ಇಪ್ಪತ್ತೆರೆಡು ವರ್ಷದ ವೃತ್ತಿ ಬದುಕಿನಲ್ಲಿ ಮಧುಬಾಲ ನಟಿಸಿದ ಚಿತ್ರಗಳ ಸಂಖ್ಯೆ ಎಪ್ಪತ್ತೆರೆಡು. ಆಕೆ ಬದುಕಿದ್ದು ಕೇವಲ ಮೂವತ್ತಾರು ವರ್ಷ. ಎರಡು ದಶಕಗಳ ಕಾಲ ಆಕೆ ಹಿಂದಿ ಚಿತ್ರರಂಗವನ್ನು ಆಳಿದರು. ಹಲವು ಬಗೆಯ ವಿದ್ಯಮಾನ ತುಂಬಿದ ನಟಿಯ ಬದುಕು ಎಂದಿಗೂ ಸೆಳೆಯುವ ಕಥನ. ಲೇಖಕ ರಮೇಶ ಅರೋಲಿ ಅವರು ‘ಮಧುಬಾಲ’ ಜೀವನ ಕಥನ ರಚಿಸಿದ್ದಾರೆ. ಈ ಕೃತಿಗೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಿರಿಯ ಲೇಖಕ ಡಾ.ಕೆ.ಪುಟ್ಟಸ್ವಾಮಿ ಅವರ ಮುನ್ನುಡಿಯಿದೆ. ಮತ್ತೊಬ್ಬ ಲೇಖಕ ಟಿ.ಎಸ್.ಗೊರವರ ಅವರು ತಮ್ಮ ‘ಸಂಗಾತ’ ಪ್ರಕಾಶನದಿಂದ ಪುಸ್ತಕ ಪ್ರಕಟಿಸಿದ್ದು, ನಾಳೆ ಲೋಕಾರ್ಪಣೆಗೊಳ್ಳುತ್ತಿದೆ. ಈ ಕೃತಿಯಲ್ಲಿನ ಆಯ್ದ ಭಾಗ ಇಲ್ಲಿದೆ.
ಬೆಳ್ಳಿಪರದೆಯ ಮೇಲೆ ಅಮರ ಪ್ರೇಮಿಗಳಾಗಿ ಮಿಂಚಿದ ಅನೇಕ ಸಿನಿಮಾ ನಟ-ನಟಿಯರಲ್ಲಿ, ಕೆಲವರಾದರೂ ನಿಜ ಜೀವನದಲ್ಲೂ ಒಟ್ಟಿಗೆ ಬಾಳುವ ಅದೃಷ್ಟ ಪಡೆದಿದ್ದರು. ಸಂಬಂಧ ಮುರಿದು ಬಿದ್ದರೂ ಅದನ್ನು ಗೌರವದಿಂದ ಕಾಣುವ, ಆ ಆಪ್ತತೆಯನ್ನು ಕಾಯ್ದುಕೊಳ್ಳುವ ವಾತಾವರಣಯಿತ್ತು ಆಗ. ತಮ್ಮ ಆರಂಭದ ಸಿನಿಮಾ ಪಾತ್ರಗಳ ಮೂಲಕವೇ ರೋಮ್ಯಾಂಟಿಕ್ ಜೋಡಿಗಳು ಎಂದು ಕರೆಸಿಕೊಂಡ ಮೋತಿಲಾಲ್ ಮತ್ತು ಶೋಬನಾ ಸಮರ್ಥ, ಕಾಮಿನಿ ಕೌಶಾಲ್ ಮತ್ತು ದಿಲೀಪ್ ಕುಮಾರ್ (ನಂತರ ದೂರವಾಗುತ್ತಾರೆ), ರಾಜ್ ಕಪೂರ್ ಮತ್ತು ನರ್ಗಿಸ್, ದೇವ್ ಆನಂದ್-ಸುರೈಯಾ, ಗುರುದತ್-ವಹೀದಾ ರೆಹಮಾನ್, ಅಶೋಕ್ ಕುಮಾರ್-ನಳಿನಿ ಜಯವಂತ್ ಹಾಗೂ ಮಧುಬಾಲ ಮತ್ತು ದಿಲೀಪ್ ಕುಮಾರ್ ಅಭಿಮಾನಿಗಳ ಪಾಲಿಗೆ ಆದರ್ಶ ಪ್ರೇಮಿಗಳಂತೆ ಕಾಣುತ್ತಿದ್ದರು. ಬದುಕಲ್ಲಿ ಒಂದಾಗದ ಜೋಡಿಗಳು, ಅವರನ್ನು ಕಾಣಲು ನಾನಾ ನೆಪ ಹುಡುಕಿ ಹೊರಡುತಿದ್ದರು. ಒಬ್ಬ ದಿಲೀಪ್ ಕುಮಾರ್ ಮದ್ರಾಸಿನಲ್ಲಿ ಶೂಟಿಂಗ್ ಬಿಟ್ಟು ಈದ್ ಆಚರಿಸಲು ನೇರ ಬೊಂಬಾಯಿನ ಮಧುಬಾಲಳ ಹತ್ತಿರ ಬರುವಂತೆ.
ತೆರೆಯ ಮೇಲಿನ ಆಳವಾದ ಆ ಪ್ರೀತಿ, ಭಾವತೀವ್ರತೆ, ನಟನೆಯ ಉತ್ತುಂಗವನ್ನ “ಆವಾರ”, ” ತರಾನ” “ಚೌದವಿನ್ ಕಾ ಚಾಂದ್”, “ಮುಘಲ್-ಎ-ಅಜಾಮ್” ಚಿತ್ರಗಳಲ್ಲಿ ಕಾಣಬಹುದು. ಮಧುಬಾಲ-ದಿಲೀಪ್ ಕುಮಾರ್ ಮತ್ತು ದೇವ್ ಆನಂದ್-ಸುರೈಯಾ ರ ಜೋಡಿ ಹೊರೆತು ಬೇರೆಲ್ಲ ನಟ-ನಟಿಯರಿಗೆ ಅದಾಗಲೇ ಮದುವೆ ಆಗಿದ್ದರೂ, ಮತ್ತವರ ಪ್ರೇಮ ಸಿನಿಜಗತ್ತಿನ ಬಹುತೇಕರಿಗೆ ಗೊತ್ತಿದ್ದರೂ, ಮನೆ ಒಡೆದ ಪ್ರಕರಣಗಳು ಕಡಿಮೆ. ಒಂದು ರಾಜ್ ಕಪೂರ್-ನರ್ಗಿಸ್ ಸಂಸಾರ ಬಿಟ್ಟರೆ. “ಮದರ್ ಇಂಡಿಯಾ” ಸಿನಿಮಾದಲ್ಲಿ ನಟಿಸುವಾಗಲೇ ನರ್ಗಿಸ್ ರಾಜ್‍ಕಪೂರ್ ಬದುಕಿನಿಂದ, ಆರ್,ಕೆ, ಸ್ಟುಡಿಯೋಸ್ ನಿಂದ ಹೊರ ಬಿದ್ದು, ಸುನೀಲ್ ದತ್ತರನ್ನು ಮದುವೆ ಆಗಿ, ಮತ್ತೆಂದೂ ರಾಜ್‍ಕಪೂರ್‍ರತ್ತ ತಿರುಗಿ ನೋಡಲಿಲ್ಲ. ಕಾಮಿನಿ ಕೌಶಾಲ್ ಮತ್ತು ದಿಲೀಪ್ ಕುಮಾರ್ ರ ನಡುವಿನ ಸಂಬಂಧ ತುಂಬಾ ಗಂಭಿರವಾಗಿತ್ತು ಆದರೆ, ತನ್ನ ಸಹೋದರಿ ತೀರಿಕೊಂಡ ಮೇಲೆ ಆಕೆಯ ಗಂಡನನ್ನು ವರಿಸುವ ಅನಿವಾರ್ಯ ಕಾರಣ ಅದು ಸಂಪೂರ್ಣ ಮುರಿದು ಬಿತ್ತು. ಇನ್ನು ಗುರುದತ್ ಬದುಕಲ್ಲಿ ಅದಾಗಲೇ ಗಾಯಕಿ ಗೀತಾರನ್ನು ಮದುವೆ ಆಗಿದ್ದರೂ, ವಹೀದಾ ರೆಹಮನ್ ರ ಮೇಲಿನ ಆತನ ಪ್ರೀತಿ ಕಡಿಮೆ ಆಗದೆ, ಸಂಬಂಧಗಳನ್ನು ನಿಭಾಯಿಸಲು ಆಗದೆ, ಒಬ್ಬ ಪ್ರತಿಭಾವಂತ, ಸೂಕ್ಷ್ಮ ಮನಸಿನ ದತ್ ಆತ್ಮಹತ್ಯೆಗೆ ಶರಣಾದರು. ಅಷ್ಟೇಕೆ ನಮ್ಮ ಕನ್ನಡ ಚಿತ್ರ ರಂಗದಲ್ಲಿಯೇ ಎಂತೆಂಥ ದುರಂತ ನಾಯಕಿಯರ ಕತೆ ಕಣ್ಣೆದುರಿದೆ ಕಲ್ಪನಾ, ಮಂಜುಳ, ಆರತಿ…ಹೀಗೆ ಪಟ್ಟಿ ಬೆಳೆಯುತ್ತದೆ.
ಮತ್ತೆ ಮತ್ತೆ ಪತ್ರಕರ್ತರು ಕೇಳುತಿದ್ದ ಮಧುಬಾಲ ಮತ್ತು ದಿಲೀಪ್ ಕುಮಾರ್ ರ ಪ್ರೀತಿಯ ಕುರಿತಾದ ಪ್ರಶ್ನೆಗೆ ತಮ್ಮ ಆತ್ಮಕತೆಯಲ್ಲಿ ಸ್ವತಃ ಈ ಕುರಿತು ಸ್ಪಷ್ಟವಾಗಿ ಬರೆಯದಿದ್ದರೂ ಆ ಕುರಿತು ಒಲವು ಇದ್ದ ಬಗ್ಗೆ ಒಪ್ಪಿಕೊಳ್ಳುತ್ತಾರೆ. “ಅದೆಲ್ಲ (ಮಧುಬಾಲ ಜೊತೆಗಿನ ಪ್ರೀತಿ) ನನಗಾಯ್ತಾ? ದಿನ ಪತ್ರಿಕೆಗಳು, ವಾರಪತ್ರಿಕೆಗಳು ಬರೆದ ಹಾಗೇಯೆ ನನಗೆ ಮಧುಬಾಲ ಮೇಲೆ ಪ್ರೀತಿ ಆಗಿತ್ತಾ? ಆ ಕಾಲದ ಒಂದು ಹೊತ್ತಲ್ಲಿ ಒಬ್ಬ ಸಹ-ನಟನಾಗಿ, ವ್ಯಕ್ತಿಯಾಗಿ ಆಕೆಯ ಸೌಂದರ್ಯಕ್ಕೆ ಆಕರ್ಷಿತನಾಗಿದ್ದು, ಆಕೆಯ ಬಗ್ಗೆ ಮೆಚ್ಚುಗೆ ಇದ್ದದ್ದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ. ‘ತರಾನ’ ಸಿನಿಮಾ ಯಶಸ್ಸಿನ ಬಳಿಕ, ವೀಕ್ಷಕರು, ಅಭಿಮಾನಿಗಳು ನಮ್ಮಿಬ್ಬರ ಜೋಡಿಯನ್ನು ಬೆಳ್ಳೆಪರದೆಯ ಮೇಲೆ ನೋಡಿ “ಇವರದು ಸರಿಯಾದ ಜೋಡಿ” ಅಂದುಕೊಂಡ ಕಾರಣ ನಮ್ಮಿಬ್ಬರ ನಡುವೆ ಒಳ್ಳೆಯ ಬಾಂಧವ್ಯ ಮತ್ತು ಆತ್ಮೀಯತೆಯಿತ್ತು. ಆಕೆಯ ಜೀವನೋತ್ಸಾಹ ಮತ್ತು ಉಲ್ಲಾಸಿತನ ನನ್ನನ್ನು ನಾಚಿಕೆ ಸ್ವಭಾವದಿಂದ ಆರಾಮಾಗಿ ಹೊರಗೆಳೆದು ಬಿಡಬಲ್ಲ ಹೆಣ್ಣಾಗಿದ್ದಳು. ಬೆಳೆಸಿಕೊಂಡ ಖಾಲಿತನವನ್ನು ತನ್ನ ಲವಲವಿಕೆಯಿಂದ ಅನಾಯಾಸವಾಗಿ ತುಂಬಿ, ಮಾಯ ಬೇಕಾದ ಗಾಯಕ್ಕೆ ಕಾಲದ ಮದ್ದಾಗಿ ನನಗೆ ಗೋಚರಿಸಿದ್ದಳು” (2014)
ಯಾವಾಗ ತನ್ನ ಮತ್ತು ದಿಲೀಪ್ ಕುಮಾರ್ ರ ಮದುವೆ ಆಗುವುದೇ ಇಲ್ಲ ಅಂತ ಖಚಿತವಾಯಿತೊ, ಆಗ ಮಧುಬಾಲ ಕಿಶೋರ್ ಕುಮಾರ್ ರನ್ನು ಮದುವೆ ಆಗಲು ನಿರ್ಧರಿಸಿಬಿಟ್ಟಳು. ಆಗ ದಿಲೀಪ್ ಕುಮಾರ್ ಸಹ ಸೈರಾ ಬಾನು ಅವರನ್ನು ವರಿಸಿದರು. ಎರಡೂ ಅನಿರೀಕ್ಷಿತ ಬಂಧಗಳು. ಅವರಿಬ್ಬರ ಬದುಕಲ್ಲಿ ಅಗಾಧ ಪ್ರೇಮವಿತ್ತು, ಮುನಿಸಿತ್ತು, ಅಳುವಿತ್ತು, ವಿರಹಯಿತ್ತು, ಕೋರ್ಟ್ ಕೇಸುಗಳಾಗಿ ಇಬ್ಬರು ಕೋರ್ಟ್ ಮೆಟ್ಟಿಲು ಹತ್ತಿದರು, ಇಬ್ಬರೂ ಪಠಾಣರಾಗಿದ್ದರು, ಸಮಖ್ಯಾತಿ, ಸ್ಥಾನ ಹೊಂದಿದ್ದರು, ಒಂದು ಸಿನಿಮಾ ಕತೆಗೆ ಬೇಕಾದ ಎಲ್ಲಾ ಅನುಭವಗಳು ಅವರ ಬದುಕಲ್ಲಿ ಘಟಿಸಿಬಿಟ್ಟಿದ್ದವು. ಆದರೆ ಅವರೆಂದೂ ಕೂಡಿ ಬದುಕುವ ಘಳಿಗೆ ಬರಲೇ ಇಲ್ಲ…ಆ ಬಯಕೆಯ ಹೆಗ್ಗುರುತು ಅವರಿಬ್ಬರ ಬದುಕಿನ ಮೇಲೆ ಸ್ಪಷ್ಟವಾಗಿ ಅಚ್ಚೊತ್ತಿದ್ದವು. ಬಹುಶಃ ಮಧುಬಾಲಳ ಹೃದಯ ಇದೆಲ್ಲವನ್ನು ತನ್ನೊಳಗೆ ಇಳಿಸಿಕೊಂಡು, ಇನ್ನೆಷ್ಟೂ ಸಹಿಸದೆ ಆಕೆಯನ್ನು ಜೀವಂತ ಹಿಂಡಿಬಿಟ್ಟಿತು.
ಒಂದು ವದಂತಿಗೂ ಸಾಮಾಜಿಕ ಹಿನ್ನೆಲೆ ಇರುತ್ತದೆ. ಕಾಲದ ಸನ್ನಿವೇಶಗಳು ವದಂತಿಗಳನ್ನು ಹುಟ್ಟು ಹಾಕುತ್ತವೆ. ಅವುಗಳ ಸೃಷ್ಠಿ ಹಿಂದೆ ಕೆಲವರಿಗಾದರೂ ಸಂತೋಷವೊ ಅಥವಾ ವಿಕೃತ-ಸಂತೋಷವೋ, ಲಾಭಗಳ ಲೆಕ್ಕಾಚಾರವೋ ಇದ್ದೇ ಇರುತ್ತದೆ. ಅದು ಖ್ಯಾತನಾಮರ ಬಗ್ಗೆ ಹಬ್ಬುವ ವದಂತಿಗಳಿಗೆ ಕಾಲು ತುಸು ಉದ್ಧವೆ ಇರುತ್ತವೆ. ಅವು ಸಂಚರಿಸುವ, ಹಬ್ಬುವ ವೇಗ ಸಹ ಹೆಚ್ಚಿರುತ್ತದೆ. ಇಂಥವೇ ವದಂತಿಗಳು ಮಧುಬಾಲಳ ಪ್ರೀತಿಯ ಬಗ್ಗೆ ಚಾಲ್ತಿಯಲ್ಲಿದ್ದವು. ಹೇಳಿ ಕೇಳಿ ಚಿತ್ರನಟಿ, ಅದೂ ಚೆಲುವೆ, ಇನ್ನು ಆಕೆಯ ಜೊತೆ ನಟಿಸಿದ ನಟರೊಂದಿಗೆ, ಆಕೆಯ ಸಿನಿಮಾಗಳನ್ನು ನಿರ್ದೇಶಿಸಿದ ನಿರ್ದೇಶಕರ ಜೊತೆ ನಂಟು ಬೆಸೆದ, ಅವರ ನಡುವೆ ಸಂಬಂಧ ಕಲ್ಪಿಸಿ ಕಿವಿಯಿಂದ ಕಿವಿಗೆ ವರ್ಗಾಯಿಸಿದ ಮಾತುಗಳಿಗೇನು ಕಡಿಮೆ ಇದ್ದಿಲ್ಲ. ಇದರಲ್ಲಿ ಕೆಲವು ಸತ್ಯವೂ ಆಗಿದ್ದವು, ಮತ್ತು ಕೆಲವು ಬರಿ ಕಿವಿಮಾತು ಆಗಿದ್ದವು. ಆಕೆ ತಾನು ಮನಸು ಕೊಟ್ಟವರಿಂದಲೂ ದೂರವಾಗಿ, ವರಿಸಿದಾತನಿಂದಲೂ ದೂರವಾಗಿ ಅನುಭವಿಸಿದ ನೋವು ಮಾತ್ರ ಕೊನೆಯವರೆಗೂ ಏಕಾಂಗಿಯಾಗಿ ಉಂಡು, ಇನ್ನೊಬ್ಬರ ಜೊತೆ ಹಂಚಿಕೊಳ್ಳದಾದಳು. ಸಿನಿಮಾ ರಂಗದಲ್ಲಿ ಮಧುಬಾಲ ‘ಪ್ರಿಯಕರರ’ ಹೆಸರು ತಳಕು ಹಾಕಲಾಗಿತ್ತು. ಅವುಗಳಲ್ಲಿ ಮೂರು ಹೆಸರಾದರು ಆಕೆಯ ಮನದಲ್ಲಿ ಇದ್ದವು ಎಂಬುದು ಸುಳ್ಳಲ್ಲ.
ಆದರೆ, ದಿಲೀಪ್ ಕುಮಾರ್ ಮಧುಬಾಲ ಜೊಗೆ ನಟಿಸುವಾಗ, ರೊಮ್ಯಾಂಟಿಕ್ ಸೀನ್ ದೃಶ್ಯಗಳಲ್ಲಿ ಅದೆಷ್ಟು ತನ್ಮಯತೆಯಿಂದ ನಟಿಸುತ್ತಿದ್ದನೆಂದರೆ, ಆತ ನಟಿಸಿದಂತೆ ಇರದೆ, ನಿಜ ಜೀವನದಲ್ಲಿ ಮಧುಬಾಲಳೆದುರು ತನ್ನ ಒಲವನ್ನು ವ್ಯಕ್ತಪಡಿಸಿದಂತೆ ಇರುವುದನ್ನು ಚಿತ್ರತಂಡ, ನಿರ್ದೇಶಕ, ಸ್ವತಃ ಮಧುಬಾಲಳ ಅನುಭವಕ್ಕೆ ಬಂದಿದೆ. ಆ ಕಣ್ಣುಗಳಲ್ಲಿ ವಿವರಣೆಗೆ ಸಿಗದ ಮಿಂಚೊಂದು ಹಾದು ಹೋಗುತಿತ್ತು. ಆತನ ಎದೆ ಬಡಿತದ ಸದ್ದು ಮಧುಬಾಲಗೆ ಆತ ಕೇವಲ ಸಿನಿಮಾದಲ್ಲಿ ಆಕೆಯನ್ನು ಬಯಸುತ್ತಿಲ್ಲ, ಬದಲಾಗಿ ಬದುಕಲ್ಲಿ ತನ್ನನ್ನು ಕೋರುತ್ತಿದ್ದಾನೆ ಎಂಬುದು ಆಕೆಗೆ ಖಾತರಿ ಆಗಿತ್ತು.ಕಿಶೋರ್ ಕುಮಾರ್ ರನ್ನು ವರಿಸುವ ಮೊದಲು ಮಧುಬಾಲಳ ಹೆಸರಿನೊಂದಿಗೆ ಪ್ರೇಮ ದ ನೆಪದಲ್ಲಿ ಥಳಕು ಹಾಕಿಕೊಂಡಿದ್ದ ಹೆಸರುಗಳಲ್ಲಿ ಖ್ಯಾತನಾಮರು ಇದ್ದರು. ಆಕೆ ಅನಾರ್ಕಲಿಯಾಗಿ ನಟಿಸಿದ ಮುಘಲ್-ಎ-ಅಜಾಮ್ ಚಿತ್ರದ “ಪ್ಯಾರ್ ಕಿಯಾ ತೊ ಡರ್ನಾ ಕ್ಯಾ…ಜಬ್ ಪ್ಯಾರ್ ಕಿಯಾ ತೋ ಢರ್ನಾ ಕ್ಯಾ…ಪ್ಯಾರ ಕಿಯಾ ಕೊಯಿ ಚೋರಿ ನಹೀ ಕಿ, ಛುಪ್-ಛುಪ್ ಆಹೇಂ ಭರ್ನಾ ಕ್ಯಾ…” ಅಂತ ಹಾಡುವಾಗ ಎಂಥವರ ಎದೆಯಲ್ಲೂ ಪ್ರೀತಿ ಮಾಡಿದರೆ ಧೈರ್ಯದಿಂದ ಎದುರಿಸಬೇಕು, ಪ್ರೀತಿಸುವುದು ಅಂತಹ ಅಪರಾಧವೇನಲ್ಲ ಎಂದು ಹುಮ್ಮಸ್ಸಿನಿಂದ ಭಾವುಕರಾಗಿ ಯೋಚಿಸುವುದು ಸಹಜ. ಆದರೆ ನಿಜ ಜೀವನದಲ್ಲಿ ಪ್ರೀತಿಯಾಗಿ, ಅದನ್ನು ಉಳಿಸಿಕೊಳ್ಳುವಲ್ಲಿ ಮನುಷ್ಯರು ಮಾಡುವ ಅನೇಕ ಪ್ರಯತ್ನಗಳು ಸಫಲ ಆಗಿಯೇ ತೀರುತ್ತವೆ ಅನ್ನುವುದು ಸಿನಿಮೀಯ ನಡೆ ಆಗುತ್ತದೆ.
ಮಧುಬಾಲ ತಾನು ದಿಲೀಪ್ ಕುಮಾರ್ ಜೊತೆ ನಟಿಸಿದ “ಅಮರ್” ಮತ್ತು “ಮುಘಲ್-ಎ-ಅಜಾಮ್” ಚಿತ್ರಗಳಲ್ಲಿ ತನ್ನ ಉತ್ಕಟ ಪ್ರೇಮವನ್ನು ವ್ಯಕ್ತ ಪಡಿಸುವ ಪ್ರೇಯಸಿಯಾಗಿ ನಟಿಸಿ, “ಅಮರ್” ಚಿತ್ರದಲ್ಲಿ ಆದರ್ಶಕ್ಕಾಗಿ ಪ್ರೀತಿಯನ್ನು ತ್ಯಾಗ ಮಾಡಿದರೆ, ಮುಘಲ್-ಎ-ಅಜಾಮ್ ನಲ್ಲಿ ರಾಜ್ಯಾಧಿಕಾರದೆದುರು ತನ್ನ ಇನಿಯನನ್ನು ಉಳಿಸಿಕೊಳ್ಳಲು ಆತನನ್ನು ತ್ಯಜಿಸಬೇಕಾಗುವ ಪ್ರಸಂಗ ಎದುರಾಗುವುದು ಬಿಟ್ಟರೆ, ಆಕೆಯ ಇನ್ನಿತರೆ ಯಶಸ್ವಿ ಚತ್ರಗಳಾದ “ತರಾನ”, “ಕಾಲಾ ಪಾನಿ”, “ಹೌರಾ ಬ್ರಿಡ್ಜ್” “ಬಾಯ್ ಫ್ರೆಂಡ್” “ಹಾಫ್ ಟಿಕೆಟ್”, “ಮಹಲ್” “ಮಿಸ್ಟರ್ ಅಂಡ್ ಮಿಸೆಸ್ 55″, ‘”ಏಕ್ ಸಾಲ್”, “ರೇಲ್ ಕಿ ಡಿಬ್ಬಾ” ದಂತಹ ಅನೇಕ ಚಿತ್ರಗಳಲ್ಲಿ ಪ್ರೇಮ ಪ್ರಕರಣಗಳು ಕ್ಲೈಮಾಕ್ಸ್ ನಲ್ಲಿ ಸುಖಾಂತ್ಯ ಕಾಣುವುದಲ್ಲದೆ, ತನ್ನ ಪ್ರೇಮಿಯನ್ನು ಪಡೆದು ಕೊಳ್ಳುವ ಭಾಗ್ಯವಂತೆಯಾಗಿ ಕಾಣುತ್ತಾಳೆ. ಆದರೆ ನಿಜ ಜೀವನದಲ್ಲಿ ಆಕೆಗೆ ಅಂತಹ ಪ್ರೇಮ ಮತ್ತು ಪ್ರಿಯತಮ ಸಿಗದೆ ಅಂತ್ಯದವರೆಗೂ ಹಿಡಿ ಪ್ರೀತಿಗಾಗಿ ಹಾತೊರೆದಳು. ಇದೇ ಆಕೆಯನ್ನು ಇನ್‍ಸೆಕ್ಯೂರ್ ಅನ್ನಾಗಿಸಿತು, ಖಿನ್ನತೆಗೆ ದೂಡಿತು. ಇನ್ನು ಆಕೆಯ ವಾರಿಗೆ ನಟಿಯರಲ್ಲಿ ಕೆಲವರಾದರು ತಮ್ಮ ಪ್ರೇಮವನ್ನು ಮದುವೆಯವರೆಗೂ ನಡೆಸಿಕೊಂಡು ಬದುಕು ನಡೆಸಿದವರು ಹೆಸರಿಸಲು ಸಿಕ್ಕರೆ; ಇನ್ನುಳಿದಂತೆ ಆ ಜಮಾನದ ಅನೇಕ ನಟಿಯರ ಕತೆ, ಸಂಬಂಧಗಳ ವಿಷಯದಲ್ಲಿ ಒಂದು ಅದಾಗಲೇ ಮೊದಲ ಮದುವೆ ಆದ ನಟ, ನಿರ್ದೇಶಕರ, ನಿರ್ಮಾಪಕರಿಗೆ ಎರಡನೆಯ ಸಂಬಂಧವಾಗಿ ಮುಂದುವರೆದು, ವರಿಯದೆಯೋ ತುಂಬಾ ಕಹಿಯಾದ ಅನುಭವದಂತೆ ಉಳಿದಿದ್ದು ಚಿತ್ರರಂಗದ ಮತ್ತೊಂದು ದುರಂತವನ್ನು ಎತ್ತಿ ತೋರಿಸುತ್ತದೆ. ಕೆಲವರಂತು ಹಳಸಿದ ತಮ್ಮ ಸಂಬಂಧಗಳಿಂದ ಹೊರ ಬಾರದೆ, ಆ ಕತ್ತಲ ಜಗತ್ತಿನಿಂದ ತಪ್ಪಿಸಿಕೊಳ್ಳದೆ, ನಿತ್ಯ ಮದ್ಯಪಾನಿಗಳಾಗಿ ಬದುಕು ಮುಗಿಸಿದವರ ದೊಡ್ಡ ಸಂಖ್ಯೆಯೇ ಇದೆ.
ಗಂಡು ಪ್ರಧಾನ್ಯದ ಸಿನಿರಂಗದಲ್ಲಿ ಸೆಳೆಯುವ ಬಟ್ಟಲು ಕಂಗಳ, ಬೆಣ್ಣೆಯಂತಹ ಚೆಲುವೆ ಮಧುಬಾಲಳ ಹಿಂದೆ ಬಿದ್ದವರ ಸಂಖ್ಯೆ ಹೆಚ್ಚೇ ಇದ್ದರೂ ಗಾಸಿಪ್ ರೂಪದಲ್ಲಿ ಆಕೆಯ ಹೆಸರಿನೊಂದಿಗೆ ಸೇರಿಕೊಂಡಿದ್ದು ಲತೀಫ್, ಮೋಹನ್ ಸಿನ್ಹಾ, ಕಮಲ್ ಅಮ್ರೋಹಿ, ಪ್ರೇಮ್ ನಾಥ್, ಝುಲ್ಫಿಕರ್ ಅಲಿ ಭುಟ್ಟೊ, ದಿಲಿಪ್ ಕುಮಾರ್, ಪ್ರದೀಪ್ ಕುಮಾರ್, ಭರತ್ ಭೂಷಣ್ ಮತ್ತು ಆಕೆಯನ್ನು ಮದುವೆಯಾದ ಕಿಶೋರ್ ಕುಮಾರ್ ರ ಹೆಸರುಗಳು. ದೆಹಲಿಯಲ್ಲಿ ಹುಟ್ಟಿ ಬೆಳೆದ ಮಧುಬಾಲಳಿಗೆ ಅಲ್ಲಿ ಬಾಲ್ಯದ ಗೆಳೆಯನೊಬ್ಬನ ಪರಿಚಯವಾಗಿತ್ತು. ಆತನ ಹೆಸರು ಲತೀಫ್. ಸಿನಿಮಾ ಅವಕಾಶಗಳು ಗಿಟ್ಟದೆ ಬೊಂಬಾಯಿಯಿಂದ ದೆಹಲಿಗೆ ವಾಪಾಸ್ ಆಗುವ ಮಧುಬಾಲಳಿಗೆ ಈತನ ಗೆಳೆತನ ಖುಷಿ ಕೊಟ್ಟಿರುತ್ತದೆ. ಸೆಳೆತದ ಆ ಪ್ರಾಯದಲ್ಲಿ ಮಧುಬಾಲ ಮತ್ತು ಲತೀಫ್ ರ ನಡುವೆ ಲೋಕ ಎಣಿಸುವ ಆ ಒಲವಿನ ನಂಟು ಬೆಸೆದಿತ್ತೇ? ತಿಳಿಯದು. ಆದರೆ ಆತ ಮಧುಬಾಲಳನ್ನು ಬಯಸುತ್ತಿದ್ದ. ನಟನೆಯ ಅವಕಾಶಗಳು ಮತ್ತೆ ಹುಡುಕಿ ಬಂದಾಗ ಮಧುಬಾಲ ದೆಹಲಿ ತೊರೆದು ಹೋಗುವಾಗ ಲತೀಫ್ ನಿಗೆ ತನ್ನ ನೆನಪಿಗಾಗಿ ಗುಲಾಬಿಯೊಂದು ನೀಡಿದ, ಆತ ಆ ಗುಲಾಬಿಯನ್ನು ಕೊನೆಯವರೆಗೂ ತನ್ನೊಂದಿಗೆ ಇಟ್ಟುಕೊಂಡಿದ್ದ ಮತ್ತು ಮಧುಬಾಲಳ ಅಂತ್ಯವಾದಾಗ ಆ ಗುಲಾಬಿಯನ್ನು ಆಕೆಯ ಸಮಾಧಿಯ ಮೇಲೆ ಇಟ್ಟು ಬಂದಿದ್ದ ಎಂದೆಲ್ಲ ಮಾತಿದೆ. ಆದಾದ ಮೇಲೂ ಪ್ರತಿ ವರ್ಷ ಫೆಬ್ರವರಿ 23ರಂದು ಆತ ಬೊಂಬಾಯಿಗೆ ಬಂದು ಆಕೆಯ ಸಮಾಧಿಯ ಮೇಲೆ ಆಕೆಯ ನೆನಪಿನಾರ್ಥ ಗುಲಾಬಿಯೊಂದು ಅರ್ಪಿಸಿ ಹೋಗುತ್ತಿರುವುದಾಗಿ ಹೇಳಲಾಗುತ್ತದೆ.
ಇನ್ನು ಎರಡನೆಯ ಹೆಸರು ನಿರ್ದೇಶಕ ಶರ್ಮಾ ಅವರದು. ಆರಂಭದಲ್ಲಿ ಸಿನಿಮಾಗಳಲ್ಲಿ ನಟಿಸಲು ಮಧುಬಾಲಳಿಗೆ ಅವಕಾಶ ಕೊಟ್ಟಿದ್ದಲ್ಲದೆ, ಆಕೆಯನ್ನು ತಿದ್ದಿದ ವ್ಯಕ್ತಿ ಶರ್ಮಾ. ಇಬ್ಬರ ನಡುವೆ ನಟನೆಗೆ ಸಂಬಂಧ ಪಟ್ಟಂತೆ, ಬದುಕಿನ ಕುರಿತು ಮಾತನಾಡುವ ಸಲುಗೆ ಇತ್ತು. ಆದರೆ ವಯಸ್ಸಿನಲ್ಲಿ ಶರ್ಮ ಹಿರಿಯ. ಮೊದಲು ಮಧುಬಾಲಳನ್ನು ನೋಡಿದಾಗ ಆತನಿಗೆ ಆಕೆಯ ಮೇಲೆ ಮನಸಾಗಿದ್ದು, ಒಳಗೊಳಗೆ ಆಕೆಯನ್ನು ವರಿಸುವ ಇರಾದೆ ಇದ್ದದ್ದನ್ನು ಚಿತ್ರರಂಗ ಗಮನಿಸಿದ್ದು ಇದೆ. ಅದೊಂಥರ ಒನ್‍ಸೈಡ್ ಲವ್ ನಂತಿತ್ತು. ಇನ್ನು ‘ಮಹಲ್’ ನಂತಹ ಸೂಪರ್ ಹಿಟ್ ಹಾರರ್ ಥ್ರಿಲ್ಲರ್ ಸಿನಿಮಾ ನಿರ್ದೇಶನ ಮಾಡಿದ ಕಮಲ್ ಅಮ್ರೋಹಿ ಮತ್ತು ಮಧುಬಾಲರ ಸಂಬಂಧದ ಬಗ್ಗೆ ಕೆಲವು ನಿಜಾಂಶಗಳಿರುವುದು ಒಪ್ಪಬೇಕಾದ ಮಾತು. ‘ಮಹಲ್’ ಸಿನಿಮಾ ಶೂಟಿಂಗ್ ಸಮಯದಲ್ಲಿ ಪರಸ್ಪರ ಹೆಚ್ಚು ಸಮಯ ಕಳೆಯುತ್ತಿದ್ದ ಕಮಲ್ ಅಮ್ರೋಹಿ ಮತ್ತು ಮಧುಬಾಲ ರ ನಡುವೆ ಅವ್ಯಕ್ತ ಬಂಧವೊಂದು ಬೆಸೆದಿದ್ದು, ಹಾಗೊಮ್ಮೆ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸ್ವತಃ ಮಧುಬಾಲ ರ ಅಪ್ಪ ಅತೌವುಲ್ಲಹ್ ಖಾನರು ಅವರ ಮದುವೆಗೆ ಒಪ್ಪಿಗೆ ಸೂಚಿಸಿದ್ದ ನಿದರ್ಶನಗಳಿವೆ. ಮಧುಬಾಲಳಿಗೂ ಆತನೆಂದರೆ ಇಷ್ಟ ಆಗುತಿದ್ದ ಕಾರಣ ಅದೊಂದು ರಹಸ್ಯದಂತೆ ಉಳಿದಿದ್ದಿಲ್ಲ. ಆದರೆ ಅವರ ಆ ಪ್ರೀತಿ ಮದುವೆಯಲ್ಲಿ ಕೊನೆಯಾಗಲು ಅಮ್ರೋಹಿಗೆ ಆ ಮೊದಲೇ ಮದುವೆಯಾಗಿದ್ದು ಅಡ್ಡಿ ಆಯಿತು.
ಖ್ಯಾತ ನಟಿ ಮೀನಾ ಕುಮಾರಿಯೊಂದಿಗೆ ಮೊದಲ ಮದುವೆ ಆಗಿದ್ದ ಅಮ್ರೋಹಿ ಮಧುಬಾಲರನ್ನು ಎರಡನೆಯ ಹೆಂಡತಿಯಾಗಿ ಸ್ವೀಕರಿಸಲು ಯೋಚಿಸಿದ್ದ. ಆದರೆ ಎರಡನೆಯ ಹೆಂಡತಿಯಾಗಿ ಅಮ್ರೋಹಿ ಜೊತೆ ಬಾಳಲು ಮಧುಬಾಲಗೆ ಸುತಾರಂ ಇಷ್ಟಯಿರಲಿಲ್ಲ. ಅದಕ್ಕೆ ಮೊದಲ ಹೆಂಡತಿ ಮೀನಾ ಕುಮಾರಿಗೆ ವಿಚ್ಛೇದನ ನೀಡಿ, ತನ್ನನ್ನು ಮದುವೆ ಆಗಲು ಒಪ್ಪಿಗೆ ನೀಡುತ್ತಾಳೆ. ಈ ಷರತ್ತನ್ನು ನಿರಾಕರಿಸುವ ಅಮ್ರೋಹಿ, ಮೀನಾ ಕುಮಾರಿ ಜೊತೆ ಹೊಂದಿಕೊಂಡಿರಲು ಆದರಷ್ಟೇ ಮದುವೆ ಆಗುವುದಾಗಿ ಹೇಳಿ ಹಿಂದೆ ಸರಿದ. ಅಲ್ಲಿಗೆ ಅವರ ಪ್ರೇಮ ಪ್ರಕರಣ ಕೊನೆಗೊಂಡಿತು. ಇನ್ನು ತನ್ನ ಜೊತೆ “ಬಾದಲ್” ಚಿತ್ರದಲ್ಲಿ ನಟಿಸಿದ ಪ್ರೇಮ್‍ನಾಥ್ ರೊಂದಿಗೆ ಆಕೆಗೆ ಒಲವಾದ ಬಗ್ಗೆ ಸುದ್ದಿ ಹಬ್ಬಿತ್ತು. ಮತ್ತು ಅದರಲ್ಲಿ ಕಿಂಚಿತ್ತು ಸತ್ಯಾಂಶ ಇತ್ತು. ಮಧುಬಾಲ ತಾನೆ ಇಷ್ಟಪಟ್ಟಿರುವುದಾಗಿ, ಮತ್ತು ಒಪ್ಪಿಗೆ ಇದ್ದರೆ ಮದುವೆ ಆಗುವುದಾಗಿ ಹೇಳಿಯಾಗಿತ್ತು. ಆದರೆ ಮಧುಬಾಲಳ ತಂಗಿ ಮಧುರ್ ಭೂಷಣ್ ಹೇಳುವಂತೆ, ಪ್ರೇಮ್ ನಾಥ್ ಮಧುಬಾಲ ತಮ್ಮ ಧರ್ಮಕ್ಕೆ ಮತಾಂತರ ಆದರೆ ಮಾತ್ರ ಮದುವೆ ಆಗುವುದಾಗಿ ಹೇಳಿದ್ದಕ್ಕೆ ಮಧುಬಾಲ ಒಪ್ಪಲಿಲ್ಲವಂತೆ. ಇದರಿಂದ ಅವರ ಆ ಆರು ತಿಂಗಳ ಪ್ರೇಮ ಪ್ರಕರಣ ಸಹ ಮುಕ್ತಾಯಗೊಂಡಿತ್ತು.
***
ಒಮ್ಮೆ ಸಿನಿ ಪತ್ರಕರ್ತ ಬನ್ನಿ ರೂಬೇನ್ ‘ಫಿಲ್ಮ್ ಫೇರ್’ ಪತ್ರಿಕೆಗಾಗಿ ಮಧುಬಾಲ ಕುರಿತು ವಿಶೇಷ ಲೇಖನಕ್ಕಾಗಿ ಆಕೆಯನ್ನು ‘ಅರೇಬಿನ್ ವಿಲ್ಲಾ’ದಲ್ಲಿ ಸಂದರ್ಶನ ಕೋರಿ ಭೇಟಿ ಮಾಡಲು ಹೋದರು. ಮನೆಗೆ ಕಾವಲುಗಾರರು ಅಲ್ಲದೆ ದುರುಗುಟ್ಟುವ ಅಲ್ಸಟೈನ್ ನಾಯಿಗಳ ದಂಡೇ ಅಲ್ಲಿತ್ತು. ಯಾರೇ ಹೊಸಬರು ಮಧುಬಾಲ ಮನೆಗೆ ಭೇಟಿ ನೀಡಬೇಕೆಂದರೆ ಮೊದಲು ಪರವಾನಿಗಿ ತೆಗೆದುಕೊಂಡಿರಬೇಕಾಗಿತ್ತು. ಇಲ್ಲವಾದಲ್ಲಿ ಪ್ರವೇಶಯಿದ್ದಿಲ್ಲ. ಹೀಗೆ ಅನುಮತಿ ಮೇರೆಗೆ ಅರೇಬಿಯನ್ ವಿಲ್ಲಾಗೆ ಬಂದ ರೂಬೆನ್ ರನ್ನು ಬರಮಾಡಿಕೊಂಡು ಕೆಳಮಹಡಿ ಕೋಣೆಯಲ್ಲಿ ಕೂಡಿಸಲಾಯಿತು. ನಂತರ ಮಧುಬಾಲ ವಾಸವಿದ್ದ ಮೇಲ್ಮಹಡಿಗೆ ಕಳುಹಿಸಲಾಯಿತು. ತುಸು ಹೊತ್ತಿನ ನಂತರ ಮಧುಬಾಲ ಅಲ್ಲಿಗೆ ಬಂದಳು. ‘ಹಾಯ್’ ‘ಹಲೋ’ ನಂತರ ಆಕೆ ತನ್ನ ಕೋಣೆ ಪ್ರವೇಶಿಸಿ, ಒಳಗಿನಿಂದ ಬಾಗಿಲ ಬೋಲ್ಟ್ ಹಾಕಿದಳು. ಇದು ರೂಬೆನ್ ರಿಗೆ ಸ್ವಲ್ಪ ಅಜೀಬ್ ಅನಿಸಿತಾದರೂ ಏನೋ ಮುಖ್ಯವಾದ ವಿಷಯ ಇರಬೇಕು ಅಥವಾ ಗದ್ದಲವಾಗಬಹುದು ಅಂತ ಹಾಗೆ ಮಾಡಿರಬೇಕು ಅನಿಸಿ ಸುಮ್ಮನಾದರು.
ಒಂದೆರಡು ಗಂಟೆ ಫಿಲ್ಮ್ ಫೇರ್ ಗಾಗಿ ಬರೆಯಲಿರುವ ಲೇಖನದ ಪ್ರಶ್ನೆಗಳಿಗೆ ಉತ್ತರ ಪಡೆದ ನಂತರ, ರೂಬೆನ್ ರಿಗೆ ಮಧುಬಾಲ ‘ಫಿಲ್ಮ್ ಫೇರ್’ ಪತ್ರಿಕೆಯ ಇನ್ನೊಬ್ಬ ಪತ್ರಕರ್ತ ಗುಲ್ಷನ್ ಇವಿಂಗ್ ರನ್ನು ಸಂದರ್ಶನಕ್ಕೆ ಕರೆಯದೆ ತಮ್ಮನ್ನೇ ಕರೆದಿರುವ ಸುಳಿವು ಹತ್ತಿತು. ಅದು ತಾವು ದಿಲೀಪ್ ಕುಮಾರ್ ಗೆ ಆತ್ಮೀಯರಾದ ಕಾರಣ ಎಂದು. ಮತ್ತು ಆ ವಿಷಯ ಸಿನಿಮಾ ಉದ್ಯಮದಲ್ಲಿ ಎಲ್ಲರಿಗೂ ತಿಳಿದದ್ದಾಗಿತ್ತು. ಫಿಲ್ಮ್ ಫೇರ್ ಲೇಖನ ದ ವಿಷಯ ಹಾಗಿರಲಿ, ಮುಖ್ಯವಾಗಿ ತಾನು ತನ್ನ ಯೂಸುಫ್ ಖಾನ್ (ದಿಲೀಪ್ ಕುಮಾರ್) ರ ಬಗ್ಗೆ ಮಾತಾಡಬೇಕು ಎಂದು ಭಾವುಕವಾಗಿ, ತಮ್ಮ ಸಂಬಂಧದ ಆರಂಭ, ಕೋರ್ಟ್ ಕೇಸ್ ಮತ್ತು ಆ ನಂತರದ ಬೆಳವಣಿಗೆಗಗಳ ಬಗ್ಗೆ ಸುದೀರ್ಘವಾಗಿ ಹಂಚಿಕೊಳ್ಳುತ್ತಾಳೆ. ಮಾತಿನಿಂದ ಪರಸ್ಪರ ತಮಗೆ ಆದ ನೋವು, ಖೇದ, ಮನಸ್ತಾಪದ ಕುರಿತು ಮಾತಾಡಿ, ಅದನ್ನು ಹೇಗಾದರು ಮಾಡಿ ದಿಲೀಪ್ ಕುಮಾರ್ ರಿಗೆ ತಲುಪುವಂತೆ, ಮತ್ತು ತಾನು ಇನ್ನೂ ದಿಲೀಪ್ ರನ್ನು ಅದೆಷ್ಟು ಪ್ರೀತಿಸುತ್ತಿದ್ದೇನೆ ಎಂಬುದನ್ನು ತಿಳಿಯಪಡಿಸಲು ಬಯಸಿದ್ದಳು. ಕಣ್ಣೀರಾಗಿ, ಕರಗಿದ ದನಿಯಲ್ಲಿ ಆಕೆ ಆ ಮಾತೆಲ್ಲ ಹೇಳಿದ್ದಳು.
***
ಮೊರಾರ್ಜಿ ದೇಸಾಯಿ ಅವರಿಗೆ ಬಂಗಾಲದ ನಿರಾಶ್ರಿತರ ನಿಧಿಗೆ ಹಣ ಕೊಡುತ್ತಿರುವ ಸಂದರ್ಭ. ಸುಶೀಲಾ ರಾಣಿ ಪಟೇಲ್ ರೊಂದಿಗೆ ಮಧುಬಾಲ.
ನಿರಾಶ್ರಿತರಿಗೆ ತನ್ನ ದುಡಿಮೆಯ 50000 ಸಾವಿರ ರುಪಾಯಿ ಚೆಕ್ ದೇಣಿಗೆ ಕೊಡುವಾಗ, ಮಧುಬಾಲಗೆ 17 ವರ್ಷ ವಯಸ್ಸು. ಹಾಗೆ ದೇಣಿಗೆ ಕೊಡುತ್ತ ಆಕೆ ನುಡಿದ ಮಾತು ಆಕೆ ಅದೆಷ್ಟು ಮಾನವೀಯಳಾಗಿದ್ದಳು ಎಂಬುದನ್ನು ಎತ್ತಿ ತೋರುತ್ತವೆ. “ದೇವರ ದಯದಿಂದ ಅನುಕೂಲಕರ ಸ್ಥಿತಿಯಲ್ಲಿರುವವರೆಲ್ಲ ಇನ್ನೊಬ್ಬರ ದುಃಖದ, ದಯಾಮಯ ಸ್ಥಿತಿಯನ್ನು ಸುಮ್ಮನೆ ಕೂತು ನೋಡಬಾರದು” ಎಂದಾಗ, ಅದಕ್ಕೆ ಮೊರಾರ್ಜಿ ದೇಸಾಯಿಯವರು, ಅಷ್ಟು ಮೊತ್ತ ಕೊಟ್ಟು ನೀನೇನು ಮಾಡುವೆ ಅಂದಾಗ ಆಕೆ “ಸರ್, ನಾನು ಇನ್ನು ಮುದುಕಿ ಆಗಿಲ್ಲ. ನನಗೀಗ ಬರಿ 17 ವರ್ಷ. ದೇವರ ಕೃಪೆಯಿಂದ ನಾನು ಇನ್ನು ಹೆಚ್ಚು ದುಡಿತೀನಿ, ಕಷ್ಟದಲ್ಲಿ ಇರೋರಿಗೆ ಸಹಾಯ ಮಾಡ್ತೀನಿ” ಅಂದಿದ್ದಳು. ಇದಕ್ಕೆ ಅಂದಿನ ಚಲನಚಿತ್ರ ದ ಕೆಲವರು ಕುಹಕವಾಡಿ, ಅದೊಂದು ಅತೌವುಲ್ಲಹ್ ಖಾನ್ ರ ಪ್ರಚಾರದ ಗಿಮಿಕ್ ಎಂಬಂತೆ ಮಾತಾಡಿಕೊಂಡಿದ್ದರು. ಆದರೆ, 1950, ಅಕ್ಟೋಬರ್ 17ರ ಆ ದಿನಗಳಲ್ಲಿ ಐವತ್ತು ಸಾವಿರ ರುಪಾಯಿ ದೇಣಿಗೆ ಕೊಡೋದು ಅಂದ್ರೆ ಸಣ್ಣ ಮಾತೇನಲ್ಲ. ಹೃದಯವಂತರಿಗೆ ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ರೀತಿ ಗೊತ್ತಿರುತ್ತದೆ. ಅದು ಮಧುಬಾಲಳಿಗೆ ಇತ್ತು ಎಂದಷ್ಟೇ ಹೇಳಬಹುದು.