ಸ್ಯಾಂಡಲ್‌ವುಡ್‌ನ ಭರವಸೆಯ ಸಂಗೀತ ಸಂಯೋಜಕರಲ್ಲೊಬ್ಬರು ವಾಸುಕಿ ವೈಭವ್‌. ರಂಗಭೂಮಿ ಹಿನ್ನೆಲೆಯ ವಾಸುಕಿ ಉತ್ತಮ ಗಾಯಕರೂ ಹೌದು. ಇಲ್ಲಿಯವರೆಗೆ ಕ್ಲಾಸ್‌ ಸಿನಿಮಾಗಳಿಗೆ ಕೆಲಸ ಮಾಡಿದ್ದ ಅವರು ‘ಬಡವ ರಾಸ್ಕಲ್‌’ನೊಂದಿಗೆ ಮೊದಲ ಬಾರಿ ಮಾಸ್‌ ಆಗಿದ್ದಾರೆ.

“ಸ್ನೇಹಿತರೆಲ್ಲರೂ ಸೇರಿಕೊಂದು ಏನು ಮಾಡಿದರೂ ಅದು ವಿಶೇಷವಾಗಿರುತ್ತದೆ. ‘ಬಡವ ರಾಸ್ಕಲ್‌’ ಸಮಾನ ಮನಸ್ಕ ಸ್ನೇಹಿತರೇ ಒಗ್ಗೂಡಿ, ತುಂಬಾ ಶ್ರಮವಹಿಸಿ ರೂಪಿಸಿರುವ ಸಿನಿಮಾ” ಎನ್ನುತ್ತಾರೆ ಚಿತ್ರಕ್ಕೆ ಸಂಗೀತ ಸಂಯೋಜಿಸಿರುವ ವಾಸುಕಿ ವೈಭವ್‌. ಧನಂಜಯ್‌ ನಟಿಸಿ, ನಿರ್ಮಿಸಿರುವ ಸಿನಿಮಾ ಈ ವಾರ ತೆರೆಕಾಣುತ್ತಿದೆ. ಸಹಜವಾಗಿಯೇ ವಾಸುಕಿ ಎಕ್ಸೈಟ್‌ ಆಗಿದ್ದಾರೆ. ಧನಂಜಯ್‌ ಜೊತೆ ವಾಸುಕಿ ಅವರದ್ದು ದಶಕದ ಗೆಳೆತನ. ಇಬ್ಬರೂ ರಂಗಭೂಮಿ ಹಿನ್ನೆಲೆಯ ಗೆಳೆಯರು. ಧನಂಜಯ್‌ ಮೈಸೂರಿನ ರಂಗತಂಡದಲ್ಲಿ ಕೆಲಸ ಮಾಡಿದ್ದರೆ, ವಾಸುಕಿ ಬೆಂಗಳೂರಿನ ‘ಸಂಚಾರಿ’ ತಂಡದ ವಿದ್ಯಾರ್ಥಿ. ವೃತ್ತಿ ಬದುಕಿನ ಆರಂಭದಲ್ಲಿ ಧನಂಜಯ್‌ ನಟಿಸಿದ ‘ಜಯನಗರ 4th ಬ್ಲಾಕ್‌’ ಕಿರುಚಿತ್ರಕ್ಕೆ ವಾಸುಕಿ ಸ್ಟಿಲ್‌ ಫೋಟೊಗ್ರಾಫರ್‌ ಆಗಿ ಕೆಲಸ ಮಾಡಿದ್ದರಂತೆ. ಈಗ ಗೆಳೆಯ ನಿರ್ಮಿಸಿರುವ ಸಿನಿಮಾಗೆ ಸಂಗೀತ ಸಂಯೋಜಿಸಿದ್ದಾರೆ.

ಕಠಿಣ ಪರಿಶ್ರಮ, ಪ್ರತಿಭೆಯಿಂದ ಬೆಳೆದ ನಟ ಧನಂಜಯ್‌ ಈಗ ನಿರ್ಮಾಪಕರೂ ಆಗಿರುವುದು ವಾಸುಕಿಗೆ ಖುಷಿ ವಿಚಾರ. ಅಲ್ಲದೆ ಚಿತ್ರಕ್ಕೆ ಧನಂಜಯ್‌ ಎರಡು ಹಾಡುಗಳನ್ನೂ ಬರೆದಿದ್ದಾರೆ. ಸಂಗೀತ ಸಂಯೋಜಕನಾಗಿ ವಾಸುಕಿ ಅವರಿಗೆ ಇದು ಬಹು ವಿಶೇಷ. “ಧನಂಜಯ್‌ ಒಳ್ಳೆಯ ಬರಹಗಾರ. ಅವರು ಹಲವು ಕತೆಗಳನ್ನು ಬರೆದಿದ್ದಾರೆ. ಈ ಚಿತ್ರದಲ್ಲಿನ ‘ಉಡುಪಿ ಹೋಟೆಲು’ ಹಾಡನ್ನು ಧನು ಕಾಲೇಜು ದಿನಗಳಲ್ಲಿ ಬರೆದದ್ದು. ಇನ್ನೊಂದು ಹಾಡು ‘ಆಗಾಗ ನೆನಪಾಗುತಾಳೆ’ ಕೂಡ ಅವರದೆ. ನಾನು ಹಾಕಿದ ಟ್ಯೂನ್‌ಗೆ ಈ ಹಾಡು ಬರೆದುಕೊಟ್ಟರು. ನಟನೆ ಜೊತೆ ಅವರು ಹೀಗೇ ಹಾಡುಗಳನ್ನೂ ಬರೆಯುತ್ತಿರಲಿ” ಎಂದು ವಾಸುಕಿ ಆಶಿಸುತ್ತಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆಯಂತೆ. ಇನ್ನೆರೆಡು ಹಾಡುಗಳನ್ನು ನಿರ್ದೇಶಕ ಶಂಕರ್‌ ಗುರು ಮತ್ತು ಚಿತ್ರನಿರ್ದೇಶಕ ಚೇತನ್‌ ರಚಿಸಿದ್ದಾರೆ.

ಇನ್ನು ಚಿತ್ರದ ಹಿನ್ನೆಲೆ ಸಂಗೀತದ ಬಗ್ಗೆ ಹೇಳಬಹುದಾದರೆ, ಇಲ್ಲಿ ಪಕ್ಕಾ ಮಾಸ್‌ ಶೈಲಿಯಲ್ಲಿ ವಾಸುಕಿ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. ಈ ಹಿಂದೆ ಅವರು ಕೆಲಸ ಮಾಡಿದ ಸಿನಿಮಾಗಳು ಕೊಂಚ ಕ್ಲಾಸ್‌ ಮಾದರಿಯವೇ ಆಗಿದ್ದವು. ಈಗ ಮಾಸ್‌ ಎಂಟರ್‌ಟೇನರ್‌ ಏನು ಬೇಡುತ್ತದೋ ಅಂತಹ ಸಂಗೀತ ನೀಡುವ ಅವಕಾಶ ಸಿಕ್ಕಿದೆ ಎನ್ನುತ್ತಾರೆ. ಹಿನ್ನೆಲೆ ಸಂಗೀತ ಮತ್ತು ಗೀತರಚನೆಯಲ್ಲಿ ವಾಸುಕಿ ಅವರಿಗೆ ಹಂಸಲೇಖ ಸ್ಫೂರ್ತಿ. ಮೊನ್ನೆ ಚಿತ್ರದ ಪ್ರೀರಿಲೀಸ್‌ ಇವೆಂಟ್‌ನಲ್ಲಿ ಹಾಜರಿದ್ದ ತಮ್ಮ ನೆಚ್ಚಿನ ಸಂಗೀತ ಸಂಯೋಜಕರಿಂದ ಅವರು ಅಭಿನಂದನೆ ಪಡೆದರು. “ಹಂಸಲೇಖ ಎಲ್ಲರಿಗೂ ಪ್ರೇರಣೆ. ಗೀತ ರಚನೆಕಾರರಾಗಿ, ಸಂಗೀತ ಸಂಯೋಜಕರಾಗಿ ಅವರು ದೊಡ್ಡ ಕೆಲಸ ಮಾಡಿದ್ದಾರೆ. ಸಮಾಜದ ಬಗ್ಗೆ ಅವರಿಗಿರುವ ಕಾಳಜಿ ನಮಗೆಲ್ಲಾ ಮಾದರಿ” ಎನ್ನುತ್ತಾರೆ ವಾಸುಕಿ ವೈಭವ್‌. ‘ಬಡವ ರಾಸ್ಕಲ್‌’ ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದ್ದು, ಪ್ರೇಕ್ಷಕರು ಚಿತ್ರವನ್ನು, ಚಿತ್ರದಲ್ಲಿನ ತಮ್ಮ ಸಂಗೀತವನ್ನು ಹೇಗೆ ಸ್ವೀಕರಿಸಬಹುದು ಎಂದು ಅವರು ಆತಂಕ, ಕುತೂಹಲದಿಂದ ಎದುರು ನೋಡುತ್ತಿದ್ಧಾರೆ.

LEAVE A REPLY

Connect with

Please enter your comment!
Please enter your name here