‘ಬಡವ ರಾಸ್ಕಲ್‌’ ಚಿತ್ರದಲ್ಲಿ ಹೀರೋ ಧನಂಜಯ್‌ ತಾವೇ ರಚಿಸಿದ ಅವ್ವನ ಕವಿತೆಯೊಂದನ್ನು ಹೇಳುತ್ತಾರೆ. ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಅವರು ಈ ಕವಿತೆಯನ್ನು ಓದಿದ್ದರು. ಧನಂಜಯ್‌ ತಮ್ಮ ಟ್ವಿಟರ್‌ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದ ಈ ಕವಿತೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ರಂಗಭೂಮಿ ಹಿನ್ನೆಲೆಯ ನಟ ಧನಂಜಯ ಕತೆ, ಕಾದಂಬರಿ ಓದಿಕೊಂಡು ಬೆಳೆದವರು. ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ. ಕಾಲೇಜು ದಿನಗಳಿಂದಲೂ ಅವರಿಗೆ ಬರೆಯುವ ಹವ್ಯಾಸವಿದೆ. ‘ಬಡವ ರಾಸ್ಕಲ್‌’ ಚಿತ್ರದಲ್ಲಿ ಅವರ ರಚನೆಯ ಎರಡು ಹಾಡುಗಳಿವೆ. ಅದಲ್ಲದೆ ಚಿತ್ರದಲ್ಲಿ ಅವರು ಆರೇಳು ವರ್ಷಗಳ ಹಿಂದೆ ರಚಿಸಿದ್ದ ‘ನನ್ನವ್ವ’ ಕವಿತೆ ಬಳಕೆಯಾಗಿದೆ. ಸನ್ನಿವೇಶಕ್ಕೆ ಸೂಕ್ತವಾಗಿ ಹೊಂದಿಕೆಯಾಗಿದ್ದ ಈ ಕವಿತೆ ಚಿತ್ರಕಥೆಯೊಂದಿಗೆ ಬರೆತಿತ್ತು. ಮೊನ್ನೆ ಕಲರ್ಸ್‌ ಕನ್ನಡ ವಾಹಿನಿಯ ಕಾರ್ಯಕ್ರಮದಲ್ಲಿ ಧನಂಜಯ್‌ ಈ ಕವಿತೆ ಓದಿದ್ದರು. ಅವರ ತಾಯಿ ಸಾವಿತ್ರಮ್ಮ ವೇದಿಕೆಯಲ್ಲಿದ್ದರು. ಈ ವೀಡಿಯೋ ತುಣುಕನ್ನು ಧನಂಜಯ್‌ ತಮ್ಮ ಟ್ವಿಟರ್‌ ಅಕೌಂಟ್‌ನಲ್ಲಿ ಶೇರ್‌ ಮಾಡಿದ್ದರು. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಅವರ ಕವಿತೆ ವೈರಲ್‌ ಅಗಿದೆ. ಏಳೆಂಟು ವರ್ಷಗಳ ಹಿಂದಿನ ಧನಂಜಯ ಫೋಟೊ ಜೊತೆ ಹಲವರು ಈ ಕವಿತೆಯನ್ನು ಶೇರ್‌ ಮಾಡಿದ್ದಾರೆ.

ನನ್ನವ್ವ

ಏನ್ ಕೆಲಸ ಮಾಡ್ತಿದೀಯ ಮಗ..? ಅಂತ
ಕೇಳ್ಳಿಲ್ಲ ನನ್ನವ್ವ,
ನಿನಗನ್ಸಿದ್ ಏನಾರ ಮಾಡ್ಲ ಮಗ
ಯಾರಿಗು ತೊಂದರೆ ಕೊಡಬೇಡ ಅಂದ್ಲು.

ಎಷ್ಟು ದುಡಿತೀಯೊ ಮಗ..? ಅಂತ
ಕೇಳ್ಳಿಲ್ಲ ನನ್ನವ್ವ,
ಸಂಜೆ ಮನಿಗ್ ಬಂದಾಗ ಕೈ ತುತ್ತು ಹಾಕಿ
ಸುಸ್ತಾಗಿರ್ತೀಯ ಉಂಡು ಮಂಕಳ್ಳ ಮಗ ಅಂದ್ಲು.

ನಂಗೇನ್ ಮಾಡ್ದೆ ಮಗ..? ಅಂತ
ಕೇಳ್ಳಿಲ್ಲ ನನ್ನವ್ವ,
ತಾನ್ ಹೊಂಚಿದ್ ಒಂದುಂಡೆ ಬೆಣ್ಣೆ ಹಾಕಿ
ಉಂಡ್ಕಂಡ್ ಚೆನ್ನಾಗಿರ್ಲ ಮಗ ಅಂದ್ಲು.

ಕುಂತ್ಕಂಡ್ ಎಲ್ಡ್ ಮಾತಾಡು ಅಂತ
ಕೇಳ್ಳಿಲ್ಲ ನನ್ನವ್ವ,
ಸೋತು ಬಂದಾಗ್ಲೆಲ್ಲ ಜೋಗುಳ ಹಾಡಿ
ಯಾವಾಗ್ಲು ನಗ್ತಾ ಇರ್ಲ ಮಗ ಅಂದ್ಲು.

ನಂಗೂ ವಯಸ್ಸಾತು, ಇನ್ ಆಗಕ್ಕಿಲ್ಲ ಕಣ್ ಮಗ
ಅನ್ಲಿಲ್ಲ ನನ್ನವ್ವ,
ಒಂದ್ ಮದುವೆ ಆಗ್ಲ ಮಗ,
ನಿಂಗೂ ಆಸರೆ ಆಗುತ್ತೆ ಅಂದ್ಲು.

ನಿನ್ ಕಳ್ಕಳಕ್ ನನ್ ಕೈಯಲ್ ಆಗಕ್ಕಿಲ್ಲ
ನಿನ್ನಂತವಳನ್ನೆ ನಂಗ್ ಕಟ್ತಿಯೇನೆ, ಅವ್ವ? ಅಂದೆ
ಹುಂಕಣ್ ಸುಮ್ನಿರ್ಲ ಮಗ, ಅಂತವಳನೆ ಕಟ್ತೀನಿ
ಜೊತಿಗ್ ನಾನು ಮಗಳಾಗಿ ಹುಟ್ಟಿ
ನಿನ್ನ ಹಿಂಗೆ ನೋಡ್ಕಂತೀನಿ, ಅಂದ್ಲು ನನ್ನವ್ವ.

Previous article‘ಆಕೆ ನಿನಗೆ ಅರ್ಥವಾಗಲಿಲ್ಲ ಎಂಬುದಲ್ಲ, ಆಕೆ ನಿನಗೆ ಅರ್ಥವಾಗಬೇಕಿಲ್ಲ’
Next articleಟ್ರೈಲರ್‌ | ‘ಪುದಮ್‌ ಪುದು ಕಾಲೈ ವಿದಿಯಾಥ’; ಸಂಕಷ್ಟದ ದಿನಗಳಲ್ಲಿ ಭರವಸೆಯ ಕತೆಗಳು

LEAVE A REPLY

Connect with

Please enter your comment!
Please enter your name here