ವಿಜಯ್ 2024ರಲ್ಲಿ ತಮ್ಮದೇ ಆದ ರಾಜಕೀಯ ಪಕ್ಷವನ್ನು ಪ್ರಾರಂಭಿಸಲಿದ್ದಾರೆ ಮತ್ತು 2026ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ ಎನ್ನಲಾಗಿದೆ. ರಾಜಕೀಯಕ್ಕೆ ಪ್ರವೇಶಿಸಿದರೆ ಚಿತ್ರರಂಗದಿಂದ ಮೂರು ವರ್ಷಗಳ ಕಾಲ ಬ್ರೇಕ್ ತೆಗೆದುಕೊಳ್ಳಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.
ದಕ್ಷಿಣದ ಜನಪ್ರಿಯ ಹೀರೋಗಳಲ್ಲೊಬ್ಬರಾದ ನಟ ವಿಜಯ್ ಅವರ ರಾಜಕೀಯ ಪ್ರವೇಶದ ಸುದ್ದಿಗಳು ಕೇಳಿ ಬರುತ್ತಲೇ ಇವೆ. ಇವರು ರಾಜಕೀಯಕ್ಕೆ ಪ್ರವೇಶಿಸುವ ಸಲುವಾಗಿ ನಟನೆಯಿಂದ ಅಲ್ಪ ವಿರಾಮ ತೆಗೆದುಕೊಳ್ಳಲಿದ್ದಾರೆಯೇ ಅಥವಾ ರಾಜಕೀಯ ಪ್ರವೇಶದ ನಂತರ ಚಿತ್ರರಂಗದಿಂದ ಸಂಪೂರ್ಣ ನಿವೃತ್ತಿ ಹೊಂದಲಿದ್ದಾರೆಯೇ ಎಂಬ ವದಂತಿಗಳಿಂದಾಗಿ ಕುತೂಹಲ ಹೆಚುತ್ತಿದೆ. ವಿಜಯ್ ಇತ್ತೀಚೆಗೆ ಜುಲೈ 11ರಂದು ಚೆನ್ನೈನ ಪನೈಯೂರ್‌ನಲ್ಲಿರುವ ಅವರ ಕಚೇರಿ ‘ವಿಜಯ್ ಮಕ್ಕಳ್ ಇಯಕ್ಕಮ್’ (VMI) ಸದಸ್ಯರನ್ನು ಭೇಟಿಯಾದಾಗಿನಿಂದ ಈ ವದಂತಿ ಬಲವಾಗಿದೆ. ವಿಜಯ್ ಅವರು ತಮ್ಮ ಮುಂಬರುವ ಚಿತ್ರ ‘ಲಿಯೋ’ ಬಿಡುಗಡೆಗೂ ಮುನ್ನ ತಮಿಳುನಾಡಿನಾದ್ಯಂತ ಪಾದಯಾತ್ರೆ ಕೈಗೊಳ್ಳಲು ಯೋಜಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದರ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಅವರಿನ್ನೂ ಹೊರಡಿಸಿಲ್ಲ. ಅವರ ಅಭಿಮಾನಿಗಳು ವಿಜಯ್ ಅವರ ರಾಜಕೀಯ ಪ್ರವೇಶದ ಕುರಿತು ಕುತೂಹಲದಿಂದ ಕಾಯುತ್ತಿದ್ದಾರೆ.
ವಿಜಯ್ ಅವರು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಕುರಿತು, ‘ನೀವು ಭವಿಷ್ಯದ ಮತದಾರರು. ರಾಷ್ಟ್ರದ ಬಗ್ಗೆ ಯುವ ಮತದಾರರಿಗೆ ಜವಾಬ್ದಾರಿ ಇರಬೇಕು. ಮತಕ್ಕಾಗಿ ಹಣದ ಆಮಿಷ ಒಡ್ಡುವುದು ನಿಲ್ಲಬೇಕು’ ಎಂದಿದ್ದರು. ಚುನಾವಣಾ ಸಂದರ್ಭದಲ್ಲಿ ಹಣ ಹಂಚಿಕೆ ಕುರಿತು ವಿಜಯ್ ಅಭಿಪ್ರಾಯ ಹಂಚಿಕೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳಿಗೆ, ‘ನಿಮ್ಮ ಮನೆಗಳಲ್ಲಿ ಪೋಷಕರು ಮತಕ್ಕಾಗಿ ಹಣ ಪಡೆಯದಿರಲು ಮಕ್ಕಳಾಗಿ ನೀವು ಸೂಚನೆ ನೀಡಿ. ಅವರು ನಿಮ್ಮ ಮಾತನ್ನು ಕೇಳುತ್ತಾರೆ’ ಎಂದು ಸಲಹೆ ನೀಡಿದ್ದರು. ವಿಜಯ್ ರಾಜಕೀಯ ಪ್ರವೇಶಿಸಿದರೆ, ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಎಂ ಜಿ ರಾಮಚಂದ್ರನ್, ಜಯಲಲಿತ, ಮತ್ತು ಕಮಲ್ ಹಾಸನ್ ಸೇರಿದಂತೆ ತಮಿಳು ನಟರ ಸಾಲಿನಲ್ಲಿ ನಟ ವಿಜಯ್ ಸಹ ಒಬ್ಬರಾಗಲಿದ್ದಾರೆ. ವರದಿಗಳ ಪ್ರಕಾರ ವಿಜಯ್ 2024ರಲ್ಲಿ ತಮ್ಮದೇ ಆದ ರಾಜಕೀಯ ಪಕ್ಷವನ್ನು ಪ್ರಾರಂಭಿಸಲಿದ್ದಾರೆ ಮತ್ತು 2026ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ ಎನ್ನಲಾಗಿದೆ. ರಾಜಕೀಯಕ್ಕೆ ಪ್ರವೇಶಿಸಿದರೆ ಚಿತ್ರರಂಗದಿಂದ ಮೂರು ವರ್ಷಗಳ ಕಾಲ ಬ್ರೇಕ್ ತೆಗೆದುಕೊಳ್ಳಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಈ ಎಲ್ಲಾ ವದಂತಿಗಳು ನಟನಿಂದ ಅಧಿಕೃತ ಪ್ರಕಟಣೆಗಾಗಿ ಕಾಯುತ್ತಿವೆ.