‘ಮಹಿರ’ ಸಿನಿಮಾ ಖ್ಯಾತಿಯ ಮಹೇಶ್‌ ಗೌಡ ಅವರು ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ವಿಟಿಲಿಗೋ (ತೊನ್ನಿನ ಸಮಸ್ಯೆ) ಕುರಿತು ಚಿತ್ರದ ಕತೆಯಲ್ಲಿ ಪ್ರಸ್ತಾಪವಾಗಲಿದ್ದು, ಇದೊಂದು ರೊಮ್ಯಾಂಟಿಕ್‌ ಕಾಮಿಡಿ ಜಾನರ್‌ ಸಿನಿಮಾ ಎನ್ನುತ್ತಾರೆ ಮಹೇಶ್‌.

ಈ ಹಿಂದೆ ‘ಮಹಿರ’ ಸಿನಿಮಾ ನಿರ್ದೇಶಿಸಿದ್ದ ಮಹೇಶ್‌ ಗೌಡ ವಿಶಿಷ್ಟ ಕತೆಯ ಚಿತ್ರವೊಂದನ್ನು ತೆರೆಗೆ ತರುತ್ತಿದ್ದಾರೆ. ‘ಮಹಿರ’ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ, ಚೈತ್ರಾ ಆಚಾರ್ ಸೇರಿದಂತೆ ಪ್ರತಿಭಾನ್ವಿತರು ನಟಿಸಿದ್ದರು. ತಾಯಿ ಮಗಳ ಹೋರಾಟದ ಕಥೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದ ನಿರ್ದೇಶಕ ಮಹೇಶ್ ಗೌಡ ಈ ಬಾರಿ ಹೊಸ ಪ್ರಯತ್ನದ ಸಿನಿಮಾವೊಂದಕ್ಕೆ ಕೈ ಹಾಕಿದ್ದಾರೆ. ಅದರ ಮೊದಲ ಭಾಗವೆಂಬಂತೆ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಮಹೇಶ್ ಗೌಡ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ. ಈ ಸಿನಿಮಾಗೆ ತಾವೇ ಕಥೆ ಬರೆದು ಆಕ್ಷನ್ ಕಟ್ ಹೇಳುವುದರ ಜೊತೆಗೆ ತಮ್ಮದೇ ಹೊನ್ನುಡಿ ಪ್ರೊಡಕ್ಷನ್ ನಡಿ ಅವರು ಚಿತ್ರಕ್ಕೆ ಬಂಡವಾಳ ಹಾಕಿದ್ದು, ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಳ್ಳಿ ಹುಡ್ಗಿ ಕವಿತಾ ಆಗಿ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಅವರು ಮಹೇಶ್‌ರಿಗೆ ಜೋಡಿಯಾಗಿ ಬಣ್ಣ ಹಚ್ಚಿದ್ದಾರೆ.

ನಾಯಕ ದಿನೇಶ್‌ಗೆ ತೊನ್ನಿನ (ವಿಟಿಲಿಗೋ) ಸಮಸ್ಯೆ ಇರುತ್ತದೆ. ಆತ ಪಕ್ಕದ ಊರಿನ ಚೆಂದದ ಮುದ್ದು ಮುದ್ದಾದ ಹುಡ್ಗಿ ಕವಿತಾಳನ್ನು ವರಿಸುತ್ತಾನೆ. ಸಮಸ್ಯೆ ಗೊತ್ತಿದ್ದರೂ ಕವಿತಾ ತನ್ನನ್ನು ಮದ್ವೆಯಾಗೋದೇಕೆ ಅನ್ನೋ ಕನ್ಫೂಷನ್ ದಿನೇಶ್‌ಗೆ ಕಾಡುತ್ತಿರುತ್ತದೆ. ಅದನ್ನು ಕಾಮಿಡಿಯಲ್ಲಿ ಹೇಳೋದೇ ದೊಡ್ಡ ಚಾಲೆಂಜ್ ಎನ್ನುತ್ತಾರೆ ಮಹೇಶ್‌. ಇದೊಂದು ರೊಮ್ಯಾಂಟಿಕ್ ಕಾಮಿಡಿ ಜಾನರ್ ಚಿತ್ರವಾಗಿದ್ದು, ಪಕ್ಕಾ ಮನರಂಜನೆ ನೀಡಲಿದೆ ಎನ್ನುವುದು ನಿರ್ದೇಶಕರ ಭರವಸೆ. ಮಹೇಶ್ ತಮ್ಮದೇ ತೊನ್ನಿನ ಸಮಸ್ಯೆಯನ್ನು ಇಲ್ಲಿ ಕಥೆಯಾಗಿ ಪರಿವರ್ತಿಸಿದ್ದಾರೆ. ಇಂತಹ ಸಿನಿಮಾಗಳನ್ನು ತೆರೆಗೆ ತರುವುದು ಸವಾಲು. ಮೇಲೆ ಮಾಡೋದು ಕಷ್ಟವೇ ಸರಿ. ಅಂತಹ ಸಾಹಸಕ್ಕೆ ಮುಂದಾಗಿರುವ ಮಹೇಶ್ ಗೌಡ ಕಾರ್ಯಕ್ಕೆ ಶಹಬ್ಬಾಸ್ ಹೇಳಲೇಬೇಕು.

LEAVE A REPLY

Connect with

Please enter your comment!
Please enter your name here