ನಟ ಸಿದ್ಧಾರ್ಥ್ ‘ಚೀಟರ್ಸ್’ ಅನ್ನೋ ಪದ ಬಳಸಿ ಟ್ವೀಟ್ ಮಾಡಿದ್ದು, ಅದರಲ್ಲೂ ಸಮಂತಾ ತಮ್ಮ ಪತಿ ನಾಗಚೈತನ್ಯ ಅವರಿಗೆ ಡಿವೋರ್ಸ್ ಕೊಟ್ಟ ದಿನವೇ ಈ ಪೋಸ್ಟ್ ಮಾಡಿದ್ದರು ಅನ್ನೋದು ದೊಡ್ಡ ಸುದ್ದಿ ಆಗಿತ್ತು. ಸಿದ್ಧಾರ್ಥ ಅದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.
ಸಮಂತಾ ಮತ್ತು ನಾಗಚೈತನ್ಯ ಅವರ ಡಿವೋರ್ಸ್ ವಿಷಯ ಅವರವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿತ್ತು. ಆದರೆ ಈ ಸುದ್ದಿಯ ನಡುವೆ ನಟ ಸಿದ್ಧಾರ್ಥ್ ಅವರ ಟ್ವೀಟ್ ಕೂಡ ಎಲ್ಲರ ಗಮನ ಸೆಳೆಯಿತು. ಸಮಂತಾ ಮತ್ತು ನಾಗಚೈತನ್ಯ ಅವರ ಮದುವೆಗೂ ಮುನ್ನ, ಸಿದ್ಧಾರ್ಥ್ ಮತ್ತು ಸಮಂತಾ ಒಂದು ಹಂತದಲ್ಲಿ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಸಮಂತಾ ತಮ್ಮ ಡಿವೋರ್ಸ್ ನಿರ್ಧಾರವನ್ನು ಪ್ರಕಟಿಸುವ ಪೋಸ್ಟ್ ಮಾಡಿದಾಗ, ಸಿದ್ಧಾರ್ಥ್ ಅದೇ ಸಮಯದಲ್ಲಿ ಟ್ವೀಟ್ ಮಾಡಿದ್ದರು. “ಇದು ನಾನು ಶಾಲೆಯಲ್ಲಿ ಶಿಕ್ಷಕರಿಂದ ಕಲಿತ ಮೊದಲ ಪಾಠಗಳಲ್ಲಿ ಒಂದಾಗಿದೆ. ಮೋಸ ಮಾಡುವವರು ಎಂದಿಗೂ ಏಳಿಗೆಯಾಗುವುದಿಲ್ಲ. ನಿಮ್ಮ ಅಭಿಪ್ರಾಯ ಏನು? ಎಂಬುದು ಸಿದ್ಧಾರ್ಥ್ ಅವರ ಟ್ವೀಟ್ ಆಗಿತ್ತು.
ಈ ಟ್ವೀಟ್ ಅನ್ನು ನೋಡಿದ ಬಹುತೇಕರು, ಇದು ಇನ್‌ಡೈರೆಕ್ಟ್ ಆಗಿ ಸಮಂತಾ ಅವರ ಬಗ್ಗೆಯೇ ಹಾಕಲಾಗಿರುವ ಪೋಸ್ಟ್ ಎಂದು ನಂಬಿದ್ದರು. ತಮಗೆ ಮೋಸ ಮಾಡಿದ ಸಮಂತಾ ಅವರಿಗೆ ಈಗ ಡಿವೋರ್ಸ್ ಆಗಿರೋದನ್ನು ಸಿದ್ಧಾರ್ಥ್ ಎಂಜಾಯ್ ಮಾಡ್ತಾ ಇದ್ದಾರೆ ಎಂದು ಎಲ್ಲರೂ ಅನುಮಾನ ಪಟ್ಟಿದ್ದರು. ಆದರೆ, ಇತ್ತೀಚೆಗೆ ಸಂದರ್ಶನವೊಂದರಲ್ಲಿ, ಸಿದ್ಧಾರ್ಥ್ ತಮ್ಮ ಟ್ವೀಟ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದು ಯಾರಿಗೂ ಸಂಬಂಧಪಟ್ಟಿದ್ದಲ್ಲ ಎಂದು ಅವರು ಹೇಳಿದ್ದಾರೆ. ಯಾರಾದರೂ ಅದನ್ನು ಅವರಿಗೆ ಇಷ್ಟ ಬಂದ ಹಾಗೆ ಅರ್ಥೈಸಿದರೆ ಅದು ಅವರ ಸಮಸ್ಯೆ ಎಂದು ಸಿದ್ಧಾರ್ಥ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಸಿದ್ಧಾರ್ಥ್ ಅವರನ್ನು ಈ ಟ್ವೀಟ್ ಬಗ್ಗೆ ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯೆಯಾಗಿ ಸಿದ್ಧಾರ್ಥ್, “ನಾನು ರೆಗ್ಯುಲರ್ ಆಗಿ ಟ್ವೀಟ್ ಮಾಡುತ್ತಿರುತ್ತೇನೆ. ಅದರಲ್ಲಿ ಇದೂ ಒಂದು, ಇದಕ್ಕೆ ವಿಶೇಷ ಅರ್ಥ ಇಲ್ಲ” ಎಂದಿದ್ದಾರೆ. “ನಾನು ಕಳೆದ ಹನ್ನೆರೆಡು ವರ್ಷಗಳಿಂದ ಟ್ವೀಟ್ ಮಾಡುತ್ತಿದ್ದೇನೆ. ಒಂದು ದಿನ, ಬೀದಿ ನಾಯಿಗಳು ನನ್ನ ಮನೆಯ ಹೊರಗೆ ಬೊಗಳುತ್ತಿವೆ ಎಂದು ನಾನು ಹೇಳಿದರೆ ಇನ್ಯಾರೋ ಬಂದು ನೀನು ನನ್ನನ್ನು ನಾಯಿ ಎಂದು ಕರೆಯುತ್ತೀಯಾ? ಎಂದು ಕೇಳಿದರೆ ನಾನು ಏನು ಮಾಡೋಕಾಗುತ್ತೆ? ನಾನು ನಿಜವಾದ ನಾಯಿಗಳ ಬಗ್ಗೆ ಅಷ್ಟೇ ಮಾತನಾಡಿದ್ದೇನೆ ಎಂದಷ್ಟೇ ಹೇಳಬಹುದು” ಎಂದು ಸಿದ್ಧಾರ್ಥ್ ಖಾರವಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಸಿದ್ಧಾರ್ಥ್ ಏನೋ ತಮ್ಮ ಟ್ವೀಟ್‌ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಆದರೆ ಅವರ ಈ ನಾಯಿ ಮಾತನ್ನು ಹಿಡಿದುಕೊಂಡು, ಅವರು ನಾಯಿ ಎಂದಿದ್ದು ಇವರಿಗೇ ಅಂತ ಮತ್ಯಾರಾದರೂ ಸುಳ್ಳು ಸುದ್ದಿ ಹಬ್ಬಿಸದೇ ಇದ್ದರೆ ಸಾಕು.