ನಟ ವಿಷ್ಣುವರ್ಧನ್‌ ಅವರ 51 ಕಟೌಟ್‌ಗಳನ್ನು ನಿಲ್ಲಿಸಿದ್ದ ‘ಕಟೌಟ್‌ ಜಾತ್ರೆ’ ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಮತ್ತು ಇಂಟರ್‌ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ಈ ಕಾರ್ಯಕ್ರಮ ಆಯೋಜಿಸಿದ್ದ ವಿಷ್ಣು ಸೇನಾ ಸಮಿತಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ಕಳೆದ ವರ್ಷ ಸೆಪ್ಟೆಂಬರ್‌ 18, ನಟ ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬದಂದು ‘ಕಟೌಟ್‌ ಜಾತ್ರೆ’ ಆಯೋಜನೆಗೊಂಡಿತ್ತು. ವಿಷ್ಣುವರ್ಧನ್‌ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 50 ವರ್ಷ ಎನ್ನುವ ವಿಶೇಷತೆಯೂ ಈ ಹುಟ್ಟುಹಬ್ಬಕ್ಕೆ ಜೊತೆಯಾಗಿತ್ತು ಎನ್ನುವುದು ವಿಶೇಷ. ಅಂದು ಬೆಂಗಳೂರಿನ ಅಭಿಮಾನ್‌ ಸ್ಟುಡಿಯೋ, ವಿಷ್ಣು ಸಮಾಧಿ ಬಳಿ ವಿಷ್ಣುವರ್ಧನ್‌ ಅವರ 51 ಬೃಹತ್‌ ಕಟೌಟ್‌ಗಳನ್ನು ನಿಲ್ಲಿಸಲಾಗಿತ್ತು. ಇದು ವಿಷ್ಣು ಸೇನಾ ಸಮಿತಿಯ ನೇತೃತ್ವದಲ್ಲಿ ನಡೆದ ಯೋಜನೆ. ಕಟೌಟ್‌ಗಳಿಗೆ ಬೃಹತ್‌ ಹಾರಗಳನ್ನು ಹಾಕಿದ್ದರು. ಅಂದು ಸುಮಾರು ಎರಡೂವರೆ ಲಕ್ಷ ಕನ್ನಡಿಗರು ‘ಕಟೌಟ್‌ ಜಾತ್ರೆ’ಯಲ್ಲಿ ಭಾಗವಹಿಸಿದ್ದರು ಎನ್ನುವುದು ಅಂದಾಜು.

ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌ ‘ಕಟೌಟ್‌ ಜಾತ್ರೆ’ಯನ್ನು ಏಷ್ಯಾ ಬುಕ್‌ ಆಫ್‌ ರೆಕಾರ್ಡ್ ಮತ್ತು ಇಂಟರ್‌ ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್‌ ನಲ್ಲಿ ದಾಖಲಿಸಲು ಮನವಿ ಸಲ್ಲಿಸಿದ್ದರು. ಈ ಸಂಸ್ಥೆಗಳು ಅವರು ಸಲ್ಲಿಸಿದ್ದ ದಾಖಲೆ ಸಂಬಂಧ ಅನೇಕ ಹಂತದ ಪರೀಕ್ಷೆಗಳನ್ನು ನಡೆಸಿ, ಖುದ್ದಾಗಿ ಸ್ಥಳ ಪರಿಶೀಲನೆ ಮಾಡಿದ್ದರು. ಇದೀಗ ಅವರು ‘ಕಟೌಟ್ ಜಾತ್ರೆ’ಯನ್ನು ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ ಮತ್ತು ಇಂಟರ್‌ ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲಿಸಿದ್ದಾರೆ.

‘ಆ ಎರಡೂ ದಾಖಲೆಗಳ ಸರ್ಟಿಫಿಕೇಟ್‌ ಮತ್ತು ಪದಕಗಳು ನಮಗೆ ತಲುಪಿವೆ. ಈ ದಾಖಲೆ ಸ್ಥಾಪಿಸಲು ಸಾಧ್ಯವಾಗಿದ್ದಕ್ಕೆ ನಿಜಕ್ಕೂ ಹೆಮ್ಮೆಪಡುತ್ತೇವೆ. ವಿಷ್ಣುವರ್ಧನ್‌ ಅವರ ಅಗಲಿಕೆಯ 13 ವರ್ಷಗಳ ನಂತರವೂ ಅವರ ನೆನಪನ್ನು ಹಸಿರಾಗಿಡುವ ಕೆಲಸವನ್ನು ಅವರ ಅಭಿಮಾನಿಗಳು ನಿರಂತರವಾಗಿ ಮಾಡುತ್ತಿರುವುದರ ದ್ಯೋತಕ ಈ ದಾಖಲೆ. ಯೋಜನೆ ಕಾರ್ಯಸಾಧುಗೊಳಿಸಿದ ಆನಂದ್‌ ರಾಜ್‌, ಕಟೌಟ್‌ ವಿನ್ಯಾಸ ಮಾಡಿದ ರಾಜು ವಿಷ್ಣು ಮತ್ತು ಈ ಸಂಸ್ಥೆಗಳ ಜೊತೆ ಸಂವಹನ ನಡೆಸಿ, ಸಾಧ್ಯವಾಗಿಸಿದ ಸಾಹಿತಿ ಜನಾರ್ಧನ್‌ ರಾವ್‌ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎನ್ನುತ್ತಾರೆ ವೀರಕಪುತ್ರ ಶ್ರೀನಿವಾಸ್‌.

Previous articleಬದುಕಿನ ಸಂಕೀರ್ಣತೆಗಳ ಅನಾವರಣ ‘ಪಿಂಕಿ ಎಲ್ಲಿ?’
Next articleಪಾಚುವಿನ ಅದ್ಭುತ ದೀಪ ‘ಪಾಚುವುಮ್ ಅದ್ಭುತ ವಿಳಕ್ಕುಂ’

LEAVE A REPLY

Connect with

Please enter your comment!
Please enter your name here