ತೆಲುಗು ಮೂಲದ ಚಿತ್ರನಿರ್ಮಾಪಕ ವೈಝಾಗ್‌ ರಾಜು ಅವರ ಪುತ್ರ ಕಾರ್ತೀಕ್‌ ರಾಜು ‘ಅಥರ್ವ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಮಹೇಶ್‌ ರೆಡ್ಡಿ ನಿರ್ದೇಶನದ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಪೂರ್ಣಪ್ರಮಾಣದಲ್ಲಿ Clues department ಕುರಿತು ಪ್ರಸ್ತಾಪವಾಗುತ್ತಿದೆ. ಸಿಮ್ರನ್‌ ಚೌಧರಿ ಚಿತ್ರದ ನಾಯಕಿ.

ಟಾಲಿವುಡ್‌ ಚಿತ್ರನಿರ್ಮಾಪಕ ವೈಝಾಗ್‌ ರಾಜು ಕನ್ನಡದಲ್ಲೂ ಕೆಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ‘ಮನೆ ದೇವ್ರು’, ‘ಹಾಲುಂಡ ತವರು’, ‘ಕರುಳಿನ ಕೂಗು’ ಅವರ ನಿರ್ಮಾಣದ ಕೆಲವು ಯಶಸ್ವೀ ಸಿನಿಮಾಗಳು. ಅವರ ಪುತ್ರ ಕಾರ್ತೀಕ್‌ ರಾಜು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಇದೀಗ ‘ಅಥರ್ವ’ ಚಿತ್ರದೊಂದಿಗೆ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. ‘ಅಥರ್ವ’ ಸಿನಿಮಾ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗಿದೆ. ತೆಲುಗು ಮತ್ತು ಕನ್ನಡ ದ್ವಿಭಾಷೆಗಳಲ್ಲಿ ತಯಾರಾಗಿರುವ ಸಿನಿಮಾ ಮಲಯಾಳಂ ಮತ್ತು ತಮಿಳು ಭಾಷೆಗಳಿಗೆ ಡಬ್‌ ಅಗಿ ತೆರೆಕಾಣಲಿದೆ. ತಮ್ಮ ಚೊಚ್ಚಲ ಕನ್ನಡ ಸಿನಿಮಾ ಬಗ್ಗೆ ಮಾತನಾಡುವ ಕಾರ್ತೀಕ್‌ ರಾಜು, ”ಈ ಚಿತ್ರದೊಂದಿಗೆ ಕನ್ನಡ ಚಿತ್ರದಲ್ಲಿ ನಾಯಕನಾಗಿ ನಟಿಸಬೇಕೆಂಬ ನನ್ನ ಬಹುದಿನಗಳ ಕನಸು ಈಡೇರಿದೆ. ಇದಕ್ಕೂ ಮೊದಲು ನಾನು ಪುನೀತ್ ರಾಜಕುಮಾರ್ ಅವರ ‘ವೀರ ಕನ್ನಡಿಗ’ ಚಿತ್ರದ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ‘ಅಥರ್ವ’ ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ನುರಿತ ಕಲಾವಿದರು ಹಾಗೂ ತಂತ್ರಜ್ಞರು ಚಿತ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ. ನವೆಂಬರ್‌ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ’ ಎನ್ನುತ್ತಾರೆ.

ಈ ಚಿತ್ರದ ನಿರ್ದೇಶಕ ಮಹೇಶ್‌ ರೆಡ್ಡಿ ಮೂಲತಃ ಸಾಫ್ಟ್‌ವೇರ್ ಎಂಜಿನಿಯರ್. ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸ್ವತಂತ್ರ್ಯ ನಿರ್ದೇಶಕನಾಗಿ ಇದು ಅವರ ಚೊಚ್ಚಲ ಚಿತ್ರ. ‘ಕ್ಲೂಸ್ ಡಿಪಾರ್ಟ್ಮೆಂಟ್ ಎಂಬುದು ಪೊಲೀಸ್ ಡಿಪಾರ್ಟ್ಮೆಂಟ್ ವ್ಯಾಪ್ತಿಗೆ ಬರುತ್ತದೆ. ಈ ಕ್ಲೂಸ್ ಡಿಪಾರ್ಟ್ಮೆಂಟ್ ಬಳಸಿಕೊಂಡು ಹೆಚ್ಚಿನ ಸಿನಿಮಾಗಳು ಬಂದಿಲ್ಲ. ನಮ್ಮ ಚಿತ್ರದಲ್ಲಿ ಒಂದು ಕೊಲೆಯ ಸತ್ಯವನ್ನು ತಿಳಿಯಲು ಕ್ಲೂಸ್ ಡಿಪಾರ್ಟ್ಮೆಂಟ್ ಎಷ್ಟು ಮುಖ್ಯ ಎಂಬುದನ್ನು ತೋರಿಸಿದ್ದೇವೆ’ ಎನ್ನುತ್ತಾರೆ ಮಹೇಶ್‌ ರೆಡ್ಡಿ. ಚಿತ್ರದ ನಾಯಕಿ ಸಿಮ್ರನ್‌ ಚೌಧರಿ ಪತ್ರಕರ್ತೆಯ ಪಾತ್ರದಲ್ಲಿ ನಟಿಸಿದ್ದಾರೆ. ಸುಭಾಷ್ ನೂತಲಪಾಟಿ ನಿರ್ಮಾಣದ ಚಿತ್ರವಿದು. ಹಿರಿಯ ಸಿನಿಮಾ ವಿತರಕ ಮಾರ್ಸ್ ಸುರೇಶ್‌ ಅವರು ‘ಅಥರ್ವ’ ಕನ್ನಡ ಅವತರಣಿಕೆ ರಿಲೀಸ್‌ ಮತ್ತು ಪ್ರಚಾರಕ್ಕೆ ಸಂಬಂಧಿಸಿದಂತೆ ನೆರವಾಗುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here