ಉತ್ತರ ಕರ್ನಾಟಕದ ಹಾಡುಗಳೆಂದರೆ ಹಾಗೆ. ಅವು ಏಕ್ ದಂ ಒಂದೇ ಸಲಕ್ಕೆ ತಲೆಗೆ ಕಿಕ್ ಕೊಡುತ್ತವೆ. ಹಾಗೆಯೇ ಕೈಕಾಲುಗಳಿಗೂ ಕೆಲಸ ಕೊಡುತ್ತವೆ. ಅಂಥದ್ದೇ ಧಾಟಿಯ ಒಂದು ಹಾಡು ಈಗ ಬಿಡುಗಡೆ ಆಗಿದೆ. ಅದು ‘ರತ್ನನ್ ಪ್ರಪಂಚ’ ಚಿತ್ರದ್ದು.

ಧನಂಜಯ್ ಅಭಿನಯದ ‘ರತ್ನನ್ ಪ್ರಪಂಚ’ ಚಿತ್ರ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಆಗ್ತಾ ಇರೋ ವಿಷಯ ಹಳೆಯದ್ದು. ಆದರೆ ಈಗ ಬಿಡುಗಡೆಗೂ ಮುನ್ನ ಆ ಚಿತ್ರದ ಹಾಡೊಂದು ಬಿಡುಗಡೆ ಆಗಿ ಹವಾ ಸೃಷ್ಠಿ ಮಾಡಿರೋದು ಹೊಸ ವಿಷಯ. ಹೌದು, ರೋಹಿತ್ ಪದಕಿ ನಿರ್ದೇಶನದ ‘ರತ್ನನ್ ಪ್ರಪಂಚ’ ಚಿತ್ರದ ಒಂದು ಹೊಸ ಹಾಡು ಈಗ ಬಿಡುಗಡೆ ಆಗಿದೆ. ಉತ್ತರ ಕರ್ನಾಟಕದ ಹಾಡುಗಳನ್ನು ಕೇಳಿದವರಿಗೆ ಈ ಹಾಡನ್ನು ಎಲ್ಲೋ ಕೇಳಿದ್ದೀವಿ ಅನಿಸಿದರೆ ಅದಕ್ಕೆ ಯೂಟ್ಯೂಬ್‌ನಲ್ಲಿ ಉತ್ತರ ಸಿಗುತ್ತದೆ. ಉಪೇಂದ್ರ ಅಭಿನಯದ ‘ಕುಟುಂಬ’ ಚಿತ್ರದ ‘ಥಳುಕ್ಕು ಬಳುಕಿನ ಹಾಳೂರಲ್ಲಿ’ ಹಾಡಿನ ಧಾಟಿಯಲ್ಲೇ ಇದ್ದ ‘ಗಿಚ್ಚ ಗಿಲಿಗಿಲಿ’ ಅನ್ನೋ ಹಾಡೊಂದು ಸೂಪರ್ ಹಿಟ್ ಆಗಿತ್ತು. ಈಗ ಅದೇ ಗಿಚ್ಚ ಗಿಲಿ ಅನ್ನೋ ಕ್ಯಾಚಿ ಲೈನ್ ಹಿಡಿದುಕೊಂಡು ಈ ತಂಡ ಈ ಹಾಡು ಮಾಡಿದೆ. ಹಾಡಿನ ಟ್ಯೂನ್ ಬೇರೆ ಆಗಿದ್ದರೂ, ಎರಡೂ ಹಾಡುಗಳು ಕೊಡುವ ಅನುಭವ ಒಂದೇ. ಅದಕ್ಕೆ ಕಾರಣ ಈ ಹಾಡನ್ನು ಬರೆದಿರುವುದು ಶಿವು ಬೇರಗಿ. ಇವರು ಉತ್ತರ ಕರ್ನಾಟಕದ ಶೈಲಿಯ ಹಾಡುಗಳನ್ನು ಬರೆಯೋದ್ರಲ್ಲಿ ಫೇಮಸ್ಸು.

‘ವಿಕ್ಟರಿ’ ಚಿತ್ರದ ‘ಅಕ್ಕಾ ನಿನ್ ಮಗ್ಳು ನಂಗೆ ಚಿಕ್ಕೋಳಾಗಲ್ವಾ’ ಹಾಡನ್ನು ಬರೆದವರು ಇವರೇ. ಹಾಗಾಗಿ ಈ ಹಾಡಿನಲ್ಲೂ ಅವರದ್ದೇ ಆದ ನಾರ್ತ್ ಕರ್ನಾಟಕ ಸ್ಟೈಲ್ ಇದೆ. ಆದರೆ ಅಜನೀಶ್ ಲೋಕನಾಥ್ ತಮ್ಮ ಸಂಗೀತದಲ್ಲಿ ‘ಗಿಚ್ಚ ಗಿಲಿ ಗಿಲಿ’ ಅನ್ನೋ ಸಾಲಿಗೆ ತಮ್ಮದೇ ಆದ ಸ್ಟೈಲಲ್ಲಿ ಕಿಕ್ ಕೊಟ್ಟಿದ್ದಾರೆ. ಈ ಎಲ್ಲ ಅಂಶಗಳಿಗೆ ಇನ್ನಷ್ಟು ಕಿಕ್ ಕೊಡುವಂತೆ ಈ ಹಾಡನ್ನು ಪುನೀತ್ ರಾಜ್ ಕುಮಾರ್ ಅವರಿಂದ ಹಾಡಿಸಲಾಗಿದೆ. ಪುನೀತ್ ಅವರ ಕಂಠ ಈ ಹಾಡಿಗೆ ಹೇಳಿ ಮಾಡಿಸಿದಂತಿದೆ. ಮತ್ತು ಅವರ ಹಾಡಿನ ಶೈಲಿ ಕೂಡ ಆಪ್ತವಾಗುತ್ತದೆ. ಒಟ್ಟಿನಲ್ಲಿ ‘ರತ್ನನ್ ಪ್ರಪಂಚ’ ಅಮೇಜಾನ್ ಪ್ರೈಮ್‌ನಲ್ಲಿ ‘ಗಿಚ್ಚ ಗಿಲಿ ಗಿಲಿ’ ಮಾಡೋಕ್ ಮುಂಚೆ ಯೂಟ್ಯೂಬ್‌ನಲ್ಲಿ ಹಾಡಿನ ಮೂಲಕ ಗಿಚ್ಚ ಗಿಲಿಗಿಲಿ ಮಾಡ್ತಾ ಇರೋದಂತೂ ಸತ್ಯ.

LEAVE A REPLY

Connect with

Please enter your comment!
Please enter your name here