ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಸತ್ಯಜಿತ್ (72 ವರ್ಷ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ತಡರಾತ್ರಿ ಅವರು ಇಹಲೋಕ ತ್ಯಜಿಸಿದ್ದಾರೆ.
ಹುಬ್ಬಳ್ಳಿಯ ನಿಜಾಮುದ್ದೀನ್ ಸೈಯದ್ ಕೆಎಸ್‌ಆರ್‌ಟಿಸಿ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆಗ ನಟನೆ ಅವರ ಪ್ರವೃತ್ತಿಯಾಗಿತ್ತು. ಹುಬ್ಬಳ್ಳಿಯ ಹವ್ಯಾಸಿ ರಂಗತಂಡವೊಂದರ ಸಕ್ರಿಯ ಸದಸ್ಯರಾಗಿ ಅವರು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಒಮ್ಮೆ ನಾಟಕ ಪ್ರದರ್ಶನಕ್ಕೆಂದು ತಂಡದೊಂದಿಗೆ ಮುಂಬೈಗೆ ಹೋಗಿದ್ದರು ಸೈಯದ್. ಅಲ್ಲಿ ಸಿನಿಮಾ ತಂತ್ರಜ್ಞರೊಬ್ಬರ ಕಣ್ಣಿಗೆ ಬಿದ್ದದ್ದೇ ಅವರ ಬದುಕಿಗೆ ತಿರುವು ಸಿಕ್ಕಿತು. ನಾನಾ ಪಾಟೇಕರ್ ಹೀರೋ ಆಗಿದ್ದ `ಅಂಕುಶ್’ ಹಿಂದಿ ಚಿತ್ರದಲ್ಲಿ ನಟಿಸುವ ಅವಕಾಶ ಅವರದಾಯಿತು. ಈ ಚಿತ್ರದ ಟೈಟಲ್ ಕಾರ್ಡ್‌ನಲ್ಲೇ ಅವರ ಹೆಸರು `ಸತ್ಯಜಿತ್’ ಎಂದು ಬದಲಾದದ್ದು. ಹಿಂದಿ ಚಿತ್ರದ ನಂತರ ಸತ್ಯಜಿತ್‌ಗೆ ಕನ್ನಡ ಸಿನಿಮಾಗಳಲ್ಲೂ ಅವಕಾಶಗಳು ಹುಡುಕಿಕೊಂಡು ಬಂದವು. ಮುಂದೆ ಅವರು ಕನ್ನಡ ಚಿತ್ರರಂಗದ ಪ್ರಮುಖ ಖಳನಾಯಕ, ಪೋಷಕ ನಟನಾಗಿ ಗುರುತಿಸಿಕೊಂಡರು. ಸತ್ಯಜಿತ್ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಕಳೆದ ಆರೇಳು ವರ್ಷಗಳಿಂದ ಸತ್ಯಜಿತ್ ಅವರನ್ನು ನಿರಂತರವಾಗಿ ಆರೋಗ್ಯದ ಸಮಸ್ಯೆಗಳು ಕಾಡಿದ್ದವು. ಗ್ಯಾಂಗ್ರಿನ್‌ನಿಂದಾಗಿ ಅವರ ಎಡಗಾಲು ತೆಗೆಯಬೇಕಾಯ್ತು. ತಮ್ಮ ತಂದೆ ಹಣಕ್ಕಾಗಿ ಒತ್ತಾಯ ಮಾಡಿ, ಕಿರುಕುಳ ಕೊಡುತ್ತಿದ್ದಾರೆ ಎಂದು ತಿಂಗಳುಗಳ ಹಿಂದೆ ಅವರ ಪುತ್ರಿಯೇ ಪೊಲೀಸರಿಗೆ ದೂರು ನೀಡಿದ್ದರು. ಆಗ ಸತ್ಯಜಿತ್, ಇದರಲ್ಲಿ ತಮ್ಮ ಪಾತ್ರವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇತ್ತೀಚೆಗೆ ಅನಾರೋಗ್ಯಕ್ಕೀಡಾದ ಅವರು ನಂತರ ಚೇತರಿಸಿಕೊಳ್ಳಲೇ ಇಲ್ಲ. ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ರಾತ್ರಿ ಅಗಲಿದ್ದಾರೆ.
ನಟ ಸತ್ಯಜಿತ್ ತಮ್ಮ ವಿಶಿಷ್ಟ ಧ್ವನಿಯಿಂದಲೇ ಎಲ್ಲರಿಗೂ ಚಿರಪರಿಚಿತರಾಗಿದ್ದ ನಟ. ಮೂಲತಃ ಉತ್ತರ ಕರ್ನಾಟಕರಾದ ಅವರು ಅಲ್ಲಿನ ಭಾಷೆಯ ಸೊಗಡನ್ನು ತೆರೆಯ ಮೇಲೆ ಚೆನ್ನಾಗಿ ಬಳಕೆ ಮಾಡಿದರು. ಹೆಚ್ಚಾಗಿ ಖಳ ಪಾತ್ರಗಳಲ್ಲಿ ನಟಿಸಿರುವ ಅವರು ಪೋಷಕ ಕಲಾವಿದರಾಗಿ ಸಿಕ್ಕ ಅವಕಾಶಗಳನ್ನೂ ಚೆನ್ನಾಗಿ ದುಡಿಸಿಕೊಂಡರು. ಚೈತ್ರದ ಪ್ರೇಮಾಂಜಲಿ, ಪುಟ್ನಂಜ, ಅಭಿ, ಅರುಣ ರಾಗ, ಅಂತಿಮತೀರ್ಪು, ರಣರಂಗ, ಯುದ್ಧಕಾಂಡ, ಇಂದ್ರಜಿತ್, ನಮ್ಮೂರ ಹಮ್ಮೀರ, ಪೊಲೀಸ್ ಲಾಕಪ್, ಮನೆದೇವ್ರು, ಸರ್ಕಲ್ ಇನ್‌ಸ್ಪೆಕ್ಟರ್, ಅಪ್ಪು, ಅಭಿ, ಅರಸು, ಭಾಗ್ಯದ ಬಳೆಗಾರ, ರನ್ನ, ಮಾಣಿಕ್ಯ, ಆಪ್ತಮಿತ್ರ, ರಣವಿಕ್ರಮ, ಮೈತ್ರಿ… ಅವರ ಕೆಲವು ಪ್ರಮುಖ ಸಿನಿಮಾಗಳು. ಎರಡು ತಲೆಮಾರಿನ ನಾಯಕನಟರ ಚಿತ್ರಗಳಲ್ಲಿ ಅಭಿನಯಿಸಿರುವ ಸತ್ಯಜಿತ್ ಕನ್ನಡ ಚಿತ್ರರಂಗ ಕಂಡ ಅಪರೂಪದ ನಟ. ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕನ್ನಡದ ಹಲವು ನಟ-ನಟಿಯರು ಕಂಬನಿ ಮಿಡಿದಿದ್ದಾರೆ. ಸ್ವಗೃಹದಲ್ಲಿ ಅವರ ಪಾರ್ಥಿಕ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಜೆ ಅಂತ್ಯಸಂಸ್ಕಾರ ನೆರವೇರಲಿದೆ.