‘ಅಡವಿ’ ಕನ್ನಡ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ನೀಡಲು ಅಧಿಕಾರಿ ಪ್ರಶಾಂತ್ ಕುಮಾರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಚಿತ್ರದ ನಿರ್ಮಾಪಕರ ದೂರಿನನ್ವಯ ಸಿಬಿಐ ಅಧಿಕಾರಿಗಳು ಲಂಚ ಪಡೆಯುವ ಸಂದರ್ಭದಲ್ಲಿ ದಾಳಿ ನಡೆಸಿದ್ದಾರೆ. ಪ್ರಶಾಂತ್ ಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸೆನ್ಸಾರ್ ಸರ್ಟಿಫಿಕೇಟ್ ನೀಡಲು ಚಿತ್ರತಂಡದಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಧಿಕಾರಿ ಪ್ರಶಾಂತ್ ಕುಮಾರ್ ಅವರನ್ನು ಸಿಬಿಐ ವಶಕ್ಕೆ ಪಡೆದಿದೆ. ಪ್ರಶಾಂತ್ ಕುಮಾರ್ ಅವರು ‘ಅಡವಿ’ ಕನ್ನಡ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ನೀಡಲು ಹದಿನೈದು ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ನವೆಂಬರ್ 21ರಂದು ಮಲ್ಲೇಶ್ವರಂನ ಎಸ್‌ಆರ್‌ವಿ ಸ್ಟುಡಿಯೋದಲ್ಲಿ ‘ಅಡವಿ’ ಕನ್ನಡ ಸಿನಿಮಾದ ಪ್ರದರ್ಶನ ಆಯೋಜಿಸಲಾಗಿತ್ತು. ಚಿತ್ರ ವೀಕ್ಷಿಸಿದ್ದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಧಿಕಾರಿ ಪ್ರಶಾಂತ್ ಕುಮಾರ್ ಕ್ಷುಲ್ಲಕ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸರ್ಟಿಫಿಕೇಟ್ ತಡೆಹಿಡಿದಿದ್ದರು.
ಸೆನ್ಸಾರ್ ಸರ್ಟಿಫಿಕೇಟ್ ನೀಡಲು ಹದಿನೈದು ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು. ವಾರದಿಂದ ಸೆನ್ಸಾರ್ ಸರ್ಟಿಫಿಕೇಟ್‌ಗೆ ಅಲೆಯುತ್ತಿದ್ದ ನಿರ್ಮಾಪಕ ಟೈಗರ್ ನಾಗ್ ಸಿಬಿಐಗೆ ದೂರು ನೀಡಿದ್ದರು. ಟೈಗರ್ ನಾಗ್ ಕೊಟ್ಟ ದೂರಿನನ್ವಯ ಸಿಬಿಐ ಅಧಿಕಾರಿಗಳು ನವೆಂಬರ್ 28ರ ಸಂಜೆ ಆರು ಗಂಟೆಗೆ ಅಧಿಕಾರಿ ಲಂಚ ಪಡೆಯುವ ಸಂದರ್ಭದಲ್ಲೇ ದಾಳಿ ಮಾಡಿದ್ದಾರೆ. ಸೆನ್ಸಾರ್ ಮಂಡಳಿ ಅಧಿಕಾರಿ ಪ್ರಶಾಂತ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ‘ನಮ್ಮಂತೆ ಹಲವರಿಗೆ ಅಧಿಕಾರಿಗಳು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಹೊಸ ನಿರ್ಮಾಪಕರಿಗೆ ಇದರಿಂದ ತೀವ್ರ ಸಂಕಷ್ಟವಾಗಿದೆ. ಸಿನಿಮಾರಂಗಕ್ಕೆ ಸಂಬಂಧಿಸಿದ ಪ್ರಮುಖರು ಈ ಬಗ್ಗೆ ದನಿ ಎತ್ತಬೇಕು’ ಎಂದಿದ್ದಾರೆ ಚಿತ್ರನಿರ್ಮಾಪಕ ಟೈಗರ್ ನಾಗ್.