ಆಡನ್ನು ದೇವರಾಗಿ ಪೂಜೆ ಮಾಡಿದಾಗ ಏನೆಲ್ಲಾ ಆಗುತ್ತದೆ ಎನ್ನುವುದು ‘ಆಡೇ ನಮ್ God’ ಚಿತ್ರದ ಕಥಾಹಂದರ. ಪಿ ಎಚ್ ವಿಶ್ವನಾಥ್ ನಿರ್ದೇಶನದ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟರಾಜ್, ಮಂಜುನಾಥ್ ಜಂಬೆ, ಅಜಿತ್ ಬೊಪ್ಪನಹಳ್ಳಿ, ಅನೂಪ್ ಶೂನ್ಯ ಇದ್ದಾರೆ. ಅಕ್ಟೋಬರ್ 6ರಂದು ಸಿನಿಮಾ ತೆರೆಕಾಣುತ್ತಿದೆ.
‘ಸಿನಿಮಾ ಮಾಡಿದ ಮೇಲೆ ಸಿನಿಮಾದ ಮೇಲೆ ನಿರ್ದೇಶಕರು ಮಾತನಾಡುವುದು ಏನೂ ಇರುವುದಿಲ್ಲ. ಸಿನಿಮಾ ಏನಾದರೂ ಹೇಳಬೇಕು. ಇವತ್ತಿನ ಟ್ರೆಂಡ್‌ಗೆ ಸರಿಯಾಗುವಂತಹ ಸಿನಿಮಾ ಇದು. ಇವತ್ತಿನ ಆಡಿಯನ್ಸ್‌ಗೆ ಕತೆ ಇಷ್ಟವಾಗುತ್ತದೆ. ಗಂಭೀರವಾದ ವಿಷಯವನ್ನು ಲಘು ಹಾಸ್ಯದೊಂದಿಗೆ ಹೇಳಿದ್ದೇವೆ. ಹೊಸ ಹುಡುಗರು ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ’ ಎಂದರು ನಿರ್ದೇಶಕ ಪಿ ಎಚ್ ವಿಶ್ವನಾಥ್. ಅವರ ‘ಆಡೇ ನಮ್ God’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಆಡನ್ನು ದೇವರಾಗಿ ಪೂಜೆ ಮಾಡಿದಾಗ ಏನೆಲ್ಲಾ ಆಗುತ್ತದೆ ಎನ್ನುವುದು ಚಿತ್ರದ ಕಥಾಹಂದರ. ಸಿನಿಮಾ ಆಕ್ಟೋಬರ್ 6ರಂದು ತೆರೆಕಾಣುತ್ತಿದೆ.
ಚಿತ್ರದ ಹೀರೋ ನಟರಾಜ್, ‘ನನ್ನದು ಒಬ್ಬ ಮಧ್ಯವರ್ತಿಯ ಪಾತ್ರ. ಅವನು ಮಾಡದ ಕೆಲಸವಿಲ್ಲ. ಸರ್ ಕಥೆ ಹೇಳಿದಾಗ ತುಂಬಾ ಇಷ್ಟವಾಯಿತು. ನಿಯತ್ತನ್ನು ನಂಬಿಕೊಂಡಿರುವ ಪಾತ್ರ ಇದು. ಒಂದೊಳ್ಳೆ ಪಾತ್ರ ಕೊಟ್ಟಿದ್ದಕ್ಕೆ ನಿರ್ದೇಶಕರಾದ ಪಿ.ಎಚ್.ವಿಶ್ವನಾಥ್ ಸರ್ ಗೆ ಧನ್ಯವಾದ. ಸಂಭಾಷಣೆ ಬರೆಯಲು ಸಹ ಅವಕಾಶ ಸಿಕ್ಕಿದೆ. ತುಂಬಾ ಖುಷಿ ಕೊಟ್ಟ ಜರ್ನಿ’ ಎನ್ನುತ್ತಾರೆ. ಮಂಜುನಾಥ್ ಜಂಬೆ, ಅಜಿತ್ ಬೊಪ್ಪನಹಳ್ಳಿ, ಅನೂಪ್ ಶೂನ್ಯ, ಸಾರಿಕ ರಾವ್, ಬಿ ಸುರೇಶ್ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು. ಪಿ ಕೆ ಎಚ್ ದಾಸ್ ಛಾಯಾಗ್ರಹಣ, ಬಿ ಎಸ್ ಕೆಂಪರಾಜು ಸಂಕಲನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ಅಕ್ಷಯ್ ವಿಶ್ವನಾಥ್ ಚಿತ್ರಕಥೆ, ಸಹ ನಿರ್ದೇಶನ ಚಿತ್ರಕ್ಕಿದೆ.
ಪಂಚಮವೇದ, ಶ್ರೀಗಂಧ, ಅರಗಿಣಿ, ಅರುಣೋದಯ, ರಂಗೋಲಿ, ಅಂಡಮಾನ್, ಮುಂಜಾನೆ ಮಂಜು, ಮುಸುಕು ಅಂತಹ ಹಿಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ಪಿ ಎಚ್ ವಿಶ್ವನಾಥ್. ಅಂಬರೀಶ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್ ಅವರಿಗೆ ಸಿನಿಮಾಗಳನ್ನು ನಿರ್ದೇಶನ ಮಾಡಿ ಸಕ್ಸಸ್ ಕಂಡಿರುವ ಇವರು ವರ್ಷಗಳ ಬಳಿಕ ‘ಆಡೇ ನಮ್ God’ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಾ ಇದ್ದಾರೆ. ನಾಳೆ ಅಕ್ಟೋಬರ್ 6ರಂದು ಸಿನಿಮಾ ತೆರೆಕಾಣುತ್ತಿದೆ. ಆರ್ ಕೆ ಸ್ವಾಮಿನಾಥನ್ ಸಂಗೀತ, ಶಶಿಕುಮಾರ್ ಎಸ್ ಹಿನ್ನೆಲೆ ಸಂಗೀತದ ಹಾಡುಗಳಿಗೆ ಹೃದಯ ಶಿವ, ನಿತಿನ್ ನಾರಾಯಣ್ ಸಾಹಿತ್ಯ ಬರೆದಿದ್ದಾರೆ. ಬಿ ಬಿ ಆರ್ ಫಿಲಂಸ್ ಮತ್ತು ಎವೆರೆಸ್ಟ್ ಇಂಡಿಯಾ ಎಂಟರ್‌ಟೇನರ್ಸ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣವಾಗಿದೆ.