಚಿಕೊಳ್ಳುವ ಹಲವು ಅಂಶಗಳಿವೆ. ಮೊದಲನೆಯದು ಬೆಳಗಾವಿಯ ಪರಿಸರ ಮತ್ತು ಮಾತು. ಅಲ್ಲಿ ರೇಣುಕೆಯನ್ನು ಜೋಗತಿಯರು ಆಚರಿಸುವ ವಿಧಾನವೇ ಬೇರೆ. ಸಿನಿಮಾದಲ್ಲಿ ಆಚರಣೆಗಳನ್ನು ಅಗತ್ಯಕ್ಕೆ ತಕ್ಕಂತೆ ಅಳವಡಿಸಿಕೊಂಡು, ಭಾಷೆಯನ್ನು ಪೂರಕವಾಗಿ ಬಳಸಲಾಗಿದೆ. ಚಿತ್ರದಲ್ಲಿ ಎಲ್ಲರ ನಟನೆಗೂ ಫುಲ್ ಮಾರ್ಕ್ಸ್.

ಮಹದೇವ ಮತ್ತು ಗಾಯತ್ರಿ ಹೆಗ್ಗೋಡು ಕಿಲಾಡಿ ಜೋಡಿ. ಸಿನಿಮಾದಲ್ಲೂ ರಂಗಭೂಮಿಯ ಅನುಭವವನ್ನು ಬಸಿಯುತ್ತಾರೆ. ಪರಜ್ಯಾ ಪಾತ್ರ ಮಾಡಿದ ಹುಡುಗ ಪಾತ್ರಕ್ಕೆ ಅಚ್ಚು ಹಾಕಿದಂತಿದ್ದಾನೆ. ಜೋಗತಿಯರಿಂದ ನಟನೆ ಹೊರಡಿಸುವುದು ಸುಲಭದ ಮಾತಲ್ಲ. ಇಲ್ಲಿ ಮಹದೇವ ಗೆದ್ದಿದ್ದಾರೆ. ಇದು ಎರಡನೆಯ ಮುಖ್ಯ ಅಂಶ. ಮೂರನೇಯದು ಕತೆ. ಗಂಡು, ಹೆಣ್ಣಾಗುವ ಬಯಕೆಯ ಹಲವು ಚಿತ್ರಗಳನ್ನು ನಾವೀಗಾಗಲೇ ನೋಡಿದ್ದೇವೆ. ಇದು ಎಲ್ಲಮ್ಮನ ಆಚರಣೆಯ ಹಿನ್ನೆಲೆಯಲ್ಲಿ ಭಿನ್ನವಾಗಿ ರೂಪಿತವಾದ ಚಿತ್ರ. ಮೊದಲ ಸಿನಿಮಾದಲ್ಲಿ ತಪ್ಪಾಗುವುದು ಸಹಜ.‌ ಅದಕ್ಕೆ ವಿಶೇಷ ಗಮನ ಕೊಡದೆ, ‘ಪರಜ್ಯಾ’ದಲ್ಲಿ ಬಹಳಷ್ಟನ್ನು ಸಾಧಿಸಿದ ಮಹದೇವ ಹಡಪದ ತಪ್ಪುಗಳನ್ನು ಕಂಡುಕೊಂಡು ಇನ್ನೂ ಒಳ್ಳೆಯ ಚಿತ್ರಗಳನ್ನು ಕೊಡಲಿ ಎಂದು ಹಾರೈಸೋಣ.

ವಿಯಟ್ ಎಂಡ್ ನ್ಯಾಮ್ | ಈ ಚಿತ್ರದ ಪ್ರದರ್ಶನಕ್ಕೆ ವಿಯಟ್ನಾಂನಲ್ಲಿ ಈಗಲೂ ನಿಷೇಧವಿದೆ. ದೀರ್ಘ ಕಾಲದ ಯುದ್ಧದ ಬೆನ್ನಟ್ಟುವ ದಾರುಣ ನೆನಪುಗಳು, ಕಲ್ಲಿದ್ದಲ ಗಣಿಗಳಲ್ಲಿ ದುಡಿದು ಬದುಕು ಸವೆಯುವ ಕಷ್ಟ, ಊರು ಬಿಟ್ಟು ಬೇರೆಡೆ ಬದುಕು ಕಟ್ಟಿಕೊಳ್ಳುವ ಹಪಹಪಿ ಇವೆಲ್ಲವೂ ಸಹಜವಾಗಿ ಚಿತ್ರಿತವಾಗಿರುದರಿಂದ ಪ್ರಭುತ್ವ ಚಿತ್ರವನ್ನು ಒಪ್ಪಿಕೊಂಡಿಲ್ಲ. ಹಲವು ಎಳೆಗಳನ್ನು ನೇಯ್ದ, ಚಿತ್ರದ ನಿಧಾನ ಹೆಣಿಗೆಯನ್ನು ತೆಕ್ಕೆಗೆ ತೆಗೆದುಕೊಳ್ಳಲು ಸಹನೆ ಅವಶ್ಯ.‌ ಅಮೇರಿಕಾದ ವರ್ಲ್ಡ್ ಟ್ರೇಡ್ ಸೆಂಟರ್ ದಾಳಿಯ ಕಾಲವನ್ನು ನೆನಪಿಸುವ ಸಂಭಾಷಣೆ – ‘ಆ ಕಟ್ಟಡದ ಫೌಂಡೇಶನ್ ಸಾವಿರ ಮೀಟರ್ ಆದರೆ ನಾವು ಎಂಟು ನೂರು ಮೀಟರ್ ಆಳದ ಗಣಿಯಲ್ಲಿದ್ದೇವೆ’.‌ ಇನ್ನೊಂದು ಮನಕಲಕುವ ಮಾತು – ‘ಹೆಣಗಳ ನಡುವಿನ ಕಪ್ಪೆಗಳೂ ಹೆಗ್ಗಣದಂತಾಗಿವೆ’. ಗೆಲ್ಲಲಿ, ಸೋಲಲಿ ಬದುಕನ್ನು ಸರ್ವನಾಶ ಮಾಡುವ ಯುದ್ಧದ ಪರಿಣಾಮಗಳನ್ನು ಇಬ್ಬರು ಗೆಳೆಯರ ಮೂಲಕ ಮನಕಲಕುವಂತೆ ಚಿತ್ರ ಹೇಳುತ್ತದೆ.

ಡ್ರೌನಿಂಗ್ ಡ್ರೈ | ಲಿತುವೇನಿಯಾದ ‘ಡ್ರೌನಿಂಗ್ ಡ್ರೈ’ ಅನನುಕ್ರಮಣಿಕೆ ( non liniar) ವಿಧಾನದ ಕಟ್ಟುವಿಕೆಗೆ ಉತ್ತಮ ಉದಾಹರಣೆ. ಸಹೋದರಿಯರು ಮತ್ತವರ ಗಂಡಂದಿರ ಮೇಲಾಟದಲ್ಲಿ ಭಾವನೆಗಳ ಶೋಧನೆ ಇದೆ. ಗಂಡಸರಲ್ಲಿ ಮೇಲುಗೈ ಹೊಂದುವ ಬಯಕೆ‌ ಇದ್ದರೆ ಹೆಣ್ಣುಮಕ್ಕಳ‌ ಕಾಳಜಿ ಬೇರೆಯೇ‌ ಬಗೆಯದು.‌ ಇದನ್ನು ನಿರ್ದೇಶಕ‌ ಮತ್ತೊಮ್ಮೆ ತೋರಿಸುವ ಶಾಟ್‌ನಲ್ಲಿ ಸ್ಪಷ್ಟಪಡಿಸುತ್ತಾನೆ. ನಿರ್ದೇಶಕನ ಕ್ರಿಯೆಟಿವಿಟಿ ಚಿತ್ರದಲ್ಲಿ‌ ಎದ್ದು ಕಾಣುವ ಅಂಶ.

LEAVE A REPLY

Connect with

Please enter your comment!
Please enter your name here