ಸ್ಯಾಂಡಲ್‌ವುಡ್‌ನಲ್ಲಿ ಸರ್ಕಾರಿ ಶಾಲೆಗಳು ಮತ್ತು ಶಿಕ್ಷಣ ಪದ್ಧತಿ ಬಗ್ಗೆ ಸಾಕಷ್ಟು ಸಿನಿಮಾಗಳು ಬಂದಿವೆ. ಇಲ್ಲೊಂದು ತಂಡ ಈಗ ಶಿಕ್ಷಣ ವ್ಯವಸ್ಥೆಯ ಕುರಿತಾದ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ.

ಶಿಕ್ಷಣ ವ್ಯವಸ್ಥೆ ಕುರಿತಾದ ಸಿನಿಮಾವೊಂದು ಚಂದನವನದಲ್ಲಿ ಸೆಟ್ಟೇರಿದೆ. ಕನ್ನಡ ಹಾಗೂ ಬಂಜಾರ ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ‘ಅಧ್ಯಾಯ’ ಎನ್ನುವ ಶೀರ್ಷಿಕೆ ಇಡಲಾಗಿದೆ. ಶಿಕ್ಷಣದಿಂದ ವಂಚಿತರಾಗಿದ್ದ ಬುಡಕಟ್ಟು ಜನಾಂಗದ ಮಕ್ಕಳು ವಿದ್ಯಾವಂತರಾದ ಮೇಲೆ ಏನೆಲ್ಲ ಆಗುತ್ತದೆ ಎಂಬುದೇ ಈ ಚಿತ್ರದ ಕಥಾಸಾರಾಂಶ. ‘ಅಧ್ಯಾಯ’ ಕಮರ್ಷಿಯಲ್ ಚಿತ್ರವಾಗಿದ್ದು, ಆಕ್ಷನ್, ಸೆಂಟಿಮೆಂಟ್, ಸಸ್ಪೆನ್ಸ್, ಕಾಮಿಡಿ ಸೇರಿದಂತೆ ನೋಡುಗರಿಗೆ ಬೇಕಾದ ಎಲ್ಲ ಅಂಶಗಳು ಚಿತ್ರದಲ್ಲಿರಲಿದೆಯಂತೆ. ಜೈಭವಾನಿ ಕ್ರಿಯೇಷನ್ಸ್ ಲಾಂಛನದಲ್ಲಿ ಶಾಂತ ಜಯರಾಂ ನಿರ್ಮಿಸುತ್ತಿರುವ ಈ ಸಿನಿಮಾಗೆ ಸಮರ್ಥ್ ಎಂ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ಚೈತನ್ಯ ಬಂಜಾರ ನಾಯಕನಾಗಿ ನಟಿಸುತ್ತಿರುವ ‘ಅಧ್ಯಾಯ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮಹಾಲಕ್ಷ್ಮಿ ಲೇಔಟ್‌ನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ನಿರ್ಮಾಪಕಿ ಶಾಂತ ಜಯರಾಂ ಆರಂಭ ಫಲಕ ತೋರಿದರು. ಅಣಜಿ ನಾಗರಾಜ್ ಕ್ಯಾಮೆರಾಗೆ ಚಾಲನೆ ನೀಡಿದರು. ಚಿತ್ರರಂಗದ ಸಾಕಷ್ಟು ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಿರ್ದೇಶಕ ಸಮರ್ಥ್ ಅವರೇ ಕಥೆ, ಚಿತ್ರಕಥೆ ಬರೆದಿದ್ದು, ಸಂಭಾಷಣೆಯನ್ನು ಹರೀಶ್ ಗೌಡ ಬರೆದಿದ್ದಾರೆ. ಕನ್ನಡದಲ್ಲಿ ಈಗಾಗಲೇ ‘ರುಧೀರ ಕಣಿವೆ’ ಸೇರಿದಂತೆ ಮೂರು ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಸಮರ್ಥ್ ಅವರಿಗೆ ಇದು ನಾಲ್ಕನೇ ಚಿತ್ರ.

ಮೇ ಹತ್ತರಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ ಮುಂತಾದ ಕಡೆ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಚೈತನ್ಯ ಬಂಜಾರ ಜೊತೆ ಶೋಭ್‌ರಾಜ್, ಬಲ ರಾಜವಾಡಿ, ನಾಗೇಂದ್ರ ಅರಸ್, ಯತಿರಾಜ್, ನಿರಂಜನ್, ದತ್ತಾತ್ರೇಯ, ಪ್ರಹ್ಲಾದ್, ಜಯರಾಮ್ ತಾರಾಗಣದಲ್ಲಿದ್ದಾರೆ. ಐದು ಹಾಡುಗಳಿರುವ ಈ ‘ಅಧ್ಯಾಯ’ ಚಿತ್ರಕ್ಕೆ ಹರ್ಷ ಕೊಗೋಡು ಸಂಗೀತ ನೀಡಲಿದ್ದಾರೆ. ಭರತ್ ಛಾಯಾಗ್ರಹಣ ಹಾಗೂ ಸುನಯ್ ಎಸ್ ಜೈನ್ ಸಂಕಲನವಿರುವ ಚಿತ್ರದಲ್ಲಿ ಐದು ಸಾಹಸ ಸನ್ನಿವೇಶಗಳಿದ್ದು, ಚಂದ್ರು ಬಂಡೆ ಹಾಗೂ ಅಶೋಕ್ ಸಾಹಸ ನಿರ್ದೇಶನ ಮಾಡಲಿದ್ದಾರೆ.

LEAVE A REPLY

Connect with

Please enter your comment!
Please enter your name here