ಸಡಗರ ರಾಘವೇಂದ್ರ ನಿರ್ದೇಶನದ ‘ಆಪರೇಷನ್ ಲಂಡನ್ ಕೆಫೆ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ನಕ್ಸಲ್ ಹಿನ್ನೆಲೆಯಲ್ಲಿ ಪ್ರೇಮಕತೆಯೊಂದನ್ನು ಹೇಳುತ್ತಿದ್ದಾರೆ ನಿರ್ದೇಶಕರು. ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಮುಖ್ಯ ಪಾತ್ರಗಳಲ್ಲಿರುವ ಚಿತ್ರದಲ್ಲಿ ಬಹಳಷ್ಟು ಮರಾಠಿ ಸಿನಿಮಾ ಮತ್ತು ರಂಗಭೂಮಿ ಕಲಾವಿದರು ಅಭಿನಯಿಸುತ್ತಿದ್ದಾರೆ.
ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಮುಖ್ಯ ಪಾತ್ರಗಳಲ್ಲಿರುವ ‘ಆಪರೇಷನ್ ಲಂಡನ್ ಕೆಫೆ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ನಿರ್ದೇಶಕ ಸಡಗರ ರಾಘವೇಂದ್ರ ಅವರು ಚಿತ್ರದಲ್ಲಿ ನಕ್ಸಲ್ ಕತೆಯ ಜೊತೆ ಲವ್‌ಸ್ಟೋರಿಯನ್ನೂ ನಿರೂಪಿಸುತ್ತಿದ್ದಾರೆ. ಟ್ರೇಲರ್‌ನಲ್ಲಿ ಸಾಕಷ್ಟು ಆಕ್ಷನ್ ದೃಶ್ಯಗಳಿದ್ದು, ಸ್ಟಂಟ್ ಕೊರಿಯೋಗ್ರಾಫರ್‌ಗಳ ಪಾತ್ರ ಎದ್ದು ಕಾಣುತ್ತದೆ. ಈ ಸಿನಿಮಾ ಕನ್ನಡ, ಮರಾಠಿ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆದಿವೆ. ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಸಡಗರ ರಾಘವೇಂದ್ರ, ‘ಇದು ನನಗೆ ಸ್ವತಂತ್ರ ನಿರ್ದೇಶನದ ಮೊದಲ ಸಿನಿಮಾ. ಇದೊಂದು ನಕ್ಸಲಿಸಂ ಹಿನ್ನೆಲೆಯೊಂದಿಗೆ ಹೆಣೆದಿರುವ ಕಥೆ. ಹಾಗಂತ ನಕ್ಸಲಿಸಂ ವೈಭವೀಕರಿಸಿಲ್ಲ. ಯಾವುದೇ ಒಬ್ಬ ವ್ಯಕ್ತಿಯ ಕುರಿತಾದ ಚಿತ್ರವೂ ಇದಲ್ಲ’ ಎನ್ನುತ್ತಾರೆ.
ನಿರ್ದೇಶಕರು ಹೇಳುವಂತೆ ಇದು ಆಫ್ಟರ್ ‘ಆಪರೇಷನ್ ಲಂಡನ್ ಕೆಫೆ’. ಈಗ ಪ್ರೇಕ್ಷಕರ ಎದುರು ಬರುವುದು ಚಿತ್ರದ ಪ್ರೀಕ್ವೆಲ್. ಮೊದಲ ಭಾಗ ಆನಂತರ ಬರಲಿದೆಯಂತೆ. ಈಗಾಗಲೇ ಮೊದಲ ಭಾಗದ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಕನ್ನಡ ಹಾಗೂ ಮರಾಠಿ ಎರಡೂ ಭಾಷೆಗಳಲ್ಲಿ ನೇರವಾಗಿ ಚಿತ್ರೀಕರಣ ಮಾಡಲಾಗಿದೆ. ಉಳಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಿಗೆ ಡಬ್ ಮಾಡುವುದು ಚಿತ್ರತಂಡದ ಯೋಜನೆ. ಕನ್ನಡ ಕಲಾವಿದರು ಮರಾಠಿ ಕಲಿತು, ಮರಾಠಿ ಕಲಾವಿದರು ಕನ್ನಡ ಕಲಿತು ಅಭಿನಯಿಸಿರುವುದು ವಿಶೇಷ. ನಾಯಕನಟ ಕವೀಶ್ ಶೆಟ್ಟಿ ಸಿನಿಮಾ ಜರ್ನೀ ಶುರುವಾಗಿದ್ದು ‘ಮುಂಗಾರು ಮಳೆ 2’ ಚಿತ್ರದೊಂದಿಗೆ ಆನಂತರ 2020ರಲ್ಲಿ ‘ಜಿಲ್ಕಾ’ ಚಿತ್ರದಲ್ಲಿ ನಟಿಸಿದ್ದರು. ‘ಸಡಗರ ರಾಘವೇಂದ್ರ ಅವರ ಕಾರ್ಯವೈಖರಿಯನ್ನು ಹತ್ತಿರದಿಂದ ಕಂಡಿದ್ದ ನನಗೆ ಅವರ ಮೊದಲ ನಿರ್ದೇಶನದಲ್ಲಿ ನನ್ನದೊಂದು ಚಿತ್ರ ಮಾಡುವ ಆಸೆಯಿತ್ತು. ಈ ಚಿತ್ರದ ಮೂಲಕ ಅದು ಈಡೇರಿದೆ’ ಎನ್ನುತ್ತಾರೆ ನಾಯಕನಟ ಕವೀಶ್. ಕಿರುತೆರೆಯಲ್ಲಿ ಹೆಸರು ಮಾಡಿರುವ ಮೇಘಾ ಶೆಟ್ಟಿ ಅವರಿಗೆ ಬೆಳ್ಳಿತೆರೆಯಲ್ಲಿ ಇದೊಂದು ದೊಡ್ಡ ಚಿತ್ರವಾಗಲಿದೆ. ವಿಜಯ ಕುಮಾರ್ ಶೆಟ್ಟಿ, ರಮೇಶ್ ಕೊಠಾರಿ, ಹವರಾಲ್ ಮತ್ತು ದೀಪಕ್ ರಾಣೆ ನಿರ್ಮಾಣದ ಚಿತ್ರಕ್ಕೆ ಎನ್ ಡಿ ನಾಗಾರ್ಜುನ್ ಛಾಯಾಗ್ರಹಣ, ಮಾಸ್ ಮಾದ ಸಾಹಸ ನಿರ್ದೇಶನವಿದೆ. ಅರ್ಜುನ್ ಕಾಪಿಕ್ಕಾಡ್, ವಿರಾಟ್ ಮಡಕೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.