ನಟ ಅಕ್ಷಯ್ ಕುಮಾರ್ ನೂತನ ‘OMG 2’ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಮಿತ್ ರಾಯ್‌ ನಿರ್ದೇಶನದ ಈ ಸೀಕ್ವೆಲ್‌ ಸಿನಿಮಾದ ನಾಯಕಿ ಯಾಮಿ ಗೌತಮಿ. ಪಂಕಜ್ ತ್ರಿಪಾಠಿಗೆ ಪ್ರಮುಖ ಪಾತ್ರವಿದೆ.

ಒಂದಾದ ನಂತರ ಮತ್ತೊಂದು ಎನ್ನುವಂತೆ ಸಾಲು, ಸಾಲು ಚಿತ್ರಗಳಲ್ಲಿ ನಟಿಸುವುದು ಅಕ್ಷಯ್ ಕುಮಾರ್‌ ಪಾಲಿಸಿ. ಶಿಸ್ತಿನ ನಟ ವರ್ಷಕ್ಕೆ ತಮ್ಮ ನಾಲ್ಕು ಸಿನಿಮಾಗಳು ತೆರೆಕಾಣುವಂತೆ ನೋಡಿಕೊಳ್ಳುತ್ತಾರೆ. ಇದೀಗ ನೂತನ ಸಿನಿಮಾ ‘OMG 2’ಗಾಗಿ ಬಣ್ಣ ಹಚ್ಚಿದ್ದಾರೆ. ವಿಶೇಷವೆಂದರೆ ಈ ಬಾರಿ ನೀಲಿ ಬಣ್ಣ ಹಚ್ಚಿ ರಾಮನಾಗಿದ್ದಾರೆ. 2012ರಲ್ಲಿ ತೆರೆಕಂಡ ‘OMG’ ಸೀಕ್ವೆಲ್ ಇದು. ಅಕ್ಷಯ್‌ಗೆ ನಾಯಕಿಯಾಗಿ ಯಾಮಿ ಗೌತಮಿ ನಟಿಸುತ್ತಿದ್ದು, ಪ್ರಮುಖ ಪಾತ್ರದಲ್ಲಿ ಪಂಕಜ್ ತ್ರಿಪಾಠಿ ಇರುತ್ತಾರೆ. ರಿಲೀಸ್ ಆಗಿರುವ ಮೊದಲ ಲುಕ್‌ನಲ್ಲಿ ನೀಲಿ ಮೊಗದ ಅಕ್ಷಯ್‌ ಉದ್ದನೆಯ ಕೂದಲು ಗಮನಸೆಳೆಯುತ್ತಿದೆ. ಉಜ್ಜಯನಿಯಲ್ಲಿ ನಡೆಯಲಿರುವ ಎರಡನೇ ಹಂತದ ಚಿತ್ರೀಕರಣದಲ್ಲಿ ಅಕ್ಷಯ್‌ ಭಾಗಿಯಾಗಲಿದ್ದಾರೆ.

2012ರಲ್ಲಿ ತೆರೆಕಂಡ ‘OMG’ ಚಿತ್ರದಲ್ಲಿ ಅಕ್ಷಯ್ ಜೊತೆ ಪರೇಶ್ ರಾವಲ್‌, ಮಿಥುನ್ ಚಕ್ರವರ್ತಿ, ಮಹೇಶ್ ಮಂಜ್ರೇಕರ್ ನಟಿಸಿದ್ದರು. ಈ ಯಶಸ್ವೀ ಸಿನಿಮಾ ಕನ್ನಡ (ಮುಕುಂದ ಮುರಾರಿ) ಮತ್ತು ತೆಲುಗಿಗೆ (ಗೋಪಾಲ ಗೋಪಾಲ) ರೀಮೇಕಾಗಿತ್ತು. ರಾಮನ ವೇ‍ಷದ ತಮ್ಮ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಅಕ್ಷಯ್‌, “OMG 2 ಚಿತ್ರಕ್ಕೆ ನಿಮ್ಮ ಆಶೀರ್ವಾದ ಬೇಕು. ಚಿತ್ರದಲ್ಲಿ ಸಾಮಾಜಿಕ ಕಳಕಳಿಯ ವಿಷಯವೊಂದನ್ನು ನಾವು ಪ್ರಸ್ತಾಪಿಸಲಿದ್ದೇವೆ. ನಮ್ಮ ಈ ಜರ್ನಿಗೆ ದೇವರ ಕೃಪೆ ಇರಲಿ” ಎಂದಿದ್ದಾರೆ. ಅವರ ಪೊಲೀಸ್‌ – ಡ್ರಾಮಾ ಸಿನಿಮಾ ‘ಸೂರ್ಯವಂಶಿ’ ನವೆಂಬರ್‌ 5ರಂದು ತೆರೆಕಾಣಲಿದೆ. ಅಕ್ಷಯ್‌ರ ‘ರಾಮ್‌ ಸೇತು’ ಮತ್ತು ‘ಸಿಂಡ್ರೆಲಾ’ (‘ರಕ್ಷಕುಡು’ ತೆಲುಗು ಸಿನಿಮಾದ ರೀಮೇಕ್‌) ಚಿತ್ರೀಕರಣದಲ್ಲಿವೆ. ಪೃಥ್ವಿರಾಜ್‌, ರಕ್ಷಾ ಬಂಧನ್‌ ಮತ್ತು ಬಚ್ಚನ್ ಪಾಂಡೆ ಚಿತ್ರಗಳು ಲೈನ್‌ನಲ್ಲಿವೆ.

LEAVE A REPLY

Connect with

Please enter your comment!
Please enter your name here