ಕನ್ನಡ ಧ್ವಜ ಸುಟ್ಟ ಎಂಇಎಸ್‌ ಮುಖಂಡರ ವಿರುದ್ಧ ನಟ ಶಿವರಾಜಕುಮಾರ್‌ ಕಿಡಿಕಾರಿದ್ದಾರೆ. ಅವರ ಮೇಲೆ ಸೂಕ್ತ ಕೈಗೊಳ್ಳುವಂತೆ ಟ್ವಿಟರ್‌ನಲ್ಲಿ ಒತ್ತಾಯಿಸಿದ್ದು, ನಟನ ನಿಲುವಿಗೆ ಭಾರಿ ಬೆಂಬಲ ವ್ಯಕ್ತವಾಗಿದೆ.

ಎಂಇಎಸ್‌ ಮುಖಂಡರು ಇಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಧ್ವಜ ಸುಟ್ಟಿರುವ ಘಟನೆ ಕುರಿತಂತೆ ರಾಜ್ಯದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ರಾಜಕೀಯ, ಸಾಮಾಜಿಕ ವಲಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿರೋಧ ವ್ಯಕ್ತವಾಗಿದ್ದು, ನಟ ಶಿವರಾಜಕುಮಾರ್‌ ಘಟನೆಯನ್ನು ಖಂಡಿಸಿ ಟ್ವೀಟ್‌ ಮಾಡಿದ್ದಾರೆ. ಇಂದು ಸಂಜೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ. ತಮ್ಮ ತಂದೆ, ವರನಟ ಡಾ.ರಾಜಕುಮಾರ್‌ ಅವರ ಫೋಟೊ ಹಾಕಿ, “ನಮ್ಮ ನಾಡ ಧ್ವಜ ಸುಟ್ಟವರಿಗೆ ತಕ್ಕ ಶಿಕ್ಷೆ ಆಗಲಿ. ನಿಜವಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಿ. ಜೈ ಕನ್ನಡ. ಜೈ ಕರ್ನಾಟಕ.” ಎಂದು ಶಿವರಾಜಕುಮಾರ್‌ ಟ್ವೀಟ್‌ ಮಾಡಿದ್ದಾರೆ. ಡಾ.ರಾಜಕುಮಾರ್‌ ಬಲಗೈಲಿ ಕನ್ನಡ ಧ್ವಜ ಹಿಡಿದಿದ್ದು, ಎಡಗೈಲಿ ಪ್ಲಕಾರ್ಡ್‌ ಹಿಡಿದ ಫೋಟೊದೊಂದಿಗೆ ಶಿವರಾಜ್‌ ತಮ್ಮ ನಿಲುವುನ್ನು ಟ್ವೀಟ್‌ ಮೂಲಕ ವ್ಯಕ್ತಪಡಿಸಿದ್ದಾರೆ. ಡಾ.ರಾಜ್‌ ಹಿಡಿದಿರುವ ಪ್ಲಕಾರ್ಡ್‌ನಲ್ಲಿ “ಆಳ್‌ ಕನ್ನಡ ತಾಯ್‌ ಬಾಳ್‌ ಕನ್ನಡ ತಾಯ್‌” ಎನ್ನುವ ಒಕ್ಕಣಿ ಇದೆ. #ಕನ್ನಡಹೋರಾಟಗಾರರನ್ನುಬಿಡುಗಡೆಗೊಳಿಸಿ ಎನ್ನುವ ಹ್ಯಾಶ್‌ ಟ್ಯಾಗ್‌ನೊಂದಿಗೆ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹಮಂತ್ರಿ ಅರಗ ಜ್ಞಾನೇಂದ್ರ ಅವರಿಗೆ ಟ್ವೀಟ್‌ ಟ್ಯಾಗ್‌ ಮಾಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅವರ ಟ್ವೀಟ್‌ ಅನ್ನು ಶೇರ್‌ ಮಾಡಿದ್ದು, ದೊಡ್ಡ ಸಂಖ್ಯೆಯಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ.

LEAVE A REPLY

Connect with

Please enter your comment!
Please enter your name here