ನಟಿ ರಶ್ಮಿಕಾ ಮಂದಣ್ಣ ಇಂದು 26ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹನು ರಾಘವಪುಡಿ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ತೆಲುಗು ಸಿನಿಮಾದಲ್ಲಿನ ಅವರ ‘ಅಫ್ರೀನ್‌’ ಪಾತ್ರದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ದುಲ್ಕರ್‌ ಸಲ್ಮಾನ್‌ ಈ ಸಿನಿಮಾದ ಹೀರೋ.

ಕನ್ನಡ ಮೂಲದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಇಂದು 26ನೇ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ಸಂದರ್ಭದಲ್ಲಿ ಹನು ರಾಘವಪುಡಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ತೆಲುಗು ಸಿನಿಮಾದಲ್ಲಿನ ಅವರ ಫಸ್ಟ್‌ಲುಕ್‌ ಟೀಸರ್‌ ಬಿಡುಗಡೆಯಾಗಿದೆ. ಇನ್ನೂ ಶೀರ್ಷಿಕೆ ನಿಗದಿಯಾಗದ ಈ ಸಿನಿಮಾದ ಹೀರೊ ದುಲ್ಕರ್‌ ಸಲ್ಮಾನ್‌. ಫಸ್ಟ್‌ಲುಕ್‌ ಟೀಸರ್‌ನಲ್ಲಿ ಹಿಜಾಬ್‌, combat ಬೂಟ್ಸ್‌, ಬಣ್ಣಬಣ್ಣದ ಸ್ವೆಟರ್‌ ತೊಟ್ಟು ಹೊತ್ತಿ ಉರಿಯುತ್ತಿರುವ ಕಾರಿನೆಡೆಗೆ ಸಾಗುವ ‘ಅಫ್ರೀನ್‌’ ರಶ್ಮಿಕಾ ಪಾತ್ರ ವಿಶಿಷ್ಟವಾಗಿದೆ. “Meet our rebellious #Afreen as she unravels one of the most beautiful tales ever. Happy birthday @iamRashmika ” ಎಂದು ಚಿತ್ರತಂಡ ಸಿನಿಮಾದಲ್ಲಿನ ಅವರ ಪಾತ್ರವನ್ನು ಟ್ವಿಟರ್‌ನಲ್ಲಿ ಪರಿಚಯಿಸಿದೆ.

ದಕ್ಷಿಣ ಭಾರತದಲ್ಲಿ ನಟಿ ರಶ್ಮಿಕಾ ಅದೃಷ್ಟವಂತ ನಟಿ ಎಂದೇ ಕರೆಸಿಕೊಂಡಿದಾರೆ. ಅಲ್ಲು ಅರ್ಜುನ್‌ ಅಭಿನಯದ ‘ಪುಷ್ಪ’ ಚಿತ್ರದ ದೊಡ್ಡ ಯಶಸ್ಸು ಅವರನ್ನು ಬಾಲಿವುಡ್‌ಗೂ ಪರಿಚಯಿಸಿತು. ಸಿದ್ದಾರ್ಥ್‌ ಮಲ್ಹೋತ್ರಾ ಜೊತೆಗಿನ ಅವರ ಚೊಚ್ಚಲ ಬಾಲಿವುಡ್‌ ಸಿನಿಮಾ ‘ಮಿಷನ್‌ ಮಜ್ನೂ’ ಸದ್ಯದಲ್ಲೇ ತೆರೆಕಾಣಲಿದೆ. ವಿಕಾಸ್‌ ಬೆಹ್ಲ್‌ ನಿರ್ದೇಶನದ ‘ಗುಡ್‌ಬೈ’ ಚಿತ್ರೀಕರಣದಲ್ಲಿರುವ ಅವರ ಮತ್ತೊಂದು ಹಿಂದಿ ಸಿನಿಮಾ. ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ ಚಿತ್ರದಲ್ಲಿ ನಟ ರಣಬೀರ್‌ ಕಪೂರ್‌ಗೆ ಜೋಡಿಯಾಗಿ ಅವರು ನಟಿಸಲಿದ್ದಾರೆ ಎನ್ನುವ ಮಾಹಿತಿಯೂ ಇದೆ.

ಹುಟ್ಟುಹಬ್ಬದ ಈ ಸಂದರ್ಭದಲ್ಲಿ ವಿಜಯ್‌ ಜೊತೆಗೆ ಅವರು ನಟಿಸಲಿರುವ ತಮಿಳು ಚಿತ್ರದ ಕುರಿತೂ ಘೋಷಣೆಯಾಗಿದೆ. ವಿಜಯ್‌ ಅವರ 66ನೇ ಚಿತ್ರವಿದು. ವಂಶಿ ಪೈಡಿಪಲ್ಲಿ ಈ ಸಿನಿಮಾ ನಿರ್ದೇಶಿಸಲಿದ್ದಾರೆ. ಸದ್ಯ ಅವರು ತಮ್ಮ ‘ಆಡವಳ್ಳು ಮೀಕು ಜೊಹಾರ್ಲು’ ತೆಲುಗು ಸಿನಿಮಾದ ಬಿಡುಗಡೆ ನಿರೀಕ್ಷೆಯಲ್ಲಿದ್ದಾರೆ. ರಶ್ಮಿಕಾ ಅವರು ನಟ ವಿಜಯ್‌ ದೇವರಕೊಂಡ ಜೊತೆ ಮದುವೆಯಾಗಲಿದ್ದಾರೆ ಎನ್ನುವ ವದಂತಿ ಹರಡಿತ್ತು. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ನಟಿ, “ಮದುವೆಗೆ ಇನ್ನೂ ಸಮಯವಿದೆ. ಎಲ್ಲದಕ್ಕೂ ಸಮಯ ಕೂಡಿಬರಲಿದೆ” ಎಂದಿದ್ದರು.

LEAVE A REPLY

Connect with

Please enter your comment!
Please enter your name here