ಮಿಥುನ್ ಪ್ರಕಟಿಸುವ ರೂಢಿಗೆ ಮೀರಿದ ಭಾವಗಳು, ಅವುಗಳು ಇತರ ಪಾತ್ರಗಳ ಭಾವಗಳೊಂದಿಗೆ ನಡೆಸುವ ಅನುಬಂಧ, ಸಂಘರ್ಷಗಳ ಮೂಲಕ, ಮಿಥ್ಯನಲ್ಲಿ ಪ್ರಕಟವಾಗುವ ‘ಅನಾಥ’ ಪ್ರಜ್ಞೆ, ‘ಆಶ್ರಯ’ವೆಂಬ ಹೊರೆಯನ್ನು ಸಹಿಸಲೂ ಆಗದ, ನಿರಾಕರಿಸಲೂ ಆಗದ ವಿಷಾದಮಯ ಇರುವಿಕೆಯ ಸ್ಥಿತಿಗಳನ್ನು ಸಿನಿಮಾವು ನೋಡುಗರಿಗೆ ಸಂವಹಿಸಲು ದುಡಿಯುತ್ತದೆ.

2023ರಲ್ಲಿ ಪೂರ್ಣಗೊಂಡು, ಹಲವಾರು ಅಂತರಾಷ್ಟ್ರೀಯ ಸಿನಿಮಾ ಉತ್ಸವಗಳಲ್ಲಿ ಪ್ರದರ್ಶಿತವಾಗಿ ಮನ್ನಣೆ ಪಡೆದಿದ್ದರೂ, ‘ಮಿಥ್ಯ’ ಕನ್ನಡ ಸಿನಿಮಾ, ಎರಡು ವರ್ಷಗಳ ಒದ್ದಾಟಗಳ ನಂತರ ಚಿತ್ರಮಂದಿರದಲ್ಲಿ ಈಗ ಬಿಡುಗಡೆಗೊಂಡಿದೆ. ಸದ್ಯದ ಸನ್ನಿವೇಶದಲ್ಲಿ, ಚಿತ್ರಮಂದಿರಗಳಲ್ಲಿ ಅದರ ಪ್ರದರ್ಶನ ಬಾಳಿಕೆ ವಾರ, ಹದಿನೈದು ದಿನಗಳು ಇರಬಹುದು. ಆದರೂ, ಸಾರ್ವಜನಿಕ ಪ್ರದರ್ಶನಕ್ಕೆ ಮುಕ್ತವಾದ ನಂತರ ಹಲವು ನಮೂನೆಯ ಪ್ರದರ್ಶನ ವೇದಿಕೆಗಳ ಮೂಲಕ ಸಿನಿಮಾವು ನೋಡುಗರಿಗೆ ಲಭ್ಯವಾಗಬಹದು – ವಿಸ್ತಾರವಾಗಿ ಲಭ್ಯವಾಗಲಿ ಎನ್ನುವುದು ನನ್ನ ಹಾರೈಕೆ. ಸುಮಂತ್‌ ಭಟ್‌ ನಿರ್ದೇಶನದ ಈ ಚಿತ್ರಕ್ಕೆ ಉದಿತ್‌ ಖುರಾನ ಛಾಯಾಗ್ರಹಣ, ಭುವನೇಶ್‌ ಮಣಿವಣ್ಣನ್‌ ಸಂಕಲವಿದೆ. ನಟ ರಕ್ಷಿತ್‌ ಶೆಟ್ಟಿ ಅವರ ಪರಂವಃ ಸ್ಟುಡಿಯೋ ನಿರ್ಮಾಣದ ಚಿತ್ರವಿದು.

ಕಲಾ ಮಾಧ್ಯಮಗಳಲ್ಲಿ ಕಥನ ನಿರೂಪಣೆಯ ಮೂಲಕ ಮಾತ್ರವೇ ಜೀವನ ದರ್ಶನ ಹೊಳೆಯಿಸುವ ಕಲಾ ವ್ಯಾಕರಣ ಹೊಂದಿರುವುದು ‘ಕಥನ ಸಾಹಿತ್ಯ’ (ಪುರಾಣ, ಕಥನ ಕಾವ್ಯ, ಆಧುನಿಕ ಸಣ್ಣ ಕತೆ, ಕಾದಂಬರಿ, ಲಲಿತ ಪ್ರಬಂಧಗಳು). ಶುದ್ದ ಕಾವ್ಯ, ನಾಟಕ, ಚಿತ್ರಕಲೆ, ಶಿಲ್ಪಕಲೆ, ಸಂಗೀತ, ನೃತ್ಯ, ಚಲನಚಿತ್ರಗಳಂತಹ ಕಲಾ ಮಾಧ್ಯಮಗಳಲ್ಲಿ ಕಥನವು ಕಾಲ, ದೇಶಗಳ ಭಾವ ಸನ್ನಿವೇಶ ಸೂಚಿಸಲು ಒಂದು ನೆಪ ಅಥವ ಎಳೆ ಮಾತ್ರವೇ ಆಗಿರುತ್ತದೆ.

ಚಲನಚಿತ್ರವು ದೃಷ್ಯ ಕಲೆಗಳಲ್ಲಿ ಪ್ರಭಾವಶಾಲಿಯಾದ ದೃಷ್ಯ ಕೇಂದ್ರಿತ ಕಲಾ ಮಾಧ್ಯಮವಾಗಿದ್ದು, ಅಲ್ಲಿ ಭಾವ ಸಂವಹನೆ ಸಾಧ್ಯವಾಗಬೇಕಾದ್ದು ದೃಷ್ಯ ಕಟ್ಟುಗಳ ರಚನೆ ಹಾಗು ಸೃಜನಶೀಲ ಜೋಡಣೆಗಳ ಮೂಲಕ ಮಾತ್ರವೇ. ಮನುಷ್ಯರಲ್ಲಿ ಪ್ರಕಟವಾಗುವ ಭಾವ ವೈವಿಧ್ಯಗಳನ್ನು ಪ್ರತಿನಿಧೀಕರಿಸಲು ಪಾತ್ರ ರಚನೆ; ಕಾಲ ದೇಶ ಸನ್ನಿವೇಶಗಳಲ್ಲಿ ಉಂಟಾಗುವ ಭಾವ ಸಂಘರ್ಷಗಳನ್ನು ಪ್ರಕಟಿಸಲು ಬೇಕಾದಷ್ಟು ಕಥನದ ಎಳೆ, ಪಾತ್ರ ಸಂಭಾಷಣೆ – ಇಷ್ಟು ಕಥನದ ಎಳೆಗಳನ್ನು ಸಂವಹನದ ನೆಪಕ್ಕಾಗಿ ಮಾತ್ರವೇ ಉತ್ತಮ ಸಿನಿಮಾಗಳು ಬಳಸಿಕೊಳ್ಳುವುದು. ಉಳಿದಂತಹ ಭಾವ ಸಂವಹನೆ ಎಲ್ಲವೂ ದೃಷ್ಯ ಕಟ್ಟುಗಳು ಹಾಗು ಅವುಗಳ ಜೋಡಣೆಯ ಮೂಲಕ ಮಾತ್ರವೇ ಸಾಧ್ಯವಾಗಿಸಬೇಕು.

‘ಮಿಥ್ಯ’ದಲ್ಲಿ ಕೇಂದ್ರ ಪಾತ್ರವಾಗಿ ಮಿಥುನ್ ಎಂಬ ಹದಿಹರೆಯದ ಹುಡುಗನಿದ್ದಾನೆ. ಸಂಸಾರ, ಜೀವನ, ತಿಕ್ಕಾಟಗಳ ಕಾರಣವಾಗಿ ಅವನ ತಂದೆ ತಾಯಿ ಮುಂಬೈಯಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ‘ಅನಾಥ’ನಾದ ಮಿಥ್ಯನನ್ನು ತಾಯಿಯ ಕಡೆಯ ಚಿಕ್ಕಮ್ಮ ಚಿಕ್ಕಪ್ಪ ‘ಆಶ್ರಯ’ ನೀಡಲು ತಾವು ವಾಸಿಸುವ ಉಡುಪಿಗೆ ಕರೆದುಕೊಂಡು ಬಂದಿದ್ದಾರೆ. ಹೀಗಿರುವ ಮಿಥುನ್ ಪ್ರಕಟಿಸುವ ರೂಢಿಗೆ ಮೀರಿದ ಭಾವಗಳು, ಅವುಗಳು ಇತರ ಪಾತ್ರಗಳ ಭಾವಗಳೊಂದಿಗೆ ನಡೆಸುವ ಅನುಬಂಧ, ಸಂಘರ್ಷಗಳ ಮೂಲಕ, ಮಿಥ್ಯನಲ್ಲಿ ಪ್ರಕಟವಾಗುವ ‘ಅನಾಥ’ ಪ್ರಜ್ಞೆ, ‘ಆಶ್ರಯ’ವೆಂಬ ಹೊರೆಯನ್ನು ಸಹಿಸಲೂ ಆಗದ, ನಿರಾಕರಿಸಲೂ ಆಗದ ವಿಷಾದಮಯ ಇರುವಿಕೆಯ ಸ್ಥಿತಿಗಳನ್ನು ಸಿನಿಮಾವು ನೋಡುಗರಿಗೆ ಸಂವಹಿಸಲು ದುಡಿಯುತ್ತದೆ.

ಈ ‘ಅನಾಥ’ತೆ, ‘ಆಶ್ರಯ’ಗಳೆಂಬ ಸಂಕೀರ್ಣ ಭಾವಗಳು, ದುರಂತ ವಿದ್ಯಮಾನದ ಕಾರಣವಾಗಿ ಮಿಥ್ಯನಲ್ಲಿ ಮಾತ್ರವೇ ಉಂಟಾಗಿರುವ ಭಾವವೆ? ಅಥವಾ ಅನಿವಾರ್ಯವಾಗಿ ಆತ ಒಡನಾಡಿದ ಮತ್ತು ಇಂದು ಒಡನಾಡಲೇ ಬೇಕಾಗಿರುವ ಜನರ ಭಾವ ಸಂಘರ್ಷದಲ್ಲಿ, ಎಲ್ಲರಲ್ಲೂ ಭಿನ್ನ ಬಗೆಗಳಲ್ಲಿ ಪ್ರಕಟವಾಗುವ ಭಾವವೇ? ಈ ಸ್ಥಿತಿ ಮಿಥ್ಯನ ತಂದೆ ತಾಯಿಯರ ದುರಂತ ಅಂತ್ಯ ಒಂದು ರೂಪಕ ಮಾತ್ರವಾಗಿದ್ದು, ಅದು ಸಾಮಾಜಿಕ ಬದುಕಿನೊಳಗಿಂದಲೇ ಕಡೆದುಕೊಂಡು ಬರುತ್ತಿರುವುದೇ? ಎಂಬ ಜೀವ ತತ್ವ ವಿವೇಚನೆಯನ್ನು ಹುಟ್ಟಿಸುತ್ತದೆ. ಮತ್ತೂ ಈ ಎಲ್ಲವನ್ನೂ, ‘ಕಥನ ನಿರೂಪಣೆ’ಯ ಮೂಲಕವಲ್ಲದೆ, ದೃಷ್ಯ ಕಟ್ಟುಗಳ ರಚನೆ ಹಾಗು ಜೋಡಣೆಗಳ ಮೂಲಕ ಚೋಧಿಸುತ್ತದೆ.

ಈ ಬಗೆಯ ರಚನೆಯು ಚಲನಚಿತ್ರ ಕಲೆಯ ಘನತೆಗೆ ಬಹಳ ಮುಖ್ಯ (ಯಾಕೆ ಎಂಬುದನ್ನು ಅನುಬಂಧದಲ್ಲಿ ವಿವರಿಸಿರುವೆ). ಮನುಷ್ಯರ ಬದುಕಿನ ಇಂತಹ ಸ್ಥಿತಿಯ ಕುರಿತು ಹೊಸ ಹೊಳಹುಗಳನ್ನು ಕಾಣಿಸುವಲ್ಲಿ ಸಿನಿಮಾ ಕಲೆಗೆ ತನ್ನದೇ ವಿಶಿಷ್ಟತೆ ಇದೆ; ಚಲನಚಿತ್ರ ಕಲಾ ರಚನೆಯ ಅನನ್ಯ ಉದ್ದೇಶಗಳ ಅರಿವು ಇರುವ ಕಲಾ ಕೃತಿಗಳಲ್ಲಿ ಮಾತ್ರವೇ ಇಂತಹ ಹೊಳಹುಗಳು ನಮ್ಮ ಅನುಭವಕ್ಕೆ ಬರುತ್ತವೆ. ಇದೆ ಕಥನಾ ಎಳೆಯನ್ನುಳ್ಳ, ಸ್ಪೇನಿನ ಪ್ರತಿಭವಂತ ನಿರ್ದೇಶಕಿ ಕಾರ್ಲ ಸಿಮೋನೆ ಮಾಡಿರುವ ಸಮ್ಮರ್ 1993 (2017) ಎಂಬ ಅದ್ಭುತ ಸಿನಿಮಾವನ್ನು ಮಿಥ್ಯ ಅನಾಯಾಸವಾಗಿ ನೆನಪಿಸುತ್ತದೆ. ಬಾಲ್ಯದಿಂದ ಹರೆಯಕ್ಕೆ ಬೆಳೆಯುತ್ತಿರುವ ಹುಡುಗಿ ಹುಡುಗರ ಬದುಕಿನ ಗತಿಯನ್ನು ವಸ್ತುವಾಗಿ ಉಳ್ಳ ಸಿನೆಮಾಗಳನ್ನು ‘ಕಮಿಂಗ್ ಆಫ್ ಏಜ್’ ಎಂಬ ಸಿನೆಮಾ ಪ್ರಕಾರದ ಅಡಿ ಸೇರಿಸುತ್ತಾರೆ. ಆದರೆ, ಈ ಪ್ರಕಾರ ಪೇರಿಸುವಿಕೆಯನ್ನು ಮೀರಿ, ಮನುಷ್ಯರ ಬದುಕಿನ ತಲ್ಲಣಗಳ ಸ್ಥಿತಿಯನ್ನು ಕಾಣಿಸುವ ಘನತೆ ಸಿನೆಮಾ ಕಲೆಗೆ ಇದೆ ಎನ್ನುವುದನ್ನು ಸಮ್ಮರ್ 1993 ಹ್ಯಾಗೋ ಹಾಗೆ ಮಿಥ್ಯ ಕೂಡ ಸಾಬೀತು ಮಾಡುತ್ತದೆ. ಅದು ಹೆಚ್ಚಳಿಕೆ.

ಅನುಬಂಧ | ಸಂತೋಷ, ವಿಷಾದ, ಸಿಟ್ಟು…ಮುಂತಾದ ಭಾವನೆಗಳು ಮನುಷ್ಯರಲ್ಲಿ ಹುಟ್ಟುವುದಕ್ಕೆ ಸಾವಿರಾರು ಕಾರ್ಯಕಾರಣಗಳು ಇರುತ್ತವೆ. ಅಂತಹುಗಳಲ್ಲಿ ಕೆಲವು ನಮ್ಕ ನಿತ್ಯ ಜೀವನದ ಕಾರ್ಯಕಾರಣಗಳ ರೂಢಿಯಲ್ಲಿ ಎಲ್ಲರಿಗೂ ಪರಿಚಿತ ಆಗಿರುತ್ತವೆ. ನಾವು ಯಾಕೆ ಆ ಭಾವನೆಗಳನ್ನು ಪ್ರಕಟಿಸಿದೆವು ಎಂಬುದು ನಮ್ಮ ಸುತ್ತಲಿನವರಿಗೆ ಅರ್ಥವಾಗೇ ಬಿಟ್ಟಿರುತ್ತದೆ. ಅಷ್ಟಾದರೆ ಭಾವ ಸಂವಹನೆಯ ಉದ್ದೇಶ ಈಡೇರಿಬಿಡುತ್ತದೆ. ಅದಕ್ಕೆ ಮತ್ತ್ಯಾವ ಸಂವಹನಾ ಮಾಧ್ಯಮದ ಅವಶ್ಯಕತೆ ಇರುವುದಿಲ್ಲ. ಆದರೆ ಇವುಗಳನ್ನು ಮೀರಿದ ಸಾವಿರಾರು ಸನ್ನಿವೇಶಗಳು ಇವೆ. ನಾವು ಯಾಕೆ ಮನುಷ್ಯ ಸಹಜ ಭಾವಗಳನ್ನು ಪ್ರಕಟಿಸುತ್ತಿದ್ದೇವೆ ಎಂದು ಸುತ್ತಲಿನವರಿಗೆ ಅರ್ಥವೇ ಆಗುವುದಿಲ್ಲ.

‘ಸುಮ್ಮ್ ಸುಮ್ಮ್ನೇ ಸಿಟ್ಟಾಗುವುದಕ್ಕೆ’ ಇರುವ ಕಾರ್ಯಕಾರಣಗಳು ನಮಗೂ ಇತರರಿಗೂ ಹೊಳೆಯುವುದಿಲ್ಲ. ಅಂತಹ ಭಾವ ಪ್ರಕಟಣೆಗಳ ಹಿಂದಿರುಬಹುದಾದ ರಹಸ್ಯ ಕಾರ್ಯಕಾರಣಗಳನ್ನು ಹುಡುಕಲು, ಸಂವಹಿಸಲು ಕಲಾ ಮಾಧ್ಯಮಗಳು ದುಡಿಯುತ್ತವೆ. ರೂಢಿಗತ ಅರಿವಿನಾಚೆಗಿನ ಭಾವ ಪ್ರಕಟಣೆಯ ಸನ್ನಿವೇಶ ಉಂಟಾದಾಗ ಅದಕ್ಕಿರಬಹುದಾದ ಅನೇಕಾನೇಕ ಕಾರ್ಯಕಾರಣಗಳಲ್ಲಿ ಯಾವುದು ಇಂಥ ಸನ್ನಿವೇಶದಲ್ಲಿ ಇಂಥ ಭಾವವನ್ನು ಸೃಜಿಸುತ್ತದೆ ಎಂದು ಹುಡುಕುವುದು, ಅದರ ಮೂಲಕ ರೂಢಿಗತ ಜೀವನ ತತ್ವಗಳ ಮಿತಿಯಾಚೆಗೆ ಇರುವ ಜೀವನ ದರ್ಶನಗಳನ್ನು ಹೊಳೆಸುವುದಕ್ಕಾಗಿಯೇ ಮನುಷ್ಯ ಲೋಕ ಕಲಾ ಮಾಧ್ಯಮಗಳನ್ನು ಕಟ್ಟಿಕೊಂಡಿದೆ. ಆದರೆ ಹೀಗೆ ಕಟ್ಟಿಕೊಂಡ ಕಲಾ ಮಾಧ್ಯಮದ ಸಂವಹನಾ ಸೃಜನತೆಯನ್ನು ಸಹಜವಾಗಿ ಸಂವಹನಗೊಳ್ಳುವ ಭಾವ ಸನ್ನಿವೇಶಗಳನ್ನು ನಿರೂಪಿಸುವುದಕ್ಕೆ ಅತಿ ಬಳಕೆ ಮಾಡಿಕೊಳ್ಳುತ್ತಾ ಹೋದಾಗ, ಕಲಾ ಮಾಧ್ಯಮದ ಹೊಸ ದರ್ಶನ ಸಾಧ್ಯತೆಗಳೇ ಎಕ್ಕ ಎದ್ದು ಹೋಗುತ್ತವೆ!

ನಮ್ಮ ಜನಪ್ರಿಯ ಕಲಾ ಮಾಧ್ಯಮ ಬಳಕೆಯು ಈ ಬಗೆಯಲ್ಲಿ ಕಲೆಯ ಸೃಜನಶೀಲ ಗುಣವನ್ನು ಎಕ್ಕುಟ್ಟಿಸಿ ಬಿಟ್ಟಿರುವಾಗ, ‘ನೋಡಿ ಸ್ವಾಮಿ! ಕಲಾ ಮಾಧ್ಯಮದ ಕಾಯಕ ಅದಲ್ಲ! ಇದು!’ ಎಂದು ತಮ್ಮ ಕಲಾಕೃತಿಗಳಲ್ಲಿ ಕಲೆಯ ಮೂಲ ಸೃಜನಾಶೀಲ ಲಕ್ಷಣಗಳನ್ನು ಉದ್ದೀಪಿಸಿ ತೋರಿಸಬೇಕಾಗುತ್ತದೆ; ಕಲಾ ಮಾಧ್ಯಮದ ಮಾನ, ಘನತೆಗಳನ್ನು ಕಾಪಾಡುವ ಕೆಲಸ ಮಾಡಬೇಕಾಗುತ್ತದೆ. ಉತ್ತಮ ಸಿನಿಮಾಗಳು ಅಂಥಾ ದರ್ಶನ ಸಾಧ್ಯತೆಯ ಕಲಾಕೃತಿಗಳಾಗಿರುತ್ತವೆ. ಅವು ಸಿನಿಮಾ ಎಂಬ ಕಲಾ ಮಾಧ್ಯಮದ ಸೃಜನಶೀಲ ಗುಣಗಳನ್ನು ಮತ್ತೊಮ್ಮೆ ನಮ್ಮ ಅರಿವಿಗೆ ತರುತ್ತವೆ. ಆ ಯತ್ನದಲ್ಲೆ ಪ್ರಕಟಿತ ಮನುಷ್ಯ ಭಾವಗಳ ಹಿಂದಿರಬಹುದಾದ, ರೂಢಿಗತ ಅರಿವಿನ ಆಚೆಗಿರುವ, ಕಾರ್ಯಕಾರಣಗಳನ್ನು ಹೊಳೆಸುತ್ತವೆ.

LEAVE A REPLY

Connect with

Please enter your comment!
Please enter your name here