ತಮಗೆ ಸಿನಿಮಾ ಮಾಡುವುದಾಗಿ ಹೇಳಿದ್ದ ಸುದೀಪ್‌ ಮಾತು ತಪ್ಪಿದ್ದಾರೆ ಎಂದು ಕನ್ನಡ ಚಿತ್ರರಂಗದ ಪ್ರಮುಖ ಚಿತ್ರನಿರ್ಮಾಪಕರಲ್ಲೊಬ್ಬರಾದ ಎಂ ಎನ್‌ ಕುಮಾರ್‌ ಗಂಭೀರ ಆರೋಪ ಮಾಡಿದ್ದಾರೆ. ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ನಟ ಸುದೀಪ್‌ ನಡೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

‘ನನ್ನ ನಿರ್ಮಾಣದ ಸಿನಿಮಾದಲ್ಲಿ ನಟಿಸುವುದಾಗಿ ಹೇಳಿ ಸುದೀಪ್‌ ನನ್ನಿಂದ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ. ಈ ಹಣ ಕೊಟ್ಟು ಈಗಾಗಲೇ ಎಂಟು ವರ್ಷಗಳೇ ಆಗಿವೆ. ಅದಾದ ನಂತರವೂ ಹಲವರಿಗೆ ನನ್ನ ಕಡೆಯಿಂದ ಅವರು ಹಣ ಕೊಡಿಸಿದ್ದಾರೆ. ಪೈಲ್ವಾನ್‌, ಕೋಟಿಗೊಬ್ಬ 3 ಸಿನಿಮಾಗಳ ನಂತರ ನನ್ನ ಸಿನಿಮಾ ಮಾಡುವುದಾಗಿ ಹೇಳಿದ್ದರು. ಕೊನೆಗೆ ವಿಕ್ರಾಂತ್‌ ರೋಣ ಸಿನಿಮಾ ಮುಗಿದ ನಂತರ ಎಂದಾಯ್ತು. ಈಗ ತಮಿಳು ನಿರ್ಮಾಪಕ ಸಿನಿಮಾ ಮಾಡಲು ಹೊರಟಿದ್ದಾರೆ. ನಾನು ಬಡ್ಡಿಗೆ ಹಣ ತಂದು ಸಾಲದಲ್ಲಿ ಮುಳುಗಿದ್ದೇನೆ’ ಎಂದು ಚಿತ್ರನಿರ್ಮಾಪಕ ಎಂ ಎನ್‌ ಕುಮಾರ್‌ ನಟ ಸುದೀಪ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಮುತ್ತತ್ತಿ ಸತ್ಯರಾಜ್‌
ಎಂ ಎನ್‌ ಕುಮಾರ್‌ ಈ ಹಿಂದೆ ಸುದೀಪ್‌ ಅವರಿಗೆ ನಾಲ್ಕು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಸುದೀಪ್‌ ಹೀರೋ ಆಗಿ ನಟಿಸಿರುವ ರಂಗ SSLC, ಕಾಶಿ, ಮಾಣಿಕ್ಯ ಮತ್ತು ಮುಕುಂದ ಮುರಾರಿ… ಎಂ ಎನ್‌ ಕುಮಾರ್‌ ನಿರ್ಮಾಣದ ಚಿತ್ರಗಳು. ನಿರ್ಮಾಣದ ಜೊತೆ ಸುದೀಪ್‌ರ ಕೆಲವು ಚಿತ್ರಗಳನ್ನು ಅವರು ವಿತರಣೆ ಕೂಡ ಮಾಡಿದ್ದಾರೆ. ‘ಮುಕುಂದ ಮುರಾರಿ’ ಸಿನಿಮಾ ನಂತರ ಸುದೀಪ್‌ ಮತ್ತು ಕುಮಾರ್‌ ಅವರ ಮಧ್ಯೆ ಮಾತುಕತೆಯಾಗಿದೆ. ಈ ಮಾತುಕತೆಯಂತೆ ಸುದೀಪ್‌ ಅವರು ಕುಮಾರ್‌ ಅವರಿಗಾಗಿ ಸಿನಿಮಾ ಮಾಡಬೇಕಿತ್ತು. ಇದಕ್ಕಾಗಿ ತಮ್ಮ ಕಡೆಯಿಂದ ಸಂಭಾವನೆಯೂ ಸಂದಾಯವಾಗಿದೆ ಎನ್ನುತ್ತಾರೆ ಕುಮಾರ್‌.

ಸುದೀಪ್‌ ಸಿನಿಮಾಗೆ ಕುಮಾರ್‌ ‘ಮುತ್ತತ್ತಿ ಸತ್ಯರಾಜ್‌’ ಎನ್ನುವ ಶೀರ್ಷಿಕೆಯನ್ನು ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿದ್ದರಂತೆ. ಆದರೆ ಮುಂದೆ ಸುದೀಪ್‌ ಏನೇನೋ ನೆಪಗಳನ್ನು ಹೇಳುತ್ತಾ ಬಂದರು ಎನ್ನುವುದು ಕುಮಾರ್‌ ಅವರ ಅಳಲು. ‘ನನ್ನ ನಿರ್ಮಾಣದ ಚಿತ್ರವನ್ನು ನಂದಕುಮಾರ್‌ ನಿರ್ದೇಶಿಸಬೇಕಿತ್ತು. ಅವರಿಗೂ ಅಡ್ವಾನ್ಸ್‌ ಹಣ ನೀಡಿದ್ದೇನೆ. ಇಷ್ಟೆಲ್ಲಾ ಆದರೂ ಸುದೀಪ್‌ ದೂರವಾಣಿ ಕರೆಗೆ ಸಿಗುವುದಿಲ್ಲ. ಮನೆಗೆ ಹೋದರೆ ಅವರು ಇಲ್ಲ ಎನ್ನುವ ಪ್ರತಿಕ್ರಿಯೆ ಸಿಗುತ್ತದೆ. ನಾನು 45 ಸಿನಿಮಾ ನಿರ್ಮಿಸಿದ್ದು, 200ಕ್ಕೂ ಹೆಚ್ಚು ಸಿನಿಮಾಗಳನ್ನು ವಿತರಿಸಿದ್ದೇನೆ. ನನಗೇ ಹೀಗಾದರೆ ಹೊಸಬರ ಗತಿಯೇನು?’ ಎಂದು ಕುಮಾರ್‌ ಪ್ರಶ್ನಿಸುತ್ತಾರೆ.

ಕಿಚನ್‌ ರೆನೋವೇಷನ್‌ಗೆ 10 ಲಕ್ಷ!
ಸುದೀಪ್‌ ಅವರು ತಮ್ಮ ಕಿಚನ್‌ ರೆನೋವೇಷನ್‌ಗೆ ತಮ್ಮ ಕಡೆಯಿಂದ 10 ಲಕ್ಷ ರೂಪಾಯಿ ಕೊಡಿಸಿದ್ದರು ಎನ್ನುತ್ತಾರೆ ಕುಮಾರ್‌. ‘ಕಿಚನ್‌ ಆಲ್ಟರ್‌ ಮಾಡಿಸಲು ನನ್ನಿಂದ 10 ಲಕ್ಷ ರೂಪಾಯಿ ಕೊಡಿಸಿದ್ದಾರೆ ಸುದೀಪ್‌. ನಾನು ಸುಳ್ಳು ಹೇಳುತ್ತಿದ್ದರೆ ಅವರು ತಮ್ಮ ಮನೆಯ ದೇವರ ಮೇಲೆ ಆಣೆ ಮಾಡಿ ಹೇಳಲಿ. ನಿರ್ಮಾಪಕರೊಬ್ಬರಿಗೆ ಸುದೀಪ್‌ ಕೊಡಬೇಕಿದ್ದ ಹಣವನ್ನು ನಾನು ಕೊಟ್ಟಿದ್ದೇನೆ. ನಾವು ಹೀರೋನ ಮಾತು ನಂಬಿ ನಡೆದುಕೊಳ್ಳುತ್ತೇವೆ. ಅವರು ಸಿನಿಮಾ ಮಾಡದೆ ನನ್ನನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ. ಸಾಲ, ಬಡ್ಡಿಯ ಹಣಕ್ಕಾಗಿ ನಾನು ಮನೆ ಮಾರಿದ್ದೇನೆ’ ಎಂದು ನೊಂದು ನುಡಿಯುತ್ತಾರೆ ಕುಮಾರ್‌.

ಸುದೀಪ್‌ ಮನೆ ಎದುರು ಪ್ರತಿಭಟನೆ
ತಮಗೆ ಅನ್ಯಾಯವಾಗಿದೆ ಎಂದು ನಿರ್ಮಾಪಕ ಎಂ ಎನ್‌ ಕುಮಾರ್‌ ಅವರು ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದ್ದಾರೆ. ಇನ್ನೆರೆಡು ದಿನಗಳಲ್ಲಿ ತಮಗೆ ಸೂಕ್ತ ಪ್ರತಿಕ್ರಿಯೆ ಸಿಗದಿದ್ದರೆ ಸುದೀಪ್‌ ಅವರ ಮನೆ ಎದುರು ಧರಣಿ ಕುಳಿತುಕೊಳ್ಳುವುದಾಗಿ ಹೇಳುತ್ತಾರೆ. ‘ಹಣಕಾಸಿನ ವಿಷಯದಲ್ಲಿ ನಾನು ತುಂಬಾ ಸಂಕಷ್ಟಕ್ಕೀಡಾಗಿದ್ದೇನೆ. ಅವರು ನನಗೆ ಸಿನಿಮಾ ಮಾಡುತ್ತಾರೆಂದು ಸಾಲ ಮಾಡಿದ್ದೇನೆ. ನನಗೆ ನ್ಯಾಯ ಸಿಗದಿದ್ದರೆ ದಕ್ಷಿಣ ಭಾರತ ವಾಣಿಜ್ಯ ಮಂಡಳಿಯ ಮೊರೆ ಹೋಗುತ್ತೇನೆ’ ಎಂದು ಎಚ್ಚರಿಕೆ ನೀಡುತ್ತಾರೆ ಕುಮಾರ್‌. ತಮ್ಮ ಮಾತುಗಳಲ್ಲಿ ಸತ್ಯ ಇಲ್ಲ ಎಂದು ಸುದೀಪ್‌ ಅವರು ಸಾಬೀತು ಪಡಿಸಿದರೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವುದಾಗಿ ಹೇಳುತ್ತಾರೆ.

Previous articleಸತ್ಯ ಹೆಗಡೆ ಸ್ಟುಡಿಯೋಸ್‌ ‘ಟ್ರೈನ್‌’ | ಪ್ರತಿಭಾವಂತರಿಗೆ ‘AnekaPlus’ OTTಯಲ್ಲಿ ಅವಕಾಶ
Next articleಆಸ್ಕರ್‌ ಪುರಸ್ಕೃತ ಹಾಲಿವುಡ್‌ ನಟ ಅಲನ್‌ ಅರ್ಕಿನ್‌ ನಿಧನ

LEAVE A REPLY

Connect with

Please enter your comment!
Please enter your name here