ಅಗಲಿದ ನಟ ಪುನೀತ್‌ ರಾಜಕುಮಾರ್‌ರಿಗೆ ಅಮೇಜಾನ್‌ ಪ್ರೈಮ್‌ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸುತ್ತಿದೆ. ಪಿಆರ್‌ಕೆ ಬ್ಯಾನರ್‌ನಲ್ಲಿ ತಯಾರಾದ ಐದು ಸಿನಿಮಾಗಳನ್ನು ಪ್ರೈಮ್‌ ಉಚಿತವಾಗಿ ನೀಡುತ್ತಿದೆ. ಅಲ್ಲದೆ ಪಿಆರ್‌ಕೆ ನಿರ್ಮಾಣದ ಮೂರು ಹೊಸ ಸಿನಿಮಾಗಳು ಮುಂದಿನ ದಿನಗಳಲ್ಲಿ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿವೆ.

ನಟ, ನಿರ್ಮಾಪಕ ಪುನೀತ್‌ ರಾಜಕುಮಾರ್‌ ಅಗಲಿಕೆ ಕನ್ನಡ ಚಿತ್ರರಂಗದಲ್ಲಿ ನಿರ್ವಾತ ಸೃಷ್ಟಿಸಿದೆ. ತಮ್ಮ ಪಿಆರ್‌ಕೆ ಸಂಸ್ಥೆಯಡಿ ಅವರು ಅಪರೂಪದ ಕತೆಗಳನ್ನು ತೆರೆಗೆ ತರುತ್ತಿದ್ದರು. ಅವರ ನಿರ್ಮಾಣ, ಸಹನಿರ್ಮಾಣದಲ್ಲಿ ಘೋಷಣೆಯಾಗಿದ್ದ ಮೂರು ಚಿತ್ರಗಳು ಮುಂದಿನ ದಿನಗಳಲ್ಲಿ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿವೆ. ನಿರ್ಮಾಣದಲ್ಲಿ ಪಿಆರ್‌ಕೆ ಕೈಜೋಡಿಸಿದ್ದ ‘ಮ್ಯಾನ್‌ ಆಫ್‌ ದಿ ಮ್ಯಾಚ್‌’, ‘ಒನ್‌ ಕಟ್‌ ಟೂ ಕಟ್‌’ ಮತ್ತು ‘ಫ್ಯಾಮಿಲಿ ಪ್ಯಾಕ್‌’ ಚಿತ್ರಗಳು ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿವೆ.

ಪಿಆರ್‌ಕೆ ಸಂಸ್ಥೆಯೊಂದಿಗಿನ ಒಡನಾಟದ ಬಗ್ಗೆ ಮಾತನಾಡಿರುವ ಅಮೇಜಾನ್‌ ಪ್ರೈಮ್‌ನ ಮನೀಷ್‌ ಮೆಂಘಾನಿ, “ಕಳೆದ ಕೆಲವು ವರ್ಷಗಳಿಂದ ಪಿಆರ್‌ಕೆ ಸಂಸ್ಥೆಯೊಂದಿಗೆ ನಮ್ಮದು ಯಶಸ್ವೀ ಸಹಯೋಗ. ವಿಶಿಷ್ಟ ಕಂಟೆಂಟ್‌ನೆಡೆಗಿನ ಅವರ ಆಸಕ್ತಿ ಮತ್ತು ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕೆನ್ನುವ ಅವರ ತುಡಿತ ಒಂದೊಳ್ಳೆಯ ಮಾದರಿ. ಅವರ ನಿರ್ಮಾಣದ ಮೂರು ಚಿತ್ರಗಳನ್ನು ಸ್ಟ್ರೀಮ್‌ ಮಾಡುವುದರೊಂದಿಗೆ ಅವರಿಗೆ ಗೌರವ ಸಲ್ಲಿಸುತ್ತಿದ್ದೇವೆ” ಎಂದಿದ್ದಾರೆ. ಪುನೀತ್‌ ನಟನೆ, ನಿರ್ಮಾಣದ ಐದು ಚಿತ್ರಗಳನ್ನು ಅಭಿಮಾನಿಗಳಿಗೆ ಉಚಿತವಾಗಿ ನೀಡುವ ಮೂಲಕ ಅಗಲಿದೆ ನಟನಿಗೆ ವಿಶೇಷ ನಮನ ಸಲ್ಲಿಸುತ್ತಿದೆ ಅಮೇಜಾನ್‌. ‘Law’, ‘ಫ್ರೆಂಚ್‌ ಬಿರಿಯಾನಿ’, ‘ಕವಲುದಾರಿ’, ‘ಮಾಯಾಬಜಾರ್‌’ ಮತ್ತು ‘ಯುವರತ್ನ’ ಚಿತ್ರಗಳು ಫೆಬ್ರವರಿ 1ರಿಂದ ಒಂದು ತಿಂಗಳ ಕಾಲ ಅಮೇಜಾನ್‌ ಪ್ರೈಮ್‌ ಚಂದಾದಾರಲ್ಲದವರಿಗೂ ಉಚಿತವಾಗಿ ಸಿಗಲಿವೆ.

ಡಿ.ಸತ್ಯಪ್ರಕಾಶ್‌ ನಿರ್ದೇಶನದ ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಮಾನವ ಸಂಬಂಧಗಳು ಹಾಗೂ ಸಮಾಜದ ಪಲ್ಲಟಗಳ ಸುತ್ತ ಹೆಣೆದ ಕತೆ. ಅಥರ್ವ ಪ್ರಕಾಶ್‌, ಕೆ.ಜಯರಾಂ, ಧರ್ಮಣ್ಣ ಕಡೂರ್‌ ಮತ್ತು ನಟರಾಜ್‌ ಈ ಸಿನಿಮಾದ ಕಲಾವಿದರು. ಡ್ಯಾನಿಷ್‌ ಸೇಟ್‌, ಪ್ರಕಾಶ್‌ ಬೆಳವಾಡಿ ಮತ್ತು ಸಂಯುಕ್ತ ಹೊರನಾಡು ಅಭಿನಯದ ‘ಒನ್‌ ಕಟ್‌ ಟೂ ಕಟ್‌’ mad-cap ಕಾಮಿಡಿ. ಲಿಖಿತ್‌ ಶೆಟ್ಟಿ ಮತ್ತು ಅಮೃತಾ ಅಯ್ಯಂಗಾರ್‌ ಅಭಿನಯದ ‘ಫ್ಯಾಮಿಲಿ ಪ್ಯಾಕ್‌’ ರೊಮ್ಯಾಂಟಿಕ್‌ ಕಾಮಿಡಿ ಸಿನಿಮಾ. ಮುಂದಿನ ದಿನಗಳಲ್ಲಿ ಈ ಚಿತ್ರಗಳ ಸ್ಟ್ರೀಮಿಂಗ್‌ ದಿನಾಂಕಗಳು ಘೋಷಣೆಯಾಗಲಿವೆ.

LEAVE A REPLY

Connect with

Please enter your comment!
Please enter your name here