ಕಾವೇರಿ ನೀರಿನ ಸಮಸ್ಯೆ ಕುರಿತಂತೆ ಕೊನೆಗೂ ಕನ್ನಡ ಚಿತ್ರರಂಗ ಮೌನ ಮುರಿದಿದೆ. ಮೈಸೂರಿನಲ್ಲಿ ನಟ, ನಿರ್ಮಾಪಕ ರಾಘವೇಂದ್ರ ರಾಜಕುಮಾರ್‌ ಈ ಬಗ್ಗೆ ಮಾತನಾಡಿದ್ದಾರೆ. ನಟರಾದ ದರ್ಶನ್‌, ಸುದೀಪ್‌ ಟ್ವೀಟ್‌ ಮಾಡಿದ್ದು, ಸೂಕ್ತ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

ತಮಿಳಿನಾಡಿಗೆ ಕಾವೇರಿ ನೀರು ಬಿಡುವ ವಿಷಯಕ್ಕೆ ಸಂಬಂಧಿಸಿದಂತೆ ಕಳೆದೆರೆಡು ತಿಂಗಳಿಂದ ಹೋರಾಟ ನಡೆಯುತ್ತಿದೆ. ಮಳೆಯ ಕೊರತೆಯಿಂದಾಗಿ ಜಲಾಶಯದಲ್ಲಿ ನೀರಿಲ್ಲ. ಆದರೆ ತಮಿಳುನಾಡಿಗೆ ನೀರು ಬಿಡುವಂತೆ ನ್ಯಾಯಾಲಯ ಆದೇಶಿಸಿದ್ದು, ಇದರ ವಿರುದ್ಧ ರೈತ ಸಂಘಟನೆಗಳು, ಕನ್ನಡ ಸಂಘಟನೆಗಳು ಹೋರಾಟ ನಡೆಸುತ್ತಿವೆ. ನಿನ್ನೆಯವರೆಗೂ ಕಾವೇರಿ ಸಮಸ್ಯೆ ಕುರಿತಂತೆ ಕನ್ನಡ ಚಿತ್ರರಂಗದ ಯಾರೂ ಪ್ರತಿಕ್ರಿಯಿಸಿರಲಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಷ ವ್ಯಕ್ತವಾಗಿತ್ತು. ಇಂದು ಮೈಸೂರಿನಲ್ಲಿ ನಟ, ನಿರ್ಮಾಪಕ ರಾಘವೇಂದ್ರ ರಾಜಕುಮಾರ್‌ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ಅಪ್ಪಾಜಿ (ರಾಜಕುಮಾರ್‌) ಕನ್ನಡ ನಾಡು, ನುಡಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ನಮ್ಮ ಕುಟುಂಬದವರು ಎಂದಿಗೂ ಇದೇ ಮಾರ್ಗದಲ್ಲಿ ನಡೆಯುತ್ತೇವೆ. ನಾವು ಹೋರಾಟಕ್ಕೆ ಸಿದ್ಧ’ ಎಂದಿದ್ದಾರೆ.

ನಟ ದರ್ಶನ್‌ ಅವರು ಟ್ವೀಟ್‌ ಮಾಡಿ, ‘ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ’ ಎಂದಿದ್ದಾರೆ. ನಟ ಸುದೀಪ್‌ ಕೂಡ ಟ್ವೀಟ್‌ ಮಾಡಿ, ‘ನಮ್ಮ ಕಾವೇರಿ ನಮ್ಮ ಹಕ್ಕು . ಅಷ್ಟು ಒಮ್ಮತದಿಂದ ಗೆಲ್ಲಿಸಿರುವ ಸರ್ಕಾರ ಕಾವೇರಿಯನ್ನೇ ನಂಬಿರುವ ಜನರನ್ನು ಕೈಬಿಡುವುದಿಲ್ಲ ಎಂದು ನಾನು ನಂಬಿದ್ದೇನೆ . ಈ ಕೂಡಲೇ ತಜ್ಞರು ಕಾರ್ಯತಂತ್ರ ರೂಪಿಸಿ ನ್ಯಾಯ ನೀಡಲಿ ಎಂದು ಒತ್ತಾಯಿಸುತ್ತೇನೆ . ನೆಲ -ಜಲ -ಭಾಷೆಯ ಹೋರಾಟದಲ್ಲಿ ನನ್ನ ಧ್ವನಿಯೂ ಇದೆ.
ಕಾವೇರಿ ತಾಯಿ ಕರುನಾಡನ್ನು ಕಾಪಾಡಲಿ’ ಎಂದಿದ್ದಾರೆ. ದರ್ಶನ್‌ ಟ್ವೀಟ್‌ಗೆ ಅವರ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದವರು ಕಾವೇರಿ ಸಮಸ್ಯೆಗೆ ಯಾವ ರೀತಿ ಸ್ಪಂದಿಸಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.

LEAVE A REPLY

Connect with

Please enter your comment!
Please enter your name here