ಇದು ಬದಲಾದ ಕಾಲಮಾನದ ಧ್ವನಿಗಳನ್ನು ಆಲಿಸಿದ ಕಥೆ. ಮೈಖೇಲ್ ಪ್ಯಾಟ್ರಿಕ್ ಕಿಂಗ್ ನಿರ್ದೇಶನದ ‘And Just Like that’ ಸರಣಿ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಸಿನಿಮಾ ಹಾಲ್‌ಗಳಲ್ಲಿ ಕೂತು ಚಲನಚಿತ್ರಗಳನ್ನು ನೋಡುವಾಗ ಅಲ್ಲೆಲ್ಲೋ ಇದ್ದ ಪಾತ್ರಗಳನ್ನು ಟೆಲಿವಿಷನ್ ನೇರ ನಮ್ಮ ಮನೆಗೇ ಕರೆತಂದಿತು. ನಮ್ಮ ಊಟದ ಟೇಬಲ್ಲಿನ ಮುಂದೆ ಪ್ರತಿದಿನ ಹಾಜರಾಗಿ, ನಮ್ಮದೇ ಮನೆಗಳಲ್ಲಿ, ದಿನನಿತ್ಯದ ಸಂಭಾಷಣೆಗಳಲ್ಲಿ ನುಸುಳುತ್ತಿದ್ದ ಈ ಪಾತ್ರಗಳು ಎಷ್ಟೋ ಸಲ ಸ್ನೇಹಿತರ ನಡುವೆ ಸರ್ವನಾಮಗಳಾಗಿ ಬಳಕೆಯಾದದ್ದೂ ಇದೆ. ಇಂಗ್ಲಿಷ್ ಭಾಷೆಯ ಮಟ್ಟಿಗೆ ಹೇಳುವುದಾದರೆ 80-90 ರ ದಶಕದಲ್ಲಿ ಹೀಗೆ ಮನೆಮಾತಾದ ಧಾರವಾಹಿಗಳಲ್ಲಿ Friends, Sex and the City ಪ್ರಮುಖವಾದವು. ದಶಕಗಳ ನಂತರವೂ ಇವನ್ನು ಮತ್ತೆ ಮತ್ತೆ ನೋಡಲಾಗುತ್ತಿದೆ, ಇವುಗಳ GIFಗಳು, ಮೀಮ್‌ಗಳು ಓಡಾಡುತ್ತಿವೆ.

1998 ರಿಂದ 2004 ರವರೆಗೂ ಆರು ಸೀಸನ್‌ಗಳಲ್ಲಿ ಪ್ರಸಾರವಾದ Sex and the City ಧಾರಾವಾಹಿಯನ್ನು ಆಧರಿಸಿ ಎರಡು ಚಿತ್ರಗಳೂ ಬಂದವು. ಆ ನಂತರದಲ್ಲಿ ಮೇಲ್ವರ್ಗದ ಮಹಿಳೆಯರ ಬದುಕನ್ನು ಆಧರಿಸಿದ ಈ ಚಿತ್ರದ ಯಶಸ್ವೀ ಸೂತ್ರವನ್ನು ಹಿಡಿದು, ಆತ್ಮೀಯ ಸ್ನೇಹಿತೆಯರ ಬದುಕಿನ ಸವಾಲುಗಳು, ಸಂಕಷ್ಟಗಳು, ಪ್ರೇಮ ಕಾಮಗಳನ್ನು ವಸ್ತುವಾಗಿರಿಸಿಕೊಂಡು ಅನೇಕ ಧಾರವಾಹಿಗಳು, ವೆಬ್ ಸೀರೀಸ್‌ಗಳು ಬಂದಿವೆ. ಇವೆಲ್ಲಾ ಆಯಾ ಕಾಲದ ಹೊಸಭಾಷೆಯನ್ನು, ಹೊಸ ವ್ಯಾಕರಣವನ್ನು, ಹೊಸ ಪರಿಭಾಷೆಯನ್ನು ತಮ್ಮದಾಗಿಸಿಕೊಂಡು ಆ ಮೂಲಕ ಪ್ರಸ್ತುತತೆಯನ್ನು ಸಾಧಿಸಿಕೊಂಡವು. ಓಟೀಟಿ ವೇದಿಕೆಯನ್ನು ಹಾಗೆ ಬಳಸಿಕೊಂಡ ಕೆಲವು ವೆಬ್ ಸರಣಿಗಳು The Bold Type, Working Moms, Broad City, Big Little Lies ಇತ್ಯಾದಿ. ಭಾರತದಲ್ಲಿ ಹೀಗೆ ಬಂದ ವೆಬ್ ಸರಣಿ Four Shots of Vodka. Sex and the City ಯ ಅದೇ ಪಾತ್ರಗಳು ಈಗ ಹೊಸ ಆವೃತ್ತಿಯಾಗಿ, And Just Like That ಎನ್ನುವ ಹೊಸ ಹೆಸರಿನೊಂದಿಗೆ ಬಂದಿದೆ. ಮೈಖೇಲ್ ಪ್ಯಾಟ್ರಿಕ್ ಕಿಂಗ್ ಇದನ್ನು ಬರೆದು, ನಿರ್ದೇಶಿಸಿದ್ದಾರೆ.

Sex and the City ಪ್ರಮುಖವಾಗಿ ಕ್ಯಾರಿ, ಸಮಂತಾ, ಮಿರಾಂಡಾ ಮತ್ತು ಶಾರ್ಲಟ್ ಎನ್ನುವ ನಾಲ್ವರು ಸ್ನೇಹಿತೆಯರ ಕಥೆಯಾಗಿದ್ದು, ಅಲ್ಲಿಯವರೆಗಿನ ಅನೇಕ ನಂಬಿಕೆಗಳನ್ನು, ರೂಡಿ ಮೌಲ್ಯಗಳನ್ನು, ಚೌಕಟ್ಟುಗಳನ್ನು ಅದು ಮುರಿದು ಹಾಕಿತ್ತು. ಗಂಡಿನ ಪಾತ್ರಕ್ಕೆ ಪೂರಕವಾಗಿ ಈ ಪಾತ್ರಗಳನ್ನು ಕಟ್ಟಲಾಗಿರಲಿಲ್ಲ. ಶಾರ್ಲಟ್‌ಳನ್ನು ಹೊರತುಪಡಿಸಿ ಮಿಕ್ಕ ಯಾವುದೇ ಪಾತ್ರ ಮದುವೆಯನ್ನು ಅನಿವಾರ್ಯ ಎಂದುಕೊಂಡಿರಲಿಲ್ಲ. ಅವರ ವೃತ್ತಿ, ಅದರ ಸಾಫಲ್ಯ, ಅವರ ದೈಹಿಕ, ಮಾನಸಿಕ ಸಮಸ್ಯೆಗಳು, ಪ್ರೇಮ-ಕಾಮ ಸಂಬಂಧಿ ಸಮಸ್ಯೆಗಳು ಎಲ್ಲವನ್ನೂ ಕಟ್ಟಿಕೊಡುತ್ತಿದ್ದ ಈ ಧಾರವಾಹಿ ತನ್ನ ತಾಜಾತನ, ಹಾಸ್ಯ ಮತ್ತು ಪ್ರಾಮಾಣಿಕತೆಯಿಂದ ಗಮನ ಸೆಳೆದಿತ್ತು. 40ರಲ್ಲಿದ್ದ ಸಮಂತಾಳನ್ನು ಹೊರತುಪಡಿಸಿದರೆ ಮಿಕ್ಕ ಮೂವರೂ ತಮ್ಮ ತಮ್ಮ 30ನೆಯ ವಯಸ್ಸಿನಲ್ಲಿದ್ದವರು. ಪರಸ್ಪರ ಅವರಿಗವರೇ ಭಾವನಾತ್ಮಕವಾಗಿ ಆಸರೆಯಾಗುತ್ತಾ ಹೋದವರು.

ಇಬ್ಬರು ಹೆಂಗಸರ ನಡುವೆ ಪೈಪೋಟಿಯಷ್ಟೇ ಸಾಧ್ಯ ಎನ್ನುವ ಪಿತ್ರುಪ್ರಧಾನ ಮಿಥ್ ಇಲ್ಲಿರಲಿಲ್ಲ. 30ರ ನಂತರ ಅಗತ್ಯವಾಗಿ ಮತ್ತು ಅತ್ಯವಸರವಾಗಿ ಮದುವೆಯಾಗಿ, ‘ಸೆಟಲ್’ ಆಗಬೇಕು ಎನ್ನುವ ಅವಸರದ ಹೇರಿಕೆಯನ್ನು ಮುರಿದ ಕಾರಣಕ್ಕೆ ಧಾರಾವಾಹಿ ನಂತರದ ತಲೆಮಾರಿನವರಿಗೂ ಆಪ್ತವಾಗುತ್ತಿತ್ತು. ಮದುವೆಯಾಗದ ವಯಸ್ಸಿನ ಹೆಣ್ಣುಗಳಿಗೆ ಸದಾ ಸಂಗಾತಿಯಾಗಬಲ್ಲ ಗಂಡಿನ ಹಂಬಲ ಇರುತ್ತದೆ ಮತ್ತು ಸಂಗಾತಿಯೊಬ್ಬ ಸಿಕ್ಕ ಕೂಡಲೇ ಅವಳ ಸಮಸ್ಯೆಗಳು ಪರಿಹಾರವಾಗುತ್ತವೆ ಎನ್ನುವ ಮಿಲ್ಸ್ ಅಂಡ್ ಬೂನ್ಸ್ ಕಾದಂಬರಿಗಳ ಭಾಷೆಯನ್ನು ಈ ಧಾರಾವಾಹಿ ಮಾತನಾಡುತ್ತಿರಲಿಲ್ಲ. ತನ್ನ ಕೆರಿಯರ್ ಮತ್ತು ತಾಯ್ತನದ ಆಯ್ಕೆಗಳ ನಡುವಿನ ತಿಕ್ಕಾಟ, ಕ್ಯಾನ್ಸರ್, ಆತ್ಮಗೌರವ, ಪ್ರೇಮದ ವಿಫಲತೆ, ಮತ್ತೆಮತ್ತೆ ಆ ಪ್ರೇಮಿಯ ಕಡೆಗೇ ಹಿಂದಿರುಗುವ ನೋವು, ವಯಸ್ಸಾದಂತೆ ಬದಲಾಗುವ ಗಂಡು ಹೆಣ್ಣಿನ ನಡುವಿನ ಸಮೀಕರಣ, ವಯಸ್ಸಾದ ಗಂಡಿಗೆ ಚಿಕ್ಕವಯಸ್ಸಿನ ಸಂಗಾತಿ ಸಿಕ್ಕರೆ ಸಮಾಜ ಅವನನ್ನು ಅಭಿನಂದಿಸುವಂತೆ ನೋಡುತ್ತದೆ, ಅದೇ ಹೆಣ್ಣೊಬ್ಬಳು ತನಗಿಂತ ಚಿಕ್ಕವಯಸ್ಸಿನವನೊಡನೆ ಓಡಾಡಿದರೆ ಅವಳನ್ನು ಅವಹೇಳನ ಮಾಡುತ್ತದೆ. ಆ ಧಾರಾವಾಹಿ ಆ ಕಾಲಕ್ಕೆ ಎಲ್ಲವನ್ನೂ ಚರ್ಚಿಸಿತ್ತು.

ಕ್ಯಾರಿ ಬ್ರಾಡ್ ಷಾ ಒಬ್ಬ ಫ್ರೀಲ್ಯಾನ್ಸ್ ಬರಹಗಾರ್ತಿ. ಗಂಡುಹೆಣ್ಣಿನ ಸಂಬಂಧಗಳ ಬಗ್ಗೆ, ಫ್ಯಾಷನ್ ಬಗ್ಗೆ ಬರೆಯುವವಳು. ಜಾನ್ ಎನ್ನುವ ವ್ಯಕ್ತಿಯೊಂದಿಗಿನ ಪ್ರೇಮ ಸಂಬಂಧವನ್ನು ಬಿಡಲಾರದವಳು. ಅವನು ಅವಳ ಬದುಕಿಗೆ ಬರುತ್ತಾ, ಇದ್ದಾಗ ಅದನ್ನು ಸಿಂಗರಿಸುತ್ತಾ, ಹೋಗುವಾಗ ಅವಳ ಅಂತಃಸತ್ವವನ್ನು ಕೊಂದುಹಾಕಿ ಹೋಗುವವನು. ಎಲ್ಲಾ ಟಾಕ್ಸಿಕ್ ಸಂಬಂಧಗಳ ರೀತಿಯಲ್ಲಿಯೇ, ಎಲ್ಲಾ ಬುದ್ಧಿವಂತ ಹುಡುಗಿಯರ ಹಾಗೆಯೇ ಕ್ಯಾರಿ ಸಹ ಅವನು ಬಂದಾಗಲೆಲ್ಲಾ ಕದ ತೆರೆಯುತ್ತಾಳೆ ಮತ್ತು ಈ ಸಲ ಹಾಗಾಗುವುದಿಲ್ಲ ಎಂದು ಪ್ರಾಮಾಣಿಕವಾಗಿ ನಂಬುತ್ತಾಳೆ! ಇನ್ನೊಂದು ಕಡೆ, ಅವನು ತನ್ನನ್ನು ನಡೆಸಿಕೊಳ್ಳುತ್ತಿರುವ ಹಾಗೆಯೇ ತನ್ನ ಬಾಳಿನಲ್ಲಿ ಬರುವ ಪ್ರತಿ ಗಂಡನ್ನೂ ತಾನೂ ಸಹ ನಡೆಸಿಕೊಳ್ಳುತ್ತಿದ್ದೇನೆ ಎಂದು ಅವಳಿಗೆ ಅರಿವಾಗುವುದೇ ಇಲ್ಲ.

ಆದರೆ ಮಿರಂಡಾ ಮತ್ತು ಶಾರ್ಲಟ್ ಆಗಾಗ ಅವಳಿಗೆ ಕನ್ನಡಿ ಹಿಡಿಯುತ್ತಿರುತ್ತಾರೆ. ಮಿರಂಡಾ ಯಶಸ್ವೀ ವಕೀಲೆ. ಅವಳ ಬದುಕಿನಲ್ಲಿ ಬರುವ ಸ್ಟೀವ್ ಅವಳ ಬದುಕಿನ ನಿರಂತರ ಸತ್ಯ. ಅವಳಿಗೆ ಮಗುವಾದಾಗ ಅವಳು ಅನುಭವಿಸುವ ಕಷ್ಟಗಳು, ಸುಸ್ತು, ತಾಳ್ಮೆ ಕಳೆದುಕೊಳ್ಳುವಿಕೆ ಮತ್ತು ಆ ಕಾರಣದಿಂದಲೇ ವೃತ್ತಿಬದುಕಿನಲ್ಲಿ ಅನುಭವಿಸುವ ತಾರತಮ್ಯ ಎಲ್ಲವೂ ಯಾವುದೇ ವೃತ್ತಿಪರ ಹೆಣ್ಣು ಅನುಭವಿಸುವ, ಸಮೀಕರಿಸಿಕೊಳ್ಳುವ ವಾಸ್ತವ. ಶಾರ್ಲಟ್ ಮೇಲ್ವರ್ಗದ ಕುಟುಂಬದಿಂದ ಬಂದವಳು. ಅವಳಿಗೆ ಕಲಿಸಲಾಗಿರುವುದು ತನ್ನಂತೆಯೇ ಮೇಲ್ವರ್ಗದಲ್ಲಿ ಜನಿಸಿದ ಗಂಡೊಬ್ಬನನ್ನು ಹುಡುಕಿ, ಮದುವೆಯಾಗಿ, ಮಾದರಿ ಗೃಹಿಣಿಯಾಗುವುದು. ಅವಳು ಕಡೆಗೊಮ್ಮೆ ಪ್ರೇಮದಲ್ಲಿ ಬಿದ್ದು, ಇವನನ್ನೇ ಬಾಳಸಂಗಾತಿಯನ್ನಾಗಿಸಿಕೊಳ್ಳಬೇಕು ಎಂದು ಹಂಬಲಿಸುವಾತ ಅವಳ ಪಟ್ಟಿಯಲ್ಲಿನ ಯಾವುದೇ ವಿಷಯವನ್ನೂ ಹೋಲುತ್ತಿರುವುದಿಲ್ಲ. ಆದರೆ ಆ ಪಟ್ಟಿಯ ಹಾಳೆಯನ್ನು ಹರಿದು ಮುಂದುವರೆಯುವ ಧೈರ್ಯ ಅವಳಿಗೆ ಸಾಧ್ಯವಿದೆ. ಗುಂಪಿನಲ್ಲೇ ಅತ್ಯಂತ ಧೈರ್ಯದ, ಬಿಂದಾಸ್ ಬದುಕುವ ಕಾಶ್ಮೀರಿ ಮಿರ್ಚಿಯಂತಹ ಹೆಣ್ಣೆಂದರೆ, ಗುಂಪಿನಲ್ಲಿ ಎಲ್ಲರಿಗಿಂತಾ ಹಿರಿಯಳಾದ ಸಮಂತಾ! ಧಾರವಾಹಿಗೆ ಹಾಸ್ಯ, ಪ್ರಾಮಾಣಿಕತೆ, ಮಸಾಲೆ ಎಲ್ಲವನ್ನೂ ತಂದು ತುಂಬುವವಳು ಇದೇ ಸಮಂತಾ.

ಆದರೆ ಇದೆಲ್ಲದರ ನಡುವೆ ಈ ಧಾರಾವಾಹಿಗೆ ಕೆಲವು ಮಿತಿಗಳೂ ಇದ್ದವು. ಯೂರೋಪಿನ ಭಾಷೆಯಲ್ಲಿ ಹೇಳುವುದಾದರೆ ಇದೊಂದು ‘ವೆನಿಲಾ’ ಶೋ. ಅಂದರೆ ಶ್ವೇತವರ್ಣೀಯ ಪಾತ್ರಗಳೇ ಪ್ರಧಾನವಾಗಿದ್ದ ಸೀರಿಯಲ್. ಅಲ್ಲೊಂದು, ಇಲ್ಲೊಂದು ವರ್ಣೀಯ ಪಾತ್ರಗಳು ಬಂದರೂ ಅವು ಈ ಜಗತ್ತಿನ ಹೊರಗೇ ಇರಿಸಿದ ಪಾತ್ರಗಳಾಗಿದ್ದವೇ ಹೊರತು, ಇಲ್ಲಿಗೆ ಸಂದವರಾಗಿರಲಿಲ್ಲ. ಆ ಶ್ವೇತವರ್ಣೀಯ ಲೋಕದಲ್ಲೂ ಗಂಡು ಮತ್ತು ಹೆಣ್ಣು ಎನ್ನುವ ಎರಡು ಬೈನರಿಗಳೇ ಪ್ರಧಾನವಾಗಿದ್ದು ಲಿಂಗಾಂತರಿಗಳು ಮತ್ತು ಸಲಿಂಗ ಸಂಬಂಧಿಗಳನ್ನು ಕೇವಲ ಪ್ರಹಸನದ ಪಾತ್ರಗಳಿಗೆಂದೇ ಇಟ್ಟುಕೊಳ್ಳಲಾಗಿತ್ತು. ಪಾತ್ರಗಳ ಶಾಪಿಂಗ್ ಹುಚ್ಚು ಮತ್ತು ಐಷಾರಾಮಿ ಬ್ರಾಂಡ್‌ಗಳ ಭರಾಟೆ ಅತಿ ಎನ್ನುವಷ್ಟು ಹೆಚ್ಚಿತ್ತು. ತಮ್ಮನ್ನು ತಾವು ಅತ್ಯಂತ ಮಾನವೀಯ ಎಂದುಕೊಂಡಿದ್ದ ಪಾತ್ರಗಳು ಬಹಳಷ್ಟು ಸಂದರ್ಭಗಳಲ್ಲಿ ಶೀತಲವಾಗಿ, ಕ್ರೌರ್ಯದಿಂದಲೇ ಕಾಣಿಸಿಕೊಳ್ಳುತ್ತಿದ್ದವು.

ಸುಮಾರು 20 ವರ್ಷಗಳ ನಂತರ ಈ ಧಾರವಾಹಿಯನ್ನು ರೀಬೂಟ್ ಮಾಡಿ, ವೆಬ್ ಸರಣಿಯನ್ನಾಗಿಸುವಾಗ ಮೇಲಿನ ಅಂಶಗಳ ಜೊತೆಗೆ, ಮಾರುಕಟ್ಟೆಯ ಅಂಶಗಳನ್ನೂ ಗಣನೆಗೆ ತಂದುಕೊಳ್ಳಲಾಗಿದೆ. ಈ ಸರಣಿಗೆ ಶುರುವಿನಲ್ಲೇ ಬಿದ್ದ ದೊಡ್ಡ ಹೊಡೆತ ಸಮಂತಾ ಪಾತ್ರಧಾರಿ ಇದರ ಭಾಗವಾಗಲಾರೆ ಎಂದು ಹೇಳಿದ್ದು. ಆಕೆಯ ಅನುಪಸ್ಥಿತಿ ನಮ್ಮನ್ನು ಮರೆಯಲು ಬಿಡುವುದಿಲ್ಲ. ಆದರೂ ಸರಣಿ ಜೀವಂತವಾಗುವುದು ಮಿಕ್ಕ ಮೂರು ಪಾತ್ರಗಳನ್ನು ಹೆಚ್ಚು ಮಾನವೀಯಗೊಳಿಸಿರುವುದರಲ್ಲಿ. ಹಾಗಾಗಿಯೇ ಆ ಪಾತ್ರಗಳೊಂದಿಗೆ ಸಂವಾದ ಸಾಧ್ಯವಾಗುತ್ತದೆ. ಹಿಂದಿನ ತಪ್ಪನ್ನು ಸರಿಪಡಿಸಿಕೊಳ್ಳಲೇನೋ ಎನ್ನುವಂತೆ ಈಗ ಕ್ಯಾರಿ, ಮಿರಂಡಾ ಮತ್ತು ಶಾರ್ಲಟ್ ಈ ಮೂರು ಪಾತ್ರಗಳಿಗೂ ವರ್ಣೀಯರಾದ ಆತ್ಮೀಯ ಸ್ನೇಹಿತೆಯರಿದ್ದಾರೆ. ಹೊಸತಾಗಿ ತೆರೆದುಕೊಂಡ ಭಾರತೀಯ ಮತ್ತು ಚೀನಾದ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಮತ್ತು ಚೀನಿ ಜನಾಂಗದ ಪಾತ್ರಗಳನ್ನು ಸೃಷ್ಟಿಸಲಾಗಿದೆ. ಆದರೆ ಹಾಗೆ ಪಾತ್ರಗಳನ್ನು ಸೃಷ್ಟಿಸುವಾಗ ಅದನ್ನು ಅಲಂಕಾರಿಕವಾಗಿ ಸೃಷ್ಟಿಸದೆ ಅಗತ್ಯವಿರುವಷ್ಟಾದರೂ ಆ ಕುರಿತು ಸಂಶೋದನೆ ಮಾಡಬೇಕು ಎನ್ನುವುದನ್ನು ಮರೆತ ತಂಡ ಬಹುಶಃ ಮುಂದಿನ ದಿನಗಳಲ್ಲಿ ಆ ತಪ್ಪನ್ನೂ ಸರಿಪಡಿಸಿಕೊಳ್ಳಬಹುದು! ದೀಪಾವಳಿ ಹಬ್ಬಕ್ಕೆ ಕ್ಯಾರಿ ಧರಿಸುವ ಒಂದು ಲೆಹಂಗಾವನ್ನು ಸೀರೆ ಎಂದು ಕರೆದು ತಂಡ ಇನ್ನಿಲ್ಲದಂತೆ ಟ್ರೋಲ್ ಆಗಿತ್ತು!

ಈ ಸರಣಿಯಲ್ಲಿ ಕ್ಯಾರಿ ತನ್ನ ಅನವರತದ ಪ್ರೇಮಿ ಜಾನ್‌ನನ್ನು ವರಿಸಿ, 15 ವರ್ಷಗಳ ಕಾಲ ಸಂಸಾರ ನಡೆಸಿರುತ್ತಾಳೆ. ಈಗ ಬರವಣಿಗೆಯ ಜೊತೆಜೊತೆಯಲ್ಲಿಯೇ ಪಾಡ್‌ಕಾಸ್ಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. ಬಿಂದಾಸ್ ಆಗಿ ‘ಸೆಕ್ಸ್ ಅಂಡ್ ದ ಸಿಟಿ’ ಕಾಲಂ ಬರೆಯುತ್ತಿದ್ದ ಇವಳಿಗೂ ಇಂದಿನ ಜನಾಂಗದವರ ಫಾಸ್ಟ್ ಭಾಷೆಗೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ. ಅವಳ ಪತಿಯಾಗಿ ‘ಬಿಗ್’ ಅಥವಾ ಜಾನ್ ಪಾತ್ರವನ್ನು ಮಾಡಿದ್ದ ಕ್ರಿಸ್ ನೋತ್‌ನ ಮಾಂತ್ರಿಕತೆ ಇಷ್ಟು ವರ್ಷಗಳಾದರೂ ಕಡಿಮೆ ಆಗಿಯೇ ಇಲ್ಲ. ಅದು ಮುಕ್ಕಾಗಿದ್ದು ಆತ ಒಂದರ ನಂತರ ಒಂದರಂತೆ ಲೈಂಗಿಕ ದೌರ್ಜನ್ಯ ನಡೆಸಿದ ಹಲವಾರು ಪ್ರಕರಣಗಳು ಬೆಳಕಿಗೆ ಬಂದ ಮೇಲೆಯೇ. ಚಿತ್ರತಂಡ ಸಹ ಅದನ್ನು ಖಂಡಿಸಿ ಹೇಳಿಕೆ ನೀಡಿತು. ಮೊದಲನೆಯ ಸಂಚಿಕೆಯಲ್ಲೇ ಆ ಪಾತ್ರ ಸಾಯುತ್ತದೆಯಾದ್ದರಿಂದ ನಿರೂಪಣೆಗೇನೂ ತೊಂದರೆಯಾಗಲಿಲ್ಲ ಎನ್ನುವುದು ಬೇರೆ ಮಾತು. ಮಿರಂಡಾಳ ಮಗ ದೊಡ್ಡವನಾಗಿದ್ದಾನೆ. ಅವಳ ಮತ್ತು ಗಂಡನ ನಡುವೆ ಮಾತುಗಳೆಲ್ಲಾ ಮುಗಿದಂತಾಗಿದೆ. ಕೆಲಸದ ಹುಚ್ಚು ಓಟ ಸಾಕಾಗಿ ಅದನ್ನು ಬಿಟ್ಟಿದ್ದಾಳೆ. ಬದುಕಿನ ಏಕತಾನತೆಯನ್ನು ತಪ್ಪಿಸಿಕೊಳ್ಳಲೇನೋ ಎನ್ನುವಂತೆ ಯೂನಿವರ್ಸಿಟಿಯಲ್ಲಿ ಹೊಸತೊಂದು ಪದವಿಗಾಗಿ ಸೇರಿದ್ದಾಳೆ. ತನ್ನ ಕೂದಲಿಗೆ ರಂಗು ಬಳಸದ ಮಿರಂಡಾ Grey Pride ನ ಪ್ರತಿಪಾದಕಿ.

ಶಾರ್ಲಟ್ ತನ್ನ ಆಯ್ಕೆಯಂತೆಯೇ ಗೃಹಿಣಿಯಾಗಿದ್ದಾಳೆ. ದತ್ತು ತೆಗೆದುಕೊಂಡ ಅವಳ ಹಿರಿಯ ಮಗಳು ಬೆಳೆದಿದ್ದಾಳೆ. ಕಿರಿಯ ಮಗಳು ಶಾರ್ಲಟ್‌ಳ ಸುಖೀ ಜೀವನದಲ್ಲಿ ಬಿರುಗಾಳಿ ಎಬ್ಬಿಸಲಿದ್ದಾಳೆ. ಕ್ಯಾರಿ ತನ್ನ ಪಾಡ್‌ಕಾಸ್ಟ್‌ಗೆ ಬೇಕಾದ ಹೊಸತನದ ಭಾಷೆಯನ್ನು ಪಳಗಿಸಿಕೊಳ್ಳಬೇಕು ಎಂದಿರುವಾಗಲೇ ಅವಳ ಗಂಡನ ಸಾವು ಸಂಭವಿಸುತ್ತದೆ. ನಡುವಯಸ್ಸಿನ ಒಂಟಿತನವನ್ನು ಅವಳು ಎದುರಿಸಬೇಕಾಗುತ್ತದೆ. ವಯಸ್ಸಿನ ಕಾರಣಕ್ಕೆ ಬರುವ ದೈಹಿಕ ತೊಂದರೆ, ನವ ತಾಂತ್ರಿಕತೆ ತರುವ ಅಸಹಾಯಕತೆ ಎಲ್ಲವನ್ನೂ ಎದುರಿಸಬೇಕಾಗುತ್ತದೆ.

ಒಂದು ಸ್ಟಾಂಡಪ್ ಕಾಮಿಡಿ ಸಂಜೆ ಕ್ಯಾರಿಯ queer, non binary ಬಾಸ್, ಚೇಯನ್ನು ಭೇಟಿ ಮಾಡುವ ಮಿರಂಡಾ ಅವಳೆಡೆಗೆ ಅಕರ್ಷಿತಳಾಗುತ್ತಾಳೆ. ಯಾವಾಗಲೂ ಕಟು ವಾಸ್ತವತೆಯಲ್ಲೇ ಮಾತನಾಡುವ, ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಳು ಚೇಗಾಗಿ ಸಮಾಜದ ಎದುರಿಗೆ ತನ್ನ ಸತ್ಯ ಹೇಳುತ್ತಾಳೆ. ಪ್ರೇಮಕ್ಕಾಗಿ ಚೇ ಜೊತೆಯಲ್ಲಿ ನ್ಯೂಯಾರ್ಕ್ ಬಿಟ್ಟು ಹೋಗಲೂ ಸಿದ್ಧವಾಗುತ್ತಾಳೆ. ಶಾರ್ಲಟ್ ಎರಡನೆಯ ಮಗಳು ಒಂದು ದಿನ ಇದ್ದಕ್ಕಿದ್ದಂತೆ ತನ್ನನ್ನು ‘ಹುಡುಗಿ’ ಎಂದು ಕರೆಯಬೇಡ ಎಂದು ಅಮ್ಮನಿಗೆ ತಾಕೀತು ಮಾಡುತ್ತಾಳೆ. ಅಮ್ಮ ತಂದ ಹೊಸ ಹೂವಿನ ಚಿತ್ರಗಳ ಡ್ರೆಸ್ ತೊಡೆನು ಎಂದು ಹೇಳಿ, ಅಪ್ಪ ಒತ್ತಾಯಿಸಿದ್ದಕ್ಕೆ ಅದನ್ನು ಧರಿಸಿ, ಮೇಲೊಂದು ಟೀ ಶರ್ಟ್ ಏರಿಸುತ್ತಾಳೆ. ಶಾಲೆಯಲ್ಲಿ ತನ್ನ ಹೆಸರನ್ನು ‘ರೋಸ್’ನಿಂದ ‘ರಾಕ್’ಗೆ ಬದಲಾಯಿಸಿಕೊಳ್ಳುತ್ತಾಳೆ. ಮೊದಮೊದಲು ಒಂದೆರಡು ಸಂಚಿಕೆಗಳು ನಿಧಾನ ಅನ್ನಿಸಿದರೂ, ಏನೋ ಮಿಸ್ ಆಗಿದೆ ಅನ್ನಿಸಿದರೂ ನಂತರ ನಿಧಾನವಾಗಿ ನಾವು ಕಥೆಯಲ್ಲಿ ಒಳಗೊಳ್ಳುತ್ತೇವೆ. ಇದೊಂದು ಅತ್ಯದ್ಭುತ ಕಥೆಯಾಗಲೀ, ನಿರೂಪಣೆಯಾಗಲೀ ಅಲ್ಲ. ಆದರೆ ಸೆಕ್ಸ್ ಅಂಡ್ ದ ಸಿಟಿ ನೋಡಿದವರಿಗೆ, ಮೆಚ್ಚಿದವರಿಗೆ ಇದನ್ನು ಪೂರ್ತಿ ನೋಡದೆ ಇರಲಾಗುವುದಿಲ್ಲ.

ಈ ಮೊದಲೇ ಹೇಳಿದಹಾಗೆ ಇದು ಬದಲಾದ ಕಾಲಮಾನದ ಧ್ವನಿಗಳನ್ನು ಆಲಿಸಿದ ಕಥೆ. Queer ಪಾತ್ರಧಾರಿ ಚೇ ಒಂದೆಡೆ ಹೇಳುವ ಮಾತು, ‘ಹೌದು ಎಲ್ಲಾ ಸಿನಿಮಾ, ಸೀರಿಯಲ್‌ಗಳಲ್ಲಿ ಯಾಕೆ ನಮ್ಮನ್ನು ದುರಂತಕ್ಕೆ ಮಾತ್ರ ಆರಿಸಿಕೊಳ್ಳುತ್ತಾರೆ? ಯಾಕೆ ಯಾವಾಗಲೂ ಒಂಟಿಯಾಗಿ, ಏನನ್ನೋ ಕಳೆದುಕೊಂಡಂತೆ ಅಥವಾ ವಿದೂಷಕರಂತೆ ಇರುವುದನ್ನೇ ತೋರಿಸುತ್ತಾರೆ? ಹಲೋ, ನಾವು ಸಹ ನಿಮ್ಮಂತೆ ಸಹಜವಾಗಿ ಖುಷಿಖುಷಿಯಾಗಿರಲು ಸಾಧ್ಯ!’ ಕಲೆ ಗಮನಿಸಬೇಕಾದ್ದು ಇದನ್ನು. ಕಲೆ ಎಂದರೆ ಕೇವಲ ಕಲೆ ಮಾತ್ರವೆ, ಅದು ಕೇವಲ ಮನರಂಜನೆಗೆ ಮಾತ್ರವೆ? ಹಾಗಿದ್ದರೆ ಮೊದಲ ಆರು ಸರಣಿಗಳನ್ನೇ ಮುಂದುವರಿಸಿಕೊಂಡು ಅದನ್ನೊಂದು ಏಳನೆಯ ಸರಣಿಯನ್ನಾಗಿಸಬಹುದಿತ್ತು. ಆದರೆ ಕಲೆ ಮತ್ತು ಕಲೆಗೆ ಸಂಬಂಧಿಸಿದ ಎಲ್ಲವೂ ಹಾಗೆ ಸುತ್ತಲಿನ ಬದಲಾವಣೆಗಳಿಗೆ, ಸುತ್ತಲಿನ ಅಸಮಧಾನಗಳಿಗೆ, ಸುತ್ತಲಿನ ಬದಲಾವಣೆಗಳಿಗೆ ಕುರುಡಾಗಿ, ಕಿವುಡಾಗಿ ಉಳಿದಾಗ ಅದು ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಹಾಗಾಗಿ ಅಮೇರಿಕಾದ ಮೇಲ್ವರ್ಗದ ಹೆಣ್ಣುಮಕ್ಕಳ ಕಥೆ ಹೇಳುವ ಈ ಸರಣಿ ಸಹ ಅಮೇರಿಕಾದ ಬಹುತ್ವವನ್ನು ಸ್ವೀಕರಿಸಲೇಬೇಕಾಗುತ್ತದೆ.

LEAVE A REPLY

Connect with

Please enter your comment!
Please enter your name here