‘ಪುಷ್ಪ’ ಉತ್ತರ ಭಾರತದಲ್ಲಿ 20 ಕೋಟಿ ರೂ. ಗಳಿಕೆ ದಾಖಲಿಸಿ ಮುನ್ನಡೆದಿದೆ. ‘ಸ್ಪೈಡರ್‌ಮ್ಯಾನ್ ನೋ ವೇ ಹೋಮ್’ ಇಂಗ್ಲಿಷ್ ಸಿನಿಮಾದ ಪೈಪೋಟಿಯ ಮಧ್ಯೆ ಅಲ್ಲು ಅರ್ಜುನ್ ಸಿನಿಮಾ ಗೆದ್ದಿದೆ. ಬಾಲಿವುಡ್ ನಟ ಅಕ್ಷಯ್ ಈ ಯಶಸ್ಸಿಗೆ ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.
‘ಪುಷ್ಪ’ ತೆಲುಗು ಸಿನಿಮಾ ಉತ್ತರ ಭಾರತದಲ್ಲಿ ಉತ್ತಮ ಗಳಿಕೆಯತ್ತ ಸಾಗಿದೆ. ಇಲ್ಲಿ ಚಿತ್ರದ ಹಿಂದಿ ಅವತರಣಿಕೆ ಬಿಡುಗಡೆಯಾಗಿದ್ದು, ಐದು ದಿನಗಳಲ್ಲಿ ಚಿತ್ರ 20 ಕೋಟಿ ರೂಪಾಯಿ ಗಳಿಸಿದೆ. ಇದು ಬಾಲಿವುಡ್ ವಿಶ್ಲೇಷಕರ ಅಚ್ಚರಿಗೆ ಕಾರಣವಾಗಿದೆ. ಹಾಗೆ ನೋಡಿದರೆ ದಕ್ಷಿಣದಂತೆ ಉತ್ತರ ಭಾರತದಲ್ಲಿ ಚಿತ್ರಕ್ಕೆ ಹೆಚ್ಚಿನ ಪ್ರೊಮೋಷನ್ ಮಾಡಿರಲಿಲ್ಲ. ಮಾರ್ವೆಲ್‌ನ ‘ಸ್ಪೈಡರ್‌ಮ್ಯಾನ್ ನೋ ವೇ ಹೋಮ್’ ಸಿನಿಮಾ ಕೂಡ ಅದೇ ದಿನ ತೆರೆಕಂಡಿತ್ತು. ಇನ್ನುಮಹಾರಾಷ್ಟ್ರದ ಕೆಲವೆಡೆ ಶೇ. 50 ಥಿಯೇಟರ್ ಆಕ್ಯುಪೆನ್ಸೀ ಇದೆ. ಈ ಎಲ್ಲಾ ಅಡೆತಡೆಗಳ ಮಧ್ಯೆಯೂ ಸಿನಿಮಾ ಉತ್ತಮ ವಹಿವಾಟು ನಡೆಸಿರುವುದು ವಿಶೇಷ. ಚಿತ್ರಕ್ಕೆ ಅಲ್ಲಿ ಬಾಯ್ಮಾತಿನ ಪ್ರಚಾರ ನೆರವಾಗಿದೆ ಎನ್ನಲಾಗುತ್ತಿದೆ. ಸಿಂಗಲ್ ಸ್ಕ್ರೀನ್‌ಗಳಲ್ಲಿ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಮಲ್ಟಿಪ್ಲೆಕ್ಸ್‌ಗಳಲ್ಲೂ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಿದೆ. ಬಾಲಿವುಡ್ ಹೀರೋ ಅಕ್ಷಯ್ ಕುಮಾರ್, “ಭಾರತದ ಎಲ್ಲೆಡೆಯಿಂದ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಪಡೆದ ಪುಷ್ಪ ತಂಡಕ್ಕೆ ಅಭಿನಂದನೆಗಳು! ಚಿತ್ರೋದ್ಯಮಕ್ಕೆ ಮತ್ತೊಂದು ದೊಡ್ಡ ಗೆಲುವು! ಸದ್ಯದಲ್ಲೇ ಸಿನಿಮಾ ವೀಕ್ಷಿಸುತ್ತೇನೆ” ಎಂದು ಸಿನಿಮಾದ ನೂತನ ಟ್ರೈಲರ್ ಎಂಬೆಡ್ ಮಾಡಿ ಟ್ವೀಟ್ ಮಾಡಿದ್ದಾರೆ.
ನಟ ಅಲ್ಲು ಅರ್ಜುನ್ ಚಿತ್ರದ ದೊಡ್ಡ ಗೆಲುವಿಗೆ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ” ದಕ್ಷಿಣದ ಎಲ್ಲಾ ರಾಜ್ಯಗಳ ಪ್ರೇಕ್ಷಕರು ಹಾಗೂ ಹಿಂದಿ ನಾಡಿನಲ್ಲಿ ಸಿನಿಮಾ ಮೆಚ್ಚಿರುವ ಎಲ್ಲರಿಗೂ ನಮ್ಮ ಧನ್ಯವಾದಗಳು. ಚಿತ್ರಮಂದಿರಗಳಿಗೆ ಬಂದು ಸಿನಿಮಾ ವೀಕ್ಷಿಸುತ್ತಿರುವ ಬೆಳವಣಿಗೆ, ಭಾರತೀಯ ಸಿನಿಮಾ ಮತ್ತೆ ಬೆಳಗುತ್ತಿರುವುದು ಖುಷಿ ತಂದಿದೆ” ಎಂದು ಅವರು ಟ್ವೀಟಿಸಿದ್ದಾರೆ. ಸಿನಿಮಾದ ಇಲ್ಲಿಯವರೆಗಿನ ಗಳಿಕೆ ಕುರಿತು ಚಿತ್ರತಂಡವಿನ್ನೂ ಅಧಿಕೃತ ಮಾಹಿತಿ ನೀಡಿಲ್ಲ. ಒಂದು ಅಂದಾಜಿನಂತೆ ದೇಶ ಮತ್ತು ವಿದೇಶಗಳಲ್ಲಿ ಟಿಕೆಟ್ ಮಾರಾಟದ ಲೆಕ್ಕಾಚಾರದಲ್ಲಿ ಸಿನಿಮಾ 173 ಕೋಟಿ ರೂಪಾಯಿ ಗಳಿಕೆ ನಡೆಸಿದೆ ಎನ್ನಲಾಗುತ್ತಿದೆ.