ಹಿಂದಿ ಕಿರುತೆರೆ ಮತ್ತು ಸಿನಿಮಾ ನಟ ಗುಫಿ ಪೈಂತಾಲ್‌ ಇಂದು ಅಗಲಿದ್ದಾರೆ. ಹಿಂದಿ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿದ್ದ ಗುಫಿ, ‘ಶ್ರೀ ಚೈತನ್ಯ ಮಹಾಪ್ರಭು’ ಹಿಂದಿ ಸಿನಿಮಾ ನಿರ್ದೇಶಿಸಿದ್ದರು.

‘ಮಹಾಭಾರತ’ ಹಿಂದಿ ಧಾರಾವಾಹಿಯ ‘ಶಕುನಿ’ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ಗುಫಿ ಪೈಂತಾಲ್‌ ಇಂದು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 79 ವರ್ಷವಾಗಿತ್ತು. ಮಹಾಭಾರತ ಧಾರಾವಾಹಿ ಪಾತ್ರದ ನಂತರ ಅಭಿಮಾನಿ ಬಳಗ ಮತ್ತು ಆಪ್ತ ವಲಯದಲ್ಲಿ ಅವರು ‘ಶಕುನಿ ಮಾಮ’ ಎಂದೇ ಹೆಸರಾಗಿದ್ದರು. ಬಹದ್ದೂರ್‌ ಷಾ ಜಾಫರ್‌, ಕಾನೂನ್‌, ಓಂ ನಮಃ ಶಿವಾಯ್‌, ಸಿಐಡಿ, ಶ್‌! ಕೋಯಿ ಹೈ ದ್ವಾರಕಾಧೀಶ್‌ ಭಗವಾನ್‌ ಶ್ರೀ ಕೃಷ್ಣ, ರಾಧಾಕೃಷ್ಣ, ಜೈ ಕನ್ಹಯ್ಯಾ ಲಾಲ್‌ ಕಿ ಸೇರಿದಂತೆ ಹಲವು ಕಿರುತೆರೆ ಸರಣಿಗಳಲ್ಲಿ ಅವರು ಅಭಿನಯಿಸಿದ್ದಾರೆ. ‘ರಫೂ ಚಕ್ಕರ್‌’ (1975) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಅವರು ದಿಲ್ಲಗಿ, ದೇಶ್‌ ಪ್ರದೇಶ್‌, ಸುಹಾಗ್‌ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

1944ರಲ್ಲಿ ಜನಿಸಿದ ಪೈಂತಾಲ್‌ ಅವರ ನಿಜನಾಮಧೇಯ ಸರಬ್‌ಜಿತ್‌ ಸಿಂಗ್‌ ಪೈಂತಾಲ್‌. ಇಂಜಿನಿಯರಿಂಗ್‌ ಪದವೀಧರರಾದ ಅವರು ನಟನಾಗುವ ಇರಾದೆಯಿಂದ ಫಿಲ್ಮ್‌ ಮತ್ತು ಟೆಲಿವಿಷನ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಡಿಪ್ಲೊಮೊ ಪಡೆದಿದ್ದರು. ಕಿರುತೆರೆ ಮತ್ತು ಸಿನಿಮಾಗಳ ಕಲಾವಿದ ‘ಶ್ರೀ ಚೈತನ್ಯ ಮಹಾಪ್ರಭು’ ಹಿಂದಿ ಸಿನಿಮಾ ನಿರ್ದೇಶಿಸಿದ್ದರು. 2010ರಲ್ಲಿ ಪೈಂತಾಲ್‌ ಅವರು ಮುಂಬಯಿಯ ಅಭಿನಯ್‌ ಆಕ್ಟಿಂಗ್‌ ಅಕಾಡೆಮಿ ಮುಖ್ಯಸ್ಥರಾಗಿ ಆಯ್ಕೆಯಾಗದ್ದರು. ಇದು ‘ಮಹಾಭಾರತ’ದಲ್ಲಿ ಅವರ ಸಹನಟರಾಗಿದ್ದ ಪಂಕಜ್‌ ಧೀರ್‌ ಆರಂಭಿಸಿದ್ದ ಸಂಸ್ಥೆ. ಇತ್ತೀಚಿನ ದಿನಗಳಲ್ಲಿ ನಟನೆಯಿಂದ ಕೊಂಚ ದೂರ ಉಳಿದಿದ್ದ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.

LEAVE A REPLY

Connect with

Please enter your comment!
Please enter your name here