ನಟ ಚಿಯಾನ್‌ ವಿಕ್ರಮ್‌ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ತಂಗಲಾನ್‌’ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೀಗಾಗಿಯೇ ನಟ ವಿಕ್ರಮ್‌ ಹುಟ್ಟುಹಬ್ಬದಂದೇ ಚಿತ್ರತಂಡ ಫ್ಯಾನ್ಸ್‌ಗೆ ಒಂದು ಭರ್ಜರಿ ಉಡುಗೊರೆ ಕೊಟ್ಟಿದೆ.

ಕಾಲಿವುಡ್‌ ನಟ ಚಿಯಾನ್‌ ವಿಕ್ರಮ್‌ ಇಂದು (ಏ.17) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 58ನೇ ವಸಂತಕ್ಕೆ ಕಾಲಿಟ್ಟಿರುವ ನಟನಿಗೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ವಿಕ್ರಮ್‌ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ‘ತಂಗಲಾನ್‌’ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಹೀಗಾಗಿ ಈ ಸಿನಿಮಾ ಕುರಿತಾಗಿ ಅಪ್ಡೇಟ್‌ಗಾಗಿ ಕಾದು ಕುಳಿತಿರುವ ವಿಕ್ರಮ್‌ ಅಭಿಮಾನಿಗಳಿಗೆ ಚಿತ್ರತಂಡ ಭರ್ಜರಿ ಉಡುಗೊರೆಯನ್ನೇ ಕೊಟ್ಟಿದೆ. ವಿಕ್ರಮ್‌ಗೆ ಬರ್ತ್‌ ಡೇ ವಿಶ್‌ ಮಾಡಿರುವ ಚಿತ್ರತಂಡ ಒಂದು ಪುಟ್ಟ ವಿಡಿಯೋ ಗ್ಲಿಂಪ್ಸ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ನೈಜ ಘಟನೆಯಾಧಾರಿತ ಈ ಸಿನಿಮಾದಲ್ಲಿ ವಿಕ್ರಮ್‌ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬುಡಕಟ್ಟು ಜನಾಂಗದ ನಾಯಕನಾಗಿ ಮಿಂಚಿರುವ ವಿಕ್ರಮ್‌, ವಿಭಿನ್ನವಾದ ಆಕ್ಷನ್‌ ಸೀಕ್ವೆನ್ಸ್‌ನಲ್ಲಿ ಸಖತ್‌ ರಗಡ್‌ ಆಗಿ ಕಾಣಿಸಿಕೊಂಡಿದ್ದಾರೆ.

ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಇದ್ದ ಸಮಯದಲ್ಲಿ ಕೋಲಾರದ ಚಿನ್ನದ ಗಣಿ ಸುತ್ತ ಸುತ್ತುವ ನೈಜ ಘಟನೆಗಳಿಂದ ಪ್ರೇರಿತವಾದ ಕಥೆಯೇ ಈ ‘ತಂಗಲಾನ್‌’. ಪಾ ರಂಜಿತ್ ನಿರ್ದೇಶನದ ಈ ಸಿನಿಮಾಗಾಗಿ ನಟ ವಿಕ್ರಮ್‌ ದೇಹದ ತೂಕ ಕಡಿಮೆ ಮಾಡಿಕೊಂಡಿದ್ದರು. ವಿಕ್ರಮ್‌ ಹೊರತಾಗಿ ಈ ಸಿನಿಮಾದಲ್ಲಿ ಪಾರ್ವತಿ, ಮಾಳವಿಕಾ ಮೋಹನನ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸ್ಟುಡಿಯೋ ಗ್ರೀನ್ ಮತ್ತು ನೀಲಂ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ರಿಲೀಸ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here