ತಮ್ಮ ಊರಿನಲ್ಲಿ ದಾಂಧಲೆ ಎಬ್ಬಿಸುತ್ತಿದ್ದ ಖಳನಾಯಕ ಯಾರು ಎಂದು ಊರಿನವರಿಗೆ ಗೊತ್ತಾಗಿದೆ. ಬರೀ ವಿಲನ್ ಅಲ್ಲ, ಸೂಪರ್ ವಿಲನ್ ಅವನು. ಅವರೂರಿನ ಸೂಪರ್ ಹೀರೋವನ್ನು ಮಣ್ಣುಮುಕ್ಕಿಸುವ ಶಕ್ತಿಯುಳ್ಳವನು. ಅದಕ್ಕೇ ಅವನ ಮನೆಗೆ ಬೆಂಕಿ ಹಚ್ಚಲು ದೊಂದಿಗಳನ್ನು ಹಿಡಿದು ನೂರಾರು ಜನ ಗುಂಪುಗುಂಪಾಗಿ ಬಂದಿದ್ದಾರೆ. ಶಕ್ತಿಗೆ ಮಿತಿಯಿಲ್ಲದ ಮೇಲೆ ಸಂಖ್ಯೆ ಯಾವ ಲೆಕ್ಖ ಎಂಬಂತೆ ತನ್ನ ಕೈಸನ್ನೆಯಿಂದಲೇ ಹತ್ತಿಪ್ಪತ್ತು ಜನರನ್ನು ವಿಲನ್ ಗಾಳಿಯಲ್ಲಿ ಹಾರಿಸುತ್ತಿದ್ದರೆ ಹಿನ್ನೆಲೆಯಲ್ಲಿ ಬರುತ್ತಿರುವುದು ಮಾತ್ರ ಪ್ರೀತಿಯ ಹಾಡು. ಆ ದೃಶ್ಯದಲ್ಲಿ ಊರಿನವರೆಲ್ಲರೂ ಸೋಲಲಿ, ವಿಲನ್ನು ಗೆಲ್ಲಲಿ ಎಂದು ನಾವು ಬಯಸುವಂತೆ ಮಾಡುವಲ್ಲಿ ಕಥಾನಕ ಗೆದ್ದುಬಿಡುತ್ತದೆ.

ನಮ್ಮಲ್ಲಿ ರೌಡಿಸಂ ಕಥೆಗಳು ಸರ್ವೇಸಾಮಾನ್ಯವಾಗಿರುವಂತೆ ಇಂಗ್ಲೀಷಿನಲ್ಲಿ ಸೂಪರ್ ಹೀರೋ ಸಿನಿಮಾಗಳು ವರ್ಷಕ್ಕೆ ಹತ್ತಾರು ಬರುತ್ತವೆ. ನಾಯಕನಿಗೆ ಜೇಡ, ಸೊಳ್ಳೆ, ಹಲ್ಲಿ, ಜಿರಳೆ ಸೇರಿದಂತೆ ಸಿಕ್ಕಸಿಕ್ಕ ಕೀಟಗಳ ಕೈಯಲ್ಲೆಲ್ಲಾ ಕಚ್ಚಿಸಿಯೋ ಅಥವಾ ನಾಯಕನ ಮೇಲೆ ಯಾವುದೋ ಪ್ರಯೋಗ ಮಾಡಲು ಹೋಗಿ ಮಿಸ್ಸಾಗಿಯೋ ಒಟ್ಟಿನಲ್ಲಿ ಅವನಿಗೊಂದು ಸೂಪರ್ ಪವರ್ ಬಂದುಬಿಡುತ್ತದೆ. ಸ್ಪೈಡರ್ ಮ್ಯಾನ್‌ಗೆ ಅಂಗೈಯಲ್ಲಿ ಬಲೆ ಬರುತ್ತದೆ. ಹಲ್ಕ್ ಬೆಟ್ಟದಷ್ಟು ದೊಡ್ಡದಾಗುತ್ತಾನೆ. ಸೂಪರ್ ಮ್ಯಾನ್ ವೀಸಾ ಇಲ್ಲದೇ ಎಲ್ಲಿಗೆ ಬೇಕಾದರೂ ಆಕಾಶದಲ್ಲಿ ಹಾರಿಕೊಂಡು ಹೋಗುತ್ತಾನೆ. ಒಬ್ಬನಿಗೆ ವಯಸ್ಸಾಗುವುದಿಲ್ಲ, ಮತ್ತೊಬ್ಬನಿಗೆ ಗಾಯವೇ ಆಗುವುದಿಲ್ಲ. ಒಬ್ಬ ಬೆಂಕಿ ಉಗುಳುತ್ತಾನೆ, ಇನ್ನೊಬ್ಬ ಮರಗಟ್ಟಿಸುತ್ತಾನೆ. ಹೀಗೆ ಸೂಪರ್ ಹೀರೋ ಎಂಬ ಹೆಸರಿನಡಿ ಇಂಗ್ಲಿಷಿನವರು ತಮ್ಮ ಕಲ್ಪನೆಗಳನ್ನು ಎಲ್ಲಾ ಸಾಧ್ಯತೆಗಳ ಅಂಚಿನವರೆಗೂ ಹರಿಬಿಟ್ಟಿದ್ದಾರೆ. ಹೀಗಾಗಿ ಮಲಯಾಳಂನಲ್ಲಿ ಈ ಕಾಲದಲ್ಲಿ ಒಂದು ಸೂಪರ್ ಹೀರೋ ಸಿನಿಮಾ ಮಾಡುತ್ತಾರೆ ಎಂದರೆ “ಅದಿನ್ನೇನು ಹೊಸಾ ವಿಷಯ ಹೇಳಬಹುದು?” ಎಂದು ಕುತೂಹಲ ಮೂಡಿಯೇ ಮೂಡುತ್ತದೆ. ಆ ಕುತೂಹಲವನ್ನು ತಕ್ಕಮಟ್ಟಿಗೆ ‘ಮಿನ್ನಲ್ ಮುರುಳಿ’ ಆಸಕ್ತಿಕರವಾಗಿಯೇ ತಣಿಸಿದೆ.

ಜೈಸನ್ ಹೆಸರಿನ ನಮ್ಮ ಕಥಾನಾಯಕ ಕುರುಕ್ಕನಮೂಲ ಎಂಬ ಕೇರಳದ ಒಂದು ಸಣ್ಣ ಗ್ರಾಮದಲ್ಲಿ ಟೈಲರ್. ಎಂತಹಾ ಒಳ್ಳೆಯ ಆಯ್ಕೆ ಅಲ್ಲವೇ?, ಸೂಪರ್ ಹೀರೋ ಡ್ರೆಸ್ ಅನ್ನು ತಾನೇ ಹೊಲಿದುಕೊಳ್ಳಬಹುದು!. ಆ ಊರಿನ ಸಲ್ಮಾನ್ ಖಾನ್ ಎನ್ನಬಹುದಾದಂತಹ ಸೌಂದರ್ಯ ಮತ್ತು ದೇಹದಾರ್ಡ್ಯತೆ ಹೊಂದಿರುವ ಜೈಸನ್ ಆ ಊರಿನ ಸಬ್ ಇನ್ಸ್‌ಪೆಕ್ಟರ್‌ ಮಗಳನ್ನು ಪ್ರೀತಿಸುತ್ತಿದ್ದಾನೆ. ಅಮೆರಿಕಾಗೆ ಹೋಗಿ ದುಡ್ಡು ಮಾಡಬೇಕು ಎನ್ನುವ ಜೈಸನ್ನನ ಮಹತ್ವಾಕಾಂಕ್ಷೆಗೆ ಮೂಲಕಾರಣ ತನ್ನ ಪ್ರೀತಿಯನ್ನು ಕಾಪಾಡಿಕೊಳ್ಳಬೇಕು ಎನ್ನುವುದೇ. ಇವರ ಪ್ರೀತಿಯ ವಿಷಯ ಗೊತ್ತಾಗಿ ಎಸ್.ಐ. ಎಲ್ಲರೆದುರು ಜೈಸನ್‌ಗೆ ಕಪಾಳಮೋಕ್ಷ ಮಾಡುವುದನ್ನು ಊರವರೆಲ್ಲಾ ಕುತೂಹಲದಿಂದ ಕಾಯುತ್ತಿದ್ದಾರೆ. ಇತ್ತ ಕಡೆ ಶಿಬು ಎನ್ನುವ ಕೃಶ ಕಾಯದ ಮತ್ತೊಂದು ಪಾತ್ರ ಎಲ್ಲರಿಗೂ ಟೀ ಕೊಡುವುದರಲ್ಲಿ ನಿರತವಾಗಿದೆ. ಅವನಿಗೋ ಅವನ ತಾಯಿಗಿದ್ದ ಮತಿಭ್ರಮಣೆಯ ಖಾಯಿಲೆಯೇ ಬಹುತೇಕ ಅಡರಿಕೊಂಡಿದೆ ಎಂದು ನಿರ್ಧರಿಸಿರುವ ಊರಿನವರು ಅವನ ಬಗ್ಗೆ ತಿರಸ್ಕಾರವನ್ನು ಬಿಟ್ಟರೆ ಮತ್ತೊಂದು ಧೋರಣೆಯನ್ನು ತಳೆದಂತೆ ಕಾಣುತ್ತಿಲ್ಲ. ಅವನನ್ನು ಇನ್ನೂ ಆ ಊರಿನಲ್ಲಿ ಜೀವಂತವಾಗಿಟ್ಟಿರುವುದೂ ಪ್ರೀತಿಯೇ.

ಇತ್ತ ಬಾಹ್ಯಾಕಾಶದಲ್ಲೆಲ್ಲೋ ಯಾವ್ಯಾವುದೋ ಗ್ರಹಗಳು ನೇರವಾಗಿ ಬಂದು ಭೂಮಿಯಲ್ಲಿ ವಾತಾವರಣ ಏರುಪೇರಾಗಿ ಪ್ರಖರವಾದ ಮಿಂಚೊಂದು ಕುರುಕ್ಕನಮೂಲದ ಎರಡು ಮೂಲೆಯಲ್ಲಿ ನಿಂತಿರುವ ಜೈಸನ್ ಮತ್ತು ಶಿಬುವಿನ ಮೈಗಳೊಳಗೆ ಪ್ರವಹಿಸುತ್ತದೆ. ಇಲ್ಲಿಂದ ಮುಂದೆ ಸೂಪರ್ ಹೀರೋ ಕಥೆಯಲ್ಲಿ ಆಗಬಹುದಾದ ಅನೇಕ ಕ್ಲೀಷೆಗಳು ಇಲ್ಲಿಯೂ ಜರುಗುತ್ತವೆ. ಆದರೆ ಮಿನ್ನಲ್ ಮುರಳಿ ವಿಶಿಷ್ಟವಾಗಿ ನಿಲ್ಲುವುದು ‘ಪ್ರೀತಿ’ಯಿಂದ. ಒಂದು ಸೂಪರ್ ಹೀರೋ ಚಿತ್ರದಲ್ಲಿ ‘ಪ್ರೀತಿ’ ಎನ್ನುವ ಅಂಶವನ್ನೇ ಮುಖ್ಯವಾಗಿಸಿಕೊಂಡು ಕಥೆ ಕಟ್ಟಿರುವ ಉದಾಹರಣೆಗಳು ಯಾವ ಭಾಷೆಯಲ್ಲೂ ಸಿಗುವುದು ಕಷ್ಟ. ಸೂಪರ್ ಹೀರೋ ಮತ್ತು ಸೂಪರ್ ವಿಲನ್‌ಗೆ ಅಷ್ಟು ಸಮಯವಾದರೂ ಎಲ್ಲಿರುತ್ತದೆ?. ಒಬ್ಬ ಇಡೀ ಜಗತ್ತನ್ನೇ ನಾಶ ಮಾಡಲು ಪ್ರಯತ್ನಿಸುತ್ತಿರಬೇಕು, ಮತ್ತೊಬ್ಬ ಆಕಾಶ-ಭೂಮಿ ಒಂದು ಮಾಡಿ ಅದನ್ನು ತಡೆಯಬೇಕು. ಆದರೆ ಇಲ್ಲಿ ಆ ಸೂತ್ರವನ್ನು ಸಮರ್ಥವಾಗಿ ಬದಿಗೆ ತಳ್ಳಲಾಗಿದೆ. ತೀರಾ ಕೊನೆಯವರೆಗೂ ಇಲ್ಲಿ ಇಬ್ಬರೂ ಅವರವರ ಆಂತರಿಕ ಸಮಸ್ಯೆಗಳ ಜೊತೆಗೇ ಹೋರಾಡುತ್ತಿರುತ್ತಾರೆ. ಚಿತ್ರದ ಕೊನೆಗೆ ವಿಲನ್ ವಿರುದ್ಧ ಹೀರೋ ಗೆದ್ದಾಗ ಅದು ಕೇವಲ ಅನಿವಾರ್ಯವಾಗಿತ್ತೆಂದು ಅನ್ನಿಸುತ್ತದೆಯೇ ಹೊರತು ತೀರಾ ದುಷ್ಟ ಶಿಕ್ಷಣ, ಶಿಷ್ಟ ರಕ್ಷಣವಾಯಿತು ಎಂಬಂತಹ ಹಳೇ ಸವಕಲು ಭಾವನೆಗಳು ಮೂಡುವುದಿಲ್ಲ.

ಚಿತ್ರದ ಒಂದು ದೃಶ್ಯ. ಶಾಲಾ ವಾರ್ಷಿಕೋತ್ಸವದಲ್ಲಿ ಮಕ್ಕಳ ನಾಟಕ ಪ್ರದರ್ಶನ ನಡೆಯುತ್ತಿರುತ್ತದೆ. ಅಲ್ಲಿಗೆ ಬರುವ ಸೂಪರ್ ಹೀರೋ ಪೋಲೀಸರನ್ನು ಥಳಿಸುತ್ತಿರುತ್ತಾನೆ. ಅದನ್ನು ಸಹಜವಾಗಿಯೇ ಮಕ್ಕಳು ಆನಂದಿಸುತ್ತಿರುತ್ತಾರೆ. ಅವರಲ್ಲಿ ಗಾಂಧೀಜಿಯ ಪಾತ್ರ ಮಾಡಿರುವ ಹುಡುಗ ‘ಇನ್ನೂ ನಾಲ್ಕು ಬಾರಿಸು’ ಎಂದು ಹೇಳುತ್ತಾನೆ!. ಹೀರೋ ಮತ್ತು ವಿಲನ್ ತಮ್ಮ ತಮ್ಮ ಸೂಪರ್ ಪವರುಗಳನ್ನು ಕಂಡುಕೊಳ್ಳುವಲ್ಲಿ, ಕಾನ್ ಸ್ಟೇಬಲ್ ಒಬ್ಬ ಇಡೀ ಘಟನೆಗೆ ಇರಾಕಿನಿಂದ ಬಂದಿರುವ ಉಗ್ರಗಾಮಿಗಳು ಕಾರಣ ಎಂದು ನಂಬಿ ತನಿಖೆ ಮಾಡುವಲ್ಲಿ, ಹೀಗೆ ಚಿತ್ರದ ಉದ್ದಕ್ಕೂ ಇದೇ ತಿಳಿ ಹಾಸ್ಯದ ನಿರೂಪಣೆಯಿರುವುದರಿಂದ ಚಿತ್ರ ಆರಾಮಾಗಿ ನೋಡಿಸಿಕೊಂಡು ಹೋಗುತ್ತದೆ. ತೆರೆಯ ಮುಂದೆ, ತೆರೆಯ ಹಿಂದೆ ಕೆಲಸ ಮಾಡಿರುವ ಎಲ್ಲರೂ ಚಿತ್ರದಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿರುವುದು ಗೋಚರಿಸುತ್ತದೆ. ಆದರೂ ವಿಲನ್ ಪಾತ್ರ ಮಾಡಿರುವ ಗುರು ಸೋಮಸುಂದರಂ ಅವರನ್ನು ಜನ ಈ ಚಿತ್ರ ನೋಡಿದ ನಂತರ ಸ್ವಲ್ಪ ಹೆಚ್ಚೇ ನೆನಪಿಟ್ಟುಕೊಳ್ಳುವುದು ಸುಳ್ಳಲ್ಲ.

ಚಿತ್ರ ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದ್ದು ಕನ್ನಡದ ಡಬ್ ಅವತರಣಿಕೆ ಕೂಡಾ ಲಭ್ಯವಿದೆ, ಆದರೆ ಗುಣಮಟ್ಟ ಅಷ್ಟಕ್ಕಷ್ಟೇ. ಎಲ್ಲಿಯವರೆಗೆ ಡಬ್ಬಿಂಗ್ ಮಾಡುವುದು ಎಂದರೆ ಅಲ್ಲಿನ ಮಾತುಗಳನ್ನು ಇದ್ದ ಹಾಗೇ ಕನ್ನಡಕ್ಕೆ ಭಾಷಾಂತರ ಮಾಡಿ ಮೈಕ್ ಮುಂದೆ ಹೇಳಿಸಿಬಿಡುವುದು ಎಂಬ ಅಜ್ಞಾನ ಮರೆಯಾಗುವುದಿಲ್ಲವೋ, ಅಲ್ಲಿಯವರೆಗೆ ಪರಭಾಷಾ ಸಿನಿಮಾಗಳನ್ನು ಅವವೇ ಭಾಷೆಗಳಲ್ಲಿ ಇಂಗ್ಲಿಷ್ ಸಬ್ ಟೈಟಲ್ಸ್ ಜೊತೆ ನೋಡುವುದು ಉತ್ತಮ. ಒಟ್ಟಿನಲ್ಲಿ ‘ಮಿನ್ನಲ್ ಮುರುಳಿ’ ಇಂಗ್ಲಿಷ್ ಸೂಪರ್ ಹೀರೋಗಳಂತೆ ನಿಮ್ಮನ್ನು ಕೂತ ಸೀಟಿನಿಂದ ಹತ್ತತ್ತು ನಿಮಿಷಕ್ಕೆ ಮೇಲೆ ಎಗರಿಸದಿದ್ದರೂ ಸಿನಿಮಾ ಮುಗಿದ ಮೇಲೆ “ಇಪ್ಪತ್ತೆಂಟು ವರ್ಷ ಒಂದೇ ಹುಡುಗಿಯನ್ನು ಪ್ರೀತಿಸುವುದು ಕೂಡಾ ಸೂಪರ್ ಪವರ್ರೇ ಅಲ್ಲವೇ?!” ಎಂದು ಹತ್ತು ನಿಮಿಷ ಯೋಚಿಸುವಂತೆ ಮಾಡುತ್ತದೆ.

ಸಿನಿಮಾ : ಮಿನ್ನಲ್ ಮುರಳಿ | ನಿರ್ದೇಶನ : ಬೇಸಿಲ್ ಜೋಸೆಫ್ | ನಿರ್ಮಾಣ : ಸೋಫಿಯಾ ಪೌಲ್ | ಬರವಣಿಗೆ : ಅರುಣ್ ಅನಿರುದ್ಧನ್, ಜಸ್ಟಿನ್ ಮ್ಯಾಥ್ಯೂ | ಛಾಯಾಗ್ರಹಣ : ಸಮೀರ್ ತಾಹಿರ್ | ಸಂಗೀತ : ಶಾನ್ ರೆಹಮಾನ್, ಸುಶಿನ್ ಶ್ಯಾಮ್ | ಸಂಕಲನ : ಲಿವಿಂಗ್ ಸ್ಟನ್ ಮ್ಯಾಥ್ಯೂ | ಪಾತ್ರವರ್ಗ : ಟೊವಿನೋ ಥಾಮಸ್, ಗುರು ಸೋಮಸುಂದರಂ, ಫೆಮಿನಾ ಜಾರ್ಜ್, ಶೆಲ್ಲಿ ಕಿಶೋರ್, ಅಜು ವರ್ಗೀಸ್, ಬೈಜು ಸಂತೋಶ್, ಹರಿಶ್ರೀ ಅಶೋಕನ್, ವಸಿಷ್ಠ ಉಮೇಶ್ ಮತ್ತಿತರರು.

LEAVE A REPLY

Connect with

Please enter your comment!
Please enter your name here