ಬಾಲಿವುಡ್ನ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಹಾಗೂ ನಟ ಅರ್ಷದ್ ವಾರ್ಸಿ ಹೊಸ ಸಿನಿಮಾದಲ್ಲಿ ಮತ್ತೆ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ‘ಜಾಲಿ ಎಲ್ಎಲ್ಬಿ 3’ ಹಿಂದಿ ಚಿತ್ರದಲ್ಲಿ ಈ ಜೋಡಿ ಮೋಡಿ ಮಾಡಲು ಸಿದ್ಧರಾಗಿದ್ದಾರೆ. ಅಪ್ಡೇಟ್ ಕೊಡಲು ಅಕ್ಷಯ್ ಒಂದು ಬಿಟಿಎಸ್ ವಿಡಿಯೋ ಹಂಚಿಕೊಂಡಿದ್ದಾರೆ.
‘ಜಾಲಿ ಎಲ್ಎಲ್ಬಿ’ ಸರಣಿ ಹಿಂದಿ ಸಿನಿಮಾಗಳೆರಡೂ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿದ ಚಿತ್ರಗಳೇ. ಮೊದಲ ಸಿನಿಮಾದಲ್ಲಿ ಅರ್ಷದ್ ವಾರ್ಸಿ ನಾಯಕನಾದರೆ, ನಂತರ ತೆರೆಕಂಡ ‘ಜಾಲಿ ಎಲ್ಎಲ್ಬಿ 2’ರಲ್ಲಿ ಅಕ್ಷಯ್ ಕುಮಾರ್ ಹೀರೋ. ಎರಡೂ ಸಿನಿಮಾಗಳು ಕೋರ್ಟ್ ಡ್ರಾಮಾ ಜಾನರ್ನ ಚಿತ್ರಗಳಾಗಿವೆ. ಹಾಸ್ಯ, ಆಕ್ಷನ್ ಹಾಗೂ ಸಸ್ಪೆನ್ಸ್ ಇರುವ ಈ ಚಿತ್ರಕ್ಕೆ ಪ್ರೇಕ್ಷಕರು ಮನಸೋತಿದ್ದರು. ನ್ಯಾಯಾಧೀಶರ ಪಾತ್ರದಲ್ಲಿ ನಟಿಸಿದ್ದ ಸೌರಭ್ ಶುಕ್ಲಾ ಅವರ ಮನೋಜ್ಞ ಅಭಿನಯಕ್ಕೂ ಮೆಚ್ಚುಗೆ ವ್ಯಕ್ತವಾಗಿತ್ತು. ಇಂತಹ ಹಿಟ್ ಸರಣಿಯ ಮೂರನೇ ಭಾಗ ಈಗ ಅನೌನ್ಸ್ ಆಗಿದೆ. ನಟ ಅಕ್ಷಯ್ ಕುಮಾರ್ ‘ಜಾಲಿ ಎಲ್ಎಲ್ಬಿ 3’ ಸಿನಿಮಾದ ಚಿತ್ರೀಕರಣ ಆರಂಭವಾಗಿರುವ ಕುರಿತಾಗಿ ವಿಶೇಷ ರೀತಿಯಲ್ಲಿ ಅಪ್ಡೇಟ್ ಕೊಟ್ಟಿದ್ದಾರೆ.
ಜಾಲಿ ಎಲ್ಎಲ್ಬಿ 3 ಸಿನಿಮಾ ಚಿತ್ರೀಕರಣ ಶುರುವಾಗಿರುವ ಬಗ್ಗೆ ಮಾಹಿತಿ ಕೊಟ್ಟಿರುವ ನಟ ಅಕ್ಷಯ್ ಕುಮಾರ್, BTS ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಜೊತೆಗೆ ‘ಯಾರು ಅಸಲಿ, ಯಾರು ಅನ್ನೋದು ಗೊತ್ತಿಲ್ಲ. ಆದರೆ, ಇದು ನಿಮಗೆ ಅತ್ಯುತ್ತಮ ಸಿನಿ ಪಯಣ ಆಗಲಿದೆ. ಅಪ್ಡೇಟ್ಗಾಗಿ ಕಾಯುತ್ತಿರಿ. ಜೈ ಮಹಾಕಾಳ್’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಕ್ಷಯ್ ಕುಮಾರ್ ಹಂಚಿಕೊಂಡಿರುವ ವಿಡಿಯೋ ನೋಡಿದ ಸಿನಿಪ್ರಿಯರು ಖುಷಿಯಾಗಿದ್ದಾರೆ.
ಜಾಲಿ ಎಲ್ಎಲ್ಬಿ ಸಿನಿಮಾದ ಮೂರನೇ ಭಾಗದಲ್ಲಿ ಅಕ್ಷಯ್ ಕುಮಾರ್ ಹಾಗೂ ಅರ್ಷದ್ ವಾರ್ಸಿ ಇಬ್ಬರೂ ಒಟ್ಟಿಗೆ ನಟಿಸುತ್ತಿದ್ದಾರೆ. ಎಂದಿನಂತೆ ಸೌರಭ್ ಶುಕ್ಲಾ ಅವರು ನ್ಯಾಯಾಧೀಶರ ಪಾತ್ರದಲ್ಲಿ ರಂಜಿಸಲಿದ್ದಾರೆ. ಈ ಸಿನಿಮಾಗೆ ನಾಯಕಿಯರು ಯಾರು ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಕ್ಷಯ್ ಕುಮಾರ್ ಹಾಗೂ ಅರ್ಷದ್ ವಾರ್ಸಿ ಈ ಹಿಂದೆ ಎರಡು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ. 2002ರಲ್ಲಿ ಬಿಡುಗಡೆಯಾದ ‘ಜಾನಿ ದುಷ್ಮನ್- ಏಕ್ ಅನೋಖಿ ಕಹಾನಿ’ ಹಾಗೂ 2022ರಲ್ಲಿ ಬಿಡುಗಡೆಯಾದ ‘ಬಚ್ಚನ್ ಪಾಂಡೆ’ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು.
ಅರ್ಷದ್ ವಾರ್ಸಿ ಅಭಿನಯದ ಜಾಲಿ ಎಲ್ಎಲ್ಬಿ 2013ರಲ್ಲಿ ಬಿಡುಗಡೆಯಾಗಿತ್ತು. ಅಕ್ಷಯ್ ಕುಮಾರ್ ನಟನೆಯ ಜಾಲಿ ಎಲ್ಎಲ್ಬಿ 2 ಸಿನಿಮಾ 2017ರಲ್ಲಿ ಬಿಡುಗಡೆಯಾಗಿ ಸಿನಿಪ್ರಿಯರ ಮನಸ್ಸು ಕದ್ದಿತ್ತು. ಅಕ್ಷಯ್ ಹಾಗೂ ಅರ್ಷದ್ ಜೋಡಿ ಅಹಮದ್ ಖಾನ್ ನಿರ್ದೇಶನದ ‘ವೆಲ್ಕಮ್ ಟು ದ ಜಂಗಲ್’ನಲ್ಲಿ ಕಾಣಿಸಿಕೊಳ್ಳಲಿದೆ. ಇದರಲ್ಲಿ ದಿಶಾ ಪಟಾನಿ, ರವೀನಾ ಟಂಡನ್, ಸಂಜಯ್ ದತ್, ಸುನೀಲ್ ಶೆಟ್ಟಿ, ಶ್ರೇಯಸ್ ತಲಪಾಡೆ, ಜಾನಿ ಲೀವರ್, ಲಾರಾ ದತ್ತ, ದಲೇರ್ ಮೆಹೆಂದಿ ಹಾಗೂ ಮಿಕಾ ಸಿಂಗ್ ಸಹ ನಟಿಸುತ್ತಿದ್ದಾರೆ. ಈ ಸಿನಿಮಾ ಈ ವರ್ಷದ ಅಂತ್ಯಕ್ಕೆ ಅಂದರೆ ಡಿಸೆಂಬರ್ನಲ್ಲಿ ತೆರೆ ಕಾಣುವ ಸಾಧ್ಯತೆ ಇದೆ.